ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌ ಗಾದಿಗೆ ಕಾಂಗ್ರೆಸ್‌ನಲ್ಲಿ ತುರುಸಿನ ಪೈಪೋಟಿ

ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ ಬೇಡಿಕೆ; ಮೇಯರ್‌ ಪೈಪೋಟಿ ಮುಂಚೂಣಿಯಲ್ಲಿ ಸಂಪತ್‌ರಾಜ್‌
Last Updated 21 ಸೆಪ್ಟೆಂಬರ್ 2017, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಮೇಯರ್‌ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಲು ಜೆಡಿಎಸ್‌ ಒಪ್ಪಿದೆ.

ಈ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಕಾಂಗ್ರೆಸ್‌ನಲ್ಲಿ ಚಟುವಟಿಕೆ ಗರಿಗೆದರಿದೆ. ಮೇಯರ್‌ ಗಾದಿಗೆ ಪಕ್ಷದಲ್ಲಿ ತುರುಸಿನ ಪೈಪೋಟಿ ಪೈಪೋಟಿ ನಡೆದಿದೆ.

ಮೇಯರ್‌ ಜಿ.ಪದ್ಮಾವತಿ ಮತ್ತು ಉಪಮೇಯರ್‌ ಎಂ.ಆನಂದ್‌ ಅವರ ಅಧಿಕಾರಾವಧಿಯು ಇದೇ 27ಕ್ಕೆ ಕೊನೆಗೊಳ್ಳಲಿದೆ. ಮರುದಿನ ಅಂದರೆ, ಇದೇ 28ರಂದು 51ನೇ ಮೇಯರ್‌ ಮತ್ತು 50ನೇ ಉಪಮೇಯರ್‌ ‌ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿಯವರಿಗೆ ಹಾಗೂ ಉಪಮೇಯರ್‌ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಈ ಚುನಾವಣೆಯಲ್ಲಿ ಶಾಸಕರು, ಸಂಸದರು, ಪಾಲಿಕೆ ಸದಸ್ಯರು (ಒಟ್ಟು 266 ಜನಪ್ರತಿನಿಧಿಗಳು) ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಮೇಯರ್‌ ಸ್ಥಾನವನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ಪಟ್ಟು ಹಿಡಿದಿತ್ತು. ಇದಕ್ಕೆ ಕಾಂಗ್ರೆಸ್‌ ಒಪ್ಪಿರಲಿಲ್ಲ. ಜೆಡಿಎಸ್‌ನೊಂದಿಗಿನ ಹೊಂದಾಣಿಕೆಗೆ ಬೆಸುಗೆ ಹಾಕಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವಹಿಸಿದ್ದರು. ಹೀಗಾಗಿ, ರಾಮಲಿಂಗಾರೆಡ್ಡಿ ಅವರು ಕಳೆದ ವಾರವೇ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಗುರುವಾರ ಬೆಳಿಗ್ಗೆ ರಾಮಲಿಂಗಾ ರೆಡ್ಡಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಅವರು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು. ‘ಈ ಹಿಂದಿನ ಎರಡೂ ಅವಧಿಗಳಲ್ಲೂ ಪಕ್ಷಕ್ಕೆ ಉಪಮೇಯರ್‌ ಹಾಗೂ ಪ್ರಮುಖವಲ್ಲದ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಈ ಸಲ ನಾಲ್ಕು ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ನೀಡಬೇಕು’ ಎಂದು ಕುಮಾರಸ್ವಾಮಿ ಪಟ್ಟು ಹಿಡಿದರು ಎಂದು ಗೊತ್ತಾಗಿದೆ.

‘ಮೇಯರ್‌ ಹುದ್ದೆಯ ಜತೆಗೆ ಸ್ಥಾಯಿ ಸಮಿತಿಗಳಲ್ಲಿ ಬದಲಾವಣೆ ಕೇಳಿದ್ದೇವೆ. ಕಾಂಗ್ರೆಸ್‌ನವರು ಒಪ್ಪುತ್ತಾರೆ ಎಂಬ ವಿಶ್ವಾಸ ಇದೆ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಜತೆಗೆ ಚರ್ಚಿಸಿ ಉತ್ತರ ನೀಡುವುದಾಗಿ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಮೇಯರ್‌ ಸ್ಥಾನ ನೀಡದಿದ್ದರೂ ನಮ್ಮ ಮೈತ್ರಿಗೆ ಭಂಗ ಬರುವುದಿಲ್ಲ’ ಎಂದು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಸ್ಪಷ್ಟಪಡಿಸಿದರು.

‘ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಟ್ಟದಲ್ಲಿ ಚರ್ಚೆ ನಡೆದು ಬಿಬಿಎಂಪಿಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟ ರಚನೆಯಾಗಿದೆ. ಈ ಬಾರಿಯೂ ಜೆಡಿಎಸ್‌ ಜೊತೆಗಿನ ಮೈತ್ರಿ ಮುಂದುವರಿಯಲಿದೆ. ನಮ್ಮ ಪಕ್ಷದವರೇ ಮೇಯರ್‌ ಆಗಲಿದ್ದು, ಜೆಡಿಎಸ್‌ನವರು ಉಪಮೇಯರ್‌ ಆಗಲಿದ್ದಾರೆ. ಜೆಡಿಎಸ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಗುಣ ಇರುವವರನ್ನು ಮೇಯರ್‌ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ಸಂಪತ್‌ ರಾಜ್‌ ಮಂಚೂಣಿಯಲ್ಲಿ

ದೇವರಜೀವನಹಳ್ಳಿ ವಾರ್ಡ್‌ನಿಂದ ಎರಡನೇ ಬಾರಿಗೆ ಆಯ್ಕೆಯಾಗಿರುವ ಆರ್‌.ಸಂಪತ್ ರಾಜ್‌ ಹಾಗೂ ಸುಭಾಷ್ ನಗರ ವಾರ್ಡ್‌ನಿಂದ ಮೂರನೇ ಬಾರಿಗೆ ಆಯ್ಕೆಯಾಗಿರುವ ಎಲ್.ಗೋವಿಂದರಾಜು ನಡುವೆ ಮೇಯರ್‌ ಗಾದಿಗಾಗಿ ಪೈಪೋಟಿ ಇದೆ. ಎಚ್.ಬಿ.ಆರ್ ವಾರ್ಡ್‌ನ ಪಿ.ಆನಂದ್, ಬೇಗೂರು ವಾರ್ಡ್‌ನ ಎಂ.ಆಂಜಿನಪ್ಪ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಲಕ್ಷ್ಮಿದೇವಿನಗರ ವಾರ್ಡ್‌ನ ಎಂ. ವೇಲು ನಾಯ್ಕರ್‌ ಅವರೂ ಈ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಈ ನಡುವೆ, ‘ಈ ಸಲ ಬೆಂಗಳೂರು ಹೊರವಲಯವನ್ನು ಪ್ರತಿನಿಧಿಸುವ ಪಾಲಿಕೆ ಸದಸ್ಯರನ್ನು ಪರಿಗಣಿಸಬೇಕು. ಆಂಜನಪ್ಪ ಅಥವಾ ವೇಲು ನಾಯ್ಕರ್‌ ಪೈಕಿ ಒಬ್ಬರಿಗೆ ಈ ಸ್ಥಾನ ನೀಡಬೇಕು’ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಬಹಿರಂಗವಾಗಿ ಒತ್ತಾಯಿಸಿದ್ದಾರೆ.

‘ವೇಲು ನಾಯ್ಕರ್‌ ಅವರು ಶಾಸಕ ಮುನಿರತ್ನ ಅವರ ಪರಮಾಪ್ತ. ಚುನಾವಣಾ ವರ್ಷದಲ್ಲಿ ಪಾಲಿಕೆಯ ಆಡಳಿತದಲ್ಲಿ ಹಿಡಿತ ಸಾಧಿಸಬೇಕು ಎಂಬುದು ಮುನಿರತ್ನ ಅವರ ಹಂಬಲ. ಅದಕ್ಕಾಗಿ ಸಂಸದರ ಮೂಲಕ ವೇಲು ನಾಯ್ಕರ್‌ ಆಯ್ಕೆಗೆ ಒತ್ತಡ ಹೇರುತ್ತಿದ್ದಾರೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಸಂಪತ್‌ ಅವರು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮೂಲಕ, ಗೋವಿಂದರಾಜು ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಮೂಲಕ ಲಾಬಿ ನಡೆಸಿದ್ದಾರೆ. ಕಳೆದ ವರ್ಷ ಮೇಯರ್‌ ಆಯ್ಕೆ ವೇಳೆಯಲ್ಲಿ ಡಿ.ಕೆ. ಶಿವಕುಮಾರ್‌ ಕೈಮೇಲಾಗಿತ್ತು. ಈ ವರ್ಷ ಸಹೋದರ ಸುರೇಶ್‌ ಅವರು ತಮ್ಮ ಬೆಂಬಲಿಗರ ಪರ ಧ್ವನಿ ಎತ್ತಿದ್ದಾರೆ.

2015ರ ಚುನಾವಣೆ ವೇಳೆ ಗೋವಿಂದರಾಜು ಅವರು ಕಾಂಗ್ರೆಸ್‌ಗೆ ಸೇರಿದ್ದರು. ಈ ನಡುವೆ, ಸಂಪತ್‌ ರಾಜ್‌ ಅವರು ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಕೋರಿದ್ದಾರೆ. ‘30 ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಹಿರಿತನದ ಆಧಾರದಲ್ಲೂ ನನಗೆ ಅವಕಾಶ ನೀಡಬೇಕು’ ಎಂದು ವಿನಂತಿಸಿದ್ದಾರೆ.

ಜೆಡಿಎಸ್‌ ಸದಸ್ಯರು ಮೇಯರ್‌ ಆಗಲು ಕಾಂಗ್ರೆಸ್‌ ಒಪ್ಪಿಕೊಂಡರೆ ಮಾರಪ್ಪನಪಾಳ್ಯ ವಾರ್ಡ್‌ನ ಮಹದೇವಪ್ಪ ಹಾಗೂ ಶಕ್ತಿಗಣಪತಿ ನಗರ ವಾರ್ಡ್‌ನ ಗಂಗಮ್ಮ ಅವರ ಪೈಕಿ ಒಬ್ಬರು ಈ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ. ಒಂದು ವೇಳೆ ಜೆಡಿಎಸ್‌ ಉಪಮೇಯರ್‌ ಸ್ಥಾನಕ್ಕೆ ತೃಪ್ತಿಪಟ್ಟರೆ, ನೇತ್ರಾ ನಾರಾಯಣ್‌, ರಮೀಳಾ ಉಮಾಶಂಕರ್‌, ಮಂಜುಳಾ ವಿ.ನಾರಾಯಣಸ್ವಾಮಿ ಪೈಕಿ ಒಬ್ಬರು ಆಯ್ಕೆಯಾಗುವ ಸಾಧ್ಯತೆ ಇದೆ.

ಸಂಪತ್‌ರಾಜ್‌ ಆಯ್ಕೆಗೆ ಒತ್ತಾಯ: ಸಂಪತ್‌ರಾಜ್‌ ಅವರನ್ನು ಮೇಯರ್‌ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಬೆಂಗಳೂರು ಹಿತರಕ್ಷಣಾ ಒಕ್ಕೂಟ ಒತ್ತಾಯಿಸಿದೆ. ‘ಈ ಸ್ಥಾನವನ್ನು ಹಿಂದುಳಿದ ಪ್ರದೇಶಕ್ಕೆ ನೀಡಿ ಅಭಿವೃದ್ಧಿಗೆ ಸಹಕರಿಸಬೇಕು. ಜತೆಗೆ ಸಾಮಾಜಿಕ ಸಮಾನತೆ ಕಾಪಾಡಬೇಕು’ ಎಂದು ತಲಕಾಡು ಚಿಕ್ಕರಂಗೇಗೌಡ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಅಂಕಿ ಅಂಶಗಳು

* 266 ಒಟ್ಟು ಮತದಾರರ ಸಂಖ್ಯೆ

* 134 ಗೆಲ್ಲಲು ಬೇಕಾಗಿರುವ ಮತಗಳು

* 126 ಬಿಜೆಪಿ

* 116 ಕಾಂಗ್ರೆಸ್‌ (ಪಕ್ಷೇತರ ಪಾಲಿಕೆ ಸದಸ್ಯರೂ ಸೇರಿ)

* 24 ಜೆಡಿಎಸ್‌ (ಭಿನ್ನಮತೀಯ ಶಾಸಕರೂ ಸೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT