ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಸ್ವಚ್ಛಗೊಳಿಸಲು ರೈತರ ಆಗ್ರಹ

Last Updated 21 ಸೆಪ್ಟೆಂಬರ್ 2017, 9:13 IST
ಅಕ್ಷರ ಗಾತ್ರ

ಕನಕಪುರ: ಅಪರೂಪಕ್ಕೆ ತಾಲ್ಲೂಕಿನಲ್ಲಿ ಆಗಿರುವ ಉತ್ತಮ ಮಳೆಯಿಂದ ಕೆರೆಗಳು ತುಂಬಿದ್ದರೂ ರೈತರಿಗೆ ಉಪಯುಕ್ತವಾಗುತ್ತಿಲ್ಲವೆಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಆರೋಪಿಸಿದರು.

ತಾಲ್ಲೂಕಿನಲ್ಲಿರುವ ಕೆರೆಗಳ ಕಾಲುವೆಗಳು ಮುಚ್ಚಿಹೋಗಿರುವ ಸಂಬಂಧ ಬುಧವಾರ ರಾಜ್ಯ ರೈತ ಸಂಘದ ವತಿಯಿಂದ ತಹಶೀಲ್ದಾರ್‌ ಅವರಿಗೆ ಮನವಿಪತ್ರ ನೀಡಿ ಮಾತನಾಡಿದರು.

ಹಲವು ವರ್ಷಗಳಿಂದ ತಾಲ್ಲೂಕು ಭೀಕರ ಬರಗಾಲಕ್ಕೆ ಸಿಲುಕಿದೆ. ಕೆರೆ ಕಟ್ಟೆಗಳು ಒಣಗಿ ಬತ್ತಿಹೋಗಿವೆ. 15 –20 ವರ್ಷಗಳಿಂದ ತುಂಬದ ಕೆರೆಗಳು ಈ ಬಾರಿ ತುಂಬಿ ಕೋಡಿಬಿದ್ದಿವೆ, ರೈತರಲ್ಲಿ ವ್ಯವಸಾಯ ಮಾಡುವ ಭರವಸೆಯನ್ನು ಹುಟ್ಟಿಸಿವೆ ಎಂದರು.

ಕೆರೆಯ ಕಾಲುವೆಗಳು ಮುಚ್ಚಿದ್ದು ರೈತರ ಕೃಷಿಗೆ ನೀರು ಪೂರೈಕೆಯಾಗದೆ ವ್ಯರ್ಥವಾಗಿದೆ. ಇದು ರೈತರನ್ನು ಆತಂಕಕ್ಕೆ ಈಡು ಮಾಡಿದೆ ಎಂದರು.ರೈತ ಸಂಘದ ಜಿಲ್ಲಾ ಮುಖಂಡ ಶ್ರೀನಿವಾಸ್‌ ಮಾತನಾಡಿ ಅಂತರ್ಜಲ ಹೆಚ್ಚಿಸಬೇಕು, ಕೆರೆಗಳಲ್ಲಿ ನೀರು ಸಂಗ್ರಹಿಸಬೇಕೆಂದು ಸರ್ಕಾರು ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ, ಕೋಟ್ಯಂತರ ರೂಪಾಯಿ ಹಣವನ್ನು ವೆಚ್ಚ ಮಾಡಿದೆ ಎಂದರು.

ಅಪರೂಪಕ್ಕೆ ಬಿದ್ದ ಮಳೆಯ ನೀರನ್ನು ಸಪರ್ಮಕವಾಗಿ ಬಳಕೆ ಮಾಡಿಕೊಳ್ಳದೆ ವ್ಯರ್ಥವಾಗಿ ನದಿಯಲ್ಲಿ ಹರಿದು ಸಮುದ್ರದ ಪಾಲಾಗುವಂತೆ ಮಾಡಿರುವುದು ದುರದೃಷ್ಟಕರವೆಂದು ಆಪಾದಿಸಿದರು.

ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಕಣ್ಮುಚ್ಚಿ ಕುಳಿತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತಪರ ಹೋರಾಟ ಸಂಘದ ಅಧ್ಯಕ್ಷ ಲೋಕೇಶ್‌ಗೌಡ ಮಾತನಾಡಿ ತಾಲ್ಲೂಕಿನ ಮಾವತ್ತೂರುಕೆರೆ, ಯಲಚವಾಡಿಕೆರೆ, ತಟ್ಟೆಕೆರೆ, ಗಟ್ಟಾಳ್‌ಕೆರೆ, ಸುಭೇದಾರ್‌, ಮೇಡಮಾರನಹಳ್ಳಿ ಕೆರೆ, ಹನುಮನಹಳ್ಳಿ ಕೆರೆ, ಯಡಮಾರನಹಳ್ಳಿಕೆರೆ ಮತ್ತಿತರ ಹಲವು ಕೆರೆಗಳು ತಾಲ್ಲೂಕಿನಲ್ಲಿ ರೈತರ ಕೃಷಿ ಚಟುವಟಿಕೆಗೆ ನೀರು ಪೂರೈಕೆ ಮಾಡಲಿವೆ. ಇವುಗಳ ಕಾಲುವೆಗಳು ಮುಚ್ಚಿವೆ ಎಂದರು.

ಮುಚ್ಚಿರುವ ಕಾಲುವೆಗಳನ್ನು ದುರಸ್ತಿ ಮಾಡಬೇಕು, ಕೆರೆಗಳಿಗೆ ನೀರು ಬರುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಶಿಕುಮಾರ್‌, ಕಾರ್ಯಾಧ್ಯಕ್ಷ ಎಚ್‌.ಬಿ.ಬಸವರಾಜು, ಮುಖಂಡರಾದ ವೀರಭದ್ರ, ಪುಟ್ಟಸ್ವಾಮಿ, ದುರ್ಗೇಗೌಡ, ಶ್ಯಾಮ್‌, ಮಧು ಉಪಸ್ಥಿತರಿದ್ದರು. ತಹಶೀಲ್ದಾರ್‌ ಆರ್‌. ಯೋಗಾನಂದ ರೈತರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT