ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯಮುಕ್ತ ಭಾರತ ನಿರ್ಮಾಣ ಮಾಡೋಣ; ಇರೋಮ್ ಶರ್ಮಿಳಾ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭಯಮುಕ್ತ ಭಾರತ ನಿರ್ಮಾಣ ಮಾಡುವತ್ತ ನಾವೆಲ್ಲರೂ ಹೆಜ್ಜೆ ಹಾಕೋಣ’ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಹೇಳಿದರು.

ಬೆಂಗಳೂರು ವಕೀಲರ ಸಮುದಾಯ ಶುಕ್ರವಾರ ಏರ್ಪಡಿಸಿದ್ದ ‘ಗೌರಿ ಲಂಕೇಶ್ ಹತ್ಯೆ: ಅಭಿವ್ಯಕ್ತಿ ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗೌರಿ ಹತ್ಯೆ ಮೂಲಕ ಭಾರತದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವುದು ಹಂತಕರ ಉದ್ದೇಶ. ಅದನ್ನು ವಿಫಲಗೊಳಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಭಾರತದಲ್ಲಿ ಉಳಿಸಬೇಕು. ದೇಶದಾದ್ಯಂತ ಸಂಚರಿಸಿ ಇದನ್ನು ಮನವರಿಕೆ ಮಾಡಿಕೊಡುತ್ತೇನೆ’ ಎಂದು ಪ್ರತಿಪಾದಿಸಿದರು.

ಹಿಂದೆ ಭಾರತ ಬಹುತ್ವ, ಬಹು ಸಂಸ್ಕೃತಿ, ಬಹುಭಾಷೆಯಿಂದ ಕೂಡಿದ ವೈವಿಧ್ಯಮಯ ದೇಶವಾಗಿತ್ತು. ಈಗ ಅದನ್ನು ದ್ವೇಷ, ದಮನಕಾರಿ, ಹಲ್ಲೆ ಮತ್ತು ಕೊಲೆಗಳು ನಡೆಯುವ ದೇಶವನ್ನಾಗಿ ಮಾಡಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಗಾಂಧಿ ಹತ್ಯೆಯಿಂದ ಗೌರಿ ಹತ್ಯೆಯವರೆಗೂ ಹಂತಕರ ಉದ್ದೇಶ ಭಿನ್ನ ಧ್ವನಿಗಳನ್ನು ಅಡಗಿಸುವುದೇ ಆಗಿದೆ. ಕೊಲ್ಲುವ ಮನಸ್ಥಿತಿ ಇರುವಂತಹ ವ್ಯಕ್ತಿಗಳೇ ದೇಶದ ಸಂಸ್ಕೃತಿ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ಇರೋಮ್ ಹೇಳಿದರು.

ಹೈದರಾಬಾದ್‌ನ ಸಾಮಾಜಿಕ ಅಭಿವೃದ್ಧಿ ಪರಿಷತ್ತಿನ ನಿರ್ದೇಶಕಿ ಕಲ್ಪನಾ ಕಣ್ಣಬೀರನ್ ಮಾತನಾಡಿ, ನೋಟು ನಿಷೇಧದಿಂದ ಧ್ವನಿ ನಿಷೇಧದತ್ತ ಭಾರತ ಜಾರುತ್ತಿದೆ ಎಂದರು.

ತುರ್ತು ಪರಿಸ್ಥಿತಿ ಹೇರಿದಾಗ ದಮನಕಾರಿ ಮತ್ತು ಭಯದ ವಾತಾವರಣ ಇತ್ತು. ಆದರೆ, ಹಲ್ಲೆ, ಕೊಲೆಗಳು ನಡೆಯಲಿಲ್ಲ. ನಮ್ಮ ಸಂವಿಧಾನದ ಬಗ್ಗೆ ಮಾತನಾಡುವುದಕ್ಕೂ ಭಯ ಪಡುವಂತಹ ಸ್ಥಿತಿ ಇದೆ. ಹೋರಾಟಗಾರರು, ಮಹಿಳೆಯರು, ಪತ್ರಕರ್ತರ ಸುರಕ್ಷತೆಗೆ ಧಕ್ಕೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ ಮಾತನಾಡಿ, ದಯವೇ ಧರ್ಮದ ಮೂಲವಯ್ಯ ಎಂದ ನಾಡಿನಲ್ಲಿ ದಮನವೇ ಧರ್ಮದ ಮೂಲವಾಗಿದೆ. ಗೌರಿಯನ್ನು ಕೊಂದ ಆರೋಪಿಗಳು ಸಿಗದಿರಬಹುದು. ಆದರೆ ಅದರ ಹಿಂದಿನ ಶಕ್ತಿಗಳು ಯಾರೆಂದು ಎಲ್ಲರಿಗೂ ಗೊತ್ತಿದೆ ಎಂದರು.

ಆಸ್ತಿಗಾಗಿ ನಡೆದ ಕೊಲೆಯಲ್ಲ

‘ಗೌರಿ ಯಾರ ಜೇಬಿಗೂ ಕೈಹಾಕಿ ಒಂದು ರೂಪಾಯಿ ಕಿತ್ತುಕೊಂಡವಳಲ್ಲ. ಚಳವಳಿ, ಪತ್ರಿಕೆಗಾಗಿ ತನ್ನ ಆಸ್ತಿಯನ್ನೇ ಕಳೆದುಕೊಂಡಿದ್ದಳು. ಹೀಗಾಗಿ ಇದು ಆಸ್ತಿಗಾಗಿ ನಡೆದ ಕೊಲೆಯಲ್ಲ’ ಎಂದು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಅಭಿಪ್ರಾಯಪಟ್ಟರು.

‘ಗಾಂಧಿ ಕೊಂದವರ ಅನುಯಾಯಿಗಳಿಂದ ಈಗ ಹೊಡಿ, ಬಡಿ, ಕೊಲ್ಲು, ಗಡಿಪಾರು ಮಾಡು ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಅಸಹ್ಯ, ಅಸಹಿಷ್ಣುತೆ ಮತ್ತು ಹೇಯ. ಸೌಹಾರ್ದತೆಯ ಮಾತುಗಳಾಡುತ್ತಿದ್ದ ಗೌರಿಯನ್ನು ಸಹಿಸಲಾಗದೆ ಇಂತಹ ಕೃತ್ಯ ಮಾಡಲಾಗಿದೆ’ ಎಂದು ಹೇಳಿದರು.

* ನಾನೂ ಗೌರಿ, ನನ್ನ ಪತಿಯೂ ಗೌರಿ. ಇದನ್ನು ಹೇಳುವುದಕ್ಕಾಗಿಯೇ ಮಣಿಪುರದಿಂದ ಬಂದಿದ್ದೇನೆ

– ಇರೋಮ್ ಶರ್ಮಿಳಾ, ಮಾನವ ಹಕ್ಕು ಹೋರಾಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT