ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿ, ಓಡಿ ಆನಂದಿಸಿದ ಪೌರಕಾರ್ಮಿಕರು!

Last Updated 21 ಸೆಪ್ಟೆಂಬರ್ 2017, 6:32 IST
ಅಕ್ಷರ ಗಾತ್ರ

ಮಂಡ್ಯ: ಸೆ.23ರಂದು ನಡೆಯಲಿರುವ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಗರಸಭೆ ವತಿಯಿಂದ ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕ್ರೀಡಾಕೂಟದಲ್ಲಿ ಪೌರ ಕಾರ್ಮಿಕರು ಸಂಭ್ರಮದಿಂದ ಪಾಲ್ಗೊಂಡರು.

ನಗರಸಭೆ ವ್ಯಾಪ್ತಿಯ ಕಾಯಂ ಹಾಗೂ ಗುತ್ತಿಗೆ ಕಾರ್ಮಿಕರು ಒಟ್ಟಾಗಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಮಹಿಳೆಯರಿಗೆ ಓಟ, ಷಾಟ್‌ಪಟ್‌, ಮ್ಯೂಸಿಕಲ್‌ ಚೇರ್‌, ನಿಂಬೆಹಣ್ಣನ್ನು ಚಮಚೆಯಲ್ಲಿ ಇಟ್ಟುಕೊಂಡು ನಡೆಯುವ ಸ್ಪರ್ಧೆಗಳು ನಡೆದವು. ಮಹಿಳಾ ಕಾರ್ಮಿಕರು ಬಲು ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದರು.

ಪುರುಷರ ವಿಭಾಗದಲ್ಲಿ ಓಟ, ಷಾಟ್‌ಪಟ್‌ ಹಾಗೂ ಕ್ರಿಕೆಟ್‌ ಟೂರ್ನಿ ಏರ್ಪಡಿಸಲಾಗಿತ್ತು. ಆರು ಓವರ್‌ಗಳಿಗೆ ನಡೆದ ಕ್ರಿಕೆಟ್‌ ಟೂರ್ನಿಯಲ್ಲಿ ಲೋಕೇಶ್‌ ನಾಯಕತ್ವದ ತಂಡ ಗೆಲುವು ಸಾಧಿಸಿತು. ಪ್ರತಿದಿನ ನಗರದ ಸ್ವಚ್ಛತೆಯಲ್ಲಿ ತೊಡಗುವ ಪೌರ ಕಾರ್ಮಿಕರು ಬುಧವಾರ ಸಂತಸದಿಂದ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಆನಂದ ಅನುಭವಿಸಿದರು.

ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ‘ನಗರದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರಿಗಾಗಿ ಒಂದು ದಿನ ಮೀಸಲಿಟ್ಟು ದಿನಾಚರಣೆ ಮಾಡಲಾಗುತ್ತದೆ. ಪೌರಕಾರ್ಮಿಕರು ಕೂಡ ಎಲ್ಲರಂತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಜೀವನ ನಡೆಸಬೇಕು. ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ವಿಜೇತರಿಗೆ ಪೌರಕಾರ್ಮಿಕರ ದಿನಾಚರಣೆಯಂದು ಬಹುಮಾನ ವಿತರಣೆ ಮಾಡಲಾಗುವುದು’ ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ಟಿ.ಎನ್‌.ನರಸಿಂಹಮೂರ್ತಿ ಮಾತನಾಡಿ ‘ಉತ್ತಮ ದೈಹಿಕ ಸ್ಥಿತಿಗೆ ಪೌರ ಕಾರ್ಮಿಕರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸದಾ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುವುದರಿಂದ ಇಂತಹ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡರೆ ದುಶ್ಚಟದಿಂದ ದೂರವಿರಲು ಸಾಧ್ಯವಾಗುತ್ತದೆ.

ಆರೋಗ್ಯಯುತ ಜೀವನ ನಡೆಸಲು ಕ್ರೀಡೆ ಸಹಕಾರಿಯಾಗಲಿದೆ. ಪೌರಕಾರ್ಮಿಕರಿಗೆ ನಗರಸಭೆಯಿಂದ ಹಲವು ಸೌಲಭ್ಯ ವಿತರಣೆ ಮಾಡಲಾಗುತ್ತಿದೆ. ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸುಜಾತಾಮಣಿ ಹಾಜರಿದ್ದರು. ಪರಿಸರ ಎಂಜಿನಿಯರ್‌ ಸುಬ್ರಮಣ್ಯ, ಆರೋಗ್ಯ ಇನ್‌ಸ್ಪೆಕ್ಟರ್‌ಗಳಾದ ಚಲುವರಾಜು, ಹರಿಪ್ರಸಾದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT