ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಬೆಳೆವ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಹಿಂಗಾರು ಮಳೆ

Last Updated 19 ಸೆಪ್ಟೆಂಬರ್ 2017, 9:15 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಹಿಂಗಾರು ಮಳೆಯ ಅಬ್ಬರ ಮಕ್ಕಿಗದ್ದೆ (ಮಳೆಯಾಶ್ರಿತ) ರೈತರ ಮೊಗದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದೆ. ಸಸಿನಾಟಿಗೆ ನೀರಿನ ಕೊರತೆ ಅನುಭವಿಸಿದ ರೈತರು ಈಗ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಕೈಸೇರುವ ಭರವಸೆಯಲ್ಲಿದ್ದಾರೆ.

15 ದಿನಗಳಿಂದ ಹದವಾಗಿ ಮಳೆ ಸುರಿಯುತ್ತಿರುವುದರಿಂದ ನಾಟಿ ಮಾಡಿದ ಭತ್ತದ ಗದ್ದೆಗಳಲ್ಲಿ ಪೈರು ಹುಲುಸಾಗಿ ಬೆಳೆಯುತ್ತಿದೆ. ಮಳೆ ಕೊರತೆಯಿಂದ ಮಕ್ಕಿಗದ್ದೆಯ ಬೆಳೆ ಕೈಸೇರುತ್ತದೆ ಎಂಬ ಭರವಸೆ ಕಳೆದುಕೊಂಡ ರೈತರಿಗೆ ಹಿಂಗಾರು ಮಳೆ ವರವಾಗಿ ಪರಿಣಮಿಸಿದೆ.

ತಾಲ್ಲೂಕಿನ ಮಂಡಗದ್ದೆ, ಮುತ್ತೂರು, ಅಗ್ರಹಾರ, ಕಸಬಾ ಹೋಳಿಯ ಮಕ್ಕಿಗದ್ದೆ ರೈತರು ಮಳೆ ಕೊರತೆಯ ಹಿನ್ನೆಲೆಯಲ್ಲಿ ಅಲ್ಪಾವಧಿ ತಳಿಯ ಭತ್ತ ಬೆಳೆಯಲು ಮುಂದಾಗಿದ್ದರು. ಸರಿಯಾದ ಸಮಯದಲ್ಲಿ ಮಳೆ ಬೀಳುತ್ತಿರುವುದರಿಂದ ಭತ್ತದ ಗದ್ದೆಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಂಡ ರೋಗ ನಿಯಂತ್ರಣವಾಗಲಿದೆ ಎಂಬ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 12,529 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, 8,074 ಹೆಕ್ಟೇರ್‌ ಪ್ರದೇಶದ ಮಕ್ಕಿಗದ್ದೆಗಳಲ್ಲಿ ನಾಟಿ ಮಾಡಲಾಗಿದೆ. ನೀರಾವರಿ ಸೌಲಭ್ಯವುಳ್ಳ 4,455 ಪ್ರದೇಶದಲ್ಲಿ ನಾಟಿಕಾರ್ಯ ಕೈಗೊಳ್ಳಲಾಗಿದೆ.

ಈ ವಾರ್ಷಿಕ ಸಾಲಿನಲ್ಲಿ ಹದವಾಗಿ ಮಳೆ ಬಿದ್ದಿರುವುದರಿಂದ ಮಳೆಯ ನೀರು ಎಲ್ಲೂ ಕೊಚ್ಚಿ ಹೋಗದೆ ಭೂಮಿಯೊಳಗೆ ಇಂಗಿದೆ ಎಂಬ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸುತ್ತಾರೆ. ಉತ್ತಮ ಬೆಳೆ ಕೈಸೇರಲಿದೆ ಎನ್ನುತ್ತಾರೆ ರೈತರು.ಈವರೆಗಿನ ವಾಡಿಕೆ ಮಳೆ 2,666 ಮಿ.ಮೀ. ಆಗಿದ್ದು, ಇದುವರೆಗೆ 2,094 ಮಿ.ಮೀ. ಮಳೆಯಾಗಿದೆ. ಮಕ್ಕಿಗದ್ದೆಯಲ್ಲಿ ನಾಟಿ ಮಾಡಿರುವ ಭತ್ತದ ಪೈರು ಹೆಚ್ಚು ಇಳುವರಿಗೆ ಕಾರಣವಾಗಲಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಕೌಶಿಕ್‌.

ಜುಲೈ ಅಂತ್ಯದವರೆಗೂ ನಿರೀಕ್ಷಿತ ಪ್ರಮಾಣದ ಮಳೆ ಬೀಳದೇ ಇದ್ದುದರಿಂದ ಭತ್ತದ ನಾಟಿ ಕಾರ್ಯ ಮಾಡಬೇಕಿದ್ದ ಮಕ್ಕಿಗದ್ದೆ ರೈತರು ಆತಂಕಕ್ಕೆ ಒಳಗಾಗಿದ್ದರು. ನಾಟಿ ಕಾರ್ಯಕ್ಕೂ ನೀರಿನ ಪೂರೈಕೆ ಇಲ್ಲದೇ ಇರುವುದರಿಂದ ಅಲ್ಪಾವಧಿ ತಳಿಗಳನ್ನು ನೀರಿನ ಲಭ್ಯತೆ ನೋಡಿಕೊಂಡು ಬೆಳೆಯುವ ನಿರ್ಧಾರಕ್ಕೆ ಬರುವಂತಾಗಿತ್ತು.

ಸಸಿನಾಟಿ ಕಾರ್ಯ ಮುಗಿಸಿದ ಮೇಲೂ ಮಳೆ ಕೊರತೆ ಕಂಡುಬಂದದ್ದರಿಂದ ಪರ್ಯಾಯ ಬೆಳೆಯ ಕುರಿತು ಚಿಂತಿಸುವಂತಾಗಿತ್ತು. ಆದರೆ, ಕಳೆದ ಹದಿನೈದು ದಿನಗಳಿಂದ ಆಗಾಗ್ಗೆ ಹದವಾಗಿ ಬೀಳುತ್ತಿರುವ ಹಿಂಗಾರು ಮಳೆ ಭತ್ತದ ಫಸಲಿಗೆ ಪೂರಕ ವಾತಾವರಣ ನಿರ್ಮಾಣ ಮಾಡಿರುವುದು ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT