ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಹ್ನೆ ವಾಪಸ್‌ ನೀಡಿ: ಆಯೋಗಕ್ಕೆ ಮನವಿ

ಶಶಿಕಲಾ ಉಚ್ಛಾಟನೆ ಕುರಿತ ಮಾಹಿತಿ ಸಲ್ಲಿಕೆ
Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಎಐಎಡಿಎಂಕೆ ಪಕ್ಷದ ಎರಡು ಎಲೆಗಳ ಚಿಹ್ನೆಯನ್ನು ವಾಪಸ್‌ ನೀಡುವಂತೆ ಎಡಪ್ಪಡಿ ಕೆ.ಪಳನಿಸ್ವಾಮಿ ಮತ್ತು ಓ. ಪನ್ನೀರ್‌ಸೆಲ್ವಂ ಬಣಗಳು ಒಟ್ಟಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ.

ಶುಕ್ರವಾರ ಈ ಬಗ್ಗೆ  ಆಯೋಗಕ್ಕೆ ಮನವಿ ಸಲ್ಲಿಸಿದ ನಾಯಕರು, ಎರಡೂ ಬಣಗಳು ಈ ಹಿಂದೆ ಪಕ್ಷಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಎಲ್ಲ ಮನವಿಗಳನ್ನು ವಾಪಸ್‌ ಪಡೆಯಲಿವೆ ಎಂದು ತಿಳಿಸಿದರು.

ಎರಡೂ ಬಣಗಳು ವಿಲೀನಗೊಂಡಿದ್ದು, ಎಐಎಡಿಎಂಕೆ ಒಂದೇ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಎರಡು ಎಲೆಗಳ ಚಿಹ್ನೆಯನ್ನು ಬಳಸಲು ಅವಕಾಶ ನೀಡಬೇಕು ಎಂದು ಕೋರಿದರು.

ಸೆಪ್ಟೆಂಬರ್‌ 12ರಂದು ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಆಯೋಗಕ್ಕೆ ಮಾಹಿತಿ ನೀಡಲಾಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿಯಿಂದ ಶಶಿಕಲಾ ಮತ್ತು ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ದಿನಕರನ್‌ ಅವರನ್ನು ಉಚ್ಛಾಟನೆ ಮಾಡಿರುವ ಬಗ್ಗೆ ತಿಳಿಸಲಾಯಿತು.

‘ದಿವಂಗತ ಜೆ. ಜಯಲಲಿತಾ ಅವರೇ ಪಕ್ಷದ ಶಾಶ್ವತ ಪ್ರಧಾನ ಕಾರ್ಯದರ್ಶಿ. ಮುಖ್ಯಮಂತ್ರಿ ಪಳಿನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರು ಜಂಟಿ ಸಂಚಾಲಕ ಮತ್ತು ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಯೋಗಕ್ಕೆ ಈ ಬಗ್ಗೆ ಎಲ್ಲ ಮಾಹಿತಿಗಳನ್ನು ನೀಡಲಾಗಿದೆ’ ಎಂದು ಪಕ್ಷದ ಹಿರಿಯ ನಾಯಕ ಕೆ.ಪಿ. ಮುನುಸ್ವಾಮಿ ತಿಳಿಸಿದ್ದಾರೆ.

ಚಿಹ್ನೆ ವಿವಾದ: ಅ.5ಕ್ಕೆ ವಿಚಾರಣೆ

ಎಐಎಡಿಎಂಕೆ ‍ಪಕ್ಷದ ಚಿಹ್ನೆಯ ವಿವಾದವನ್ನು ಚುನಾವಣಾ ಆಯೋಗ ಅಕ್ಟೋಬರ್ 5ಕ್ಕೆ ವಿಚಾರಣೆ ನಡೆಸಲಿದೆ. ಆರು ತಿಂಗಳ ಹಿಂದೆ ಪಕ್ಷದಲ್ಲಿ ಎರಡು ಬಣಗಳಾದ ನಂತರ ‘ಎರಡು ಎಲೆಗಳ’ ಚಿಹ್ನೆ ಕುರಿತು ವಿವಾದ ಉಂಟಾಗಿತ್ತು.

ಈ ವಿವಾದವನ್ನು ಅಕ್ಟೋಬರ್ 31ರ ಒಳಗಾಗಿ ಪರಿಹರಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಕಳೆದ ವಾರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

ಎರಡೂ ಬಣಗಳಿಗೆ ಹೊಸದಾಗಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಆಯೋಗ ಸೆಪ್ಟೆಂಬರ್ 29ರ ತನಕ ಕಾಲಾವಕಾಶ ನೀಡಿದೆ.

ಎರಡೂ ಬಣಗಳು ಚಿಹ್ನೆ ತಮ್ಮದೆಂದು ಹಕ್ಕು ಸ್ಥಾಪಿಸಿ ಈವರೆಗೆ ಸುಮಾರು 10 ಲಕ್ಷ ದಾಖಲೆಪತ್ರಗಳನ್ನು ಆಯೋಗಕ್ಕೆ ಸಲ್ಲಿಸಿವೆ.

ಓ.ಪನ್ನೀರ್‌ಸೆಲ್ವಂ ಹಾಗೂ ವಿ.ಕೆ. ಶಶಿಕಲಾ ನೇತೃತ್ವದ ಎರಡು ಬಣಗಳು ಪಕ್ಷದ ಚಿಹ್ನೆ ತಮ್ಮದೆಂದು ಹಕ್ಕು ಸಾಧಿಸುತ್ತಿವೆ. ಆದರೆ ಬಳಿಕ ಶಶಿಕಲಾ ವಿರುದ್ಧ ಬಂಡಾಯ ಎದ್ದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಶಾಸಕರ ಗುಂಪು, ಈ ಎರಡೂ ಬಣಗಳನ್ನು ವಿಲೀನಗೊಳಿಸುವುದಾಗಿ ಘೋಷಿಸಿತ್ತು.

ದಿನಕರನ್ ಬಣದ ಸಂಸದೆ ವಾಸಂತಿ ಮುಖ್ಯಮಂತ್ರಿ ಬಣಕ್ಕೆ ಸೇರ್ಪಡೆ

ಚೆನ್ನೈ (ಪಿಟಿಐ): ಟಿಟಿವಿ ದಿನಕರನ್ ಬಣದ ಸಂಸದೆ ಎಂ.ವಾಸಂತಿ, ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ನೇತೃತ್ವದ ಬಣಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಅಮ್ಮ ಸರ್ಕಾರ‘ವನ್ನು (ಎಐಎಡಿಎಂಕೆ ಸರ್ಕಾರ) ಕೆಳಗಿಳಿಸಲು ದಿನಕರನ್ ಅವರು ಡಿಎಂಕೆ ಜತೆ ಕೈಜೋಡಿಸಿದ್ದಾರೆ ಎಂದು ತೆಂಕಾಸಿ ಕ್ಷೇತ್ರದ ಸಂಸದೆ ವಾಸಂತಿ ಆರೋಪಿಸಿದ್ದಾರೆ.

‘ಡಿಎಂಕೆ ಜತೆ ಸೇರಿ ಈ ಸರ್ಕಾರವನ್ನು ಕೆಳಗಿಳಿಸುತ್ತೇನೆ ಎಂದು ಅವರು (ದಿನಕರನ್) ಹೇಳುವುದು ನ್ಯಾಯಯುತವೇ? ಅವರು ಪದೇ ಪದೇ ಇದನ್ನೇ ಹೇಳುತ್ತಿದ್ದಾರೆ. ಪಕ್ಷದ 1.5 ಕೋಟಿ ಕಾರ್ಯಕರ್ತರು ಇದಕ್ಕೆ ವಿರುದ್ಧವಾಗಿದ್ದಾರೆ’ ಎಂದು ತಾವು ಬಣ ಬದಲಾಯಿಸಿದ ಕುರಿತು ವಾಸಂತಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ದಿನಕರನ್ ಬಣದಿಂದ ಹೆಚ್ಚಿನ ಜನರು ಪಳನಿಸ್ವಾಮಿ ಅವರ ಬಣಕ್ಕೆ ಸೇರ್ಪಡೆಯಾಗಬಹುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT