ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಮಾಹಿತಿ, ಸಹಿಯೊಂದಿಗೆ ಕಸಿದ ಜಮೀನು: ತನಿಖೆಗೆ ರೈತರು ಆಗ್ರಹ

Last Updated 22 ಸೆಪ್ಟೆಂಬರ್ 2017, 6:43 IST
ಅಕ್ಷರ ಗಾತ್ರ

ಕಾರಟಗಿ: ತುಂಗಭದ್ರಾ ಜಲಾಶಯದ ನಿರ್ಮಾಣದ ಸಂದರ್ಭದಲ್ಲಿ ಭೂಮಿ ಕಳೆದುಕೊಂಡಿದ್ದ ರೈತರಿಗೆ ನೀಡಿದ್ದ ಜಮೀನು ವರ್ಗಾವಣೆಯಾಗಿ ಪಹಣಿ ಸಿದ್ಧಗೊಂಡ ವರ್ಷದೊಳಗೆ ಅವರ ನಕಲಿ ಸಹಿಯೊಂದಿಗೆ ಭೂಮಿಯು ಮತ್ತೊಬ್ಬರ ಪಾಲಾಗಿರುವ ಪ್ರಕರಣಗಳು ಇಲ್ಲಿ ನಡೆದಿವೆ.

ಸಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಜೀರಸಾಬ್‌ ಮೂಲಿಮನಿ ನೇತೃತ್ವದಲ್ಲಿ ಮುಖಂಡರಾದ ಮರಿಯಪ್ಪ ಸಾಲೋಣಿ, ಸುಂದರರಾಜ್ ಬಸವಣ್ಣಕ್ಯಾಂಪ್, ಫಲಾನುಭವಿ ತಿರುಕಪ್ಪ ಹಳ್ಳೆಪ್ಪರೊಂದಿಗೆ ರಾಜ್ಯ ಮುದ್ರಾಂಕಗಳ ಆಯುಕ್ತರು ಹಾಗೂ ನೋಂದಣಿ ಮಹಾ ಪರಿವೀಕ್ಷಕರಿಗೆ ಈಚೆಗೆ ಬೆಂಗಳೂರಲ್ಲಿ ಮನವಿ ಸಲ್ಲಿಸಿದರು.

ಮನವಿಯಲ್ಲಿ 1952-53ರಲ್ಲಿ ತುಂಗಭದ್ರಾ ಜಲಾಶಯ ನಿರ್ಮಾಣದಿಂದ ಭೂಮಿ ಕಳೆದುಕೊಂಡಿದ್ದ ಕೊಪ್ಪಳ ತಾಲ್ಲೂಕು ಅಕ್ಕಾಪುರ (ಹನಕುಂಟಿ) ಗ್ರಾಮದ ಹುಲ್ಲಪ್ಪ, ಹನುಮನಗೌಡ ಸಂಜೀವಗೌಡ ಹಾಗೂ ತಿರುಕಪ್ಪ ಎಂಬುವವರಿಗೆ ಸಿದ್ದಾಪುರ ಹೋಬಳಿಯ ಗುಂಡೂರಿನ ಸರ್ವೆ ನಂ. 82ರ 82/1, 82/2 ಹಾಗೂ 82/3ರಲ್ಲಿ ತಲಾ 5 ಎಕರೆ ಭೂಮಿಯನ್ನು ತುಂಗಭದ್ರಾ ಯೋಜನೆಯ ಹೆಚ್ಚುವರಿ ಕಲೆಕ್ಟರ್‌ ಮಂಜೂರು ಮಾಡಿದ್ದರು. 

1998–99ರಲ್ಲಿ ಭೂಮಿಯ ವರ್ಗಾವಣೆ, ಪಹಣಿ ದಾಖಲೆಗಳು ಸಿದ್ಧಗೊಂಡಿದ್ದವು. ವರ್ಷದೊಳಗೆ ಭೂಮಿ ಇನ್ನೊಬ್ಬರ ಹೆಸರಿಗೆ ವರ್ಗಾವಣೆಯಾಗಿದೆ. ತಪ್ಪು ಮಾಹಿತಿ ನೀಡಿ, ನಕಲಿ ಸಹಿ ಮಾಡಿ ಖರೀದಿ ನೋಂದಣಿಯಾಗಿದೆ. 3 ಜನರಿಗೆ ಸೇರಿದ ತಲಾ 5 ಎಕರೆ ಭೂಮಿಯು 14–3–2000 ರಂದು ಖರೀದಿಸಿ, 15–5–2000ರಂದು ಒಂದೇ ದಿನ ವರ್ಗಾವಣೆಯಾಗಿರುವುದು ಅಕ್ರಮವನ್ನು ಸಾರಿ ಹೇಳುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಸದರಿ ಭೂಮಿಯ ಸರ್ವೆ ನಂ. 82/1ರ ಭೂಮಿ ಮಾಲಿಕ 10-8–91ರಂದು ಮೃತಪಟ್ಟಿದ್ದು, 14–3-2000ರಂದು ದುರುಗಪ್ಪ ದ್ಯಾಮಪ್ಪ ಭಾವಿಕಟ್ಟಿಗೆ 4 ಎಕರೆ, ನಾಗಪ್ಪ ದ್ಯಾಮಪ್ಪಗೆ 1 ಎಕರೆ ಖರೀದಿ ನೋಂದಣಿಯಾಗಿದೆ.

ಹನುಮನಗೌಡ ಸಂಜೀವಗೌಡ ಅವರು 1988ರ ಜುಲೈ 15ರಂದು ಮೃತಪಟ್ಟಿದ್ದು, 2000ನೇ ಇಸವಿಯ ಮಾರ್ಚ್‌ 14ರಂದು  ಇವರಿಗೆ ಸೇರಿದ ಜಮೀನು ದುರುಗಪ್ಪ ದ್ಯಾಮಪ್ಪಗೆ 2ಎಕರೆ 10ಗುಂಟೆ, ಮುರ್ತುಜಾಸಾಬ್‌ ಇಮಾಮಸಾಬ್‌ಗೆ 30 ಗುಂಟೆ, ಪಾಮಪ್ಪ ತಾಯಿ ದ್ಯಾಮಮ್ಮಗೆ 1ಎಕರೆ, ಶಿವಪ್ಪ ತಾಯಿ ದ್ಯಾಮಮ್ಮಗೆ 1 ಎಕರೆ ಖರೀದಿ ನೋಂದಣಿಯಾಗಿದೆ.

ತಿರುಕಪ್ಪ ತಿರುಕಪ್ಪ ಹುಲ್ಲಪ್ಪ ಅಕ್ಕಾಪುರಗೆ ಸೇರಿದ 5 ಎಕರೆ ಜಮೀನು ಅವರ ಗಮನಕ್ಕೆ ಬಾರದೇ, ಅವರ ನಕಲಿ ಸಹಿಯೊಂದಿಗೆ ಗೋಣೆಪ್ಪ ಹುಲಗಪ್ಪಗೆ 1 ಎಕರೆ 20ಗುಂಟೆ, ನಾಗಪ್ಪ ಹುಲಗಪ್ಪಗೆ 1 ಎಕರೆ 20 ಗುಂಟೆ, ಮುರ್ತುಜಾಸಾಬ್‌ ಇಮಾಮಸಾಬ್‌ಗೆ 2 ಎಕರೆ ಖರೀದಿ ನೋಂದಣಿಯಾಗಿದೆ. ಅಮಾಯಕ ರೈತರ ಜಮೀನು ಅವರ ಗಮನಕ್ಕೆ ಬಾರದೇ, ಉಳ್ಳವರ ಪಾಲಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಮಂಜೂರಾದ ಭೂಮಿಯ ವ್ಯವಹಾರದ ಮೇಲೆ ಬೆಳಕು ಚೆಲ್ಲಿ, ತನಿಖೆ ನಡೆಸಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಮೇಲಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಫಲಾನುಭವಿ ಕುಟುಂಬ ಗಳೊಂದಿಗೆ ತೀವ್ರ ಸ್ವರೂಪದ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ಮುಖಂಡರಾದ ಮರಿಯಪ್ಪ ಸಾಲೋಣಿ, ಸುಂದರರಾಜ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT