ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಮಕ್ಕಳಿರುವ ಮನೆ ಹೀಗಿರಲಿ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅಪ್ಪ ಶ್ರೀಕಾಂತ್ ಕಚೇರಿಯಿಂದ ಮನೆಗೆ ಬಂದಾಗ ಐದು ವರ್ಷದ ಚೂಟಿ ಹುಡುಗ ನಿತಿನ್, ತಲೆಗೆ ಬ್ಯಾಂಡೇಜ್ ಕಟ್ಟಿಸಿಕೊಂಡು ಮಂಕಾಗಿ ಕೂತಿದ್ದ. ವಿಚಾರಿಸಿದಾಗ ತಿಳಿದದ್ದು ಆಡುವಾಗ ಡೈನಿಂಗ್ ಟೇಬಲ್‌ಗೆ ತಲೆ ಬಡಿಸಿಕೊಂಡ ಎಂದು. ರಿಯಲ್ ಎಸ್ಟೇಟ್ ಉದ್ದಿಮೆಯಲ್ಲೇ ಕೆಲಸ ಮಾಡುವ

ಶ್ರೀಕಾಂತ್‌ಗೆ ತಕ್ಷಣ ಹೊಳೆಯಿತು ತನ್ನದು ಮಕ್ಕಳ ಸ್ನೇಹಿ ಮನೆಯಲ್ಲ ಎಂದು.

ಸಣ್ಣ ಮಕ್ಕಳಿರುವ ಮನೆಗೆ ಕೆಲವು ಮಾರ್ಪಾಡುಗಳು ಬೇಕಾಗುತ್ತವೆ. ಒಳಾಂಗಣ ವಿನ್ಯಾಸ ಸಾಮಾನ್ಯ ಮನೆಗಳಿಗಿಂತ ಸ್ವಲ್ಪ ಭಿನ್ನವಾಗಿರಬೇಕಾಗುತ್ತದೆ. ಸಣ್ಣ ಮಕ್ಕಳಿದ್ದಾರೆ ಎಂಬ ಕಾರಣದಿಂದಾಗಿ ವಿನ್ಯಾಸದಲ್ಲಿ ರಾಜಿ ಮಾಡಿಕೊಳ್ಳದೆ ಮನೆ ಉತ್ತಮವಾಗಿ ಕಾಣುವಂತೆ ಮಾಡುವ ಹಲವು ಉಪಾಯಗಳು ಇವೆ.

ಬಣ್ಣದ ಆಯ್ಕೆ: ಗೋಡೆಯ ಬಣ್ಣದ ಆಯ್ಕೆಯ ಬಗ್ಗೆಯೂ ನಿಗಾ ವಹಿಸಬೇಕು. ಮಕ್ಕಳು ಚಿತ್ರ ಬಿಡಿಸಲು ಗೋಡೆಗಳೇ ಕ್ಯಾನ್ವಾಸ್ ಆಗಿಬಿಡುತ್ತವೆ. ತೊಳೆದರೆ ಕಲೆ ಹೋಗುವಂತಹ ಆಧುನಿಕ ಗೋಡೆ ಬಣ್ಣಗಳನ್ನು ಮಾರುಕಟ್ಟೆಯಲ್ಲಿವೆ ಅವನ್ನೇ ಬಳಸಿದರೆ ಉತ್ತಮ.

ಮಕ್ಕಳ ಅಭಿಪ್ರಾಯ ಕೇಳಿ: ಮನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸುವಾಗ ಮಕ್ಕಳ ಅಭಿಪ್ರಾಯವನ್ನೂ ಕೇಳಿ. ಅವರಿಷ್ಟದ ಬೆಡ್ ಶೀಟ್, ಅವರಿಷ್ಟದ ಮೇಜು ಕುರ್ಚಿಗಳನ್ನು ಕೊಳ್ಳಿ ಇದರಿಂದ ಅವರಿಗೆ ವಸ್ತು ತಮ್ಮದು ಎಂಬ ಭಾವ ಮೂಡುತ್ತದೆ ಹಾಗೂ ಅದನ್ನು ಜೋಪಾನ ಮಾಡುವಲ್ಲಿ ಅವರೂ ಸಹಾಯ ಮಾಡುತ್ತಾರೆ.

ಗಾಢ ಬಣ್ಣ: ಮನೆಯಲ್ಲಿ ಐದು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಿದ್ದರೆ ಗಾಢ ಬಣ್ಣದ, ದಪ್ಪ ಹೊದಿಕೆಯ ಸೋಫಗಳನ್ನೇ ಕೊಳ್ಳುವುದು ಉತ್ತಮ. ಮಗುವಿನ ವಾಂತಿ ಅಥವ ಇತರೆ ಕಲೆಗಳು ಸೋಫಾದ ಮೇಲೆ ಅಳಿಯದೇ ಉಳಿದು ಬಿಡುವ ಅಪಾಯವನ್ನು ಗಾಢ ಬಣ್ಣ ದೂರ ಮಾಡುತ್ತದೆ. ನೆಲ ಹಾಸುಗಳೂ ಗಾಢ ಬಣ್ಣದವೇ ಆಗಿರಲಿ.

ಪೀಠೋಪಕರಣಗಳು ಹೀಗಿರಲಿ: ಸಣ್ಣ ಮಕ್ಕಳಿರುವ ಮನೆಗಳಲ್ಲಿ ಅಂಚು ಚೂಪಿಲ್ಲದ ಮೇಜು, ಟೇಬಲ್ ಗಳನ್ನು ಕೊಳ್ಳುವುದು ಉತ್ತಮ. ರೌಂಡ್ ಕಾರ್ನರ್ ಟೇಬಲ್, ಮೇಜುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗಾಗಲೇ ಕೊಂಡಿರುವ ಚೂಪಾದ ಟೇಬಲ್ ಅಥವಾ ಕಿಟಕಿಗಳಿಗೆ ಬೂಚು ಅಳವಡಿಸಬಹುದು. ಕೊಳ್ಳುವ ಪೀಠೋಪಕರಣಗಳು ಗಟ್ಟಿಮುಟ್ಟಾಗಿರುವಂತೆ ನೋಡಿಕೊಳ್ಳಿ. ಮಕ್ಕಳು ಹಾರುವುದು, ಕುಣಿಯುವುದು ಇವುಗಳ ಮೇಲೆಯೇ.

ಒಡೆಯಬಲ್ಲ ವಸ್ತುಗಳನ್ನು ಹೀಗೆ ಜೋಡಿಸಿ: ಟೇಬಲ್ ಕ್ಲಾಕ್, ಫೊಟೊ ಪ್ರೇಮ್, ಪಿಂಗಾಣಿ ವಸ್ತುಗಳು, ಹೂಜಿ, ಗಾಜಿನ ಬೊಂಬೆಗಳಂತಹಾ ಒಡೆಯಬಲ್ಲ ವಸ್ತುಗಳು ಮಕ್ಕಳ ಕೈಗೆಟುಕಂತೆ ಇಡುವುದು ಉತ್ತಮ. ಹಾಗೆಂದು ಅವುಗಳನ್ನೆಲ್ಲಾ ಪೆಟ್ಟಿಗೆಯಲ್ಲಿ ಭದ್ರಪಡಿಸುವುದು ಬೇಡ. ಮಕ್ಕಳ ಕೈಗೆಟುಕದ ಎತ್ತರದಲ್ಲಿ ಜೋಡಿಸಿ ಮನೆಯ ಅಂದ ಹೆಚ್ಚಿಸಿಕೊಳ್ಳಿ.

ದಾಸ್ತಾನು ಸ್ಥಳ: ಮಕ್ಕಳಿರುವ ಮನೆಯಲ್ಲಿ ಪ್ರತ್ಯೇಕ ದಾಸ್ತಾನು ಸ್ಥಳವಿದ್ದರೆ ಒಳ್ಳೆಯದು. ಹಾನಿಕಾರಕ ಅಂಶವುಳ್ಳ ವಸ್ತುಗಳಾದ ಫಿನಾಯಿಲ್ ಗಳು, ಔಷದಿಗಳನ್ನು ಭಧ್ರವಾಗಿ ಮುಚ್ಚಿದ ಕಪಾಟದಲ್ಲಿರಿಸಿದರೆ ಉತ್ತಮ. ಇವುಗಳಲ್ಲದೆ ಡಿವಿಡಿ ಪ್ಲೇಯರ್ ಗಳು, ಪುಸ್ತಕಗಳು, ಲ್ಯಾಪ್ ಟಾಪ್ ಇವುಗಳೆಲ್ಲವೂ ಮಕ್ಕಳ ಕೈಗೆ ದೊರಕದಂತೆ ಇಡಲು ಪ್ರತ್ಯೇಕ ಸ್ಥಳ ನಿಗದಿ ಮಾಡಿಕೊಂಡರೆ ವಸ್ತುಗಳು ಕ್ಷೇಮವಾಗಿರುತ್ತವೆ.

ಶೌಚಾಲಯ ವ್ಯವಸ್ಥೆ: ಮಕ್ಕಳಿಗೆಂದು ಸಿಗುವ ಕಮೋಡ್ ಗಳನ್ನು ಕೊಂಡು ತನ್ನಿ. ಅಥವಾ ಈಗಿರುವ ಕಮೋಡ್ ಗಳನ್ನೆ ಮಕ್ಕಳು ಬಳಸಲು ಅನುಕೂಲವಾಗುವಂತೆ ಬದಲಾಯಿಸಿ. ಶೌಚಾಲಯದಲ್ಲಿ ಗಡುಸಾದ ಫ್ಲೋರಿಂಗ್ ಇರಲಿ. ಮಕ್ಕಳು ಜಾರಿ ಬೀಳುವುದನ್ನು ಇದು ತಡೆಯುತ್ತದೆ.

ಮೆಟ್ಟಿಲುಗಳ ಬಗ್ಗೆ ಜಾಗೃತೆ: ಮೆಟ್ಟಿಲುಗಳು ಹೆಚ್ಚು ಕಡಿದಾಗಿರುವುದು ಬೇಡ. ಮೆಟ್ಟಿಲುಗಳ ಪಕ್ಕ ಅಳವಡಿಸುವ  ಹ್ಯಾಂಡ್ ಗ್ರಿಲ್ ಗಳ ನಡುವೆ 6 ಇಂಚಿಗಿಂತ ಹೆಚ್ಚು ಅಂತರ ಇರುವುದು ಬೇಡ. ಮಕ್ಕಳು ಹ್ಯಾಂಡ್ ಗ್ರಿಲ್ ನಡುವೆ ಸಿಕ್ಕಿ ಹಾಕಿಕೊಳ್ಳುವ ಅಥವಾ ಅದರ ಮೂಲಕ ಮೂಲಕ ಕೆಳಗೆ ಬೀಳುವ ಅಪಾಯ ಇದರಿಂದ ತಪ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT