ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಸಂತ್ರಸ್ತೆಯರ ಗರ್ಭಪಾತಕ್ಕೆ ‘ಸುಪ್ರೀಂ’ ಅನುಮತಿ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಾಚಾರಕ್ಕೆ ಒಳಗಾಗಿದ್ದ ಇಬ್ಬರು ಸಂತ್ರಸ್ತೆಯರ 20 ವಾರ ಮೀರಿದ ಭ್ರೂಣದ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ಅನುಮತಿ ನೀಡಿದೆ.

ಬೆಂಗಳೂರಿನ 17 ವರ್ಷ ವಯಸ್ಸಿನ ಸಂತ್ರಸ್ತೆ ಹಾಗೂ ದೆಹಲಿಯ 13 ವರ್ಷ ವಯಸ್ಸಿನ ಸಂತ್ರಸ್ತೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠವು, ‘ವೈದ್ಯಕೀಯ ಮಂಡಳಿಗಳ ಅಭಿಪ್ರಾಯದ ಮೇರೆಗೆ ಈ ಆದೇಶ ನೀಡಲಾಗಿದೆ. ಗರ್ಭಪಾತ ಪ್ರಕ್ರಿಯೆ ವೇಳೆ ವೈದ್ಯರು ಸುರಕ್ಷತೆಗೆ ಆದ್ಯತೆ ನೀಡಬೇಕು’ ಎಂದು ಸೂಚಿಸಿತು.

ಅತ್ಯಾಚಾರ ಕುರಿತು ದಾಖಲಾಗಿರುವ ಪ್ರಕರಣಗಳ ತನಿಖೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಡಿಎನ್‌ಎ ಪರೀಕ್ಷೆಗಾಗಿ ಭ್ರೂಣವನ್ನು ಕಾದಿರಿಸುವಂತೆ ಇದೇ ವೇಳೆ ಆದೇಶಿಸಲಾಯಿತು.

’20 ವಾರ ಮೀರಿದ ಭ್ರೂಣದ ಗರ್ಭಪಾತ ಸಾಧ್ಯವಿಲ್ಲ’ ಎಂದು ಬೆಂಗಳೂರಿನ ಕೆಲವು ಖಾಸಗಿ ಆಸ್ಪತ್ರೆಗಳು ತಿಳಿಸಿದ್ದರಿಂದ, ಕಳೆದ ಆಗಸ್ಟ್‌ 31ರಂದು ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್‌ ವಜಾಗೊಳಿಸಿ ಆದೇಶಿಸಿತ್ತು.

ಆ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಸೆ. 18ರಂದು ನಡೆಸಿದ್ದ ಸುಪ್ರೀಂ ಕೋರ್ಟ್‌, ಈ ಕುರಿತು ತಜ್ಞರ ಅಭಿಪ್ರಾಯ ಪಡೆಯುವ ನಿಟ್ಟಿನಲ್ಲಿ ವೈದ್ಯಕೀಯ ಮಂಡಳಿ ರಚಿಸಿ ಸೆ. 20ರೊಳಗೆ ವರದಿ ಸಲ್ಲಿಸುವಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.

ಶುಕ್ರವಾರವೇ ಸಂತ್ರಸ್ತೆಯರ ಗರ್ಭಪಾತ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಹಾಗೂ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್‌)ಗೆ ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್‌ ಹಾಗೂ ಅಮಿತಾವ್‌ ರಾಯ್‌ ಅವರನ್ನು ಒಳಗೊಂಡ ಪೀಠ ತಿಳಿಸಿತು.

ಮೆಡಿಕಲ್‌ ಟರ್ಮಿನೇಷನ್‌ ಆಫ್‌ ಪ್ರಗ್ನೆನ್ಸಿ ಆ್ಯಕ್ಟ್‌– 1971ರ ಪ್ರಕಾರ 20 ವಾರ ಪೂರ್ಣಗೊಂಡ ಭ್ರೂಣದ ಗರ್ಭಪಾತಕ್ಕೆ ತಡೆ ಇರುವುದರಿಂದ ವೈದ್ಯಕೀಯ ಮಂಡಳಿಯ ಅಭಿಪ್ರಾಯ ಪಡೆದು ಈ ಆದೇಶ ಹೊರಡಿಸಲಾಗಿದ್ದು, ಗರ್ಭಪಾತ ಪ್ರಕ್ರಿಯೆಯ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು, ಬೆಂಗಳೂರಿನ ಸಂತ್ರಸ್ತೆಯ ಹೊಣೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT