ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಕುಸಿತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ದೇಶದ ಆರ್ಥಿಕ ಬೆಳವಣಿಗೆ (ಜಿಡಿಪಿ) ದರ ಇತ್ತೀಚಿನ ತಿಂಗಳುಗಳಲ್ಲಿ ಕುಸಿತದ ಹಾದಿಯಲ್ಲಿ ಸಾಗಿರುವುದು ವಾಸ್ತವ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿಯು ಖಚಿತಪಡಿಸಿದೆ. ಇದು ಬರೀ ತಾಂತ್ರಿಕ ವಿದ್ಯಮಾನವಲ್ಲ. ಸತ್ಯ ಸಂಗತಿಯಾಗಿದೆ ಎಂದು ಈ ವರದಿ ಹೇಳಿರುವುದು ಸದ್ಯದ ದೇಶಿ ಅರ್ಥ ವ್ಯವಸ್ಥೆಯ ನೈಜ ಸ್ವರೂಪಕ್ಕೆ ಹಿಡಿದ ಕೈಗನ್ನಡಿಯಾಗಿದ್ದು ಆತಂಕ ಮೂಡಿಸಿದೆ.

ಭಾರತದ ಅರ್ಥ ವ್ಯವಸ್ಥೆಯು ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳವಣಿಗೆ ಕಾಣುತ್ತಿದೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ಈಗ ಅದು ಬೇರೆಯೇ ಆದ ಗೊಂದಲಕಾರಿ ಚಿತ್ರಣ ನೀಡುತ್ತಿದೆ. ಆರ್ಥಿಕತೆ ಬೆಳವಣಿಗೆಯ ಚಾಲಕ ಶಕ್ತಿಗಳಾಗಿರುವ ಸರ್ಕಾರಿ ಹೂಡಿಕೆ, ರಫ್ತು ವಹಿವಾಟು, ಗ್ರಾಹಕರ ಉಪಭೋಗ ಪ್ರಮಾಣ ಮತ್ತು ಖಾಸಗಿ ಬಂಡವಾಳ ಹೂಡಿಕೆಗಳು ಕುಸಿದಿವೆ.

ಕೈಗಾರಿಕಾ ಬೆಳವಣಿಗೆಯು ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಜಾರಿದೆ. ಗ್ರಾಮೀಣ ಪ್ರದೇಶದವರೂ ಸೇರಿದಂತೆ ಗ್ರಾಹಕರ ಖರೀದಿ ಸಾಮರ್ಥ್ಯ ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕೃಷಿ ಉತ್ಪನ್ನಗಳ ಬೆಲೆ ಕುಸಿತವು ರೈತಾಪಿ ವರ್ಗದ ಬೇಡಿಕೆ ಉತ್ಸಾಹವನ್ನೂ ಉಡುಗಿಸಿದೆ. ಜತೆಗೆ, ಕೃಷಿ ಮೌಲ್ಯವರ್ಧನೆ (ಜಿವಿಎ) ಕುಸಿದಿರುವುದೂ ಚಿಂತೆಗೆ ಆಸ್ಪದ ನೀಡಿದೆ.

ನೋಟು ರದ್ದತಿಯ ಪ್ರತಿಕೂಲ ಪರಿಣಾಮ ಮತ್ತು ಜಿಎಸ್‌ಟಿ ಜಾರಿಯಲ್ಲಿನ ಸಮಸ್ಯೆಗಳು ಈ ಹಾನಿಯ ತೀವ್ರತೆ ಹೆಚ್ಚಿಸಿವೆ. ‘ಆರ್ಥಿಕ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿರುವುದಕ್ಕೆ ತಾಂತ್ರಿಕ ಕಾರಣಗಳಿವೆ. ಅದೊಂದು ತಾತ್ಕಾಲಿಕ ವಿದ್ಯಮಾನ’ ಎನ್ನುವ ಬಿಜೆಪಿ ಅಧ್ಯಕ್ಷರ ವಾದವನ್ನು ಈ ವರದಿ ಸುಳ್ಳು ಮಾಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನ ಸಂಶೋಧನಾ ವರದಿಯೇ ಈ ವಸ್ತುನಿಷ್ಠ ಚಿತ್ರಣ ನೀಡಿರುವುದರಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.

ಜೂನ್‌ ತಿಂಗಳಲ್ಲಿ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 5.7ರಷ್ಟಾಗಿತ್ತು. ಇದು ಮೂರು ವರ್ಷಗಳಲ್ಲಿನ ಅತ್ಯಂತ ಕಡಿಮೆ ಮಟ್ಟವಾಗಿತ್ತು. 2016ರ ಸೆಪ್ಟೆಂಬರ್‌ ತಿಂಗಳಿನಿಂದಲೇ ಈ ಕುಸಿತ ಕಂಡುಬರುತ್ತಿದೆ. ತಾಂತ್ರಿಕವಾಗಿ ಇದು ಅಲ್ಪಾವಧಿಯದಲ್ಲ ಮತ್ತು ತಾತ್ಕಾಲಿಕವೂ ಅಲ್ಲ ಎಂದು ವರದಿಯಲ್ಲಿ ಹೇಳಿರುವುದು ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷದ ಕಣ್ಣು ತೆರೆಸಬೇಕಾಗಿದೆ.

ನಗದನ್ನೇ ಹೆಚ್ಚಾಗಿ ಅವಲಂಬಿಸಿರುವ ಆರ್ಥಿಕತೆಯ ಜೀವನಾಡಿಯಾಗಿರುವ ನೋಟುಗಳನ್ನು ರದ್ದುಪಡಿಸಿದ್ದ ನಿರ್ಧಾರವು ಜಿಡಿಪಿ ಬೆಳವಣಿಗೆಯಲ್ಲಿ ಶೇ 2ರಷ್ಟು ಕಡಿತ ಮಾಡಲಿದೆ ಎಂದು ವ್ಯಕ್ತಪಡಿಸಲಾಗಿದ್ದ ಆತಂಕವೂ ನಿಜವಾಗಿದೆ. ಈಗ, ಆರ್ಥಿಕತೆಗೆ ಚೇತರಿಕೆ ತರಲು ಮೂಲಸೌಕರ್ಯ ವಲಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ನಿರ್ಧರಿಸಿರುವುದು ಸಕಾರಾತ್ಮಕ ನಡೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಂತೃಪ್ತ ಭಾವ ನೆಲೆಗೊಳ್ಳುವವರೆಗೆ ಸುಸ್ಥಿರ ಆರ್ಥಿಕ ಬೆಳವಣಿಗೆ ಕಷ್ಟಸಾಧ್ಯ ಎನ್ನುವುದನ್ನು ಸರ್ಕಾರ ಮನಗಾಣಬೇಕಾಗಿದೆ.

ಗ್ರಾಹಕರು ಮತ್ತು ಹೂಡಿಕೆದಾರರಿಗೆ  ಹಿತಾನುಭವ ನೀಡುವಂತಹ ನಿರ್ಧಾರಗಳನ್ನು ಸರ್ಕಾರ ತುರ್ತಾಗಿ ಕೈಗೊಳ್ಳಬೇಕಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ, ಗ್ರಾಹಕ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ತಗ್ಗಿಸಿದರೆ ಗ್ರಾಹಕ ಉತ್ಪನ್ನಗಳ ಬೇಡಿಕೆ ಕುದುರಲಿದೆ ಎಂಬ ಮಾತುಗಳನ್ನು ಪರಿಶೀಲಿಸುವುದು ಅಗತ್ಯ.

ಸ್ಥಗಿತಗೊಂಡಿರುವ ಖಾಸಗಿ ಯೋಜನೆಗಳ ಪುನರಾರಂಭ ಮತ್ತು ಸರ್ಕಾರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡುವುದೂ ಅಗತ್ಯ. ಆಗ ಆರ್ಥಿಕ ಚಟುವಟಿಕೆಗಳು ಚೇತರಿಕೆಯ ಹಾದಿಗೆ ಮರಳುವುದು ಸಾಧ್ಯವಾಗುತ್ತದೆ. ಮೂಲಸೌಕರ್ಯ ಮತ್ತು ರಕ್ಷಣಾ ವಲಯದಲ್ಲಿ ಹೂಡಿಕೆ ಹೆಚ್ಚಿಸಿದರೆ ದೀರ್ಘಾವಧಿಯಲ್ಲಿ ಆರ್ಥಿಕ ಚೇತರಿಕೆಗೆ ಅನುಕೂಲವಾಗಲಿದೆ.

ಜಿಎಸ್‌ಟಿ ಜಾರಿಯಿಂದ ಉದ್ಭವಿಸಿರುವ ಸಮಸ್ಯೆಗಳನ್ನೂ ತುರ್ತಾಗಿ ಬಗೆಹರಿಸಲು ಸರ್ಕಾರ ಗಮನ ನೀಡಬೇಕಾಗಿದೆ. ರೈತಾಪಿ ವರ್ಗದ ಸಂಕಷ್ಟಗಳನ್ನೂ ಆದ್ಯತೆ ಮೇರೆಗೆ ದೂರ ಮಾಡಬೇಕಾಗಿದೆ. ಆರ್ಥಿಕತೆ ಮೇಲೆ ತನಗೆ ಇನ್ನೂ ಹಿಡಿತ ಇದೆ ಎನ್ನುವುದನ್ನು ಸರ್ಕಾರ ಮನದಟ್ಟು ಮಾಡಿಕೊಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಮತ್ತು ಖಾಸಗಿ ಹಣ ವೆಚ್ಚ ಮಾಡುವುದೇ ಸದ್ಯದ ತುರ್ತು ಅಗತ್ಯ.

ನಿರಂತರವಾಗಿರುವ ಆರ್ಥಿಕ ಬೆಳವಣಿಗೆ ದರ ಕುಸಿತದ ಸಕಾರಣಗಳನ್ನು ಗುರುತಿಸಿ, ಪರಿಹಾರ ಕಂಡುಕೊಳ್ಳಲು ಸಮಯೋಚಿತ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ ಹಣದುಬ್ಬರ ಅಪಾಯಗಳಿಗೂ ಕಡಿವಾಣ ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT