ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವಣಗಿತ್ತಿಯಂತೆ ಸಿಂಗಾರಗೊಂಡ ನಗರ

Last Updated 20 ಸೆಪ್ಟೆಂಬರ್ 2017, 7:13 IST
ಅಕ್ಷರ ಗಾತ್ರ

ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಬುಧವಾರ (ಸೆ.20) ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮದ ಸ್ಥಳ ಹಾಗೂ ನಗರವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದೆ.

ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಬಳಿಯ ನೂತನ ಜಿಲ್ಲಾಡಳಿತ ಭವನ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸುಮಾರು 10 ಸಾವಿರ ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಗಣ್ಯರಿಗೆ ಪ್ರತ್ಯೇಕ ಕುರ್ಚಿಗಳನ್ನು ಹಾಕಲಾಗಿದೆ. ಬೃಹತ್‌ ವೇದಿಕೆ ನಿರ್ಮಿಸಲಾಗಿದ್ದು, ಮೂರು ಎಕರೆ ಜಾಗದಲ್ಲಿ ಶಾಮಿಯಾನ ಹಾಕಲಾಗಿದೆ.

ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಮುಖ್ಯಮಂತ್ರಿಯವರಿಗೆ ಸ್ವಾಗತ ಕೋರುವ ಬ್ಯಾನರ್‌, ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ರಸ್ತೆಗಳಲ್ಲಿನ ಕಸವನ್ನು ಸ್ವಚ್ಛಗೊಳಿಸಿ ಡಾಂಬರು ಹಾಕಲಾಗಿದೆ. ರಸ್ತೆ ವಿಭಜಕಗಳಿಗೆ ಬಣ್ಣ ಬಳಿಯಲಾಗಿದೆ. ಎಲ್ಲೆಡೆ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಪ್ರವೇಶ ಭಾಗಗಳಲ್ಲಿ ನಾಕಬಂದಿ ಹಾಕಲಾಗಿದೆ. ಇಬ್ಬರು ಎಸ್ಪಿ, 7 ಡಿವೈಎಸ್ಪಿ ಹಾಗೂ 11 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಸುಮಾರು 600 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಹಾಗೂ ಸಂಸದ ಕೆ.ಎಚ್‌.ಮುನಿಯಪ್ಪ ಅಧಿಕಾರಿಗಳೊಂದಿಗೆ ಮಂಗಳವಾರ ವೇದಿಕೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ನಗರ ಪ್ರದಕ್ಷಿಣೆ ನಡೆಸಿ ಸಿದ್ಧತೆ ಪರಿಶೀಲಿಸಿದರು.

ಗಲಾಟೆ ಮಾಡುತ್ತಾರೆ: ‘ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಬರುವ ನಿರೀಕ್ಷೆ ಇದೆ. ಆದ ಕಾರಣ ಮತ್ತಷ್ಟು ಶಾಮಿಯಾನ ಹಾಕಬೇಕು. ಗಣ್ಯರ ಭಾಷಣ ಕೇಳಿಸದಿದ್ದರೆ ಜನ ಗಲಾಟೆ ಮಾಡುತ್ತಾರೆ. ಇದರಿಂದ ಕಾರ್ಯಕ್ರಮವೇ ಹಾಳಾಗುತ್ತದೆ. ಆದ್ದರಿಂದ ಕೊನೆಯಲ್ಲಿ ಕುಳಿತವರಿಗೂ ಭಾಷಣ ಸ್ಪಷ್ಟವಾಗಿ ಕೇಳಿಸುವಂತೆ ಧ್ವನಿವರ್ಧಕಗಳನ್ನು ಅಳವಡಿಸಬೇಕು. ಜತೆಗೆ ಎಲ್‌ಇಡಿ ಪರದೆಗಳನ್ನು ಅಳವಡಿಸಿ. ಯಾವುದೇ ಗೊಂದಲಕ್ಕೆ ಅವಕಾಶ ಇರಬಾರದು’ ಎಂದು ರಮೇಶ್‌ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

‘ಸಿದ್ದರಾಮಯ್ಯ ಬೆಳಿಗ್ಗೆ 11ಕ್ಕೆ ಆಗಮಿಸಲಿದ್ದು, ಮೊದಲು ಜಿಲ್ಲಾಡಳಿತ ಭವನ ಲೋಕಾರ್ಪಣೆ ಮಾಡುತ್ತಾರೆ. ನಂತರ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಧ್ಯಾಹ್ನ 2 ಗಂಟೆಗೆ ನಿರ್ಗಮಿಸುತ್ತಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಕಾಗೋಡು ತಿಮ್ಮಪ್ಪ, ಬಸವರಾಜ ರಾಯರೆಡ್ಡಿ, ಎಚ್.ಎಂ.ರೇವಣ್ಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ವಿವರಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗೆ ಏನಾದರೂ ಬೇಡಿಕೆ ಸಲ್ಲಿಸುತ್ತೀರಾ ಎಂದು ಸುದ್ದಿಗಾರರು ಕೇಳಿದ್ದಕ್ಕೆ, ‘ಇನ್ನೂ ಆ ಬಗ್ಗೆ ಚರ್ಚೆ ನಡೆಸಿಲ್ಲ. ಮುಖ್ಯಮಂತ್ರಿ ಏನು ಘೋಷಣೆ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಬೇಡುವವರು ನಾವು, ಕೊಡುವವರು ಅವರು’ ಎಂದು ಉತ್ತರಿಸಿದರು.

ಕೈಗಾರಿಕೆ ಸ್ಥಾಪಿಸಿ: ‘ಜಿಲ್ಲೆಯ ಬಿಜಿಎಂಎಲ್‌ನಲ್ಲಿ 12 ಸಾವಿರ ಎಕರೆ ಜಮೀನಿದ್ದು, ಅದನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದೆ. ಅಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟ ಬೇಡಿಕೆಗಳಿಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

ಕಾಮಗಾರಿ ವಿವರ: ಜಿಲ್ಲಾಡಳಿತ ಭವನ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ದೇವರಾಜ ಅರಸು ಭವನ, ಸುವರ್ಣ ಕನ್ನಡ ಭವನ, ಉನ್ನತೀಕರಿಸಿದ ಮಾಲೂರು ಸರ್ಕಾರಿ ಆಸ್ಪತ್ರೆ ಮತ್ತು ತೊರ್ನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮುಖ್ಯಮಂತ್ರಿ ಉದ್ಘಾಟಿಸುತ್ತಾರೆ.

ಜತೆಗೆ ಶ್ರೀನಿವಾಸಪುರ ತಾಲ್ಲೂಕಿನ ಪಣಸಮಾಕನಹಳ್ಳಿಯಲ್ಲಿ ಕೆಂಎಂಎಫ್‌ ಉತ್ಪನ್ನಗಳ ಪ್ಯಾಕಿಂಗ್‌ ಪೆಟ್ಟಿಗೆ ತಯಾರಿಕಾ ಘಟಕ, ಮುಳಬಾಗಿಲು ತಾಲ್ಲೂಕಿನ ದೇವರಾಯ ಸಮುದ್ರ ಬಳಿ ವಸತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪ್ಪದೊಡ್ಡಿ ಬಳಿ ಆಧುನಿಕ ಕಸಾಯಿಖಾನೆ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ, ಪೇಟೆಚಾಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಮುಳಬಾಗಿಲು ತಾಲ್ಲೂಕಿನ ಬಾಳಸಂದ್ರ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಾರೆ.

ಅಲ್ಲದೇ, ಬಂಗಾರಪೇಟೆ ತಾಲ್ಲೂಕಿನ ಹೊಸಕೋಟೆ– ವೆಂಕಟಗಿರಿ ಕೋಟೆ ನಡುವಿನ ರಾಜ್ಯ ಹೆದ್ದಾರಿ 95ರ ಅಭಿವೃದ್ಧಿ, ದೇವನಹಳ್ಳಿ– ಕೆಂಪಾಪುರ ರಾಜ್ಯ ಹೆದ್ದಾರಿ ಅಗಲೀಕರಣ, ಮಾಲೂರು ಕೊತ್ತಪಲ್ಲಿ– ಮಾಸ್ತಿ ನಡುವೆ ರಾಜ್ಯ ಹೆದ್ದಾರಿ ನಿರ್ಮಾಣ, ಟೇಕಲ್ ಹೊರವಲಯದಲ್ಲಿ ಹೆದ್ದಾರಿ ನಿರ್ಮಾಣ, ವೇಮಗಲ್– ಹೊಸಹಳ್ಳಿ ನಡುವಿನ ರಸ್ತೆ, ವಕ್ಕಲೇರಿ– ಅರಾಭಿಕೊತ್ತನೂರು ರಸ್ತೆ, ಮುಳಬಾಗಿಲು– ರಾಮಸಂದ್ರ ರಸ್ತೆ, ರಾಷ್ಟ್ರೀಯ ಹೆದ್ದಾರಿ 4ರಿಂದ ಆವಣಿವರೆಗಿನ ರಸ್ತೆ, ಕೆಜಿಎಫ್‌ನ ಡಿಸ್ಟ್ರಿಕ್ ಫಂಡ್ ರಸ್ತೆಯಿಂದ ಬ್ಯಾಟರಾಯನಹಳ್ಳಿ ಮಾರ್ಗವಾಗಿ ಅಗಸ್ತ್ಯ ಫೌಂಡೇಷನ್ ರಸ್ತೆ, ಅಂಡರ್‌ಸನ್‌ಪೇಟೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಾರೆ.

ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ರಾಜೀವ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT