ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

‘ವಚನಧರ್ಮವು ಹಿಂದೂಧರ್ಮದ ಒಂದು ಶಾಖೆ. ಆದ್ದರಿಂದ ವಚನಾನುಯಾಯಿಗಳು ನಾವು ಹಿಂದೂಗಳಲ್ಲ ಎಂದು ಹೇಳಿಕೊಂಡರೆ ಅದು ತನ್ನ ತಾಯಿಯನ್ನೆ ನಿರಾಕರಿಸುವ ಕೃತಘ್ನತೆಯಾದೀತು’ ಎಂದು ‘ಹಿಂದೂಧರ್ಮಕ್ಕಿಂತ ವಚನಧರ್ಮ ಬೇರೆಯೇ?’ ಎಂಬ ತಮ್ಮ ಲೇಖನದಲ್ಲಿ (ಪ್ರ.ವಾ ಸಂಗತ ಸೆ.14 )ಎಂ.ವಿ ನಾಡಕರ್ಣಿಯವರು ಹೇಳಿದ್ದಾರೆ. ಇದಕ್ಕೆ ಸ್ಪಷ್ಟವಾದ ಉತ್ತರವೆಂದರೆ ಅಲ್ಲಮನ ಈ ವಚನ :

ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ

ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ.,

ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ!

ತೊಟ್ಟಿಲು ಮುರಿದು ನೇಣ ಹರಿದು, ಜೋಗುಳ ನಿಂದಲ್ಲದೆ,

ಗುಹೇಶ್ವರನೆಂಬ ಲಿಂಗವ ಕಾಣಬಾರದು.

ಈ ದೇಶದ ಹಲವು ದೇಸಿ ಪರಂಪರೆಯ ಕಾಯಕನಿಷ್ಠ ಜನಾಂಗಗಳನ್ನು ಈ ವರ್ಣಾಶ್ರಮ ಧರ್ಮಗಳು ಹೇಗೆ ಭ್ರಾಂತಿಯಲ್ಲಿ ತೆಲಿಸಿಕೊಂಡು ಬರುತ್ತಿವೆ ಎಂಬುದನ್ನು ಈ ವಚನದಲ್ಲಿ ಅಲ್ಲಮಪ್ರಭು ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ.

ಈ ಭ್ರಾಂತಿಯೆಂಬ ತಾಯಿ ಯಾವತ್ತೂ ದುಡಿಯುವ ಜನತೆಯ ದಾರ್ಶನಿಕ ಕಾಣ್ಕೆಗಳಿಗೆ ವಾತ್ಸಲ್ಯದ ಧಾರೆ ಹರಿಸಳು. ಆ ಕಾರಣಕ್ಕಾಗಿಯೇ ನಾವು ಕರ್ಮಠ ವೇದಶಾಸ್ತ್ರಗಳ ಪರಲು ಹರಿದುಕೊಂಡು ವೇದಜಡರ ತೊಟ್ಟಿಲ ಮುರಿದುಕೊಂಡು ಹೊರ ಬರಬೇಕಿದೆ. ಹೀಗೆ ಬಂದಾಗಲೇ ನಮ್ಮದೇ ಕಾಯಕ ಕೇಂದ್ರಿತ ದಾರ್ಶನಿಕತೆ ಕಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿ ಅದನ್ನು ಕಟ್ಟಿಯೂ ತೋರಿಸಿದವರೇ ಬಸವ ಅಲ್ಲಮಾದಿ ವಚನಕಾರರು. ಇವರು ತುಂಬಾ ಸ್ಪಷ್ಟವಾಗಿಯೇ ನಾವು ವರ್ಣಾಶ್ರಮ ಧರ್ಮದ ಅನುಯಾಯಿಗಳಲ್ಲ ಎಂಬುದನ್ನು ತಾತ್ವಿಕವಾಗಿ ಪ್ರದಿಪಾದಿಸಿ ಯಜ್ಞ ಯಾಗ ಹೋಮ ಹವನ ಪುರಾಣ ಶಾಸ್ತ್ರ ಇತ್ಯಾದಿಗಳನ್ನು ಢಾಣಾಢಂಗುರವಾಗಿ ಖಂಡಿಸಿದ್ದಾರೆ. ಆದ್ದರಿಂದ ವೇದಾದಿ ಸನಾತನಕ್ಕಿಂತ ( ಹಿಂದೂಧರ್ಮ) ವಚನಧರ್ಮವು ಪೂರ್ಣ ಬೇರೆಯಾಗಿದೆ. ಅಷ್ಟೇ ಅಲ್ಲ ಕರ್ಮಸಿದ್ಧಾಂತ ಅಪ್ಪಿಕೊಳ್ಳುವ ಸನಾತನಧರ್ಮವನ್ನು ಧಿಕ್ಕರಿಸಿಯೇ ಹೊಸ ಧರ್ಮವನ್ನು ಕಟ್ಟಿಕೊಂಡಿದ್ದಾರೆ.

ಬಹು ಹಿಂದೆಯೇ ಸನಾತನಿಗಳನ್ನು ಧಿಕ್ಕರಿಸಿ ಬೌದ್ಧ, ಜೈನಧರ್ಮಗಳು ಅಸ್ತಿತ್ವ ಪಡೆದುಕೊಂಡಂತೆ ವಚನಧರ್ಮವೂ ದುಡಿಯುವವರ ಮತ್ತು ಅಪ್ಪಟ ಕನ್ನಡಿಗರ ಧರ್ಮವಾಗಿ ಅರಳಿದೆ. ಆದರೆ ಈ ದೇಶದ ಸನಾತನಿಗಳು ಹೀಗೆ ದಂಗೆ ಎದ್ದು ಹೊರಬಂದ ಧರ್ಮಗಳೆಲ್ಲವನ್ನು ಪೂರ್ವಪಕ್ಷವೆಂಬ ವಾಗದ್ವೈತದಡಿಯಲ್ಲಿ ತನ್ನೊಳಗು ಮಾಡಿಕೊಳ್ಳುವ ತಾತ್ವಿಕ ಕಸರತ್ತು ಮಾಡುತ್ತಲೇ ಬರುತ್ತಿದ್ದಾರೆ. ಇದನ್ನು ಗಮನಿಸಿಯೇ ಡಿ. ಆರ್ ನಾಗರಾಜರು ಹೇಳಿರುವ ಈ ಮಾತುಗಳು ಪ್ರಸ್ತುತ. ‘20ನೇ ಶತಮಾನದ ಭಾರತೀಯ ತತ್ವಶಾಸ್ತ್ರವನ್ನು ಚಾರಿತ್ರಿಕ ಸಮೀಕ್ಷೆ ಎಂಬ ಕ್ರಮದಲ್ಲಿ ಬರೆಯುವಾಗ ಕೆಲಸ ಮಾಡುತ್ತಿರುವ ಒಂದು ಪ್ರಧಾನ ಸೈದ್ಧಾಂತಿಕ ಒತ್ತಡವೆಂದರೆ ಏಕೀಕೃತ ಭಾರತೀಯ ದರ್ಶನದ್ದು. ಹೀಗಾಗಿ ಎಲ್ಲ ಭಿನ್ನ ಸ್ವರಗಳನ್ನು, ಖಂಡಗಳನ್ನು, ಪ್ರತ್ಯೇಕ ಅಸ್ತಿತ್ವಗಳನ್ನು ಒಂದು ವಿಶಾಲ ಏಕೀಕೃತ ಚೌಕಟ್ಟಿನೊಳಗೆ ಅಡಗಿಸುವ ಪ್ರಯತ್ನ ಇಡೀ ಶತಮಾನದ ಪ್ರಮುಖ ಚಾರಿತ್ರಿಕ ಸಮೀಕ್ಷೆ ಹಾಗೂ ಸಂಗ್ರಹಗಳಲ್ಲಿ ಕಾಣುತ್ತೇವೆ. ಭಾರತೀಯ ತತ್ವಜ್ಞಾನದ ಬಗ್ಗೆ ಚಾರಿತ್ರಿಕವಾಗಿ ವ್ಯಾಖಾನಿಸುವ ಎಲ್ಲ ಮಹತ್ವದ ಚಿಂತಕರಿಗೂ ಈ ಏಕೀಕರಣದ ಸೈದ್ಧಾಂತಿಕ ಹಠ ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಕಾಡಿದೆ. ರಾಷ್ಟ್ರೀಯವಾದದ ರಾಜಕೀಯ ಅಗತ್ಯಜ್ಞಾನವನ್ನು ಸಂಗ್ರಹಿಸುವಾಗಲೂ ಕೆಲಸ ಮಾಡಿದೆ’( ಅಲ್ಲಮಪ್ರಭು ಮತ್ತು ಶೈವಪ್ರತಿಭೆ ಪುಟ 12) ಎಂದು ಹೇಳಿದ್ದಾರೆ. ಇದೇ ಹಳೆಯ ಜಾಡಿನಲ್ಲಿಯೇ ನಾಡಕರ್ಣಿಯವರು ವಚನ ಸಿದ್ಧಾಂತವನ್ನು ಸನಾತನ ವೈದಿಕ ವರ್ಣಾಶ್ರಮ ಧರ್ಮದೊಂದಿಗೆ ಸಮೀಕರಿಸುವ ಪ್ರಯತ್ನ ಮಾಡಿದ್ದಾರೆ. ಅವೈದಿಕ ಚಿಂತನಧಾರೆಯೊಂದು ಮೂರ್ತ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ಸಾರಲೆಂದು ತಾತ್ವಿಕವಾಗಿ ದಂಗೆ ಎದ್ದಾಗಲೆಲ್ಲ ವೈದಿಕ ವಿದ್ವಾಂಸರು ಅದನ್ನು ತಾರ್ಕಿಕ ನೆಲೆಯಲ್ಲಿ ಒಪ್ಪಗೊಳಿಸುವ ( ಪೊಲಿಟಿಕಲಿ ರೈಟ್) ಕಸರತ್ತು ಮಾಡುತ್ತಲೇ ಇರುತ್ತಾರೆ. ಆದ್ದರಿಂದಲೇ ಲೇಖಕರು, ‘ಇಂದಿನ ಲಿಂಗಾಯತ ಸಮಾಜದಲ್ಲಿ ಜನರು, ವಚನಗಳಲ್ಲಿ ಹೇಳಿದ ಪ್ರಕಾರವೇ ನಡೆಯುತ್ತಾರೆ ಎಂದು ಯಾವ ಧೈರ್ಯದಿಂದ ಹೇಳಬಹುದು?’ ಎಂದು ತೀರ ಮೂರ್ತಕ್ಕೆ ಇಳಿದು ಟೀಕಿಸುತ್ತಾರೆ. ಸಮಸ್ಯೆ ಇರುವುದೇ ಇಲ್ಲಿ. ನಾಡಕರ್ಣಿಯವರು ದಿಕ್ಕು ತಪ್ಪಿದ ಜಾತಿವಾದಿ ಲಿಂಗಾಯತರನ್ನು ವಚನಸಿದ್ಧಾಂತದ ವಾರಸುದಾರರು ಎಂದು ಭಾವಿಸಿ ಅವರನ್ನು ವೈದಿಕ ಕರ್ಮಠರೊಂದಿಗೆ ತುಲನೆ ಮಾಡಿ ವಾದ ಮಂಡಿಸುತ್ತಾರೆ. ಆದರೆ, ವರ್ಣಾಶ್ರಮ ಧರ್ಮದಂತೆ ವಚನಧರ್ಮವು ಹುಟ್ಟಿನಿಂದ ನಿರ್ಧರಿತವಾದುದಲ್ಲ. ಆಚರಣೆಯಿಂದ ಯಾರೂ ಅದನ್ನು ಪಾಲಿಸ ಬಹುದಾಗಿದೆ. ಸನಾತನಮತದಂತೆ ಅದು ವಿಷ್ಣುವಿನ ಅಂಗಾಂಗಗಳಿಂದ ಉದ್ಭವವಾದುದಲ್ಲ. ಹಲವು ಕಾಯಕಜೀವಿಗಳು ಬಸವ. ಅಲ್ಲಮ, ಅಕ್ಕಮಹಾದೇವಿ, ಸೂಳೆ ಸಂಕವ್ವೆಯಂಥ ಅಸಂಖ್ಯರ ಆನುಭಾವಿಕ ಅನುಸಂಧಾನದಲ್ಲಿ ಅದು ಅಸ್ತಿತ್ವಪಡೆದುಕೊಂಡಿದೆ. ಅದು ವೇದ ಪ್ರಮಾಣವನ್ನು ಧಿಕ್ಕರಿಸಿ ಅನುಭವ ಪ್ರಮಾಣವನ್ನು ಪುರಸ್ಕರಿಸುತ್ತದೆ.
ನಾಡಕರ್ಣಿಯವರು ಉದ್ದಕ್ಕೂ ಪ್ರತಿಪಾದಿಸಿದ್ದು ಉಪನಿಷತ್ತುಗಳ ಶುದ್ಧ ಆದರ್ಶೀಕೃತ ಮೌಲ್ಯಗಳನ್ನು. ಈ ಮೌಲ್ಯಗಳು ಉಪನಿಷತ್ತುಗಳ ಗುತ್ತಿಗೆ ಏನಲ್ಲ. ಈ ಬಗೆಯ ಆದರ್ಶವಾದಿ ಮೌಲ್ಯಗಳನ್ನು ಎಲ್ಲ ಅಪೌರುಷೇಯ ಅಥವಾ ಪ್ರವಾದಿ ಧರ್ಮಗಳಲ್ಲಿಯೂ ಅನೂಚಾನವಾಗಿ ಹೇಳಿಕೊಂಡು ಬರಲಾಗಿರುತ್ತದೆ. ವಚನಕಾರರು ಅನೇಕ ಶ್ಲೋಕಗಳನ್ನು ನೇರವಾಗಿ ಖಂಡಿಸಿದ್ದು ಇದೆ.

ಇನ್ನೊಂದೆಡೆ ‘ಚಾರ್ತುವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ’ ಎಂಬಂಥ ಮತ್ತದೇ ಶ್ಲೋಕವನ್ನು ನಿದರ್ಶನವಾಗಿ ನೀಡಿ ವರ್ಣವ್ಯವಸ್ಥೆಯು ಗುಣ ಮತ್ತು ಮಾಡುವ ಕೆಲಸದ ಮೇಲೆ ಅವಲಂಬಿಸಿದೆ ಎಂದು ಪೊಳ್ಳು ವಾದ ಮುಂದಿಡುತ್ತಾರೆ. ಆದರೆ ಅದೇ ಗೀತೆಯಲ್ಲಿ ಶೂದ್ರರು ಸ್ವಭಾವತಃ ಸೇವಕರ ಮನೋಗುಣ ಇರುವವರೆಂದು ಸ್ಪಷ್ಟಪಡಿಸಿದ್ದನ್ನು ಇವರು ತೇಲಿಸಿ ಬಿಡುತ್ತಾರೆ. ಗೀತೆಯಲ್ಲಿನ ಅಸಂಬದ್ಧತೆ, ಅತಾರ್ಕಿಕತೆಯನ್ನು ಈಗಾಗಲೇ ಹಲವು ವಿದ್ವಾಂಸರು ಬಟಾಬಯಲುಗೊಳಿಸಿದ್ದು ಇದೆ. ಆದರೆ ಇವರು ವಚನ ಸಿದ್ಧಾಂತವು ನಖಶಿಖಾಂತವಾಗಿ ಖಂಡಿಸಿದ್ದ ವೇದೋಪನಿಷತ್ತುಗಳೊಂದಿಗೆ ಮತ್ತೆ ಅದನ್ನು ಸಮೀಕರಿಸುವ ಪ್ರಯತ್ನಕ್ಕೆ ಇಳಿಯುತ್ತಾರೆ. ಇದು ಸರಿಯಲ್ಲ. ಬಸವಾದಿಗಳು ತುಂಬಾ ಸ್ಪಷ್ಟವಾಗಿ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಎನ್ನುತ್ತಾನೆ. ಇದೇ ಅಭಿಪ್ರಾಯವನ್ನು ಅಲ್ಲಮಪ್ರಭು ಹೀಗೆ ಪುಷ್ಟಿಕರಿಸುತ್ತಾನೆ

ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ಧಿ

ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ

ಭಕ್ತಿ ಎಂಬುದು ತೋರುಂಬ ಲಾಭ,

ಗುಹೇಶ್ವರನೆಂಬುದು ಮೀರಿದ ಘನವು!

ಹೀಗೆ ವೇದಾಗಮಗಳನ್ನು ನೇರವಾಗಿ ಖಂಡಿಸುವ ವಚನಸಿದ್ಧಾಂತವು ಸನಾತನಿಗಳೊಂದಿಗೆ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ಕರ್ಮಸಿದ್ಧಾಂತವನ್ನು ಪ್ರತಿಪಾದಿಸುವ ಹಿಂದೂ ಧರ್ಮವು, ಕಾಯಕ ಸಿದ್ಧಾಂತದ ಮೇಲೆ ಕಟ್ಟಲಾದ ವಚನ ಧರ್ಮಕ್ಕೆ ತಾಯಿಯಾಗುವುದಿರಲಿ ಮಲತಾಯಿಯೂ ಆಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT