ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯ ಆಹ್ವಾನಿಸುತ್ತಿರುವ ರಸ್ತೆ ಕಂದಕ

Last Updated 22 ಸೆಪ್ಟೆಂಬರ್ 2017, 6:33 IST
ಅಕ್ಷರ ಗಾತ್ರ

ಕಮಲನಗರ: ಕಮಲನಗರದಿಂದ ಹಕ್ಯಾಳ್‌ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ಕಂದಕಗಳು ನಿರ್ಮಾಣವಾಗಿದ್ದು, ಅಪಾಯ ಆಹ್ವಾನಿಸುತ್ತಿದೆ. ಹೆಬ್ಬಾಳ್‌ ಸೇತುವೆಯಿಂದ ಅಣತಿ ದೂರದಲ್ಲಿರುವ ಹಕ್ಯಾಳ್‌ ರಸ್ತೆ ಮಧ್ಯೆ ಈ ದೊಡ್ಡ ಕಂದಕಗಳು ನಿರ್ಮಾಣವಾದರೂ ಸಂಬಂಧಪಟ್ಟವರು ಕಂದಕ ಮುಚ್ಚಿಸಲು ಮುಂದಾಗಿಲ್ಲ ಎಂದು ಸಾರ್ವಜನಿಕರ ಆರೋಪಿಸುತ್ತಾರೆ.

‘ಈ ಮಾರ್ಗದಲ್ಲಿ ತಾಲ್ಲೂಕು ಕೇಂದ್ರ ಔರಾದ್‌ಕ್ಕೆ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಈಚೆಗೆ ಈ ಕಂದಕದಲ್ಲಿ ಬೀಳುವ ಅಪಾಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ಆಯ ತಪ್ಪಿ ಲಾರಿಯೊಂದು ಪಲ್ಟಿ ಹೊಡೆದಿತ್ತು. ಲಾರಿಯೊಳಗಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದವು. ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಈ ಕಂದಕಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಸಂಜೀವಕುಮಾರ ಬಿರಾದಾರ್‌ ತಿಳಿಸಿದರು.

‘ಹಕ್ಯಾಳ್‌ ಗ್ರಾಮದಲ್ಲಿ ಪ್ರೌಢ ಶಾಲೆ ಇಲ್ಲ. ಹೀಗಾಗಿ ಪ್ರೌಢಶಾಲೆ ಶಿಕ್ಷಣಕ್ಕಾಗಿ ಸಮೀಪದಲ್ಲಿರುವ ಖತಗಾಂವ್‌ ಗ್ರಾಮಕ್ಕೆ ಈ ಮಾರ್ಗವಾಗಿಯೇ ಹಲವು ಹಲವು ವಿದ್ಯಾರ್ಥಿಗಳು ತೆರಳುತ್ತಾರೆ. ಬೈಸಿಕಲ್‌ ಮೇಲೆ ಹೋಗುವ ವಿದ್ಯಾರ್ಥಿಗಳು, ಈ ಕಂದಕದಲ್ಲಿ ಬೀಳುವ ಸಂಭವವಿದೆ. ಅದಕ್ಕಾಗಿಯೇ ಅವರಿಗೆ ಎಚ್ಚರಿಕೆಯಿಂದ ಹೋಗುವಂತೆ ಪ್ರತಿ ದಿನ ಹೇಳುತ್ತೇವೆ. ಅವರು ಶಾಲೆಯಿಂದ ಮನೆಗೆ ಮರಳುವವರೆಗೂ ಸಮಾಧಾನ ಇರುವುದಿಲ್ಲ’ ಎಂದು ಮಕ್ಕಳ ಪೋಷಕರು ತಿಳಿಸಿದರು.

‘ಕಮಲನಗರ, ಖತಗಾಂವ್‌, ಮದನೂರ್‌ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ವಾಹನ ಸವಾರರು ಇದೇ ರಸ್ತೆ ಮಾರ್ಗವಾಗಿ ರಾತ್ರಿ ಸಂಚರಿಸುತ್ತಾರೆ. ರಸ್ತೆ ಮಧ್ಯೆಯಿರುವ ಕಂದಕಗಳಲ್ಲಿ ಬಿದ್ದು ಕೈ, ಕಾಲು ಮುರಿದುಕೊಂಡರೆ, ಇನ್ನೂ ಕೆಲವರಿಗೆ ಗಂಭೀರ ಗಾಯಗಳಾಗಿವೆ’ ಎಂದು ಹಕ್ಯಾಳ್‌ ಗ್ರಾಮಸ್ಥ ಗಣೇಶ ಬಿರಾದಾರ್‌ ತಿಳಿಸಿದರು.

‘ಇದೆ ಮಾರ್ಗವಾಗಿ ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಚರಿಸುತ್ತಾರೆ. ಆದರೆ ರಸ್ತೆ ಮಧ್ಯೆ ನಿರ್ಮಾಣವಾಗಿರುವ ಕಂದಕಗಳ ದುರಸ್ತಿಗೆ ಮುಂದಾಗದೇ, ನೋಡಿಯೂ ನೋಡದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದು ರಾಜಶೇಖರ ಪಾಟೀಲ ಆರೋಪಿಸಿದರು.

‘ಹೆಬ್ಬಾಳ್‌ ಸೇತುವೆಯಿಂದ ಖತಗಾಂವ್‌ ಮಾರ್ಗದಲ್ಲಿರುವ ಬಸವಂತರಾವ್‌ ಪಾಟೀಲ ಅವರ ಹೊಲದ ಹತ್ತಿರದ ರಸ್ತೆಯಲ್ಲೂ ಒಂದು ದೊಡ್ಡ ಕಂದಕ ನಿರ್ಮಾಣವಾಗಿದೆ. ಇದರಲ್ಲಿಯೂ ಅನೇಕರು ಬಿದ್ದು ಗಾಯಗೊಂಡಿದ್ದಾರೆ’ ಎಂದು ಶಿವಕಾಂತ ಭಾಕಸವಾಡೆ ತಿಳಿಸಿದ್ದಾರೆ.

‘ಈ ಕಂದಕಗಳು ನೋಡಲು ಚಿಕ್ಕದಾಗಿ ಕಂಡರೂ, ಆರು ಅಡಿಗಳಷ್ಟು ಆಳವಾಗಿವೆ. ಇಣುಕಿ ನೋಡಿದರೆ ಒಂದು ಸುರಂಗ ಮಾರ್ಗದಂತೆ ಕಾಣುತ್ತದೆ. ಪಾದಚಾರಿಗಳು, ವಾಹನ ಸವಾರರು ಬೀಳಬಾರದು, ಅವರಿಗೆ ಇಲ್ಲಿ ಕಂದಕವಿದೆ ಎಂದು ಗೊತ್ತಾಗಲಿ ಎಂದು ಪಕ್ಕದ ರೈತರು ಕಂದಕದಲ್ಲಿ ಒಣಗಿದ ಕಟ್ಟಿಗೆಗಳನ್ನು ಹಾಕಿದ್ದಾರೆ. ವಾಹನ ಸವಾರರ ಬಗ್ಗೆ ರೈತರಿಗಿರುವ ಕಾಳಜಿ, ನಮ್ಮ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಇಲ್ಲ’ ಎಂದು ಮಹೇಶ ಬಿ.ಪಾಟೀಲ ಹೇಳಿದರು.

‘ಈ ಕಂದಕಗಳು ದಿನದಿಂದ ದಿನಕ್ಕೆ ಅಗಲವಾಗುತ್ತಿವೆ. ಅದರಡಿ ಮಣ್ಣು ಉದುರುತ್ತಿದೆ. ಡಾಂಬರು ಕಿತ್ತುತ್ತಿದೆ. ಕಂದಕಗಳನ್ನು ದುರಸ್ತಿ ಮಾಡದೇ ಹೀಗೆ ಬಿಟ್ಟರೆ, ವಾಹನ ಸವಾರರ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಅಪಾಯ ಸಂಭವಿಸಿದರೆ, ಇದಕ್ಕೆ ಯಾರು ಹೊಣೆ ?’ಎಂದು ವಾಹನ ಸವಾರರು ತಿಳಿಸಿದರು.

‘ಕಂದಕಗಳನ್ನು ಮುಚ್ಚಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಮಸ್ಯೆ ಪರಿಹರಿಸಲಾಗುವುದು’ ಎಂದು ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ ಸಜ್ಜನಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT