ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಕಿಚ್ಚು, ಹತಾಶೆಯಿಂದ ಅಪಪ್ರಚಾರ

ನೀರಾವರಿ ಯೋಜನೆಗಳನ್ನು ವಿರೋಧಿಸುವವರ ವಿರುದ್ಧ ಕಾಂಗ್ರೆಸ್ ಮುಖಂಡರ ವಾಗ್ಧಾಳಿ
Last Updated 22 ಸೆಪ್ಟೆಂಬರ್ 2017, 4:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ದಿನೇ ದಿನೇ ಬರಡಾಗುತ್ತಿರುವ ಜಿಲ್ಲೆಯ ಅಂತರ್ಜಲ ವೃದ್ಧಿಸುವ ಮತ್ತು ಕುಡಿಯುವ ನೀರು ತರುವ ಉದ್ದೇಶದಿಂದ ಶಾಸಕ ಸುಧಾಕರ್ ಅವರು ಸಾವಿರಾರು ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆಗಳನ್ನು ತಂದರೆ, ಅವರ ಒಳ್ಳೆಯ ಕೆಲಸವನ್ನು ಸೌಜನ್ಯಕ್ಕೂ ಶ್ಲಾಘಿಸದ ಕೆಲವರು ಹೊಟ್ಟೆಕಿಚ್ಚು, ಅಧಿಕಾರ ಕಳೆದುಕೊಂಡ ಹತಾಶೆಯಿಂದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚೆಗೆ ನಗರದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ನಗರ ಹೊರವಲಯದ ಪ್ರವಾಸಿ ಮಂದಿರದಲ್ಲಿ ಗುರುವಾರ ಪ್ರತಿಕಾಗೋಷ್ಠಿ ಆಯೋಜಿಸಲಾಗಿತ್ತು. ಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಅನೇಕ ಮುಖಂಡರು, ನೀರಾವರಿ ಯೋಜನೆಗಳನ್ನು ವಿರೋಧಿಸುವವರ ವಿರುದ್ಧ ವಾಗ್ಧಾಳಿ ನಡೆಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮಾತನಾಡಿ, ‘ನೀರಾವರಿ ತಜ್ಞರ ಸಲಹೆ ಪಡೆಯದೆ ಎತ್ತಿನಹೊಳೆ ಯೋಜನೆಗೆ ₹13 ಸಾವಿರ ಕೋಟಿ ಖರ್ಚು ಮಾಡಲು ಸರ್ಕಾರಕ್ಕೆ ಹುಚ್ಚು ಹಿಡಿದಿದೆಯಾ? ಸರ್ಕಾರ ಎತ್ತಿನಹೊಳೆ ಯೋಜನೆಗೆ ಕಣ್ಣು ಮುಚ್ಚಿಕೊಂಡು ಹಣ ಖರ್ಚು ಮಾಡುವುದಿಲ್ಲ. ನೀರು ಸಿಗುತ್ತದೆ ಎಂದು ಮೊನ್ನೆಯ ಸಭೆಯಲ್ಲಿ ಮುಖ್ಯಮಂತ್ರಿ, ನೀರಾವರಿ ಸಚಿವರೇ ಹೇಳಿದ್ದಾರಲ್ಲಾ? ಅನೇಕ ದೇಶಗಳಲ್ಲಿ ಇವತ್ತು ಸಂಸ್ಕರಿಸಿದ ನೀರನ್ನು ಮನೆ ಬಳಕೆಗೆ, ಕುಡಿಯಲು ಕೂಡ ಉಪಯೋಗಿಸುತ್ತಿದ್ದಾರೆ. ಆದರೆ ನಾವು ಅಂತರ್ಜಲ ವೃದ್ಧಿಗೆ ಆ ನೀರನ್ನು ಬಳಸುತ್ತಿರುವುದು. ರೈತಾಪಿ ಜನರಿಗೆ ಅನುಕೂಲವಾಗಲಿ ಎಂದು ಈ ಯೋಜನೆ ತರಲಾಗಿದೆ’ ಎಂದರು.

‘ಆಂಜನೇಯರೆಡ್ಡಿ ಏನು? ಹೇಗೆ ಬೆಳೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಏನು ಸುಳ್ಳು ಹೇಳುತ್ತಾರೆ, ಯಾವ ರೀತಿ ಕಥೆ ಕಟ್ಟುತ್ತಾರೆ, ಯಾವ ರೀತಿ ಪ್ರತಿಭಟನೆ ಮಾಡುತ್ತಾರೆ ಎನ್ನುವುದು ನಾನು 1994 ರಿಂದಲೇ ನೋಡುತ್ತಿದ್ದೇನೆ. ಅಷ್ಟಕ್ಕೂ ಆಂಜನೇಯರೆಡ್ಡಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರೇ ಅಲ್ಲ. ನಾವೆಲ್ಲ ಹಿಂದೆ ಅಧ್ಯಕ್ಷರಾಗಿದ್ದವರು. ಆಗಿನ ಕಾಲದಲ್ಲಿಯೇ ನಾವು ನೀರಾವರಿ ಹೋರಾಟಕ್ಕೆ ಮೂರ್ನಾಲ್ಕು ಸಾವಿರ ಜನರನ್ನು ಸೇರಿಸಿ, ತಾಲ್ಲೂಕು ಪಂಚಾಯಿತಿ ಎದುರು ಪ್ರತಿಭಟನೆ ಮಾಡಿದ್ದೇವೆ. ಜಿ.ವಿ.ಶ್ರೀರಾಮರೆಡ್ಡಿ ಅವರೂ 5,000 ಜನರೊಂದಿಗೆ ಕಾಲ್ನಡಿಗೆ ಜಾಥಾ ನಡೆಸಿ ಪ್ರತಿಭಟನೆ ಮಾಡಿದ್ದಾರೆ. ಯಾವನೋ ದುಡ್ಡು ಕೊಡುತ್ತಾನೆ ಎಂದು ಪ್ರತಿಭಟನೆ ಮಾಡುವುದಲ್ಲ’ ಎಂದು ಕೇಶವರೆಡ್ಡಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಐ ಡೋಂಟ್‌ ಕೇರ್‌
ಪತ್ರಕರ್ತರು ಆಂಜನೇಯರೆಡ್ಡಿ ಹೆಸರನ್ನು ಪದೇ ಪದೇ ಉಲ್ಲೇಖಿಸಿದ್ದರಿಂದ ಗರಂ ಆದ ಕೇಶವರೆಡ್ಡಿ, ‘ಅವನ ಹೆಸರು ಹೇಳಬೇಡಿ ನನಗೆ. ಐ ಡೋಂಟ್‌ ಕೇರ್‌. ನಾನು 50 ವರ್ಷಗಳಿಂದ ರಾಜಕೀಯದಲ್ಲಿ ಅಂತಹವರನ್ನು ಸಾಕಷ್ಟು ನೋಡಿದ್ದೇನೆ. ಮೊಯಿಲಿ ಅವರು ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸಂಸದರಾದವರು ಇವರಂತೆ ಬಾಯಿಬಡಕರಲ್ಲ. ಏನು ಹಕ್ಕಿದೆ ಇವರಿಗೆ ಅವರು ಹುಚ್ಚು ನಾಯಿ ಎನ್ನಲು. ಅದನ್ನು ಇವರು ಸಾಬೀತು ಮಾಡುತ್ತಾರಾ? 10 ತಜ್ಞರ ಪಟ್ಟಿ ಕೊಡಲು ಅವರಿಗೆ ಹೇಳಿ. ಕೊಟ್ಟರೆ ಅವರನ್ನು ಕರೆಯಿಸಿ ನಾವೇ ಪರೀಕ್ಷೆ ಮಾಡಿಸುತ್ತೇವೆ’ ಎಂದು ತಿಳಿಸಿದರು.

ಮುಖಂಡ ವೆಂಕಟನಾರಾಯಣಪ್ಪ ಮಾತನಾಡಿ, ‘ಅಸಲಿಗೆ ಆಂಜನೇಯರೆಡ್ಡಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರೇ ಅಲ್ಲ. ಈ ಹಿಂದೆ ಶಾಸಕರಾಗಿದ್ದ ಬಚ್ಚೇಗೌಡ ಅವರನ್ನು ಸಮಿತಿಯ ಗೌರವಾಧ್ಯಕ್ಷ ಎಂದು ನೇಮಕ ಮಾಡಲಾಗಿತ್ತು. ಅವರು ಜಾತಿ ಅಭಿಮಾನ ಇಟ್ಟುಕೊಂಡು ಎಲ್ಲೋ ಬಿದ್ದಿದ್ದ ಆಂಜನೆಯರೆಡ್ಡಿ ಅವರನ್ನು ತಂದು ಅಧ್ಯಕ್ಷರನ್ನಾಗಿ ಮಾಡಿದರು. ಇವರಿಗೆ ನೀರಾವರಿ ಹೋರಾಟದ ಪರಿಕಲ್ಪನೆಯೇ ಗೊತ್ತಿಲ್ಲ. ಶಾಸಕರ ಪಕ್ಕದಲ್ಲಿ ಸೇರಿಕೊಂಡು, ಏನೂ ಇಲ್ಲದಿದ್ದರೂ ಸ್ವಜಾತಿಯವನು ಎಂಬ ಒಂದೇ ಕಾರಣಕ್ಕೆ ಸಮಿತಿಯ ಅಧ್ಯಕ್ಷನೆಂದು ಹೇಳುಕೊಳ್ಳುವುದಕ್ಕೆ ಬಚ್ಚೇಗೌಡರು ಒತ್ತು ಕೊಟ್ಟರು’ ಎಂದು ಆರೋಪಿಸಿದರು.

**

ಪ್ರತಿ ಸಂಘಕ್ಕೆ ₹ 5,000!

‘ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಅದರಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಜನರು ಸ್ತ್ರೀಶಕ್ತಿ ಸಂಘದ ಸದಸ್ಯರೇ ಇದ್ದರು. ಜನರಿಗೆ ನಾವು ದುಡ್ಡು ಕೊಟ್ಟಿಲ್ಲ. ಆದರೆ ಸುಮಾರು 1,500 ಸ್ತ್ರೀಶಕ್ತಿ ಸಂಘಗಳಿಗೆ ಸಾಯಿಕೃಷ್ಣ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಶಾಸಕರು ತಮ್ಮ ತಾಯಿಯವರ ಹೆಸರಿನಲ್ಲಿ ಪ್ರತಿ ಸಂಘಕ್ಕೆ ತಲಾ ₨5,000 ನಿಧಿ ಕೊಟ್ಟಿದ್ದಾರೆ’ ಎಂದು ಮುಖಂಡ ಮರಳುಕುಂಟೆ ಕೃಷ್ಣಮೂರ್ತಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

**

ಇವತ್ತು ಶಾಶ್ವತ ನೀರಾವರಿ ಹೋರಾಟವೆಂದರೆ ಜೆಡಿಎಸ್ ಹೋರಾಟ ಎನ್ನುವಂತಾಗಿದೆ. ಆದರೆ ಕುಮಾರಸ್ವಾಮಿ ಹಿಂದೊಮ್ಮೆ ಪರಶಿವಯ್ಯ ಅವರಿಗೆ ಬುದ್ದಿಯೇ ಇಲ್ಲ ಎಂದಿದ್ದರು. ಏನಿದರ ಅರ್ಥ?
–ವೆಂಕಟನಾರಾಯಣಪ್ಪ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT