ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ ಟ್ಯಾಕ್ಸಿ ಸೇವೆ: ಕನಿಷ್ಠ ದರ ನಿಗದಿ ಪ್ರಸ್ತಾವ ಅಸಂಬದ್ಧ

Last Updated 22 ಸೆಪ್ಟೆಂಬರ್ 2017, 20:05 IST
ಅಕ್ಷರ ಗಾತ್ರ

ಬೆಂಗಳೂರನ್ನು ಸಿಲಿಕಾನ್‌ ಸಿಟಿ, ತಂತ್ರಜ್ಞಾನ ನಗರಿ ಎಂದೇ ಗುರುತಿಸಲಾಗುತ್ತಿದೆ. ಆದರೆ ನಮ್ಮ ರಾಜ್ಯ ಸರ್ಕಾರಕ್ಕೆ ಮಾತ್ರ ತಂತ್ರಜ್ಞಾನ ಎಂದರೆ ಅಲರ್ಜಿ ಎಂದು ಕಾಣುತ್ತದೆ. ಬೆಂಗಳೂರು ಮಾತ್ರವಲ್ಲ ರಾಜ್ಯದ ಅನೇಕ ನಗರಗಳಲ್ಲಿ ಜನಪ್ರಿಯವಾಗಿರುವ ತಂತ್ರಜ್ಞಾನ ಮತ್ತು ಮೊಬೈಲ್‌ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳ ಮೇಲೆ ಅನಗತ್ಯವಾದ ನಿರ್ಬಂಧ ಹೇರುವ ಅದರ ಪ್ರಯತ್ನಗಳು ಅಂತಹ ಭಾವನೆ ಮೂಡುವುದಕ್ಕೆ ಕಾರಣವಾಗಿವೆ.

ಈಗಾಗಲೆ ‘ಓಲಾ, ಉಬರ್‌, ಹೈ’ ಕಂಪೆನಿಗಳು ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿವೆ. ಸದ್ಯದಲ್ಲಿಯೇ ‘ನಮ್ಮ ಟೈಗರ್‌’ ಎಂಬ ಆ್ಯಪ್‌ ಆಧಾರಿತ ಮತ್ತೊಂದು ಟ್ಯಾಕ್ಸಿ ಸೇವೆ ಬೆಂಗಳೂರಿನ ರಸ್ತೆಯನ್ನು ಪ್ರವೇಶಿಸಲಿದೆ. ಈ ಮಾದರಿಯ ಟ್ಯಾಕ್ಸಿ ಸೇವೆಗೆ ಬಹಳ ಬೇಡಿಕೆ ಇದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಇವು ನಗರದ ಚಲನಶೀಲತೆಗೆ ಹೊಸ ದಿಕ್ಕು ತೋರಿಸಿವೆ.

ನಗರ ಸಾರಿಗೆ ಸೌಕರ್ಯದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿವೆ. ಬೆಂಗಳೂರಿನಂತಹ ಮಹಾನಗರದಲ್ಲಿ ಇಂದು ಪುರುಷರಷ್ಟೇ ಅಲ್ಲ, ಒಂಟಿ ಮಹಿಳೆಯರು ನಡುರಾತ್ರಿಯಲ್ಲಿಯೂ ಒಂದು ಕಡೆಯಿಂದ ಇನ್ನೊಂದು ಕಡೆ ಯಾವುದೇ ಭಯವಿಲ್ಲದೆ ಸಂಚರಿಸಲು ಸಾಧ್ಯವಾಗಿರುವುದೇ ಈ ಟ್ಯಾಕ್ಸಿಗಳಿಂದ. ಸಾರ್ವಜನಿಕ ಸಾರಿಗೆ ಮೇಲಿನ ಒತ್ತಡವನ್ನು ಇವು ಕಡಿಮೆ ಮಾಡಿವೆ.

ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿವೆ. ಟ್ಯಾಕ್ಸಿ ಪೂಲಿಂಗ್‌ ಬಂದ ನಂತರವಂತೂ ಕಡಿಮೆ ದರದಲ್ಲಿ ಹೆಚ್ಚು ಜನ ಪ್ರಯಾಣಿಸಲು ಅನುಕೂಲವಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶ ಎಂದರೆ, ಇವು ಸರ್ಕಾರದ ನೆರವು ಅಥವಾ ಅನುದಾನದಲ್ಲಿ ಸ್ಥಾಪನೆಯಾದವಲ್ಲ ಮತ್ತು ಸರ್ಕಾರವೇನೂ ಇವುಗಳಲ್ಲಿ ಬಂಡವಾಳ ಹೂಡಿಲ್ಲ. ಖಾಸಗಿ ಕ್ಷೇತ್ರದಲ್ಲಿ ಅಸಂಖ್ಯಾತ ಜನರಿಗೆ ಬದುಕಿನ ದಾರಿ ತೋರಿಸಿದ ಸೇವಾ ವಲಯ ಇದು. ಹೀಗಿರುವಾಗ ಇವುಗಳಿಗೆ ಉತ್ತೇಜನ ಕೊಡುವುದು ಸರ್ಕಾರದ ಕರ್ತವ್ಯವೇ ಹೊರತು ಕಾಲೆಳೆಯುವುದಲ್ಲ.

ಟ್ಯಾಕ್ಸಿ ಚಾಲಕರ ಪೂರ್ವಾಪರ ಮಾಹಿತಿ ಸಂಗ್ರಹ, ಪ್ರಯಾಣಿಕರ ಸುರಕ್ಷತೆಯಂತಹ ವಿಷಯಗಳಲ್ಲಿ ಸರ್ಕಾರದ ಮೇಲ್ವಿಚಾರಣೆಗೆ, ನಿಯಂತ್ರಣಕ್ಕೆ ಯಾರ ತಕರಾರೂ ಇಲ್ಲ. ಅದು ಅಗತ್ಯವೂ ಹೌದು. ಮೋಟಾರು ವಾಹನಗಳ ಕಾನೂನಿನಲ್ಲಿಯೂ ಅದಕ್ಕೆ ಅವಕಾಶ ಇದೆ. ಆದರೆ ಅಷ್ಟಕ್ಕೆ ತನ್ನ ಪಾತ್ರವನ್ನು ಸೀಮಿತಗೊಳಿಸಿಕೊಳ್ಳದೆ ಅದು ಆ್ಯಪ್ ಟ್ಯಾಕ್ಸಿಗಳ ಕನಿಷ್ಠ ಪ್ರಯಾಣ ದರವನ್ನು ನಿಗದಿ ಮಾಡಲು ಮುಂದಾಗಿದೆ. ಈ ಮೂಲಕ ನೇರವಾಗಿ ಪ್ರಯಾಣಿಕರ ಸುಖ ಸಂತೋಷಕ್ಕೆ ಕಲ್ಲು ಹಾಕಲು ಹೊರಟಿದೆ.

ಪೈಪೋಟಿಯಿಂದಾಗಿ ಈ ಟ್ಯಾಕ್ಸಿಗಳು ಸಾರ್ವಜನಿಕರಿಗೆ ಈಗ ಕೈಗೆಟಕುವ ಮತ್ತು ಆಕರ್ಷಕ ದರದಲ್ಲಿ ದೊರೆಯುತ್ತಿವೆ. ಕಾರಿನ ಮಾದರಿ ಆಧರಿಸಿ ಕನಿಷ್ಠ ದರ ಕಿ.ಮೀ.ಗೆ ₹ 6 ರಿಂದ ಪ್ರಾರಂಭವಾಗುತ್ತದೆ. ಪೂಲಿಂಗ್‌ ಬಳಸಿಕೊಂಡರೆ ಇದು ಇನ್ನೂ ಕಡಿಮೆ. ಹೀಗಾಗಿಯೇ ಇವು ಜನಪ್ರಿಯವಾಗಿವೆ. ಆದರೆ, ಸಾರಿಗೆ ಇಲಾಖೆ ಸಿದ್ಧಪಡಿಸಿದ ಪ್ರಸ್ತಾವನೆಗೆ ಅನುಮತಿ ಸಿಕ್ಕರೆ ಸಣ್ಣ ಟ್ಯಾಕ್ಸಿಗಳ ಕನಿಷ್ಠ ಪ್ರಯಾಣ ದರವೇ ಕಿ.ಮೀ.ಗೆ ₹ 12ಕ್ಕೆ ಏರುತ್ತದೆ.

ಅಂದರೆ ಪ್ರಯಾಣಿಕರು ದುಪ್ಪಟ್ಟು ದರ ತೆರಬೇಕಾಗುತ್ತದೆ. ಹೀಗೇನಾದರೂ ಆದರೆ ಟ್ಯಾಕ್ಸಿ ಬಳಕೆಗೆ ಜನ ಹಿಂದೆಮುಂದೆ ನೋಡುತ್ತಾರೆ. ಅದರಿಂದ ಈ ಕ್ಷೇತ್ರಕ್ಕೇ ಪೆಟ್ಟು. ಜನ ಕಡಿಮೆ ದರದಲ್ಲಿ ಓಡಾಡಲಿ ಬಿಡಿ. ಅದರಿಂದ ಸರ್ಕಾರಕ್ಕೇನು ತೊಂದರೆ? ಅಷ್ಟಕ್ಕೂ ಇದು ಬೇಡಿಕೆ– ಪೂರೈಕೆ ಆಧಾರಿತ ಸೇವಾ ವ್ಯವಸ್ಥೆ.

ಆದ ಕಾರಣ ಮಿತಿಮೀರಿದ ಶುಲ್ಕ ವಸೂಲು ಮಾಡಿ ಪ್ರಯಾಣಿಕರನ್ನು ಶೋಷಿಸದಂತೆ ಸರ್ಕಾರ ಗರಿಷ್ಠ ದರ ನಿಗದಿ ಮಾಡಬೇಕು. ಆ ಅಧಿಕಾರವನ್ನು ಚಲಾಯಿಸಬೇಕು. ಆದರೆ ಕನಿಷ್ಠ ದರ ನಿಗದಿ ಮಾಡುವ ಉಸಾಬರಿಯನ್ನು ಬಿಡಬೇಕು.

ಎಲ್ಲ ವಿಷಯದಲ್ಲೂ ಮೂಗು ತೂರಿಸುವುದು, ಅತಿಯಾದ ನಿಯಂತ್ರಣ ಹೇರುವುದು, ಎಲ್ಲವೂ ತನ್ನ ಅಧೀನದಲ್ಲಿಯೇ ಇರಬೇಕು ಎನ್ನುವುದು ಸರ್ಕಾರಿ ಆಡಳಿತಶಾಹಿಗೆ ಬಹಳ ಖುಷಿ ಕೊಡುವ ಸಂಗತಿ. ಆದರೆ ಈಗಿನ ದಿನಮಾನಗಳಲ್ಲಿ ಇದು ಪ್ರಗತಿ ವಿರೋಧಿ ಧೋರಣೆ. ಇದರಿಂದ ಅದಕ್ಷತೆ ಹೆಚ್ಚುತ್ತದೆ. ಒಟ್ಟಾರೆ ಲಾಭಕ್ಕಿಂತ ಹಾನಿಯೇ ಹೆಚ್ಚು. ಈಗಲಾದರೂ ಸರ್ಕಾರ ಕನಿಷ್ಠ ದರ ನಿಗದಿಯಿಂದ ದೂರ ಉಳಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT