ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕ್ಷೀಣಿಸಿದರೂ ಕುಗ್ಗದ ನೀರಿನ ಪ್ರಮಾಣ

Last Updated 22 ಸೆಪ್ಟೆಂಬರ್ 2017, 5:25 IST
ಅಕ್ಷರ ಗಾತ್ರ

ಚಿಕ್ಕೋಡಿ: ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಕಳೆದ ನಾಲ್ಕಾರು ದಿನಗಳಿಂದ ಸುರಿಯುತ್ತಿದ್ದ ಮಳೆ ಪ್ರಮಾಣ ಕಳೆದ 24 ಗಂಟೆಗಳಲ್ಲಿ ಕ್ಷೀಣಿಸಿದೆ. ಆದರೂ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚ ಗಂಗಾ ನದಿಗಳಿಂದ ಹರಿದು ಬರುತ್ತಿ ರುವ ನೀರಿನ ಪ್ರಮಾಣ ಮಾತ್ರ ಏರಿಕೆಯಾಗುತ್ತಲೇ ಇದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ ಹಾಗೂ ದೂಧಗಂಗಾ ನದಿ ಮೂಲಕ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಹರಿದು ಬರುತ್ತಿದ್ದ ನೀರು 44 ಸಾವಿರ ಕ್ಯುಸೆಕ್‌ ಗುರುವಾರ 99 ಸಾವಿರ ಕ್ಯುಸೆಕ್‌ಗೆ ಹೆಚ್ಚಿದ್ದು, ತಾಲ್ಲೂಕಿ ನಲ್ಲಿ ಇದುವರೆಗೆ ಆರು ಕೆಳಮಟ್ಟದ ಸೇತುವೆಗಳು ಜಲಾವೃತಗೊಂಡಿವೆ.

ತಾಲ್ಲೂಕಿನ ಮಲಿಕವಾಡ ಮತ್ತು ಮಹಾರಾಷ್ಟ್ರದ ದತ್ತವಾಡ ಗ್ರಾಮಗಳ ಮಧ್ಯೆ  ದೂಧಗಂಗಾ ನದಿಗೆ ಇರುವ  ಸೇತುವೆ ಹಾಗೂ ತಾಲ್ಲೂಕಿನ ಜತ್ರಾಟ–ಭೀವಶಿ ಮತ್ತು ಸಿದ್ನಾಳ–ಅಕ್ಕೋಳ ಗ್ರಾಮಗಳ ಮಧ್ಯೆ ವೇದಗಂಗಾ ನದಿಗೆ ಇರುವ ಸೇತುವೆಗಳೂ ಗುರುವಾರ ಜಲಾವೃತಗೊಂಡಿವೆ. ಬುಧವಾರ ಕಲ್ಲೋಳ–ಯಡೂರ, ಕಾರದಗಾ–ಭೋಜ ಮತ್ತು ಭೋಜವಾಡಿ–ಕುನ್ನೂರ ಗ್ರಾಮಗಳ ಮಧ್ಯೆದ ಸೇತುವೆಗಳು ಬುಧವಾರವೇ ಜಲಾವೃತಗೊಂಡಿದೆ.

ಬಾರವಾಡ ಮತ್ತು ಕುನ್ನೂರ ಗ್ರಾಮಗಳ ಮಧ್ಯೆ ಸಂಗಮೇಶ್ವರ ದೇವಸ್ಥಾನದ ಬಳಿ ನೂತನವಾಗಿ ನಿರ್ಮಿಸಿರುವ ಸೇತುವೆ ಮುಳುಗಡೆಯಾಗಿದೆ. ಸೇತುವೆಗಳ ಮುಳುಗಡೆಯಿಂದಾಗಿ ಸಾರ್ವಜನಿಕರು ಹತ್ತಾರು ಕಿ..ಮಿ.ಸುತ್ತು ಬಳಿಸಿ ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುವಂತಾಗಿದೆ.

‘ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕ್ಷೀಣಿಸಿದೆ. ಕೊಯ್ನಾ ಜಲಾಶಯದಿಂದ 18 ಸಾವಿರ ಕ್ಯುಸೆಕ್‌ ಹರಿದು ಬರುತ್ತಿದೆ. ರಾಜಾಪುರ ಬ್ಯಾರೇಜ್‌ನಿಂದ 79,470 ಕ್ಯುಸೆಕ್‌ ಹಾಗೂ ದೂಧಗಂಗಾ ನದಿಯಿಂದ 19,536 ಕ್ಯುಸೆಕ್‌ ಸೇರಿದಂತೆ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 99,006 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.

ಬುಧವಾರ ರಾತ್ರಿಯಿಂದ ಕಾಳಮ್ಮವಾಡಿ ಜಲಾಶಯದಿಂದ ನೀರು ಬಿಡುಗಡೆಯನ್ನೂ ಸ್ಥಗಿತಗೊಳಿಸಲಾಗಿದೆ. ಸಂಭವನೀಯ ನೆರೆ ಹಾವಳಿ ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ 76 ನೋಡಲ್‌ ಆಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಪ್ರವಾಹ ಪರಿಸ್ಥಿತಿಯ ಕುರಿತು ನಿಗಾ ವಹಿಸಲಾಗಿದೆ’ ಎಂದು ಎ.ಸಿ. ಗೀತಾ ಕೌಲಗಿ ತಿಳಿಸಿದ್ದಾರೆ.

ಮಳೆ ವಿವರ: ಮಹಾರಾಷ್ಟ್ರದ ಕೊಯ್ನಾ–43 ಮಿ.ಮಿ., ನವಜಾ–85 ಮಿಮಿ, ಮಹಾಬಳೇಶ್ವರ–34 ಮಿಮಿ., ವಾರಣಾ– 14 ಮಿಮಿ., ರಾಧಾನಗರಿ–17 ಮಿಮಿ.
ಶಿಂಗಳಾಪುರ ಬ್ಯಾರೇಜ್‌ ಮೇಲೆ ನೀರು: ಗೋಕಾಕ ವರದಿ: ಘಟಪ್ರಭಾ ನದಿಯ ಹಿನ್ನೀರಿನಲ್ಲಿ ಸುರಿಯುತ್ತಿರುವ ಧಾರಾ ಕಾರ ಮಳೆಯಿಂದಾಗಿ ಪ್ರವಾಹ ಉಂಟಾಗಿ ನಗರ ಹೊರವಲಯದ ಶಿಂಗಳಾಪುರ ಬ್ರಿಡ್ಜ್‌–ಕಮ್‌–ಬ್ಯಾರೇಜ್‌ ಸಂಪೂರ್ಣವಾಗಿ ಗುರುವಾರ ಬೆಳಗ್ಗಿನಿಂದಲೇ ಮುಳುಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಪ್ರವಾಹದ ಮಟ್ಟ ಇನ್ನೂ ಏರಿಕೆಯಾಗುವ ಸೂಚನೆಗಳಿದ್ದು, ನದಿಯ ಉಭಯ ಕಡೆಗಳಲ್ಲಿ ತುಂಬಿ ಹರಿಯುತ್ತರುವ ನದಿ ದಾಟಬಾರದು ಎಂದು ಸೂಚಿಸಲಾಗಿದೆ.
ಮುನ್ನೆಚ್ಚರಿಕೆ: ಘಟಪ್ರಭಾ ನದಿ ತಟದ ತಗ್ಗು ಪ್ರದೇಶಗಳಲ್ಲಿ ವಾಸವಿರುವ ಅಡಿ ಬಟ್ಟಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಸುಣಧೋಳಿ, ಅವರಾದಿ, ಢವಳೇಶ್ವರ ಮೊದಲಾದ ಗ್ರಾಮಗಳ ಜನತೆ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸು ವಂತೆ ನೋಡಲ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಜಿ.ಎಸ್‌.ಮಾಳಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT