ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕರ ಘಟ್ಟಕ್ಕೆ ಪ್ರಣವ್‌–ಸಿಕ್ಕಿ ರೆಡ್ಡಿ ಜೋಡಿ ಲಗ್ಗೆ

ಶ್ರೀಕಾಂತ್‌, ಪ್ರಣಯ್‌ಗೆ ಸೋಲು; ಭಾರತದ ಸಿಂಗಲ್ಸ್‌ ಹೋರಾಟಕ್ಕೆ ತೆರೆ
Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಟೋಕಿಯೊ: ಭಾರತದ ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಜಪಾನ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಭರವಸೆಯ ಆಟಗಾರ ಕಿದಂಬಿ ಶ್ರೀಕಾಂತ್ ಹಾಗೂ ಯುವ ಆಟಗಾರ ಎಚ್‌.ಎಸ್ ಪ್ರಣಯ್‌ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸೋತಿದ್ದಾರೆ. ಇದರೊಂದಿಗೆ ಸಿಂಗಲ್ಸ್‌ನಲ್ಲಿ ಭಾರತದ ಹೋರಾಟಕ್ಕೆ ತೆರೆಬಿದ್ದಿದೆ. ಪ್ರಣವ್ ಮತ್ತು ಸಿಕ್ಕಿ ಜೋಡಿ ಟೂರ್ನಿಯಲ್ಲಿ ಭಾರತದ ಹೋರಾಟವನ್ನು ಇನ್ನೂ ಜೀವಂತವಾಗಿರಿಸಿದೆ.

ಸೈಯದ್ ಮೋದಿ ಗ್ರ್ಯಾನ್‌ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತದ ಜೋಡಿ 21–18, 9–21, 21–19ರಲ್ಲಿ ಕೊರಿಯಾದ ಸೆವುಂಗ್ ಜಯಾ ಸೆವೊ ಮತ್ತು ಕಿಮ್ ಹಾ ನಾ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.

ಮುಂದಿನ ಪಂದ್ಯದಲ್ಲಿ ಭಾರತದ ಜೋಡಿ ಜಪಾನ್‌ನ ಟಕುರೊ ಹೊಕಿ ಮತ್ತು ಸಕಾಯಾ ಹಿರೋಟಾ ವಿರುದ್ಧ ಆಡಲಿದೆ.

25 ವರ್ಷದ ಗುಂಟೂರಿನ ಆಟಗಾರ ಶ್ರೀಕಾಂತ್‌ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 17–21, 17–21ರಲ್ಲಿ ವಿಶ್ವ ಚಾಂಪಿಯನ್ ವಿಕ್ಟರ್ ಅಕ್ಸೆಲ್‌ಸನ್ ವಿರುದ್ಧ ಸೋತಿದ್ದಾರೆ.

ಇಂಡೊನೇಷ್ಯಾ ಹಾಗೂ ಆಸ್ಟ್ರೇಲಿಯಾ ಓಪನ್‌ಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದ ಶ್ರೀಕಾಂತ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದ ಅಕ್ಸೆಲ್‌ಸನ್ ಎದುರು ಅನಗತ್ಯ ತಪ್ಪುಗಳನ್ನು ಎಸಗಿದರು. 40ನಿಮಿಷದ ಹೋರಾಟದಲ್ಲಿ ಅಕ್ಸೆಲ್‌ಸನ್ ಸಂಪೂರ್ಣ ಮೇಲುಗೈ ಸಾಧಿಸಿದರು.

ಶ್ರೀಕಾಂತ್ ವಿರುದ್ಧದ ಗೆಲುವಿನ ದಾಖಲೆಯನ್ನು ಅಕ್ಸೆಲ್‌ಸನ್ 3–2ಕ್ಕೆ ಹೆಚ್ಚಿಸಿಕೊಂಡರು. ಹಿಂದಿನ ಮೂರು ಪಂದ್ಯಗಳಲ್ಲಿ ಅವರು ಸತತವಾಗಿ ಜಯಗಳಿಸಿದ್ದರು.

ಶ್ರೀಕಾಂತ್‌ ಅವರ ಪ್ರಬಲ ಸ್ಮ್ಯಾಷ್‌ಗಳಿಗೆ ಅಕ್ಸೆಲ್‌ಸನ್ ತಾಳ್ಮೆಯ ಆಟದಿಂದ ಉತ್ತರ ನೀಡಿದರು. ಮೊದಲ ಗೇಮ್‌ನಲ್ಲಿ 1–4ರಲ್ಲಿ ಶ್ರೀಕಾಂತ್ ಹಿಂದೆ ಉಳಿದರು. ಬಳಿಕ  4–4ರಲ್ಲಿ ಅವರು ಸಮಬಲ ಮಾಡಿಕೊಂಡರು. ಆದರೆ ಕೆಲವೇ ನಿಮಿಷಗಳಲ್ಲಿ ಡೆನ್ಮಾರ್ಕ್‌ನ ಆಟಗಾರ 8–6ಕ್ಕೆ ಮುನ್ನಡೆಯನ್ನು ಸಾಧಿಸಿದರು.

ಬೇಸ್‌ಲೈನ್ ಹೊಡೆತಗಳ ವೇಳೆ ಶ್ರೀಕಾಂತ್‌ ತಪ್ಪುಗಳನ್ನು ಎಸಗಿದರು. ನೆಟ್ ಸಮೀಪದಲ್ಲಿ ಆಡುವಾಗ ಅವರು ಪದೇ ಪದೇ ಪಾಯಿಂಟ್ಸ್ ಬಿಟ್ಟುಕೊಟ್ಟರು. ಇದರಿಂದಾಗಿ ಅಕ್ಸೆಲ್‌ಸನ್ 10–7ರಲ್ಲಿ ಮುನ್ನಡೆ ಪಡೆದರು. ಇಬ್ಬರು ಆಟಗಾರರು 16–16ರಲ್ಲಿ ಸಮಬಲ ಮಾಡಿಕೊಂಡರು. ಬಳಿಕ ಡೆನ್ಮಾರ್ಕ್‌ನ ಆಟಗಾರ ಎಲ್ಲಿಯೂ ಮುನ್ನಡೆ ಬಿಟ್ಟುಕೊಡಲಿಲ್ಲ.

ಎರಡನೇ ಗೇಮ್‌ನಲ್ಲಿ ಶ್ರೀಕಾಂತ್ ಕೆಲವು ಉತ್ತಮ ರ‍್ಯಾಲಿಗಳನ್ನು ಆಡಿದರು. ಆದರೆ ಆರಂಭದಲ್ಲಿ ಅವರ ಆಟದಲ್ಲಿ ಇದ್ದ ವೇಗವನ್ನು ಕ್ರಮೇಣ ಕಳೆದುಕೊಂಡರು. ಇದರಿಂದ ಅಂತಿಮ ಹಂತದಲ್ಲಿ ಸುಲಭದಲ್ಲಿ ಪಾಯಿಂಟ್ಸ್ ಬಿಟ್ಟುಕೊಟ್ಟರು.

ಯು.ಎಸ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ಪ್ರಣಯ್‌ 15–21, 14–21ರಲ್ಲಿ ಚೀನಾದ ಎರಡನೇ ಶ್ರೇಯಾಂಕದ ಶಿ ಯೂಕಿಗೆ ಮಣಿದರು. 45 ನಿಮಿಷದ ಹೋರಾಟ ಇದಾಗಿತ್ತು. ನಾಲ್ಕರ ಘಟ್ಟದ ಹೋರಾಟದಲ್ಲಿ ಪ್ರಣಯ್‌ ಸುಲಭದಲ್ಲಿ ಎದುರಾಳಿಗೆ ಪಾಯಿಂಟ್ಸ್ ಬಿಟ್ಟುಕೊಟ್ಟರು.  ಮೊದಲ ಗೇಮ್‌ನಲ್ಲಿ ಇದ್ದ ಚುರುಕುತನವನ್ನು ಎರಡನೇ ಗೇಮ್‌ನಲ್ಲಿ ಅವರು ಮುಂದುವರಿಸಲಿಲ್ಲ. ರಿಟರ್ನ್ಸ್‌ ವೇಳೆ ಅನಗತ್ಯ ತಪ್ಪುಗಳಿಂದ ಎದುರಾಳಿಗೆ ಪಾಯಿಂಟ್ಸ್ ಬಿಟ್ಟುಕೊಟ್ಟರು.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಆರಂಭಿಕ ಸುತ್ತುಗಳಲ್ಲೇ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT