ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬಾ ಬುಡನ್‌ಗಿರಿ ಪ್ರಕರಣ ತ್ವರಿತ ಇತ್ಯರ್ಥಕ್ಕೆ ಸರ್ಕಾರಕ್ಕೆ ಗಡುವು

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯಲ್ಲಿ ಇರುವ ವಿವಾದಾತ್ಮಕ ಗುರು ದತ್ತಾತ್ರೇಯ ಬಾಬಾ ಬುಡನ್‌ಗಿರಿ ಸ್ವಾಮಿ ದರ್ಗಾದಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳುವ ಕುರಿತು ತ್ವರಿತ ನಿರ್ಧಾರ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಬಾಬಾ ಬುಡನ್‌ಗಿರಿ ದರ್ಗಾದ ‘ಸಜ್ಜಾದ ನಶೀನ್’ ಆಗಿರುವ (ಸೂಫಿ ಸಂತರ ಉತ್ತರಾಧಿಕಾರಿ) ಸಯ್ಯದ್‌ ಗೌಸ್‌ ಮೊಹಿಯುದ್ದೀನ್‌ ಷಾ ಖಾದ್ರಿ ಅವರ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯ್‌ ಹಾಗೂ ನವೀನ್‌ ಸಿನ್ಹಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಪ್ರಕರಣವನ್ನು ಇತ್ಯರ್ಥಪಡಿಸಲು ಸರ್ಕಾರಕ್ಕೆ ನಾಲ್ಕು ತಿಂಗಳ ಗಡುವು ವಿಧಿಸಿದೆ.

‘1989ರ ಫೆಬ್ರುವರಿ 25ರಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಹೊರಡಿಸಿರುವ ಆಜ್ಞೆಯ ಯಥಾಸ್ಥಿತಿ ಕಾಪಾಡಬೇಕು ಎಂಬ ಸುಪ್ರೀಂ ಕೋರ್ಟ್‌ನ ಮಾರ್ಚ್‌ 28ರ ಆದೇಶವನ್ನು ಸರ್ಕಾರ ಪಾಲಿಸಿಲ್ಲ’ ಎಂದು ದೂರಿ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಳ್ಳಲು ಪೀಠ ಇದೇ ವೇಳೆ ಅರ್ಜಿದಾರರಿಗೆ ಅನುಮತಿ ನೀಡಿತು.

ಸರ್ಕಾರವು ಸಂಪುಟ ಉಪ ಸಮಿತಿ ರಚಿಸಿದ್ದು, ಈ ಬಗ್ಗೆ ಚರ್ಚಿಸಲು ಇದೇ 25ರಂದು ಸಭೆ ಆಯೋಜಿಸಲಾಗಿದೆ. ಅರ್ಜಿದಾರರನ್ನೂ ಸಭೆಗೆ ಆಹ್ವಾನಿಸಲಾಗಿದ್ದು, ಆಕ್ಷೇಪಣೆ ಮತ್ತು ಬೇಡಿಕೆ ಪಟ್ಟಿ ತರಲು ತಿಳಿಸಲಾಗಿದೆ. ಪ್ರಕರಣದ ಇತ್ಯರ್ಥಕ್ಕಾಗಿ 6 ತಿಂಗಳ ಕಾಲಾವಕಾಶ ನೀಡಬೇಕು ಎಂದು ರಾಜ್ಯದ ಪರ ವಕೀಲ ಬಸವಪ್ರಭು ಪಾಟೀಲ ಮನವಿ ಮಾಡಿದರು. ಮನವಿ ಪುರಸ್ಕರಿಸದ ಪೀಠ 4 ತಿಂಗಳಲ್ಲಿ ಪ್ರಕರಣ ಇತ್ಯರ್ಥಪಡಿಸುವಂತೆ ಸೂಚಿಸಿತು.

ಪ್ರಕರಣದ ವಿವರ: ‘ಈ ಹಿಂದಿನ ಆದೇಶಗಳನ್ನು ಧಿಕ್ಕರಿಸಿರುವ ಸರ್ಕಾರ, ಕ್ಷೇತ್ರದಲ್ಲಿ ಧಾರ್ಮಿಕ ಆಚರಣೆ ನಡೆಸಲು ಹಾಗೂ ಪ್ರತಿ ವರ್ಷ ನಡೆಯುವ ಉರೂಸ್‌ನಲ್ಲಿ ಭಾಗವಹಿಸುವುದನ್ನು ತಡೆಯಲು ಯತ್ನಿಸುತ್ತಿದೆ’ ಎಂದು ದೂರಿ ‘ಸಜ್ಜಾದ ನಶೀನ್’ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT