ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಉತ್ತರ: ಉಪಚುನಾವಣೆ ಜಿಜ್ಞಾಸೆ

Last Updated 20 ಸೆಪ್ಟೆಂಬರ್ 2017, 5:48 IST
ಅಕ್ಷರ ಗಾತ್ರ

ಕಲಬುರ್ಗಿ: ಖಮರುಲ್‌ ಇಸ್ಲಾಂ ಅವರ ರಾಜಕೀಯ ಭದ್ರಕೋಟೆಯಾಗಿದ್ದ ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರ ಅವರ ನಿಧನದ ನಂತರ ಖಾಲಿ ಆಗಿದೆ. ಖಮರುಲ್‌ ಉತ್ತರಾಧಿಕಾರಿ ಯಾರು? ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆಯೇ? ಎಂಬ ಜಿಜ್ಞಾಸೆ ಶುರುವಾಗಿದೆ. ಸದಸ್ಯರ ನಿಧನ, ರಾಜೀನಾಮೆಯಿಂದ ವಿಧಾನಸಭೆ ಅಥವಾ ಲೋಕಸಭೆಯ ಕ್ಷೇತ್ರ ಖಾಲಿ ಆದರೆ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ಪ್ರಜಾಪ್ರತಿನಿಧಿ ಕಾಯ್ದೆ ಹೇಳುತ್ತದೆ.

ಕರ್ನಾಟಕ ವಿಧಾನಸಭೆಗೆ 2013ರ ಮೇ ತಿಂಗಳಲ್ಲಿ ಚುನಾವಣೆ ನಡೆದಿತ್ತು. 2018ರ ಏಪ್ರಿಲ್‌ ವರೆಗೂ ಅವಧಿ ಇದೆ. ಅಂದರೆ ಇನ್ನು ಏಳು ತಿಂಗಳಲ್ಲಿ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕು. ಅಷ್ಟರಲ್ಲಿ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಬೇಕೆ ಎಂಬುದು ಈಗಿನ ಪ್ರಶ್ನೆ.

ರಾಜ್ಯ ಚುನಾವಣಾ ಆಯೋಗದ ಮೂಲಗಳ ಪ್ರಕಾರ, ‘ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದಿಲ್ಲ’. ‘ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಆರು ತಿಂಗಳಿಗಿಂತ ಹೆಚ್ಚಿನ ಅವಧಿ ಯಾವುದೇ ಕ್ಷೇತ್ರ ಪ್ರತಿನಿಧಿ ಇಲ್ಲದೇ ಇರಬಾರದು ಎಂಬ ನಿಯಮ ಇದ್ದರೂ, ಸಾರ್ವತ್ರಿಕ ಚುನಾವಣೆಯ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಉಪ ಚುನಾವಣೆ ನಡೆಸದಿರುವುದು ವಾಡಿಕೆ. ಕಡಿಮೆ ಅವಧಿ ಇರುವುದರಿಂದ ಉಪ ಚುನಾವಣೆ ಬೇಡ ಎಂದು ರಾಜ್ಯ ಸರ್ಕಾರವೂ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಬಹುದು’ ಎನ್ನುವುದು ಆಯೋಗದ ಮೂಲಗಳ ಮಾಹಿತಿ.

ಶೇ 48.17ರಷ್ಟು ಮತ ಪಡೆದಿದ್ದ ಖಮರುಲ್‌: ಕಲಬುರ್ಗಿ ಉತ್ತರ ಕ್ಷೇತ್ರದ ಮೇಲೆ ಖಮರುಲ್‌ ಇಸ್ಲಾಂ ಅವರು ಬಿಗಿ ಹಿಡಿತ ಹೊಂದಿದ್ದರು. 2013ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ 14 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಅವರಲ್ಲಿ ಎಂಟು ಜನ ಇವರದೇ ಸಮಯುದಾಯದವರು.

ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದ ನಾಸೀರ್‌ ಹುಸೇನ್‌ ಉಸ್ತಾದ್‌ ಅವರು ತೀವ್ರ ಪೈಪೋಟಿ ನೀಡಿದರೂ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇ 48.17ರಷ್ಟು ಮತಗಳು ಖಮರುಲ್‌ ಇಸ್ಲಾಂ ಅವರಿಗೆ ಲಭಿಸಿದ್ದವು! ನಾಸೀರ್‌ ಹುಸೇನ್‌ ಅವರಿಗೆ ಶೇ 28.98, ಬಿಜೆಪಿಯ ರಾಜಗೋಪಾಲ ರೆಡ್ಡಿ ಅವರಿಗೆ ಶೇ 17.78 ಮತಗಳು ಲಭ್ಯವಾಗಿದ್ದವು. ಜೆಡಿಎಸ್‌ನ ಸೈಯದ್‌ ಜಾಫರ್‌ ಹುಸೇನ್‌ ಅವರು ಶೇ1.13ರಷ್ಟು ಮತ ಪಡೆದಿದ್ದರೆ, ಕಣದಲ್ಲಿದ್ದ ಉಳಿದವರು ಶೇ 1ರಷ್ಟು ಮತಗಳ ಹತ್ತಿರಕ್ಕೂ ಬರಲಿಲ್ಲ.

ಪುನರ್‌ ವಿಂಗಡಣೆ ‘ವರ’: 1978ರಿಂದ ಈಚೆಯ ಚುನಾವಣೆಗಳನ್ನು ಗಮನಿಸುವುದಾದರೆ ಕಲಬುರ್ಗಿ ವಿಧಾಸಭಾ ಕ್ಷೇತ್ರದಿಂದ ಹಿಂದೂಗಳೂ ಆಯ್ಕೆಯಾಗಿದ್ದರು. ಜನತಾ ಪಾರ್ಟಿಯ ಎಸ್‌.ಕೆ. ಕಾಂತಾ ಅವರು ಎರಡು ಬಾರಿ, ಬಿಜೆಪಿಯ ಚಂದ್ರಶೇಖರ ಪಾಟೀಲ ರೇವೂರ ಅವರು ಒಂದು ಬಾರಿ ಗೆದ್ದಿದ್ದರು.

ಎಸ್‌.ಕೆ. ಕಾಂತಾ ಅವರು 1983 ಮತ್ತು 1985ರಲ್ಲಿ ಹಾಗೂ ಚಂದ್ರಶೇಖರ ಪಾಟೀಲ ಅವರು 2004ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಖಮರುಲ್‌ ಇಸ್ಲಾಂ ಅವರನ್ನು ಸೋಲಿಸಿದ್ದರು. 2008ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ನಡೆಯಿತು. ಕಲಬುರ್ಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳು ಸೃಷ್ಟಿಯಾದವು. ಹಿಂದೂಗಳು ಹೆಚ್ಚಾಗಿರುವ ದಕ್ಷಿಣ ಕ್ಷೇತ್ರ ರೇವೂರ ಕುಟುಂಬದ ಹಾಗೂ ಮುಸ್ಲಿಮರು ಹೆಚ್ಚಿರುವ ಉತ್ತರ ಕ್ಷೇತ್ರ ಖಮರುಲ್‌ ಇಸ್ಲಾಂ ಅವರ ಭದ್ರ ನೆಲೆಯಾಯಿತು.

ಉತ್ತರ ಕ್ಷೇತ್ರದಲ್ಲಿ ಖಮರುಲ್‌ ಅವರ ಗೆಲುವಿನ ಅಂತರವೂ ಹೆಚ್ಚುತ್ತ ಹೋಯಿತು. 2008ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಜಿ. ಪಾಟೀಲ ವಿರುದ್ಧ 14,955 ಹಾಗೂ 2013ರ ಚುನಾವಣೆಯಲ್ಲಿ ಕೆಜೆಪಿಯ ನಾಸೀರ್‌ ಹುಸೇನ್‌ ಉಸ್ತಾದ್‌ ವಿರುದ್ಧ 20,121 ಮತಗಳ ಅಂತರದಿಂದ ಖಮರುಲ್‌ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT