ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗ ಸೃಷ್ಟಿಸದ ಕಾರಣ ಕಾಂಗ್ರೆಸ್‌ಗೆ ಸೋಲು’

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆ
Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರಿನ್ಸ್‌ಟನ್‌ (ಅಮೆರಿಕ),: ’ಉದ್ಯೋಗ ಸೃಷ್ಟಿಸುವಲ್ಲಿ ಕಾಂಗ್ರೆಸ್‌ ವಿಫಲವಾದ ಕಾರಣಕ್ಕಾಗಿಯೇ 2014ರ ಚುನಾವಣೆಯಲ್ಲಿ ಅದು ಸೋಲನ್ನಪ್ಪಬೇಕಾಯಿತು’ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇಲ್ಲಿ ಹೇಳಿದರು.

‘ನಿರುದ್ಯೋಗ ಸಮಸ್ಯೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದೇ ಕಾರಣಕ್ಕೆ ನರೇಂದ್ರ ಮೋದಿ ಹಾಗೂ ಡೊನಾಲ್ಡ್‌ ಟ್ರಂಪ್‌ನಂಥವರು ಅಧಿಕಾರಕ್ಕೆ ಬರುವಂತಾಗಿದೆ’ ಎಂದು ಅವರು ಹೇಳಿದರು.

ಅಮೆರಿಕದ ಪ್ರವಾಸದಲ್ಲಿರುವ ರಾಹುಲ್‌, ಬುಧವಾರ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ‘ಕೆಲಸ ಇಲ್ಲದೇ ಭಾರತ ಮತ್ತು ಅಮೆರಿಕದಲ್ಲಿ ಯುವಜನರ ಭವಿಷ್ಯ ಅತಂತ್ರವಾಗಿದೆ. ಆ ನೋವಿನಿಂದಲೇ ಭಾರತದಲ್ಲಿ ಮೋದಿ ಹಾಗೂ ಅಮೆರಿಕದಲ್ಲಿ ಟ್ರಂಪ್‌ನಂಥ ಮಂದಿಯನ್ನು ಜನರು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದರು.

‌‘ನನಗೆ ಟ್ರಂಪ್‌ ಬಗ್ಗೆ ಗೊತ್ತಿಲ್ಲ. ಆದರೆ ನಮ್ಮ ಪ್ರಧಾನಿ ಮೋದಿ ಅವರಂತೂ ಉದ್ಯೋಗ ಸೃಷ್ಟಿಗಾಗಿ ಏನೂ ಕ್ರಮ ತೆಗೆದುಕೊಂಡಿಲ್ಲ. ದಿನಂಪ್ರತಿ 30ಸಾವಿರ ಯುವಕರು ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಸರ್ಕಾರ ಪ್ರತಿದಿನ 500 ಉದ್ಯೋಗಾವಕಾಶಗಳನ್ನಷ್ಟೇ ಕಲ್ಪಿಸುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ’ ಎಂದು ರಾಹುಲ್ ಅಭಿಪ್ರಾಯ ಪಟ್ಟರು.

‘ಭಾರತದಲ್ಲಿ ‘ಧ್ರುವೀಕರಣದ ರಾಜಕಾರಣ’ ಒಂದು ದೊಡ್ಡ ಸವಾಲಾಗಿದೆ. ಬಿಜೆಪಿಯ ದೃಷ್ಟಿಕೋನದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಮತ್ತು ಬುಡಕಟ್ಟು ಜನಾಂಗದವರು ಸಮಾಜದ ಭಾಗವಾಗಿ ಉಳಿದಿಲ್ಲ. ಆದ್ದರಿಂದ ಭಾರತದಲ್ಲಿರುವ ಸುಮಾರು 10ಕೋಟಿ ಬುಡಕಟ್ಟು ಜನರಿಗೆ ಬಿಜೆಪಿಯ ದೃಷ್ಟಿಕೋನ ಸಮಾಧಾನ ತಂದಿಲ್ಲ. ಅವರ ಭವಿಷ್ಯ ಏನು ಎಂಬ ಬಗ್ಗೆ ಅವರಿಗೆ ಸ್ಪಷ್ಟವಾಗಿ ಹೇಳದೇ ಹೋದಲ್ಲಿ, ಅವರು ಬೇರೆಯ ದಾರಿ ಹಿಡಿಯುತ್ತಾರೆ. ಇದು ನನಗೆ ತುಂಬಾ ನೋವು ಉಂಟುಮಾಡುವ ವಿಷಯವಾಗಿದೆ’ ಎಂದರು.

ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಮುಂದಿನ 10ವರ್ಷಗಳಲ್ಲಿ ದೇಶಕ್ಕೆ ಹೊಸ ದೃಷ್ಟಿಕೋನ ತಂದು ನಿರುದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಹೇಳಿದರು.

‘ಭಾರತ ಮತ್ತು ಚೀನಾ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳಾಗಿವೆ. ಈ ಎರಡೂ ದೇಶಗಳ ನಡುವೆ ಸಹಕಾರ ಹಾಗೂ ಸ್ಪರ್ಧೆಯಿದೆ. ಈಗಿನ ಸನ್ನಿವೇಶದಲ್ಲಿ ನಾವು ಚೀನಾದೊಂದಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪರ್ಧಿಸಬೇಕಿದೆ. ಆದರೆ, ನಮ್ಮ ಸ್ಪರ್ಧೆ ಅಷ್ಟು ಸಮರ್ಥವಾಗಿಲ್ಲ ಎಂದು ನನ್ನ ಅನಿಸಿಕೆ. ಒಂದು ವಲಯ, ಒಂದು ರಸ್ತೆ ಯೋಜನೆಯಂತಹ ದೂರದೃಷ್ಟಿಯೊಂದಿಗೆ ಚೀನಾ ಮುನ್ನಡೆಯುತ್ತಿದೆ.

ಭಾರತವೂ ಅಂಥ ದೂರದೃಷ್ಟಿ ಒಳಗೊಳ್ಳುವ ಅಗತ್ಯವಿದೆ. ನಮ್ಮ ದೂರದೃಷ್ಟಿ ಹೇಗಿರಬೇಕು, ಯಾವ ರೀತಿಯ ಯೋಜನೆಗಳನ್ನು ನಾವು ಹಾಕಿಕೊಳ್ಳಬೇಕು, ಭಾರತ ಮತ್ತು ಚೀನಾ ನಡುವಿನ ಸಹಕಾರ ಯಾವ ನಿಟ್ಟಿನಲ್ಲಿ ಸಾಗಬೇಕು...? ಈ ರೀತಿಯ ಮೂಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಭಾರತ ಸಾಗುವುದು ಇಂದಿನ ಅನಿವಾರ್ಯತೆ’ ಎಂದು ರಾಹುಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT