ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅತಿರೇಕಕ್ಕೆ ಕಡಿವಾಣ ಬೇಕು’

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ:  ‘ಸಮಾಜದಲ್ಲಿನ ವಿಭಿನ್ನ ದೃಷ್ಟಿಕೋನಗಳಿಗೆ ಸಂಬಂಧಿಸಿದಂತೆ ಸಹಿಷ್ಣುತೆ ಅಗತ್ಯವಾಗಿದ್ದು, ಧಾರ್ಮಿಕ ವಿಷಯಗಳಲ್ಲಿ ಕಂಡುಬರುತ್ತಿರುವ ಅತಿರೇಕದ ವರ್ತನೆಗೆ ಕಡಿವಾಣ ಹಾಕಬೇಕಿದೆ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಮಾತೆ ಮಹಾದೇವಿ ಅವರು ಸಂಪಾದಿಸಿರುವ ‘ಬಸವ ವಚನ ದೀಪ್ತಿ’ ಗ್ರಂಥವನ್ನು ನಿಷೇಧಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌ನ 1998ರ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಎ. ಬೋಬಡೆ ಹಾಗೂ ಎಲ್‌. ನಾಗೇಶ್ವರರಾವ್‌ ಅವರಿದ್ದ ದ್ವಿಸದಸ್ಯ ಪೀಠವು, ‘ಒಂದು ನಿರ್ದಿಷ್ಟ ಗ್ರಂಥ ಓದುವುದರಿಂದ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದಾದಲ್ಲಿ ಅಂಥ ಗ್ರಂಥ ಓದುವುದನ್ನು ಬಿಡಿ’ ಎಂದು ಸೂಚಿಸಿತು.

ಮಾತೆ ಮಹಾದೇವಿ ಅವರು ಲಿಂಗಾಯತ ಧರ್ಮ ಸಂಸ್ಥಾಪಕರಾದ ಬಸವಣ್ಣನವರ ವಚನಗಳಲ್ಲಿನ ‘ಕೂಡಲ ಸಂಗಮದೇವ’ ಎಂಬ ಅಂಕಿತನಾಮ ಬದಲಿಸಿ, ‘ಲಿಂಗದೇವ’ ಎಂಬ ಅಂಕಿತನಾಮ ಸೇರಿಸಿರುವುದು ಲಿಂಗಾಯತ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ವೀರಶೈವ ಮಹಾಸಭಾದ ಪರ ವಕೀಲರಾದ ಆರ್‌.ಬಸಂತ್‌ ಹಾಗೂ ನಿಶಾಂತ್‌ ಪಾಟೀಲ ವಾದಿಸಿದರು.

‘ವಚನಗಳು ಲಿಂಗಾಯತ ಧರ್ಮದ ಬುನಾದಿಯಾಗಿವೆ. ಅವು ಭಗವದ್ಗೀತೆ, ಬೈಬಲ್ ಮತ್ತು ಕುರಾನ್‌ನಷ್ಟೇ ಮಹತ್ವ ಪಡೆದಿವೆ. ಆ ಸಮುದಾಯದೊಂದಿಗೆ ಹಾಸುಹೊಕ್ಕಾಗಿರುವ ಬಸವಣ್ಣನವರ ವಚನಗಳನ್ನು ಕದ್ದು, ತಿದ್ದಿ ಅಂಕಿತನಾಮ ಬದಲಿಸಲಾಗಿದೆ’ ಎಂದು ದೂರಿದರು.

‘ವಚನಗಳ ಅಂಕಿತನಾಮವನ್ನು ಬದಲಿಸಿ ಗ್ರಂಥ ಹೊರ ತಂದಿರುವುದು ಅವರ ಚಿತ್ರಣವಾಗಿದೆ. ಅಂತೆಯೇ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸಲಾಗದು’ ಎಂದು ಪೀಠ ತಿಳಿಸಿತು.

‘ನಿಜವಾದ ಧರ್ಮವು ಲೌಕಿಕ ಚಿಂತನೆಯಿಂದ ಮುಕ್ತವಾಗಿಸಿ, ಅಲೌಕಿಕ ಚಿಂತನೆಯತ್ತ ಸಾಗುವುದನ್ನು ಕಲಿಸುತ್ತದೆ. ಧರ್ಮದ ನಿಜವಾದ ಅನುಯಾಯಿಗಳು ಲೌಕಿಕ ವ್ಯವಹಾರಗಳ ಬಗ್ಗೆ ಚಿಂತಿಸದೆ, ಅಲೌಕಿಕತೆಯನ್ನು ಪಾಲಿಸಿದ್ದಾರೆ. ಧರ್ಮ ರಾಜಕಾರಣದಲ್ಲಿ ಆಸಕ್ತಿ ಇರುವವರು ಮಾತ್ರ ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ’ ಎಂದು ನ್ಯಾಯಪೀಠ ಹೇಳಿತು.

‘ಸಮಾಜದಲ್ಲಿ ಎಲ್ಲ ಪ್ರಕಾರದ ದೃಷ್ಟಿಕೋನಗಳೂ ಇವೆ. ಎಲ್ಲವನ್ನೂ ಖಂಡಿಸುವ ಅಥವಾ ನಿರ್ಬಂಧಿಸುವ ಅಗತ್ಯವಿಲ್ಲ. ಆ ಲೇಖಕರ ದೃಷ್ಟಿಕೋನ ಬದಲಾಗಿದ್ದಲ್ಲಿ, ಆ ಗ್ರಂಥವನ್ನು ಓದಬೇಡಿ’ ಎಂದು ತಿಳಿಸಿದ ನ್ಯಾಯಮೂರ್ತಿ ಬೋಬಡೆ, ‘ವೀರಶೈವ, ಲಿಂಗಾಯತ ಸಮುದಾಯಗಳ ಪ್ರತ್ಯೇಕ ಧರ್ಮದ ಸ್ಥಾನಮಾನದ ಬೇಡಿಕೆಯ ಬಗ್ಗೆ ನಾವಿಲ್ಲಿ ಪ್ರಸ್ತಾಪಿಸುತ್ತಿಲ್ಲ. ಬದಲಿಗೆ, ಸಂವಿಧಾನದ 19 (1) (ಎ) ವಿಧಿಯ ಅಡಿ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಆಗಬೇಕಿದೆ. ಅಂಕಿತನಾಮ ಬದಲಿಸಿರುವ ಚಿಕ್ಕ ಬದಲಾವಣೆಯು ಬಸವಣ್ಣನ ಅನುಯಾಯಿಗಳ ಭಾವನೆಗೆ ಧಕ್ಕೆ ತರಲಾರದು’ ಎಂದರು.

ಈ ರೀತಿಯ ಬದಲಾವಣೆಯಿಂದಾಗಿ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಕರ್ನಾಟಕ ಸರ್ಕಾರದ ಪರ ವಕೀಲರ ವಾದ ಆಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT