ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಪೂರ್ಣ ಯೋಜನೆ ವಿರೋಧಿಸಿ ಪ್ರತಿಭಟನೆ

Last Updated 23 ಸೆಪ್ಟೆಂಬರ್ 2017, 8:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಒತ್ತಡ ಉಂಟು ಮಾಡುವ ಮಾತೃಪೂರ್ಣ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಳಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ. ನಾಗರತ್ನಮ್ಮ, ‘ಈ ಯೋಜನೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಮಾತ್ರವಲ್ಲದೆ ಯೋಜನೆಯು ನಿಜವಾದ ಫಲಾನುಭವಿಗಳಿಗೆ ತಲುಪಿಸುವುದು ಸಹ ಕಷ್ಟವಾಗುತ್ತದೆ.

ರಾಜ್ಯದಲ್ಲಿ ಒಟ್ಟು 61 ಸಾವಿರ ಅಂಗನವಾಡಿ ಕೇಂದ್ರಗಳಿವೆ. ಅವುಗಳಲ್ಲಿ 35 ಸಾವಿರ ಅಂಗನವಾಡಿಗಳು ಮಾತ್ರ ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿವೆ. ಹಲವಾರು ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ಪೀಠೋಪಕರಣಗಳ ವ್ಯವಸ್ಥೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಪೋಷಣೆ ಮಾಡುವುದೇ ಕಷ್ಟ. ಗರ್ಭಿಣಿ ಮತ್ತು ಬಾಣಂತಿಯರಿಗೆ ಆಹಾರ ಪೂರೈಸುವುದು ಅಸಾಧ್ಯ’ ಎಂದು ತಿಳಿಸಿದರು.

‘ಈ ಯೋಜನೆ ಅನುಷ್ಠಾನಕ್ಕೆ ಮುನ್ನ ಅಂಗನವಾಡಿ ಕಾರ್ಯಕರ್ತೆಯರು, ಫಲಾನುಭವಿ ಮಹಿಳೆಯರು, ಸಲಹಾ ಸಮಿತಿ ಸದಸ್ಯರು ಮತ್ತು ಶಾಸಕರೊಂದಿಗೆ ಚರ್ಚೆ ನಡೆಸಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳೇ ಈ ತೀರ್ಮಾನ ತೆಗೆದುಕೊಂಡಿದ್ದಾರೆ.

ಆದರೆ ಹಲವು ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳು ಮನೆಗಳಿಂದ 2 ಕಿ.ಮೀ. ದೂರದಲ್ಲಿವೆ. ಅಲ್ಲಿನ ಬಾಣಂತಿ ಮತ್ತು ಗರ್ಭಿಣಿಯರು ನಿತ್ಯ ನಡೆದುಕೊಂಡು ಬಂದು ಅಂಗನವಾಡಿ ಕೇಂದ್ರಗಳಲ್ಲಿ ಊಟ ಮಾಡುವುದು ಕಷ್ಟ. ನಿತ್ಯ ಕೆಲಸಕ್ಕೆ ಹೋಗುವ ಗರ್ಭಿಣಿಯರ ಸಂಖ್ಯೆ ದೊಡ್ಡದಿದೆ. ಆ ಮಹಿಳೆಯರು ಮಧ್ಯಾಹ್ನದ ಊಟಕ್ಕಾಗಿ ಅಂಗನವಾಡಿ ಕೇಂದ್ರಗಳಿಗೆ ಬರುವುದಿಲ್ಲ’ ಎಂದು ಹೇಳಿದರು.

‘ಅಂಗನವಾಡಿಗೆ ಗರ್ಭಿಣಿ, ಬಾಣಂತಿಯರು ಬಂದು ಊಟ ಮಾಡದಿದ್ದರೆ ಸಿದ್ಧಪಡಿಸಿದ ಅಡುಗೆ ವ್ಯರ್ಥವಾಗುತ್ತದೆ. ಅಷ್ಟಕ್ಕೂ ಅಂಗನವಾಡಿಯಲ್ಲಿ ಮಕ್ಕಳ ಎದುರು ಗರ್ಭಿಣಿ, ಬಾಣಂತಿಯರು ಕುಳಿತು ಹೇಗೆ ಊಟ ಮಾಡಲು ಸಾಧ್ಯ. ಈ ಯೋಜನೆಯಲ್ಲಿ ಅನೇಕ ಸಮಸ್ಯೆಗಳಿವೆ. ಆದ್ದರಿಂದ ಇದು ಯಶಸ್ಸುಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು’ಎಂದು ಒತ್ತಾಯಿಸಿದರು.

‘ಗರ್ಭಿಣಿ, ಬಾಣಂತಿಯರ ಆರೋಗ್ಯ ಇವತ್ತು ಹಿಂದಿಗಿಂತಲೂ ತುಂಬಾ ಸೂಕ್ಷ್ಮವಾಗಿದೆ. ಹೀಗಾಗಿ ಜನರು ಕೂಡ ಅಂಗನವಾಡಿಗೆ ಬಂದು ಊಟ ಮಾಡಲು ಒಪ್ಪುವುದಿಲ್ಲ. ಈವರೆಗೆ ಅಂಗನವಾಡಿಯಲ್ಲಿ ಗರ್ಭಿಣಿ, ಬಾಣಂತಿಯರಿಗೆ ದಿನಕ್ಕೆ ₨7 ಪಡಿತರ ಪದಾರ್ಥಗಳನ್ನು ನೀಡಲಾಗುತ್ತಿದೆ. ಇದೀಗ ಮಾತೃಪೂರ್ಣ ಯೋಜನೆಗಾಗಿಯೇ ಆ ಮೊತ್ತವನ್ನು ₨21ಕ್ಕೆ ಏರಿಕೆ ಮಾಡಲಾಗಿದೆ. ಆದರೆ ಊಟ ನೀಡುವ ಬದಲು ದಿನಕ್ಕೆ ₨21ಪಡಿತರ ಪದಾರ್ಥಗಳನ್ನು ನೀಡಬೇಕು ಎನ್ನುವುದು ನಮ್ಮ ಒತ್ತಾಯ’ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT