ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ರೊಟ್ಟಿ, ಘಮಘಮ ಪಲ್ಯ ಸಿದ್ಧ

Last Updated 23 ಸೆಪ್ಟೆಂಬರ್ 2017, 8:25 IST
ಅಕ್ಷರ ಗಾತ್ರ

ಮೈಸೂರು: ಸೊಸೆ ಬದನೆಕಾಯಿ, ಈರುಳ್ಳಿ ಹೆಚ್ಚಿ ಕೊಟ್ಟರೆ, ಅತ್ತೆ ಒಲೆ ಹಚ್ಚಿ ಒಗ್ಗರಣೆ ಹಾಕಿದರು. ಸೊಸೆ ಲಗುಬಗೆಯಿಂದ ಮಸಾಲೆ ಅರೆದು ತರುವುದರೊಳಗೆ ಬದನೆಕಾಯಿ ಬೆಂದಿತ್ತು. ಮಸಾಲೆಯನ್ನು ಪಲ್ಯದ ಪಾತ್ರೆಗೆ ಸುರಿದು ಬೇಯಿಸಿ ಪಕ್ಕಕ್ಕಿಟ್ಟು ಅಕ್ಕಿ ರೊಟ್ಟಿ ತಟ್ಟಲು ಸಿದ್ಧವಾದರು ಅತ್ತೆ–ಸೊಸೆಯಂದಿರು. ಕೆಲವರ ಮುಖದಲ್ಲಿ ನಗು, ಕೆಲಸದಲ್ಲಿ ಧಾವಂತ ಕಂಡು ಬಂದರೆ. ಕೆಲವರ ಮುಖದಲ್ಲಿ ಅಡುಗೆ ಹೇಗಾಗುತ್ತದೋ ಎಂಬ ಆತಂಕ.

ಮೈಸೂರಿನ ಸ್ಕೌಟ್ಸ್‌ ಅಂಡ್‌ ಗೈಡ್‌ ಮೈದಾನದಲ್ಲಿ ಶುಕ್ರವಾರ ನಡೆದ ‘ಅತ್ತೆ–ಸೊಸೆ’ ಜೋಡಿಯ ಅಡುಗೆ ಸ್ಪರ್ಧೆಯಲ್ಲಿ ಕಂಡ ದೃಶ್ಯವಿದು. 6 ಜೋಡಿ ಅತ್ತೆ–ಸೊಸೆ ಪಾಲ್ಗೊಂಡಿದ್ದರು. ಚಿಕ್ಕ ಚಿಕ್ಕ ಬದನೆಕಾಯಿಗಳನ್ನು ಇಡಿಯಾಗಿಯೇ ಬೇಯಿಸಿ ಮಾಡಿದ ಪಲ್ಯ, ಹೋಳು ಮಾಡಿ ಒಗ್ಗರಣೆ ಹಾಕಿದ್ದು, ದೊಡ್ಡ ಬದನೆಕಾಯಿ ಸುಟ್ಟು ಅದಕ್ಕೆ ಮಸಾಲೆ ರುಬ್ಬಿ ಹಾಕಿದ ಬಗೆಬಗೆಯ ಪಲ್ಯ ಘಮ–ಘಮವೆನ್ನುತ್ತ ನೋಡುಗರ ಬಾಯಲ್ಲಿ ನೀರೂರಿಸಿದವು. ಪಲ್ಯಕ್ಕೆ ಹಸಿಮೆಣಸು, ಒಣಮೆಣಸು, ದಪ್ಪ ಮೆಣಸು, ಟೊಮೆಟೊ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹಾಕಿ ರುಚಿ ವೈವಿಧ್ಯ ತರಲು ಸ್ಪರ್ಧಿಗಳು ಯತ್ನಿಸಿದರೆ, ಕೊಡಗಿನ ಜೋಡಿ ಮಾಡಿದ ಪಲ್ಯಕ್ಕೆ ‘ಗಾಂಧಾರಿ ಮೆಣಸು’ ರುಚಿ ಹೆಚ್ಚಿಸಿತ್ತು.

ಅಕ್ಕಿ ರೊಟ್ಟಿ ಮಾಡುವ ವಿಧಾನಗಳೂ ಭಿನ್ನವಾಗಿದ್ದವು. ಅಕ್ಕಿ ಹಿಟ್ಟನ್ನು ಬೇಯಿಸಿ ರೊಟ್ಟಿ ತಯಾರಿಸಿದವರು ಕೆಲವರಾದರೆ, ಕೆಲವರು ಅನ್ನ ಮಾಡಿ ಅದನ್ನು ರೊಟ್ಟಿಯಂತೆ ತಟ್ಟಿದರು. ಮಣೆಯ ಮೇಲೆ ಲಟ್ಟಿಸಿದವರೂ ಇದ್ದರು. ಕೆಲವರು ಬೆಂಕಿಯ ಮೇಲೆ ನೇರವಾಗಿ ಬೇಯಿಸಿದಾಗ ರೊಟ್ಟಿ ಪೂರಿಯಂತೆ ಉಬ್ಬಿತು.

ಮಾಡಿದ ಅಡುಗೆಯನ್ನು ಆಕರ್ಷಕವಾಗಿ ಜೋಡಿಸಿಡುವುದರಲ್ಲೂ ಪೈಪೋಟಿ ಕಂಡು ಬಂತು. ಸ್ಪರ್ಧಿಗಳ ಸಂಖ್ಯೆ ಕಡಿಮೆಯಿದ್ದರೂ ನೋಡಲು ಬರುವ ಕುತೂಹಲಿಗಳ ಸಂಖ್ಯೆ ಹೆಚ್ಚಿತ್ತು. ಕೆಲವರು ಸ್ಪರ್ಧೆಗೆ ಬರುವ ತರಾತುರಿಯಲ್ಲಿ ಸೌಟನ್ನೇ ಮರೆತು ಬಂದಿದ್ದರು. ಇನ್ನಷ್ಟು ಮಂದಿ ಒಲೆ ಹಚ್ಚಲು ಬೆಂಕಿಪೊಟ್ಟಣವನ್ನೇ ತಂದಿರಲಿಲ್ಲ. ಕೆಲವರು ಸಾಮಗ್ರಿ ಅಕ್ಕಪಕ್ಕದವರಲ್ಲಿ ಕೇಳಿ ಪಡೆದು ಸಮಾಧಾನಪಟ್ಟರು. ಬಿಟ್ಟು ಬಂದ ಸಾಮಗ್ರಿ ತರಲು ಮನೆಯವರನ್ನು ಓಡಿಸಿದರು!

ಸ್ಪರ್ಧೆ 40 ನಿಮಿಷ ತಡವಾಗಿ ಆರಂಭವಾಯಿತು. ಆರಂಭದಲ್ಲಿ ವಿದ್ಯುತ್‌ ಸಮಸ್ಯೆಯೂ ಕಂಡು ಬಂತು. ಸ್ವಚ್ಛತೆ, ಹೊಂದಾಣಿಕೆ, ಪ್ರಸ್ತುತ ಪಡಿಸುವುದು, ರುಚಿ ಹಾಗೂ ಸಮಯ ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅಂಕಗಳನ್ನು ನೀಡಲಾಯಿತು. ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆಯ ದಾಕ್ಷಾಯಿಣಿ, ಬಿಸಿಯೂಟದ ಮುಖ್ಯ ಅಡುಗೆಯವರಾದ ವಸಂತಾ ಹಾಗೂ ಗೃಹಿಣಿ ಲತಾ ತೀರ್ಪುಗಾರರಾಗಿದ್ದರು. ಆಹಾರ ಮೇಳ ಉಪಸಮಿತಿ ಅಧ್ಯಕ್ಷ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT