ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾಂತರಕ್ಕೆ ಮೆರುಗು ಮಾದರಿ ಶಾಲೆಗಳು

Last Updated 20 ಸೆಪ್ಟೆಂಬರ್ 2017, 7:03 IST
ಅಕ್ಷರ ಗಾತ್ರ

ತುಮಕೂರು: ಸುಸಜ್ಜಿತ ಕೊಠಡಿಗಳು, ಮೈದಾನ, ಕಾಂಪೌಂಡ್, ಗ್ರಂಥಾಲಯ, ಉತ್ತಮ ಶೌಚಾಲಯ, ಕಂಪ್ಯೂಟರ್, ಲ್ಯಾಬ್ ವ್ಯವಸ್ಥೆ, ದಿನಪತ್ರಿಕೆಗಳು...ಹೀಗೆ ಅಗತ್ಯ ಸೌಲಭ್ಯಗಳ ಮೂಲಕ ಖಾಸಗಿ ಶಾಲೆಗಳನ್ನು ನಾಚಿಸುತ್ತಿವೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರು ಸರ್ಕಾರಿ ಶಾಲೆಗಳು. ಕೆಲವೇ ದಿನಗಳಲ್ಲಿ ಈ ಪಟ್ಟಿಗೆ ಮತ್ತೆ ನಾಲ್ಕೈದು ಶಾಲೆಗಳು ಸೇರ್ಪಡೆಗೊಳ್ಳುತ್ತಿವೆ!

ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯವ ಸನ್ನಿವೇಶದಲ್ಲಿ ‘ಮಾದರಿ ಶಾಲೆ’ಗಳು ಎನ್ನುವ ಗರಿಮೆಗೆ ಪಾತ್ರವಾಗಿವೆ. ಸೌಲಭ್ಯಗಳು ದೊರೆಯುವ ಕಾರಣ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಲು ಮುಂದಾಗುತ್ತಿದ್ದಾರೆ.

ಹೌದು, ಶಾಸಕ ಬಿ.ಸುರೇಶಗೌಡ ಅವರ ಆಸಕ್ತಿಯ ಫಲವಾಗಿ ಹೆತ್ತೇನಹಳ್ಳಿ, ಗೂಳೂರು, ನಾಗವಲ್ಲಿ, ಬುಗುಡನಹಳ್ಳಿ, ವನಚಗೆರೆ, ದುರ್ಗದ ಹಳ್ಳಿ ಶಾಲೆಗಳು ಸುಸಜ್ಜಿತ ಸೌಲಭ್ಯಗಳನ್ನು ಹೊಂದಿವೆ. ಆವರಣ ಪ್ರವೇಶಿಸಿದ ತಕ್ಷಣ ಹಿತವಾದ ಅನುಭೂತಿ ನೀಡುತ್ತಿವೆ.

ಕೊಠಡಿಗಳನ್ನು ಪ್ರವೇಶಿಸಿದರೆ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಸಕಲ ಸೌಲಭ್ಯಗಳೂ ಕಣ್ಣಿಗೆ ರಾಚುತ್ತವೆ. 2013ರಿಂದ ಈ ಮಾದರಿ ಶಾಲೆ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಉತ್ತಮ ಸೌಲಭ್ಯಗಳನ್ನು ಹೊಂದಿರುವ ಕಾರಣ ಇತ್ತೀಚೆಗೆ 11 ಜಿಲ್ಲೆಗಳ ಶಾಲೆಗಳೊಂದಿಗೆ ಸ್ಪರ್ಧೆ ನಡೆಸಿ ನಾಗವಲ್ಲಿ ‘ಅತ್ಯುತ್ತಮ ಶಾಲೆ’ ಪ್ರಶಸ್ತಿಗೆ ಪಾತ್ರವಾಗಿತ್ತು.

ಬಹುತೇಕ ಶಾಲೆಗಳ ಅಭಿವೃದ್ಧಿಗೆ ಶಾಸಕರು ತಮ್ಮ ಅನುದಾನವನ್ನು ಸದ್ವಿನಿಯೋಗ ಮಾಡಿದ್ದಾರೆ. ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹೀಗೆ ವಿವಿಧ ಜನಪ್ರತಿನಿಧಿಗಳ ಬಳಿ ಅಭಿವೃದ್ಧಿಗೆ ಹಣ ತಂದಿದ್ದಾರೆ. ಕೆಲವು ಕಡೆಗಳಲ್ಲಿ ಸಂಘ ಸಂಸ್ಥೆಗಳ ಸಹಕಾರ ಸಹ ಪಡೆದಿದ್ದಾರೆ. ಈಗ ಮಸ್ಕಲ್, ಕೀಚಕಲ್ಲು, ಪಾಲಸಂದ್ರ, ಹಿರೇಹಳ್ಳಿ, ಊರುಕೆರೆ, ಸೀತಕಲ್ಲು, ಶಾಲೆಗಳು ಅಭಿವೃದ್ಧಿಗೊಳ್ಳುತ್ತಿವೆ. ಪಾಲಸಂದ್ರ ಶಾಲೆಗೆ ಜಿಂದಾಲ್, ನಿಡುವಳಲು ಶಾಲೆಗೆ ಎಚ್‌ಪಿ ಕಂಪೆನಿ ಹಾಗೂ ಸೀತಕಲ್ಲು ಮತ್ತು ಊರುಕೆರೆ ಶಾಲೆ ಅಭಿವೃದ್ಧಿಗೆ ಪವರ್ ಗ್ರೀಡ್ ಸಂಸ್ಥೆ ಕೈ ಜೋಡಿಸಿದೆ.

‘ನಾನು ಓದಿದ್ದು ಗುಡಿಸಲಿನಂತಹ ಶಾಲೆಯಲ್ಲಿ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳು ಉತ್ತಮವಾಗಿದ್ದರೆ ಪೋಷಕರು ಮಕ್ಕಳನ್ನು ದಾಖಲಿಸುತ್ತಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ 35 ಪಂಚಾಯಿತಿಗಳಿವೆ. ಈಗಾಗಲೇ 12ರಿಂದ 13 ಪಂಚಾಯಿತಿ ಕೇಂದ್ರಗಳಲ್ಲಿ ಮಾದರಿ ಶಾಲೆಗಳನ್ನು ರೂಪಿಸಲಾಗಿದೆ. ಉಳಿದಿರುವ 20 ಪಂಚಾಯಿತಿಗಳು ನನ್ನ ಮುಂದಿನ ಗುರಿ’ ಎಂದು ಹೆಮ್ಮೆಯಿಂದ ಹೇಳುವರು ಸುರೇಶ್ ಗೌಡ.

‘ಒಂದರಿಂದ ಪದವಿ ಪೂರ್ವದ ವರೆಗೆ ಒಂದೆಡೆಯೇ ಶಿಕ್ಷಣ ಸಿಗಬೇಕು. ಆಗ ಮಾತ್ರ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯ. ಬಡವರು ಮತ್ತು ಮಧ್ಯಮ ವರ್ಗದ ಜನರು ಶಿಕ್ಷಣಕ್ಕಾಗಿ ಮಾಡುವ ವೆಚ್ಚ ಉಳಿಯುತ್ತದೆ. ಆ ಮೂಲಕ ಅವರು ಉತ್ತಮ ಬದುಕು ಸಾಗಿಸಬಹುದು’ ಎಂದು ಅಭಿಪ್ರಾಯಪಡುವರು.

‘ದಾಖಲಾತಿ ಕಡಿಮೆ ಇರುವ ಕನ್ನಡ ಶಾಲೆಗಳನ್ನು ಸರ್ಕಾರ ಮುಚ್ಚುತ್ತಿದೆ. ಆಕರ್ಷಕ ಕಟ್ಟಡ, ಸೌಲಭ್ಯಗಳ ಕಾರಣಕ್ಕೆ ಖಾಸಗಿ ಶಾಲೆಗಳತ್ತ ಜನರು ಚಿತ್ತ ಹರಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹೆಚ್ಚು ಅನುದಾನವನ್ನು ಮೀಸಲಿಟ್ಟಿರುವ ಶಾಸಕರ ನಡೆ ಮಾದರಿಯಾದುದು’ ಎನ್ನುವ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT