ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆ ಪೂರ್ಣ: ತೀರ್ಪು ಕಾದಿರಿಸಿದ ಎನ್‌ಜಿಟಿ

Last Updated 21 ಸೆಪ್ಟೆಂಬರ್ 2017, 19:34 IST
ಅಕ್ಷರ ಗಾತ್ರ

ನವದೆಹಲಿ: ನೇತ್ರಾವತಿ ನದಿ ನೀರನ್ನು ಬರಪೀಡಿತ ಜಿಲ್ಲೆಗಳ ಜನತೆಗೆ ಕುಡಿಯಲು ಪೂರೈಸುವ ಎತ್ತಿನಹೊಳೆ ಯೋಜನೆ ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಈ ಕುರಿತ ತೀರ್ಪನ್ನು ಕಾದಿರಿಸಿತು.

ಯೋಜನೆಗಾಗಿ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆ
ಸಲು ಪರಿಸರ ಮತ್ತು ಅರಣ್ಯ ಅನುಮತಿ ಪಡೆಯದೆ ನಿಯಮ ಉಲ್ಲಂಘಿಸಲಾಗಿದೆ ಎಂದು ದೂರಿ, ಪರಿಸರವಾದಿ ಕೆ.ಎನ್‌. ಸೋಮಶೇಖರ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಾ.ಜವಾದ್‌ ರಹಿಂ ನೇತೃತ್ವದ ಪೀಠ ನಡೆಸಿತು.

ಕೆರೆ ತುಂಬಿಸುವ ಯೋಜನೆ: ಕುಡಿಯುವ ನೀರಿನ ಯೋಜನೆಗಾಗಿ ಪರಿಸರ ಮತ್ತು ಅರಣ್ಯ ಅನುಮತಿಯ ಅಗತ್ಯವಿಲ್ಲ ಎಂಬ ಅಂಶವನ್ನು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ತಿಳಿಸಿರುವುದರಿಂದಲೇ, ಭಾರಿ ವೆಚ್ಚದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಅಶೋಕ್‌ ದೇವರಾಜ್‌ ಪ್ರತಿಪಾದಿಸಿದರು.

ಕುಡಿಯುವ ನೀರಿನ ಮಹತ್ವವನ್ನು ಅರಿಯುವ ಮೂಲಕವೇ ಅರಣ್ಯ ಪ್ರದೇಶದಲ್ಲಿ ಹರಿಯುವ ನದಿ, ಹಳ್ಳ, ತೊರೆಗಳಿಂದ ನೀರು ಪಡೆಯುವುದಕ್ಕೆ ಅನುಕೂಲ ಕಲ್ಪಿಸಲಾಗಿದೆ. ಕುಡಿಯುವ ನೀರು ಪೂರೈಕೆಯ ಯೋಜನೆಗಳನ್ನು ಉದ್ದೇಶಪೂರ್ವವಾಗಿಯೇ ಅರಣ್ಯ ನೀತಿಯಿಂದ ಹೊರಗಿರಿಸಲಾಗಿದೆ ಎಂದು ಅವರು ಒತ್ತಿಹೇಳಿದರು.

ಫ್ಲೋರೈಡ್‌ಯುಕ್ತ ಅಂತರ್ಜಲದ ಸಮಸ್ಯೆಯನ್ನು ಎದುರಿಸುತ್ತಿರುವ ಬರಪೀಡಿತ ಜಿಲ್ಲೆಗಳ ಜನತೆಗೆ ಕುಡಿಯುವ ನೀರು ಪೂರೈಸುವುದಕ್ಕೆ ಹಾಗೂ ನೇತ್ರಾವತಿ ನದಿಯಲ್ಲಿ ಲಭ್ಯವಿರುವ 24 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ವಾರ್ಷಿಕವಾಗಿ ಬಳಕೆ ಮಾಡಲೆಂದೇ ಈ ಮಹತ್ವದ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಮಳೆಗಾಲದಲ್ಲಿ ನದಿ ತುಂಬಿ ಹರಿಯುವಾಗ ಈ ನೀರನ್ನು ಎತ್ತಿ, ಬರಪೀಡಿತ ಜಿಲ್ಲೆಗಳಲ್ಲಿರುವ 527 ಕೆರೆಗಳಲ್ಲಿ ಸಂಗ್ರಹಿಸುವ ಯೋಜನೆಯನ್ನು ರೂಪಿಸಲಾಗಿದೆ. ಕೆರೆಗಳಲ್ಲಿ ನೀರನ್ನು ಸಂಗ್ರಹಿಸಿದಲ್ಲಿ ಅಂತರ್ಜಲ ಪ್ರಮಾಣವೂ ಹೆಚ್ಚಲಿದ್ದು, ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನೆರವಾಗಲಿದೆ. ನದಿಯಲ್ಲಿನ ನೀರಿನ ಹರಿವು ಕಡಿಮೆಯಾದಾಗ ನೀರನ್ನು ಎತ್ತುವ ಪ್ರಶ್ನೆಯೇ ಇಲ್ಲ ಎಂದು ಅವರು ವಿವರಿಸಿದರು.

ನೀರು ಲಭ್ಯವಿಲ್ಲ: ರಾಜ್ಯ ಸರ್ಕಾರ ರೂಪಿಸಿರುವ ಸಮಗ್ರ ಯೋಜನಾ ವರದಿ (ಡಿಪಿಆರ್‌)ಯಲ್ಲಿ ತಿಳಿಸಿರುವ ಪ್ರಮಾಣದ ನೀರು ನೇತ್ರಾವತಿ ನದಿಯಲ್ಲಿ ಲಭ್ಯವಿಲ್ಲ. ಹೀಗಾಗಿ, ಸಾಕಷ್ಟು ಹಣ ವ್ಯಯಿಸಿ ಯೋಜನೆ ಪೂರ್ಣಗೊಳಿಸಿದರೂ ಉದ್ದೇಶ ಈಡೇರುವುದಿಲ್ಲ ಎಂದು ಅರ್ಜಿದಾರರ ಪರ ವಕೀಲ ಋತ್ವಿಕ್‌ ದತ್ತ ಹೇಳಿದರು.

ಪಶ್ಚಿಮ ಘಟ್ಟದಲ್ಲಿ ಲಭ್ಯವಿರುವ ವಾರ್ಷಿಕ ನೀರಿನ ಪ್ರಮಾಣದ ಬಗ್ಗೆ ಕೇಂದ್ರ ಜಲ ಆಯೋಗ ವರದಿ ನೀಡಿದೆ. ಆ ವರದಿಯ ಪ್ರಕಾರ, ಯೋಜನೆಯ ಪ್ರದೇಶದಲ್ಲಿ 24 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ದೊರೆಯುವ ಸಾಧ್ಯತೆಯೇ ಇಲ್ಲ ಎಂಬುದು ಸ್ಪಷ್ಟ ಎಂದು ಅವರು ತಿಳಿಸಿದರು.

ಕರ್ನಾಟಕ ಸರ್ಕಾರವು ಡಿಪಿಆರ್‌ ಜೊತೆಗೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಸ್ವೀಕರಿಸಿ ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯವು ಬರೆದ ಪತ್ರವನ್ನೇ ‘ಅನುಮತಿ’ ಎಂದು ಭಾವಿಸಿ, ಪಶ್ಚಿಮ ಘಟ್ಟದಲ್ಲಿ ಸಾಕಷ್ಟು ಪ್ರಮಾಣದ ಮರಗಳನ್ನು ಕಡಿದು ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿಯಿಂದ ಕೇವಲ 13 ಹೆಕ್ಟೆರ್‌ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ಆರಂಭದಲ್ಲಿ ವಿವರಿಸಿದ್ದ ಸರ್ಕಾರ, ಹೊಸದಾಗಿ ಸಲ್ಲಿಸಿರುವ ಡಿಪಿಆರ್‌ನಲ್ಲಿ 28 ಹೆಕ್ಟೆರ್‌ ಅರಣ್ಯ ಪ್ರದೇಶ ಮುಳುಗಡೆ ಆಗಲಿದೆ ಎಂದು ತಿಳಿಸಿ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಅವರು ದೂರಿದರು.

ಯೋಜನೆ ಮೂಲಕ ನೀರೆತ್ತಿ 527 ಕೆರೆಗಳನ್ನು ತುಂಬಿಸುವ ವಿಚಾರವನ್ನು ಸರ್ಕಾರ ಮೊದಲು ಪ್ರಸ್ತಾಪಿಸಿತ್ತು. ಪರಿಷ್ಕೃತ ಡಿಪಿಆರ್‌ನಲ್ಲಿ ನೀರು ಸಂಗ್ರಹಕ್ಕಾಗಿ 18 ಸಮಾನಾಂತರ ಜಲಾಶಯ ನಿರ್ಮಿಸುವುದಾಗಿ ತಿಳಿಸಿದೆ. ಆದರೆ, ಯೋಜನೆಗಾಗಿ ಎಷ್ಟು ಪ್ರಮಾಣದ ಅರಣ್ಯ ಮುಳುಗಡೆಯಾಗಲಿದೆ ಎಂಬುದನ್ನೂ ಸ್ಪಷ್ಟಪಡಿಸಿಲ್ಲ. ಈ ರೀತಿ ಡಿಪಿಆರ್‌ ಅನ್ನು ಪರಿಷ್ಕರಿಸುತ್ತಲೇ ಇರುವ ಸರ್ಕಾರಕ್ಕೆ ಯೋಜನೆಯ ಕುರಿತು ಸ್ಪಷ್ಟತೆಯೇ ಇದ್ದಂತಿಲ್ಲ ಎಂದು ಅವರು ಆರೋಪಿಸಿದರು.

ನ್ಯಾಯಪೀಠದಲ್ಲಿರುವ ತಜ್ಞ ಸದಸ್ಯ ರಂಜನ್‌ ಚಟರ್ಜಿ ಅವರು ಅಕ್ಟೋಬರ್‌ 6ರಂದು ನಿವೃತ್ತರಾಗಲಿದ್ದು, ಅಕ್ಟೋಬರ್ 5ರೊಳಗೆ ತೀರ್ಪು ಹೊರಬರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT