ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮೇಯರ್, ಜೆಡಿಎಸ್‌ಗೆ ಉಪಮೇಯರ್ ಸ್ಥಾನ

ಜೆಡಿಎಸ್‌ ನಾಯಕರ ಜೊತೆ ಮಾತುಕತೆ ನಡೆಸಿದ ಸಚಿವ ರೆಡ್ಡಿ
Last Updated 22 ಸೆಪ್ಟೆಂಬರ್ 2017, 20:32 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

‘ಜೆಡಿಎಸ್‌ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಮೇಯರ್ ಕಾಂಗ್ರೆಸ್‌ಗೆ ಹಾಗೂ ಉಪಮೇಯರ್‌ ಜೆಡಿಎಸ್‌ಗೆ ಎಂಬುದು ತೀರ್ಮಾನವಾಗಿದೆ. ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳನ್ನು ಜೆಡಿಎಸ್‌ನವರು ಕೇಳಿದ್ದಾರೆ’ ಎಂದು ಅವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಮೇಯರ್‌ ಸ್ಥಾನಕ್ಕೆ ನಮ್ಮ ಪಕ್ಷದಲ್ಲಿ ನಾಲ್ಕು ಜನ ಆಕಾಂಕ್ಷಿಗಳಿದ್ದಾರೆ. ಯಾರನ್ನು ಆಯ್ಕೆ ಮಾಡಬೇಕು ಹಾಗೂ ಜೆಡಿಎಸ್‌ನವರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರ ಜತೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮಗೊಳಿಸಲಿದ್ದೇವೆ’ ಎಂದೂ ಹೇಳಿದರು.

ದಾಖಲೆ ಕೊಡಲಿ 

‘ಫೋನ್ ಕದ್ದಾಲಿಕೆ ಬಗ್ಗೆ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಆರೋಪ ಮಾಡುತ್ತಿರುವ ಬಿಜೆಪಿಯ ಆರ್. ಅಶೋಕ್ ದಾಖಲೆಗಳನ್ನು ನೀಡಿದರೆ ಅದರ ಬಗ್ಗೆ ತನಿಖೆಗೆ ಆದೇಶಿಸಬಹುದು. ಮೊದಲು ದಾಖಲೆ ತಂದುಕೊಡುವ ಕೆಲಸ ಮಾಡಲಿ’ ಎಂದು ಸಚಿವ ರೆಡ್ಡಿ ಸವಾಲು ಹಾಕಿದರು.

‘ಸಾಲಮನ್ನಾದ ಮೊತ್ತ ಲಾಲಿಪಪ್‌ಗೂ ಸಾಕಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಟೀಕೆ ಮಾಡಿದ್ದಾರೆ. ನಾವು ಲಾಲಿಪಪ್ ಆದರೂ ಕೊಟ್ಟಿದ್ದೇವೆ. ಅವರು ರೈತರ ಕೈಗೆ ಖಾಲಿ ಚಿಪ್ಪು ಕೊಟ್ಟದ್ದಾರೆ’ ಎಂದೂ ಅವರು ಲೇವಡಿ ಮಾಡಿದರು.

ಸಂಪತ್ ಭೇಟಿ: ಮೇಯರ್ ಸ್ಥಾನದ ಆಕಾಂಕ್ಷಿಯಾಗಿರುವ ದೇವರ ಜೀವನಹಳ್ಳಿ ವಾರ್ಡ್‌ನ ಸದಸ್ಯ ಸಂಪತ್‌ ರಾಜ್‌ ಅವರು ಸಚಿವ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

‘ಟಿಕೆಟ್ ಕೊಟ್ಟರೆ ಮಗಳು ಚುನಾವಣೆಗೆ’

‘ಮಗಳು ಸೌಮ್ಯಾ ಜಯನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೇಳಿದ್ದಾಳೆ. ಟಿಕೆಟ್‌ ಕೊಟ್ಟರೆ ಸ್ಪರ್ಧಿಸುತ್ತಾಳೆ’ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

‘ಅವಳಿಗೆ ರಾಜಕೀಯದಲ್ಲಿ ಆಸಕ್ತಿ ಇದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದು ಹೇಳಿದೆ. ಆದರೆ, ಅವಳು ಸ್ಪರ್ಧಿಸುವ ನಿರ್ಧಾರ ಮಾಡಿದ್ದಾಳೆ’ ಎಂದರು.

* ಕೋರ್ಟ್‌ನಲ್ಲಿ ಸಹಜವಾಗಿ ತಡೆಯಾಜ್ಞೆ ಸಿಗುತ್ತದೆ. ತಡೆಯಾಜ್ಞೆ ಸಿಕ್ಕ ತಕ್ಷಣ ಯಡಿಯೂರಪ್ಪ ವಿರುದ್ಧದದ ಪ್ರಕರಣ ಮುಗಿಯಿತು ಎಂದಲ್ಲ

–ರಾಮಲಿಂಗಾರೆಡ್ಡಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT