ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕದ ಹೊಸ್ತಿಲಲ್ಲಿ ಎಡವಿದ ವಿರಾಟ್‌ ಕೊಹ್ಲಿ: ಆಸ್ಟ್ರೇಲಿಯಾಕ್ಕೆ 253 ರನ್‌ ಗುರಿ

Last Updated 22 ಸೆಪ್ಟೆಂಬರ್ 2017, 4:01 IST
ಅಕ್ಷರ ಗಾತ್ರ

ಕೋಲ್ಕತ್ತ: ಮೊದಲ ಏಕದಿನ ಪಂದ್ಯದಲ್ಲಿ ಸುಲಭ ಗೆಲುವಿನ ನಗೆ ಬೀರಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 253ರನ್‌ ಗಳ ಸಾಧಾರಣ ಗುರಿ ನೀಡಿದೆ.

ಇಲ್ಲಿನ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಭಾರತ ಆರಂಭಿಕ ಆಘಾತ ಎದುರಿಸಿತು. ಅಜಿಂಕ್ಯ ರಹಾನೆ ಜತೆ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ 14 ಎಸೆತಗಳಲ್ಲಿ ಕೇವಲ 7ರನ್‌ ಕಲೆಹಾಕಿ ನಿರ್ಗಮಿಸಿದರು. ಆಗ ತಂಡದ ಖಾತೆಯಲ್ಲಿದ್ದದ್ದು ಕೇವಲ 19ರನ್‌.

ಈ ವೇಳೆ ರಹಾನೆ(55) ಜತೆ ಎರಡನೇ ವಿಕೆಟ್‌ಗೆ ಶತಕದ ಜತೆಯಾಟ ಆಡಿದ ನಾಯಕ ವಿರಾಟ್‌ ಕೊಹ್ಲಿ ತಂಡವನ್ನು ಆಪಾಯದಿಂದ ಪಾರು ಮಾಡಿದರು. ಇಬ್ಬರೂ ತಾಳ್ಮೆಯ ಇನಿಂಗ್ಸ್‌ ಕಟ್ಟಿ ತಂಡವನ್ನು ಸುಸ್ಥಿತಿಗೆ ತಂದರು.

ರಹಾನೆ ಔಟ್‌ ಆದ ಬಳಿಕ ಬಂದ ಕರ್ನಾಟಕದ ಮನೀಷ್ ಪಾಂಡೆ(3), ಕೇದಾರ್‌ ಜಾದವ್‌(24) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ಶತಕದ ಹೊಸ್ತಿಲಲ್ಲಿ ವಿಕೆಟ್‌ ಒಪ್ಪಿಸಿದರು. ಅವರು 107 ಎಸೆತಗಳಲ್ಲಿ ಎಂಟು ಬೌಂಡರಿ ಸಹಿತ 92 ರನ್‌ ಗಳಿಸಿದರು.

ಈ ವೇಳೆ ಬಂದ ಮಹೇಂದ್ರ ಸಿಂಗ್‌ ದೋನಿ ಕೂಡ ಕೇವಲ 5 ರನ್‌ ಗಳಿಸಿ ಔಟಾದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ದೋನಿ ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲವಾದರು. ಅಂತಿಮವಾಗಿ ಭಾರತ ತಂಡ ನಿಗದಿತ 50ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು 252 ರನ್‌ ಪೇರಿಸಲಷ್ಟೇ ಶಕ್ತವಾಯಿತು.

ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್‌ ಮಾಡಿದ ನೇಥನ್ ಕಾಲ್ಟರ್‌ ನೈಲ್‌ ಹಾಗೂ ಕೇನ್‌ ರಿಚರ್ಡ್‌ಸನ್‌ ತಲಾ 3 ವಿಕೆಟ್‌ ಪಡೆದು ಮಿಂಚಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT