ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ತೋರಣ ಕಟ್ಟಿದ ಕೊಹ್ಲಿ ಬಳಗ

ವಿರಾಟ್ ಕೊಹ್ಲಿ-ಅಜಿಂಕ್ಯ ರಹಾನೆ ಶತಕದ ಜೊತೆಯಾಟ; ಕುಲದೀಪ್‌ ಹ್ಯಾಟ್ರಿಕ್‌ ಸಾಧನೆ
Last Updated 21 ಸೆಪ್ಟೆಂಬರ್ 2017, 19:56 IST
ಅಕ್ಷರ ಗಾತ್ರ

ಕೋಲ್ಕತ್ತ: ಸವಾಲಿನ ಮೊತ್ತ ಕಲೆ ಹಾಕಲು ಬ್ಯಾಟ್ಸ್‌ಮನ್‌ಗಳು ವಿಫಲವಾದರು. ಆದರೆ ಅಮೋಘ ಸಾಮರ್ಥ್ಯ ತೋರಿದ ಬೌಲರ್‌ಗಳು ಭಾರತಕ್ಕೆ ಜಯ ತಂದುಕೊಟ್ಟರು. ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ಗುರುವಾರ ರಾತ್ರಿ ನಡೆದ ಆಸ್ಟ್ರೇಲಿಯಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಬಳಗ 50 ರನ್‌ಗಳಿಂದ ಗೆದ್ದು ಬೀಗಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿತು.

ಆರಂಭಿಕ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಶತಕದ ಜೊತೆಯಾಟದ ಬಲದಿಂದ ಭಾರತ 252 ರನ್‌ಗಳನ್ನು ಗಳಿಸಿತು. ಗುರಿ ಬೆನ್ನತ್ತಿದ ಸ್ಟೀವನ್ ಸ್ಮಿತ್ ಬಳಗ 202 ರನ್‌ಗಳಿಗೆ ಆಲೌಟಾಯಿತು.

ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಚೈನಾಮನ್ ಶೈಲಿಯ ಬೌಲರ್‌ ಕುಲದೀಪ್ ಯಾದವ್‌ ‘ಕ್ರಿಕೆಟ್ ಕಾಶಿ‘ಯಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಮೂರು ವಿಕೆಟ್ ಕಬಳಿಸಿ ವೇಗಿ ಭುವನೇಶ್ವರ್‌ ಕುಮಾರ್‌ ಕೂಡ ಮಿಂಚಿದರು. ಹಾರ್ದಿಕ್ ಪಾಂಡ್ಯ ಮತ್ತು ಯಜುವೇಂದ್ರ ಚಾಹಲ್‌ ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿ ಪ್ರವಾಸಿ ತಂಡದ ಸಂಕಷ್ಟ ಹೆಚ್ಚಿಸಿದರು.

ಮೂರನೇ ಓವರ್‌ನಲ್ಲೇ ಆಸ್ಟ್ರೇಲಿಯಾ ಮೊದಲ ಆಘಾತ ಅನುಭವಿಸಿತು. ಒಂದು ರನ್ ಗಳಿಸಿದ್ದ ಹಿಲ್ಟನ್ ಕಾರ್ಟ್‌ರೈಟ್‌ ಅವರನ್ನು ಬೌಲ್ಡ್ ಮಾಡಿದ ಭುವನೇಶ್ವರ್ ಕುಮಾರ್‌ ಭಾರತದ ಪಾಳಯದಲ್ಲಿ ಸಂಭ್ರಮ ಉಕ್ಕಿಸಿದರು. ತಮ್ಮ ಮುಂದಿನ ಓವರ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರನ್ನೂ ಭುವನೇಶ್ವರ್ ಔಟ್‌ ಮಾಡಿದರು. ಈ ಸಂದರ್ಭದಲ್ಲಿ ಪ್ರವಾಸಿ ತಂಡದ ಖಾತೆಯಲ್ಲಿದ್ದದ್ದು ಕೇವಲ ಒಂಬತ್ತು ರನ್ ಮಾತ್ರ.

ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಯತ್ನಿಸಿದ ನಾಯಕ ಸ್ಟೀವನ್ ಸ್ಮಿತ್ ಅವರಿಗೆ ಟ್ರಾವಿಸ್ ಹೆಡ್‌ ಉತ್ತಮ ಸಹಕಾರ ನೀಡಿದರು. ಮೂರನೇ ವಿಕೆಟ್‌ಗೆ ಇವರಿಬ್ಬರು 76 ರನ್ ಸೇರಿಸಿದರು. ಆದರೆ ಯಜುವೇಂದ್ರ ಚಾಹಲ್ ಅವರ ಸ್ಪಿನ್ ದಾಳಿಗೆ ಸಿಲುಕಿ ಟ್ರಾವಿಸ್‌ ಹೆಡ್‌ ಔಟಾದರು. 39 ಎಸೆತಗಳಲ್ಲಿ 39 ರನ್ ಗಳಿಸಿದ್ದ ಹೆಡ್‌ ಐದು ಬೌಂಡರಿಗಳನ್ನು ಸಿಡಿಸಿದ್ದರು.

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಜೊತೆಗೂಡಿ ಸ್ಮಿತ್‌ ಇನಿಂಗ್ಸ್ ಕಟ್ಟಲು ಯತ್ನಿಸಿದರು. ಆದರೆ ಇವರಿಬ್ಬರ ಜೊತೆಯಾಟ 21 ರನ್‌ ಸೇರಿಸುವಷ್ಟರಲ್ಲಿ ಮುರಿದು ಬಿತ್ತು. ಚಾಹಲ್ ಅವರ ಎಸೆತದಲ್ಲಿ ಮ್ಯಾಕ್ಸ್‌ವೆಲ್‌ ಸ್ಟಂಪ್ ಔಟ್‌ ಆದರು. ಅತ್ತ ವಿಕೆಟ್‌ಗಳು ಉರುಳುತ್ತಿದ್ದರೂ ನಾಯಕ ಎದೆಗುಂದದೆ ಬ್ಯಾಟಿಂಗ್ ಮುಂದುವರಿಸಿದರು. ಅವರ ದಿಟ್ಟ ಆಟಕ್ಕೆ ಮಾರ್ಕಸ್ ಸ್ಟೊಯಿನಿಸ್‌ ಬೆಂಬಲವಾಗಿ ನಿಂತರು. ಐದನೇ ವಿಕೆಟ್‌ಗೆ ಇವರಿಬ್ಬರು 32 ರನ್‌ ಸೇರಿಸಿದ್ದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಮಿಂಚಿದರು. ಸ್ಮಿತ್ (59; 76 ಎ, 8 ಬೌಂ) ಅವರನ್ನು ಔಟ್‌ ಮಾಡಿದ ಪಾಂಡ್ಯ ತಂಡವನ್ನು ಗೆಲುವಿನತ್ತ ಕೊಂಡುಹೋದರು.

ನಂತರ ಆಸ್ಟ್ರೇಲಿಯಾ ಪಾಳಯದಿಂದ ಹೆಚ್ಚು ಪ್ರತಿರೋಧ ಕಂಡು ಬರಲಿಲ್ಲ. ಯಾದವ್ ಅವರ ಮ್ಯಾಜಿಕ್‌ಗೆ ಸಿಲುಕಿದ ಆಸ್ಟ್ರೇಲಿಯಾದ ಕೊನೆಯ ಐದು ವಿಕೆಟ್‌ಗಳು 62 ರನ್‌ಗಳಿಗೆ ಉರುಳಿದವು. ಸ್ಟೊಯಿನಿಸ್‌ 65 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಆರು ಬೌಂಡರಿಗಳೊಂದಿಗೆ 62 ರನ್‌ ಗಳಿಸಿ ಔಟಾಗದೇ ಉಳಿದರು.

ಕೊಹ್ಲಿ–ರಹಾನೆ ಜೊತೆಯಾಟದ ಸೊಬಗು
ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮಾ ಅವರನ್ನು ಬೇಗನೇ ಕಳೆದುಕೊಂಡಿತು. ಆರನೇ ಓವರ್‌ನಲ್ಲಿ 19 ರನ್‌ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡ ತಂಡಕ್ಕೆ ಅಜಿಂಕ್ಯ ರಹಾನೆ ಮತ್ತು ವಿರಾಟ್ ಕೊಹ್ಲಿ ಬಲ ತುಂಬಿದರು. 24ನೇ ಓವರ್‌ ವರೆಗೆ ಬ್ಯಾಟಿಂಗ್ ಮಾಡಿದ ಇವರು ತಂಡವನ್ನು ಶತಕದ ಗಡಿ ದಾಟಿಸಿದರು. ಏಳು ಬೌಂಡರಿಗಳೊಂದಿಗೆ 64 ಎಸೆತಗಳಲ್ಲಿ ರಹಾನೆ 55 ರನ್ ಗಳಿಸಿದರೆ ಕೊಹ್ಲಿ ಮನಮೋಹಕ 92 (107 ಎ, 8 ಬೌಂ) ರನ್‌ ಸಿಡಿಸಿದರು.

ರಹಾನೆ ರನ್ ಔಟ್ ಆಗಿ ಮರಳಿದ ನಂತರ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಕೇದಾರ್ ಜಾಧವ್‌ 24 ರನ್‌ ಗಳಿಸಿದರೆ ಕಳೆದ ಪಂದ್ಯದಲ್ಲಿ ಸ್ಫೋಟಿಸಿದ್ದ ಹಾರ್ದಿಕ್ ಪಾಂಡ್ಯ 20 ರನ್‌ ಗಳಿಸಿ ಔಟಾದರು. ಐದನೇ ವಿಕೆಟ್ ರೂಪದಲ್ಲಿ ಕೊಹ್ಲಿ ಔಟಾದ ನಂತರ 55 ರನ್‌ ಗಳಿಸಲಷ್ಟೇ ತಂಡಕ್ಕೆ ಸಾಧ್ಯವಾಯಿತು.

*

ಹ್ಯಾಟ್ರಿಕ್‌ ಸಾಧನೆ ಮಾಡಿದ ಮೂರನೇ ಬೌಲರ್‌
ಆಸ್ಟ್ರೇಲಿಯಾ ಇನಿಂಗ್ಸ್‌ನ 33ನೇ ಓವರ್‌ನಲ್ಲಿ ಕುಲದೀಪ್ ಯಾದವ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಓವರ್‌ನ ಎರಡನೇ ಎಸೆತದಲ್ಲಿ ವಿಕೆಟ್ ಕೀಪರ್‌ ಮ್ಯಾಥ್ಯೂ ವೇಡ್‌ ಅವರನ್ನು ಔಟ್ ಮಾಡಿದ ಅವರು ಮುಂದಿನ ಎಸೆತದಲ್ಲಿ ಆಷ್ಟನ್ ಅಗರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ನಾಲ್ಕನೇ ಎಸೆತದಲ್ಲೀ ಪ್ಯಾಟ್ ಕಮಿನ್ಸ್ ಕೂಡ ಔಟಾಗಿ ಹೊರನಡೆದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ 148 ರನ್ ಗಳಿಸಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ಇದು ಭಾರತದ ಮೂರನೇ ಹ್ಯಾಟ್ರಿಕ್ ಸಾಧನೆ. 1991ರ ನಂತರ ಮೊದಲ ಹ್ಯಾಟ್ರಿಕ್‌. ಈ ಹಿಂದೆ ಚೇತನ್ ಶರ್ಮಾ ಮತ್ತು ಕಪಿಲ್‌ದೇವ್‌ ಈ ಸಾಧನೆ ಮಾಡಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ ಕುಲದೀಪ್ ಅವರದ್ದು 44ನೇ ಹ್ಯಾಟ್ರಿಕ್‌.

ನೋ ಬಾಲ್, ಡೆಡ್‌ ಬಾಲ್‌ ಮತ್ತು ಔಟ್‌!
ಭಾರತದ ಇನಿಂಗ್ಸ್‌ನ 48ನೇ ಓವರ್‌ ಕುತೂಹಲಕರ ಪ್ರಸಂಗಕ್ಕೆ ಸಾಕ್ಷಿಯಾಯಿತು. ಕೇನ್ ರಿಚರ್ಡ್ಸನ್ ಹಾಕಿದ ಈ ಓವರ್‌ನ ನಾಲ್ಕನೇ ಎಸೆತ ಎದುರಿಸಿದ ಹಾರ್ದಿಕ್ ಪಾಂಡ್ಯ ಚೆಂಡನ್ನು ಬೌಂಡರಿಗೆ ಅಟ್ಟಲು ಶ್ರಮಿಸಿದರು. ಆದರೆ ಚೆಂಡು ಕವರ್‌ನಲ್ಲಿದ್ದ ಸ್ಟೀವನ್ ಸ್ಮಿತ್ ಅವರ ಮುಷ್ಠಿ ಸೇರಿತು.

19 ರನ್‌ ಗಳಿಸಿದ್ದ ಪಾಂಡ್ಯ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ಆದರೆ ರಿಚರ್ಡ್ಸನ್ ಎಸೆತ ಪಾಂಡ್ಯ ಅವರ ಸೊಂಟದ ಮಟ್ಟಕ್ಕಿಂತ ಮೇಲೆ ಇದ್ದ ಕಾರಣ ಅಂಪೈರ್ ನೋಬಾಲ್ ಎಂದು ತೀರ್ಪು ನೀಡಿದ್ದರು. ಪಾಂಡ್ಯ ಕ್ರೀಸ್ ಬಿಟ್ಟದ್ದನ್ನು ಗಮನಿಸಿದ ಸ್ಮಿತ್‌ ಚೆಂಡನ್ನು ಬೌಲರ್‌ ಕೈಗೆ ಎಸೆದರು.

ರಿಚರ್ಡ್ಸನ್ ಬೇಲ್ಸ್ ಎಗರಿಸಿ ರನ್‌ ಔಟ್ ಮಾಡಿದ್ದರು! ಅಷ್ಟ್ರರಲ್ಲಿ ಮಳೆಯೂ ಸುರಿಯಿತು. ಅಂಪೈರ್‌ಗಳು ಆಟಗಾರರನ್ನು ಅಂಗಳದಿಂದ ವಾಪಸ್ ಕಳುಹಿಸಿದರು. ಆದರೆ ಪಾಂಡ್ಯ ಅವರ ರನ್ ಔಟ್‌ಗಾಗಿ ಆಸ್ಟ್ರೇಲಿಯಾ ಆಟಗಾರರು ಅಂಪೈರ್‌ಗೆ ಮನವಿ ಸಲ್ಲಿಸಿದರು. ಅಂಫೈರ್‌ಗಳು ಔಟ್ ನೀಡಲು ಮುಂದಾಗಲಿಲ್ಲ. ರನ್‌ ಔಟ್ ಮಾಡಿದಾಗ ನಿಯಮದ ಪ್ರಕಾರ ಚೆಂಡು ‘ಡೆಡ್’ ಆಗಿತ್ತು ಎಂಬುದು ಅಂಪೈರ್‌ಗಳ ವಾದವಾಗಿತ್ತು.

ಮಳೆ ನಿಂತ ನಂತರ ವಾಪಸ್ ಬಂದ ಪಾಂಡ್ಯ ಒಂದು ರನ್ ಸೇರಿಸಿ ಅದೇ ಬೌಲರ್‌ಗೆ ವಿಕೆಟ್ ಒಪ್ಪಿಸಿದರು. 32.4ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಇತ್ತೀಚೆಗೆ ನಿಧನರಾದ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಬಾಬ್‌ ಹಾಲೆಂಡ್‌ ಅವರ ಸ್ಮರಣಾರ್ಥ ಪ್ರವಾಸಿ ತಂಡದ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದರು.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT