ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನಂದನೆ ಹೇಳಿಲ್ಲ: ಗ್ರ್ಯಾಂಡ್‌ಮಾಸ್ಟರ್‌ ತೇಜ್‌ಕುಮಾರ್‌ ಬೇಸರ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ‘ಗ್ರ್ಯಾಂಡ್‌ಮಾಸ್ಟರ್ ಪದವಿ ಗಿಟ್ಟಿಸಲು ತರಬೇತಿ ಹಾಗೂ ಪ್ರವಾಸಕ್ಕೆಂದು ಎರಡು ವರ್ಷಗಳಲ್ಲಿ ₹ 20 ಲಕ್ಷ ಖರ್ಚು ಮಾಡಿದ್ದೇನೆ. ಪೋಷಕರು ಸಾಲ ಮಾಡಿ ನನ್ನ ಸಾಧನೆಗೆ ಪ್ರೋತ್ಸಾಹ ನೀಡಿದರು. ಆದರೆ, ಸರ್ಕಾರದಿಂದ ಬಹುಮಾನ ಬಿಟ್ಟುಬಿಡಿ; ಅಭಿನಂದನೆಯ ಸಂದೇಶವೂ ಬಂದಿಲ್ಲ’

–ಹೀಗೆಂದು ಬೇಸರದಿಂದ ‘ಪ್ರಜಾವಾಣಿ’ಗೆ ತಿಳಿಸಿದ್ದು ರಾಜ್ಯದ ಮೊದಲ ಗ್ರ್ಯಾಂಡ್‌ಮಾಸ್ಟರ್‌ ಎಂ.ಎಸ್‌.ತೇಜ್‌ಕುಮಾರ್‌. ವಾರದ ಹಿಂದೆಯಷ್ಟೇ ಗೋವಾದಲ್ಲಿ ನಡೆದ ಅಖಿಲ ಭಾರತ ಫಿಡೆ ರೇಟೆಡ್‌ ಚೆಸ್‌ ಟೂರ್ನಿಯಲ್ಲಿ ಅವರು ಈ ಸಾಧನೆ ಮಾಡಿದ್ದರು.

‘ಬೇರೆ ರಾಜ್ಯದ ಕ್ರೀಡಾಪಟುಗಳಿಗೆ ಅಲ್ಲಿನ ಸರ್ಕಾರಗಳು ಹಣಕಾಸಿನ ನೆರವು ನೀಡುತ್ತಿವೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪಂಜಾಬ್ ಸರ್ಕಾರ ಅದಕ್ಕೆ ಉದಾಹರಣೆ. ಕರ್ನಾಟಕ ಸರ್ಕಾರ ನಮ್ಮಂಥ ಕ್ರೀಡಾಪಟುಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಕ್ರೀಡಾ ಇಲಾಖೆಗೆ ನನ್ನ ಸಾಧನೆ ಬಗ್ಗೆ ಮಾಹಿತಿಯೇ ಇದ್ದಂತಿಲ್ಲ’ ಎಂದರು.

ಮೈಸೂರಿನ ತೇಜ್‌ಕುಮಾರ್ 12 ವರ್ಷಗಳಿಂದ ರಾಜ್ಯದ ಮುಂಚೂಣಿ ಆಟಗಾರ. ದೇಶ ವಿದೇಶಗಳ ಹಲವು ಟೂರ್ನಿಗಳಲ್ಲಿ ಪಾಲ್ಗೊಂಡು ಪ್ರಮುಖ ಆಟಗಾರರಿಗೆ ಆಘಾತ ನೀಡಿದ್ದಾರೆ.

‘ಗ್ರ್ಯಾಂಡ್‌ಮಾಸ್ಟರ್ ಪದವಿ ಒಲಿದಾಗ ತುಂಬಾ ಖುಷಿಯಾಗಿತ್ತು. ಇನ್ನಾದರೂ ಸರ್ಕಾರದಿಂದ ಗೌರವ ಸಿಗಬಹುದು ಎಂದು ಭಾವಿಸಿದ್ದೆ. ಆದರೆ, ಆಗಿರುವುದೇ ಬೇರೆ. ಈ ರೀತಿ ಮಾಡಿದರೆ ಯಾರು ತಾನೇ ಕ್ರೀಡೆಯಲ್ಲಿ ಮುಂದುವರಿಯುತ್ತಾರೆ. ನನಗಂತೂ ತುಂಬಾ ನೋವಾಗಿದೆ’ ಎಂದರು.

‘ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಗುರುತಿಸಬೇಕು. ಅದು ಮುಂದೆ ಮತ್ತಷ್ಟು ಉತ್ತಮ ಪ್ರದರ್ಶನ ತೋರಲು ಸ್ಫೂರ್ತಿಯಾಗುತ್ತದೆ’ ಎಂದರು.

ಈಚೆಗೆ ಶ್ರೀಲಂಕಾದಲ್ಲಿ ನಡೆದ ಧಾಮ್ಸೊ ಅಂತರರಾಷ್ಟ್ರೀಯ ಚೆಸ್‌ ಟೂರ್ನಿಯಲ್ಲಿ ತೇಜ್‌ಕುಮಾರ್‌ ಚಾಂಪಿ ಯನ್ ಆಗಿದ್ದರು. ಜನವರಿಯಲ್ಲಿ ಫ್ರಾನ್ಸ್‌ನಲ್ಲಿ ನಡೆದ ಲಿಫ್ರಾ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಮಹಾರಾಷ್ಟ್ರ ಚೆಸ್‌ ಲೀಗ್‌ ಟೂರ್ನಿಯಲ್ಲಿ ಆಡಿದ ರಾಜ್ಯದ ಏಕೈಕ ಆಟಗಾರ ಕೂಡ. ಅವರ ತಂದೆ ಕೆ.ಆರ್‌.ಶಿವರಾಮೇಗೌಡ ಮೈಸೂರು ಜಿಲ್ಲಾ ಚೆಸ್‌ ಸಂಸ್ಥೆ ಕಾರ್ಯದರ್ಶಿ.

‘ಗೆಲ್ಲದಿದ್ದರೆ, ಯಾವುದೇ ಸಾಧನೆ ಮಾಡದಿದ್ದರೆ ಕ್ರೀಡಾಪಟುಗಳು ಪ್ರಯೋ ಜನವಿಲ್ಲವೆಂಬ ಟೀಕೆ ಉದ್ಭವಿಸುತ್ತದೆ. ಗೆದ್ದು ಬಂದರೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಫಿಡೆ ಪಾಯಿಂಟ್‌ ಗಿಟ್ಟಿಸಲು ವಿದೇಶಕ್ಕೆ ಪ್ರವಾಸ ಮಾಡುವಾಗ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಈಚೆಗೆ ಕ್ರೀಡಾ ಇಲಾಖೆ ವಿಮಾನ ಪ್ರಯಾಣದ ಖರ್ಚು ನೀಡುವುದನ್ನೂ ನಿಲ್ಲಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಹುಮಾನ ಮೊತ್ತವನ್ನು ನಂಬಿಯೇ ಆಡಬೇಕಾದ ಪರಿಸ್ಥಿತಿ ಬಂದಿದೆ. ಕೋಚ್‌ಗಳನ್ನು ನೇಮಿಸಿಕೊಳ್ಳುವುದೂ ಕಷ್ಟ. ಹೀಗಾಗಿಯೇ ಪ್ರತಿಭಾವಂತ ಆಟಗಾರರು ಕ್ರೀಡೆಯಿಂದ ದೂರ ಸರಿಯುತ್ತಿದ್ದಾರೆ. ಚೆಸ್‌ ಮೇಲಿನ ಪ್ರೀತಿಗಾಗಿ ನಾನು ಆಟ ಮುಂದುವರಿಸಿದ್ದೇನೆ’ ಎಂದರು.

ಮುಖ್ಯಾಂಶಗಳು

* ಗ್ರ್ಯಾಂಡ್‌ಮಾಸ್ಟರ್‌ ಪದವಿ ಗಿಟ್ಟಿಸಿದ ರಾಜ್ಯದ ಮೊದಲ ಆಟಗಾರ

* 12 ವರ್ಷಗಳಿಂದ ಚೆಸ್‌ನಲ್ಲಿ ಸಾಧನೆ ಮಾಡುತ್ತಿರುವ ತೇಜ್‌

* ಎರಡು ವರ್ಷಗಳಲ್ಲಿ ₹ 20 ಲಕ್ಷ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT