ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆಗತಿಯಲ್ಲಿ ರಸ್ತೆ ದುರಸ್ತಿ

Last Updated 23 ಸೆಪ್ಟೆಂಬರ್ 2017, 8:51 IST
ಅಕ್ಷರ ಗಾತ್ರ

ಪಾವಗಡ: ಅವೈಜ್ಞಾನಿಕ, ಆಮೆಗತಿಯ ರಸ್ತೆ ಕಾಮಗಾರಿಯಿಂದಾಗಿ ವಾಹನ ಸವಾರರು, ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಪಟ್ಟಣದ ತುಮಕೂರು ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಎತ್ತರದ ರಸ್ತೆ ವಿಭಜಕ ಅಳವಡಿಸಲಾಗಿದೆ. ಇದರಿಂದ ರಸ್ತೆ ದಾಟುವ ವಾಹನ ಸವಾರರಿಗೆ ಎದುರಿನಿಂದ ಬರುವ ವಾಹನಗಳು ಕಾಣದೆ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಕಳೆದ ಕೆಲ ದಿನಗಳಲ್ಲಿ ಪಟ್ಟಣದ ತುಮಕೂರು ರಸ್ತೆಯಲ್ಲಿ ನಾಲ್ಕು ಅಪಘಾತಗಳು ನಡೆದಿವೆ.

ರಸ್ತೆ ವಿಭಜದ ಎತ್ತರವನ್ನು ಕಡಿಮೆ ಮಾಡಿದಲ್ಲಿ ಅಪಘಾತಗಳು ಕಡಿಮೆಯಾಗುತ್ತವೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಚಳ್ಳಕೆರೆ, ಹಿಂದೂಪುರ ಕ್ರಾಸ್ ಬಳಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿರುವುದರಿಂದ ಇದು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಸಾಕಷ್ಟು ಮಂದಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಎರಡೂ ವೃತ್ತಗಳಲ್ಲಿಯೂ ಮೂರು ರಸ್ತೆ ಸೇರುತ್ತವೆ. ಹೀಗಾಗಿ ತಜ್ಞರ ಸಲಹೆಯಂತೆ ವೃತ್ತ ನಿರ್ಮಿಸಿ ಅಪಘಾತಗಳಾಗದಂತೆ ತಡೆಯಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.

ಪಟ್ಟಣದ ಹೃದಯ ಭಾಗ ಎನಿಸಿರುವ ಶನಿಮಹಾತ್ಮ ವೃತ್ತದಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಹಲ ತಿಂಗಳುಗಳಿಂದಲೂ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ದೇಗುಲಕ್ಕೆ ಬರುವ ಭಕ್ತರು, ವಾಹನಗಳು ಎತ್ತ ಹೋಗಬೇಕು ಎಂದು ಅರಿಯದೆ ಅಡ್ಡಾ ದಿಡ್ಡಿಯಾಗಿ ಸಂಚರಿಸುತ್ತವೆ. ಶೀಘ್ರ ಕಾಮಗಾರಿ ಪೂರ್ಣಗೊಂಡಲ್ಲಿ ಜನರಿಗೆ ಅನುಕೂಲವಾಗುತ್ತದೆ. ತ್ವರಿತವಾಗಿ ಕಾಮಗಾರಿ ಮುಗಿಸುವತ್ತ ಈ ಬಗ್ಗೆ ಕೆ ಷಿಪ್, ಸದ್ಭವ್ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬುದು ಪಟ್ಟಣ ವಾಸಿಗಳ ದೂರು.

ಬಳ್ಳಾರಿ ರಸ್ತೆಯಲ್ಲಿ ಈ ಹಿಂದೆ ಇದ್ದ ಚರಂಡಿಯನ್ನು ಹಾಗೆಯೇ ಬಿಟ್ಟು, ರಸ್ತೆ ಪಕ್ಕದಲ್ಲಿ ಹೊಸದಾಗಿ ಮತ್ತೊಂದು ಚರಂಡಿ ನಿರ್ಮಿಸಲಾಗುತ್ತಿದೆ. ಇದರಿಂದ ಪಾದಾಚಾರಿ ರಸ್ತೆ, ಮುಖ್ಯ ರಸ್ತೆ ಕಿರಿದಾಗುತ್ತದೆ. ಜೊತೆಗೆ ದ್ವಿಚಕ್ರ ವಾಹನಗಳು ಸೇರಿದಂತೆ ಬಾರಿ ವಾಹನಗಳ ನಿಲುಗಡೆಗೆ ಮುಖ್ಯ ರಸ್ತೆಯನ್ನೇ ಬಳಸಿಕೊಳ್ಳಬೇಕು. ಹೀಗಾಗಿ ಸಂಚಾರಿ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಹಳೆಯ ಚರಂಡಿ ಸ್ಥಳದಲ್ಲಿಯೇ ಹೊಸದಾಗಿ ಚರಂಡಿ ನಿರ್ಮಿಸಿದಲ್ಲಿ ಹೆಚ್ಚಿನ ಸ್ಥಳಾವಕಾಶ ಸಿಗುತ್ತದೆ. ರಸ್ತೆಯೂ ಅಗಲವಾಗುತ್ತದೆ.

ಪೊಲೀಸ್ ಠಾಣೆ, ತಹಶೀಲ್ದಾರ್ ಕಚೇರಿ ಮುಂಭಾಗ ರಸ್ತೆ ಅಗಲವನ್ನು ಕಡಿಮೆ ಮಾಡಲಾಗಿದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ, ಕಟ್ಟಡಗಳನ್ನು ಒಡೆಯದೆ, ಮನ ಬಂದಂತೆ ಓರೆಯಾಗಿ ಚರಂಡಿ ನಿರ್ಮಿಸಲಾಗುತ್ತಿದೆ ಎಂದು ಕೆಲ ಪುರಸಭೆ ಸದಸ್ಯರು ಆರೋಪಿಸಿದ್ದಾರೆ.

ಗಡುವು ಮುಗಿದಿದ್ದರೂ ಕಾಮಗಾರಿ ನಿಧಾನವಾಗಿ ನಡೆಸಲಾಗುತ್ತಿದೆ. ಪಾದಾಚಾರಿ ರಸ್ತೆ ಇಲ್ಲದೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪಾದಾಚಾರಿಗಳು ಜೀವದ ಅಂಗು ತೊರೆದು ಬಸ್, ಲಾರಿಗಳೊಂದಿಗೆ ಮುಖ್ಯ ರಸ್ತೆಯಲ್ಲಿಯೇ ಸಂಚರಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT