ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆ ಬೀಗ ಹಾಕಿದ್ದಕ್ಕೆ ಅಣ್ಣನನ್ನು ಕೊಂದ

Last Updated 21 ಸೆಪ್ಟೆಂಬರ್ 2017, 19:51 IST
ಅಕ್ಷರ ಗಾತ್ರ

ಬೆಂಗಳೂರು: ಮನೆಗೆ ಬೀಗ ಹಾಕಿ ಹೊರ ಹೋಗಿದ್ದ ವಿಚಾರಕ್ಕೆ ಜಗಳವಾಗಿ ರಾಯ್ಸನ್ ರಜಾರಿಯಾ (40) ಎಂಬುವರು ತಮ್ಮ ಅಣ್ಣ ಆಸ್ಕರ್ ರಜಾರಿಯಾ (48) ಅವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.

ಲಿಂಗರಾಜಪುರ ಸಮೀಪದ ಕರಿಯಣ್ಣನಪಾಳ್ಯದಲ್ಲಿ ಬುಧವಾರ ರಾತ್ರಿ ಈ ಹತ್ಯೆ ನಡೆದಿದೆ. ಬಾಣಸವಾಡಿ ಪೊಲೀಸರು ರಾಯ್ಸನ್ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಆಂಧ್ರ‌ಪ್ರದೇಶದ ಈ ಸೋದರರು, ತಾಯಿ ಜತೆ 15 ವರ್ಷಗಳಿಂದ ಕರಿಯಣ್ಣನಪಾಳ್ಯದಲ್ಲಿ ನೆಲೆಸಿದ್ದರು. ಆಸ್ಕರ್ ಕೊಳಾಯಿ ರಿಪೇರಿ ಕೆಲಸ ಮಾಡುತ್ತಿದ್ದರೆ, ರಾಯ್ಸನ್ ಪೇಂಟರ್ ಆಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ರಾಯ್ಸನ್ ಅವರು ರಾತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆಸ್ಕರ್, ಮನೆಗೆ ಬೀಗ ಹಾಕಿಕೊಂಡು ಮೊಟ್ಟೆ ತರಲು ಅಂಗಡಿಗೆ ಹೋಗಿದ್ದರು. 8.30ರ ಸುಮಾರಿಗೆ ಆಸ್ಪತ್ರೆಯಿಂದ ಮರಳಿದ ರಾಯ್ಸನ್, ಮನೆಗೆ ಬೀಗ ಹಾಕಿದ್ದರಿಂದ ಅಣ್ಣನಿಗೆ ಕರೆ ಮಾಡಿದ್ದರು. ಆದರೆ, ಅವರು ಮೊಬೈಲನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು.

ಅರ್ಧ ತಾಸಿಗೂ ಹೆಚ್ಚು ಕಾದರೂ ಅಣ್ಣ ಬಾರದಿದ್ದಾಗ ಕುಪಿತಗೊಂಡ ರಾಯ್ಸನ್, ತಾಯಿಯನ್ನು ಮನೆ ಸಮೀಪದ ಕಟ್ಟೆ ಮೇಲೆ ಕೂರಿಸಿ ಸುತ್ತಮುತ್ತಲ ಪ್ರದೇಶಗಳಲ್ಲೆಲ್ಲ ಹುಡುಕಾಟ ನಡೆಸಿದ್ದರು. ಆದರೆ, ಆಸ್ಕರ್ ಪತ್ತೆಯಾಗಿರಲಿಲ್ಲ.

9.30ರ ಸುಮಾರಿಗೆ ಆಸ್ಕರ್ ಮನೆಗೆ ಬರುತ್ತಿದ್ದಂತೆಯೇ ರಾಯ್ಸನ್ ಗಲಾಟೆ ಶುರು ಮಾಡಿದ್ದಾರೆ. ‘ತಾಯಿಗೆ ಹುಷಾರಿಲ್ಲ. ಇಂಥ ಸಂದರ್ಭದಲ್ಲೂ ನಿನಗೆ ಮೊಟ್ಟೆ ಬೇಕಿತ್ತಾ? ಬೀಗ ಇಲ್ಲೇ ಇಟ್ಟು ಹೋಗುವುದಕ್ಕೆ ಏನಾಗಿತ್ತು’ ಎಂದು ಕೂಗಾಡುತ್ತಾ ಮೊಟ್ಟೆಗಳಿದ್ದ ಪೊಟ್ಟಣವನ್ನು ಕಿತ್ತೆಸಿದ್ದಾರೆ. ನಂತರ ಪರಸ್ಪರರ ನಡುವೆ ಗಲಾಟೆ ಜೋರಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಈ ವೇಳೆ ಆರೋಪಿಯು ತರಕಾರಿ ಕತ್ತರಿಸುವ ಚಾಕುವಿನಿಂದ ಹೊಟ್ಟೆಗೆ ಮೂರು ಬಾರಿ ಇರಿದಿದ್ದಾರೆ. ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಆಸ್ಕರ್ ಕೊನೆಯುಸಿರೆಳೆದಿದ್ದಾರೆ. ರಾತ್ರಿಯೇ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಬಾಣಸವಾಡಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT