ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಪ್ಯಾಂಥರ್ಸ್‌ ಉತ್ತಮ ಮೊತ್ತ

ಕೆಪಿಎಲ್‌ ಸೆಮಿಫೈನಲ್‌: ಭರತ್‌, ಸ್ಟಾಲಿನ್‌ ಜೊತೆಯಾಟದ ಜುಗಲ್‌ಬಂದಿ
Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆ.ಎನ್‌. ಭರತ್ ಮತ್ತು ಸ್ಟಾಲಿನ್‌ ಹೂವರ್‌ ಅವರ ಸೊಗಸಾದ ಜೊತೆಯಾಟ ಸೇರಿದ್ದ ಕ್ರಿಕೆಟ್‌ ಪ್ರೇಮಿಗಳ ಮನಸೂರೆಗೊಂಡಿತು. ಇದರಿಂದ ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ಕೆಪಿಎಲ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.

ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಗೆ ಪದೇ ಪದೇ ಮಳೆ ಅಡ್ಡಿಪಡಿಸುತ್ತಿದೆ. ವರುಣನ ‘ಆಟ’ ಮಂಗಳವಾರದ ಪಂದ್ಯಕ್ಕೂ ತಪ್ಪಲಿಲ್ಲ. ಆದ್ದರಿಂದ ಪಂದ್ಯವನ್ನು ಒಂದು ಗಂಟೆ ತಡವಾಗಿ ಆರಂಭಿಸಲಾಯಿತು.

ಟಾಸ್‌ ಜಯಿಸಿದ ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ವಿನಯ್‌ ಕುಮಾರ್‌ ಫೀಲ್ಡಿಂಗ್‌ ಮಾಡಲು ನಿರ್ಧರಿಸಿದರು. ಪ್ಯಾಂಥರ್ಸ್‌ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 152 ರನ್ ಕಲೆ ಹಾಕಿತು.

ಜುಗಲ್‌ಬಂದಿ: ಹಿಂದಿನ ನಾಲ್ಕೂ ಪಂದ್ಯಗಳ ಪೈಕಿ ಎರಡರಲ್ಲಿ ಭರತ್‌ ರನ್‌ ಖಾತೆ ಆರಂಭಿಸಿರಲಿಲ್ಲ. ಇನ್ನೆರೆಡು ಪಂದ್ಯಗಳು ಸೇರಿ 14 ರನ್‌ ಗಳಿಸಿದ್ದರು. ಇಲ್ಲಿ ನೃಪತುಂಗ ಬೆಟ್ಟದಿಂದ ಬೀಸುತ್ತಿದ್ದ ತಂಗಾಳಿಯಲ್ಲಿ ಅವರು ಬಾರಿಸಿದ ಬೌಂಡರಿ, ಸಿಕ್ಸರ್‌ಗಳ ಸೊಗಸಾದ ಹೊಡೆತಗಳು ಆಟದ ಸೌಂದರ್ಯವನ್ನು ಹೆಚ್ಚಿಸಿತು.

54 ಎಸೆತಗಳನ್ನು ಎದುರಿಸಿದ ಭರತ್‌ 3 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಸಿಡಿಸಿದರು. ಇನ್ನೊಂದಡೆ ಸ್ಟಾಲಿನ್‌ ಕೂಡ ಟೈಗರ್ಸ್‌ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 94 ರನ್ ಕಲೆ ಹಾಕಿ ತಂಡ ಉತ್ತಮ ಗಳಿಸಲು ಕಾರಣರಾದರು.

ಸ್ಟಾಲಿನ್‌ ತಾವು ಎದುರಿಸಿದ ನಾಲ್ಕು ಮತ್ತು ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ಅಬ್ಬರದ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಹೆಚ್ಚಿಸಿದರು. 42 ಎಸೆತಗಳನ್ನು ಎದುರಿಸಿ 67 ರನ್ ಗಳಿಸಿದರು. ಈ ಬಾರಿಯ ಟೂರ್ನಿಯಲ್ಲಿ ಸ್ಟಾಲಿನ್‌ ಬಾರಿಸಿದ ಎರಡನೇ ಅರ್ಧಶತಕವಿದು.

ಮೊದಲ ಓವರ್‌ನಿಂದಲೇ ವೇಗದ ಆಟಕ್ಕೆ ಒತ್ತು ಕೊಟ್ಟ ಸ್ಟಾಲಿನ್‌ ಬೌಂಡರಿಗಳು (11) ಮತ್ತು ಸಿಕ್ಸರ್‌ (10 ಮೂಲಕವೇ 50 ರನ್ ಗಳಿಸಿದರು. ಇದರಿಂದ ಪ್ಯಾಂಥರ್ಸ್‌ ತಂಡ 76 ಎಸೆತಗಳಲ್ಲಿ ನೂರು ರನ್ ಕಲೆ ಹಾಕಿತ್ತು.

ಆರಂಭಿಕ ಬ್ಯಾಟ್ಸ್‌ಮನ್‌ಗಳು ಹಾಕಿಕೊಟ್ಟ ಗಟ್ಟಿ ಬುನಾದಿಯ ಮೇಲೆ ರನ್‌ ಸೌಧ ನಿರ್ಮಿಸಲು ಸ್ಟುವರ್ಟ್‌ ಬಿನ್ನಿ (13) ಯತ್ನಿಸಿ ವಿಫಲರಾದರು. ಕಿಶೋರ್‌ ಕಾಮತ್‌, ಡಿ. ಅವಿನಾಶ್‌, ಆಡಿದರೂ ಆರಂಭದಲ್ಲಿ ಕಂಡು ಬಂದ ರನ್‌ ವೇಗ ಇರಲಿಲ್ಲ. ಕೊನೆಯ ಐದು ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 33 ರನ್‌ ಮಾತ್ರ ಗಳಿಸಿದ್ದು ಇದಕ್ಕೆ ಸಾಕ್ಷಿ.

ಎರಡನೇ ಸೆಮಿಫೈನಲ್‌ ನಾಳೆ: ಶುಕ್ರವಾರ ನಡೆಯಲಿರುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಬಿಜಾಪುರ ಬುಲ್ಸ್‌ ಮತ್ತು ನಮ್ಮ ಶಿವಮೊಗ್ಗ ತಂಡಗಳು ಪೈಪೋಟಿ ನಡೆಸಲಿವೆ. ಗುರುವಾರ ವಿಶ್ರಾಂತಿ ದಿನವಾಗಿದೆ. ಬುಲ್ಸ್ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್‌ ಎದುರು ಗೆಲುವು ಪಡೆದು ನಾಕೌಟ್‌ ತಲುಪಿದೆ.

ಸಂಕ್ಷಿಪ್ತ ಸ್ಕೋರು: ಬೆಳಗಾವಿ ಪ್ಯಾಂಥರ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 152 (ಕೆ.ಎನ್‌. ಭರತ್‌ 62, ಸ್ಟಾಲಿನ್‌ ಹೂವರ್‌ 67, ಸ್ಟುವರ್ಟ್‌ ಬಿನ್ನಿ 13; ಆರ್‌. ವಿನಯ್‌ ಕುಮಾರ್‌ 22ಕ್ಕೆ1, ಕ್ರಾಂತಿ ಕುಮಾರ್ 24ಕ್ಕೆ2). ಸ್ಕೋರ್‌ ಅಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT