ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗು ರಂಗಿನ ನಗರಕ್ಕೆ ಹಸಿರು ಮುಡಿ

Last Updated 23 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಇಲ್ಲಿಯ ಪ್ರಕೃತಿಯೇ ಹಾಗೆ. ಹವಾಮಾನ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್. ಸದಾ ಬಿಸಿಲು ಧಗೆ. ಆದರೆ ಮಳೆ ಮಾತ್ರ ಹೇರಳ. ಕೆಲವೊಮ್ಮೆ ಬಿಸಿಲು ಹೆಚ್ಚಾದಷ್ಟೂ ಮಳೆಯೂ ಹೆಚ್ಚು. ಪ್ರತ್ಯೇಕವಾದ ಮಳೆಗಾಲ ಎಂಬುದಿಲ್ಲ. ಆಗಾಗ್ಗೆ ಮಳೆ ಸುರಿಯುವುದಕ್ಕೇನೂ ಕೊರತೆಯಿಲ್ಲ. ಹಾಗಾಗಿ ರಸ್ತೆಗಳಲ್ಲಿ ದೂಳು ಎಂಬುವುದಿಲ್ಲ. ರಸ್ತೆಯಲ್ಲಿ ಮಳೆ ನೀರು ಶೇಖರಣೆಯಾಗಿ ಮಳೆ ತರುವ ಸಾಮಾನ್ಯ ಆತಂಕಗಳಿಗೆ ಆಸ್ಪದವಾಗಲಿ ಅಥವಾ ಭಾರಿ ಮಳೆಯಿಂದ ನಮ್ಮ ದೇಶದಲ್ಲಾಗುವಂತೆ ಜೀವನ ಅಸ್ತವ್ಯಸ್ತವಾಗುವುದಾಗಲೀ ಇರುವುದಿಲ್ಲ. ಇವೇ ಸಿಂಗಪುರದ ಹೆಗ್ಗಳಿಕೆ.

1965ರಲ್ಲಿ ಸ್ವತಂತ್ರ ರಾಷ್ಟ್ರವಾದ ಸಿಂಗಪುರ ಜೌಗು ಪ್ರದೇಶ ಆಗಿದ್ದ ಸ್ಥಿತಿಯಿಂದ ಐಷಾರಾಮಿ ದೇಶವಾಗುವವರೆಗೆ ನಡೆದಿರುವ ಅಭಿವೃದ್ಧಿ ಒಂದು ಯಶೋಗಾಥೆಯೇ ಸರಿ.

ಹೇರಳವಾದ ಮಳೆ ಎಂದ ಮೇಲೆ, ಎಲ್ಲಾ ಕಡೆ ಕಂಡುಬರುವ ಹಸಿರಿನ ಸಿರಿ ಇಲ್ಲಿಯ ವೈಶಿಷ್ಟ್ಯ. ಇಲ್ಲಿರುವ ಪ್ರೇಕ್ಷಣೀಯ ಸ್ಥಳಗಳು ಕೆಲವೇ ಕೆಲವು - ಮರ್‌ಲಯನ್ ದೃಶ್ಯಾವಳಿ, ಬೃಹತ್ತಾದ ಮರೀನಾ ಬೇ ಅದರ ಕೆಳಗಡೆ ಇರುವ ಸಂತೋಷ ದ್ವೀಪ ಮುಂತಾದವು. ಪ್ರತಿ ಪ್ರವಾಸಿಗನಲ್ಲೂ ಒಬ್ಬ ಅನ್ವೇಷಕ ಇರಬೇಕು, ಇರುತ್ತಾನೆ ಕೂಡ. ಅನ್ವೇಷಕರ ಕಣ್ಣಿನಿಂದ ಅವಲೋಕಿಸಿದರೆ ಮಾತ್ರ, ಆ ಪ್ರವಾಸಿ ಸ್ಥಳದ ನಿಜ ಸ್ವರೂಪ ಕಣ್ಣಿಗೆ ಕಟ್ಟುತ್ತದೆ.

ಪ್ರವಾಸ ಕೈಗೊಳ್ಳುವುದು ಎಂದರೆ, ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದಷ್ಟೇ ಅಲ್ಲ. ಆ ಸ್ಥಳದ ಮಹತ್ವವನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಕೂಡ ಇರುತ್ತದೆ. ಆ ದೇಶದ ಜನರಿಂದ ನಾವು ಕಲಿಯುವುದೇನಾದರೂ ಇದೆಯೇ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಸಿಂಗಪುರದಂತಹ ಸ್ಥಳದಲ್ಲಿ ಎಲ್ಲಾ ಕಡೆ ಕಣ್ಣಿಗೆ ರಾಚುವ ಗಗನಚುಂಬಿ ಕಟ್ಟಡಗಳಿಗೆ ಸರಿಸಮನಾಗಿ ಅವುಗಳೊಡನೆ ಸ್ಪರ್ಧಿಸುವಂತಹ ಎತ್ತರವಾದ ಮರಗಳೂ ಸಾಕಷ್ಟು ಸಂಖ್ಯೆಯಲ್ಲಿ ಕಾಣುತ್ತವೆ; ರಸ್ತೆ ಬದಿಗಳಲ್ಲಿ, ಉದ್ಯಾನಗಳಲ್ಲಿ, ಮುಕ್ತವಾದ ಪ್ರದೇಶಗಳಲ್ಲಿ. ಊರ ಮಧ್ಯದಲ್ಲಿ ಹರಿಯುವ ಸೆರಂಗೂನ್ ನದಿಯ ಇಕ್ಕೆಲಗಳಲ್ಲಿ ಬೃಹತ್ ಮರಗಳು ಎಷ್ಟಿವೆ ಎಂದರೆ, ಅಲ್ಲಿ ನದಿ ಇರುವುದೇ ಗೊತ್ತಾಗುವುದಿಲ್ಲ. ಆ ನದಿಯ ನೈರ್ಮಲ್ಯವನ್ನು ಅತ್ಯಂತ ಜತನದಿಂದ ಕಾಪಾಡಿಕೊಳ್ಳಲಾಗಿದೆ.

ಅಧಿಕ ಮಳೆಯಿಂದಾಗಿ, ಮರಗಳು ಬೆಳೆದಿವೆ. ಅವುಗಳನ್ನು ಅಷ್ಟೇ ಮುತುವರ್ಜಿಯಿಂದ ಸಂರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾನೇ ಕಣ್ಣಾರೆ ಕಂಡೆ. ರಸ್ತೆ ಬದಿಯ ಮರಗಳಿಗೆ ಹಾನಿ ಮಾಡುವಂತಿಲ್ಲ. ಹೂವಿನ ಗಿಡಗಳನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ.

ವಸತಿ ಪ್ರದೇಶವೆಂದರೆ ಹೆಚ್ಚಾಗಿ ಅಪಾರ್ಟ್‌ಮೆಂಟ್‌ಗಳು. ಅದರ ಸುತ್ತಮುತ್ತ ಮರಗಳನ್ನು ಬೆಳೆಸಿ ಅವುಗಳ ನಿರ್ವಹಣೆ ನಿರಂತರವಾಗಿ, ಸಮರ್ಪಕವಾಗಿ ನಡೆಯುವಂತೆ ಮಾಡಲಾಗಿದೆ. ಮರಗಳನ್ನು ಬೆಳೆಸುವುದು ಸರ್ಕಾರ ಹಾಗೂ ಸರ್ಕಾರಿ ಸಂಸ್ಥೆಗಳು. ಅವುಗಳನ್ನು ಕಾಪಾಡುವ ಹೊಣೆ ಸಾರ್ವಜನಿಕರದ್ದು. ಐವತ್ತು ವರ್ಷಗಳ ಹಿಂದೆ ಆರಂಭವಾದ ‘ಮರ ಬೆಳೆಸಿ’ ಅಭಿಯಾನ ಇಂದಿಗೂ ನಡೆಯುತ್ತಿದೆ.

ಸಿಂಗಪುರದ ಅಭಿವೃದ್ಧಿ ಪಥದಲ್ಲಿ, ಅನೇಕ ಮೈಲಿಗಲ್ಲುಗಳಿವೆ. ಅದರಲ್ಲಿ ರಸ್ತೆ ಹಾಗೂ ಫ್ಲೈಓವರ್‌ಗಳ ನಿರ್ಮಾಣವೂ ಒಂದು. ರಸ್ತೆ ಅಭಿವೃದ್ಧಿ ಸಮಯದಲ್ಲಿ ಅಡ್ಡಬಂದ ಪುರಾತನ ಮರಗಳನ್ನು ಕಡಿದುಹಾಕಿಲ್ಲ. ಅವುಗಳನ್ನು ಸಂರಕ್ಷಿಸಲಾಗಿದೆ. ಇಲ್ಲವೇ ಬಹಳ ಜಾಗರೂಕತೆಯಿಂದ ಮತ್ತೊಂದೆಡೆ ಸ್ಥಳಾಂತರಿಸಲಾಗಿದೆ. ಇವುಗಳ ವಿವರಗಳನ್ನು ಅಲ್ಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಚಿತ್ರಗಳ ಸಮೇತ ನೋಡಬಹುದಾಗಿದೆ. ಈ ವಸ್ತುಸಂಗ್ರಹಾಲಯದ ಸನಿಹದಲ್ಲೇ ಇರುವ ಫೋರ್ಟ್ ಕ್ಯಾನಿಂಗ್ ಉದ್ಯಾನದ ಹಸಿರು ರಾಶಿಯನ್ನು ಕಣ್ಣುತುಂಬಿಕೊಳ್ಳುತ್ತಲೇ ಇರೋಣವೆನ್ನಿಸುತ್ತದೆ. ಅಲ್ಲಿನ ಸಸ್ಯರಾಶಿಯ ಮಧ್ಯೆ ಕಾಣುವ ಸಾಂಬಾರ್ ಪದಾರ್ಥದ ಗಿಡಗಳ ಮಾದರಿಯಲ್ಲಿ ಏಲಕ್ಕಿ, ಮೆಣಸು ಮುಂತಾದ ಗಿಡಗಳ ಗುಚ್ಛವನ್ನು ಅವುಗಳ ವೈಜ್ಞಾನಿಕ ಮಾಹಿತಿಯೊಂದಿಗೆ ಬೆಳಸಿರುವುದು ಕುತೂಹಲಕಾರಿಯಾಗಿದೆ. ಅಲ್ಲಿ ಒಂದೊಂದು ಮರದ ಸಸ್ಯ ಶಾಸ್ತ್ರೀಯ ಮಾಹಿತಿಯಲ್ಲಿ, ಮರಗಳ ಮಹತ್ವವನ್ನು ವಿವರಿಸಲಾಗಿದೆ.

ಅಧಿಕ ಉಷ್ಣ ಪ್ರದೇಶವಾದರೂ, ಸಿಂಗಪುರದ ಉದ್ಯಾನದಲ್ಲಿ ಪೆಂಗ್ವಿನ್ ಪಕ್ಷಿಗಳ ಆಟ, ಪಾಂಡಾಗಳ ಮುದ್ದು ಚೇಷ್ಟೆ, ಪೋಲಾರ್ ಕರಡಿಗಳು ಎಂದಿನಂತೆ ಉಲ್ಲಾಸದಿಂದ ಇರುವುದನ್ನು ಕಾಣಬಹುದು. ಕಾರಣ ಆಯಾ ಪ್ರಾಣಿಪಕ್ಷಿಗಳ ದೇಶೀಯ ಹವಮಾನವನ್ನು ಸೃಷ್ಟಿಮಾಡಿ, ಅವುಗಳನ್ನು ಕಾಪಾಡಲಾಗುತ್ತಿದೆ. ಪೋಲಾರ್ ಕರಡಿಗಳು ಇರುವ ಸ್ಥಳದಲ್ಲಿ ಗಾಜಿನ ಸುತ್ತುವರಿಯನ್ನು ನಿರ್ಮಿಸಿ ಅವುಗಳ ಮೂಲ ತಾಪಮಾನ ಉಂಟುಮಾಡಿರುವುದು ಅನುಕರಣೀಯ ವಿಧಾನವೇ ಸರಿ. ಸುತ್ತುವರಿದ ಗಾಜಿನ ಸ್ಥಳವಂತೂ ಮಂಜುಗಡ್ಡೆಯ ಹಿಮ ಪ್ರದೇಶವನ್ನು ಹೋಲುತ್ತದೆ. ಅಲ್ಲಿನ ಬಿಸಿಲಿಗೆ ಅದರ ಬಳಿ ಹೋದರೆ ಹಿಂದಿರುಗಿ ಬರಲು ಮನಸ್ಸಾಗುವುದಿಲ್ಲ (ದೆಹಲಿಯ ಮೃಗಾಲಯದಲ್ಲಿ ಹಿಮಾಲಯದ ಹುಲಿ ಕರಡಿಗಳ ಮೇಲೆ ಬೇಸಿಗೆಯಲ್ಲಿ ನೀರು ಸುರಿಯುತ್ತಾರೆ ಎಂಬ ಸುದ್ದಿಯನ್ನು ಕೇಳಿದ್ದೇವೆ).

ಜುರಾಂಗ್ ಉದ್ಯಾನ ಒಂದು ಪಕ್ಷಿಧಾಮ. ಎಷ್ಟೊಂದು ಬಗೆಯ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಿರುತ್ತವೆ! ಅವುಗಳ ಗಾನವನ್ನು ಕೇಳುವುದೇ ಒಂದು ಸೊಗಸಾದ ಅನುಭವ. ನನಗಂತೂ ಅಲ್ಲಿಯ ಪಕ್ಷಿ ಸಂಗ್ರಹದಷ್ಟೇ ಆಕರ್ಷಕವಾಗಿ ಕಂಡದ್ದು ಪಕ್ಷಿಗಳ ಆಶ್ರಯಕ್ಕಾಗಿ ಬೆಳೆಸಿರುವ ವನ. ನೈಸರ್ಗಿಕ ವಾತಾವರಣದಲ್ಲೇ ಪಕ್ಷಿಗಳ ಕಲರವ ಮತ್ತಷ್ಟು ಆಹ್ಲಾದವನ್ನುಂಟು ಮಾಡುತ್ತದೆ.

ಬೃಹತ್ತಾದ ಸಸ್ಯೋದ್ಯಾನ ನಯನ ಮನೋಹರವಾದ ಹಸಿರು ತಾಣವಾಗಿದ್ದು, ಯುನೆಸ್ಕೊ ಮನ್ನಣೆಗೆ ಪಾತ್ರವಾಗಿದೆ. ಹಸಿರಿನ ಲೋಕವನ್ನೇ ಅಲ್ಲಿ ಸೃಷ್ಟಿಸಲಾಗಿದೆ. ಅದನ್ನು ಸಂರಕ್ಷಿಸಿರುವ ಪರಿ ಬೆರಗು ಮೂಡಿಸುತ್ತದೆ. ಇದು ಬರೀ ವನವಲ್ಲೋ ಎಂಬ ಗಾನ ತಾನಾಗಿಯೇ ಹೊರಹೊಮ್ಮುವಂತಿದೆ. ಈ ಉದ್ಯಾನದೊಳಗಿರುವ ಆರ್ಕಿಡ್ ಗಾರ್ಡನ್ ಅತ್ಯಾಕರ್ಷಕವಾದುದು. ಬಗೆ ಬಗೆಯ ಆರ್ಕಿಡ್ ತಳಿಗಳನ್ನು ಕಾಣುವುದರ ಜೊತೆಗೆ ದೇಶ ವಿದೇಶಗಳ ಗಣ್ಯರು ಅಲ್ಲಿಗೆ ಭೇಟಿ ಕೊಟ್ಟಾಗ ನೆಟ್ಟಿರುವ ಮರಗಳನ್ನು ಕಾಣಬಹುದು. ಆ ಗಣ್ಯರ ಹೆಸರಿನಲ್ಲಿ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಜಗತ್ತಿನ ಉದ್ದವಾದ ನದಿಗಳಾದ ನೈಲ್, ಗಂಗಾ, ಅಮೆಜಾನ್, ಮಿಸ್ಸಿಸಿಪಿ, ಕಾಂಗೋ ಹಾಗೂ ಯಾಂಗಿ ಇವುಗಳ ಪರಿಸರ ವಿಧಾನಗಳನ್ನು ಅಳವಡಿಸಿಕೊಂಡು ಅಲ್ಲಿ ಕಂಡುಬರುವ ವಿಶಿಷ್ಟ ಅಪರೂಪದ ಪ್ರಾಣಿ ಸಂಕುಲವನ್ನು ಸಂರಕ್ಷಿಸಿರುವ ಕಾಳಜಿಯನ್ನು ತೋರಲಾಗಿದೆ. ಹರಿಯುವ ನದಿಯಲ್ಲಿಯೇ ಚಲಿಸಿದಂತೆ ಭಾಸವಾಗುವ ಯಾಂತ್ರಿಕೃತ ದೋಣಿ ವಿಹಾರದ ವಿನೂತನ ಅನುಭವ ಕಾಲುವೆಯಲ್ಲೇ ಸಿಗುವಂತೆ ಮಾಡಲಾಗಿದೆ. ಮಾಂಡಿ ಸರೋವರದ ದಡದಲ್ಲಿ ಅರಣ್ಯವನ್ನು ನಿರ್ಮಿಸಿ, ಪ್ರಾಣಿಗಳನ್ನು ನೈಸರ್ಗಿಕ ವಾತಾವರಣದಲ್ಲೇ ಬದುಕಲು ಅನುವು ಮಾಡಿಕೊಟ್ಟಿರುವ ಪರಿ ಅನನ್ಯ. ಮೃಗಾಲಯವನ್ನು ವೀಕ್ಷಿಸಿದರೆ ನಿಜವಾದ ಕಾಡನ್ನು ಹೊಕ್ಕಂತಹ ಚೇತೋಹಾರಿ ಅನುಭವವುಂಟಾಗುತ್ತದೆ.

ಸಿಂಗಪುರದಲ್ಲಿರುವ ಭವ್ಯ ಆಕೃತಿ ಮರಿನಾ ಬೇ ಬಳಿ ಅದಕ್ಕೆ ಹೊಂದಿಕೊಂಡಂತೆ ಇರುವ ಗಾರ್ಡನ್ ಬೈ ದಿ ಬೇ ಜಗತ್ತಿನ ಅಗ್ರಮಾನ್ಯ ಹತ್ತು ಒಳಾಂಗಣ ತೋಟಗಳಲ್ಲಿ ಒಂದಾಗಿದ್ದು ಚಿತ್ತಾಕರ್ಷಕ ಮೇರು ಉದ್ಯಾನವಾಗಿದೆ. ಮಹತ್ವಪೂರ್ಣವಾದ, ಉಳಿಯುವಂತಹ ಸಸ್ಯಗಳ ಆಗರದೊಂದಿಗೆ ವಾಸ್ತುಶಿಲ್ಪದ ವಿನ್ಯಾಸದಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳ (ಅಂಟಾರ್ಟಿಕ ಹೊರತುಪಡಿಸಿ) ಮುಖ್ಯವಾದ ಐದು ಲಕ್ಷ ಸಸ್ಯ ಪ್ರಭೇದಗಳ ಕೌತುಕವನ್ನು ಒಳಗೊಂಡಿದೆ. ಅಂತೆಯೇ ಗಗನಚುಂಬಿ ಮರಗಳ (ಸೂಪರ್ ಟ್ರೀ) ಮಧ್ಯೆ ನಿರ್ಮಿಸಿರುವ ಸ್ಕೈ ವಾಕ್‌ನ ನಡಿಗೆಯು ವಿನೂತನವಾಗಿದ್ದು ಎಲ್ಲಾ ಸಸ್ಯ ಪ್ರಭೇದದ ವೈಮಾನಿಕ ಸಮೀಕ್ಷೆ ಮಾಡಬಹುದು. ಅದರೊಳಗೆ ನಿರ್ಮಿಸಿರುವ ಪುಷ್ಪಗುಮ್ಮಟದಲ್ಲಿ (ಫ್ಲವರ್ ಡೋಮ್) 35 ಮೀಟರ್ ಎತ್ತರದ ಒಳಾಂಗಣ ಜಲಪಾತವನ್ನು ಕಾಣಬಹುದು.

ಅಧಿಕವಾಗುತ್ತಿರುವ ಪರಿಸರ ಮಾಲಿನ್ಯ, ಜನಸಂದಣಿ, ಮೂಲ ಸೌಕರ್ಯಗಳ ಕೊರತೆ, ನೀರಿನ ಲಭ್ಯತೆ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು, ಜಗತ್ತಿನ ಎಷ್ಟು ನಗರಗಳು ವಾಸಕ್ಕೆ ಯೋಗ್ಯ ಎಂಬ ಚರ್ಚೆ ಈಗ ನಡೆಯುತ್ತಿದೆ. ಅದಕ್ಕಾಗಿ ದೀರ್ಘಕಾಲೀನ ಯೋಜನೆಗಳನ್ನು ರೂಪಿಸಲಾಗುತ್ತಿವೆ. ಈ ಪ್ರಶ್ನೆಯನ್ನು ನಮ್ಮ ದೇಶದ ಸಂದರ್ಭದಲ್ಲಿಯೂ ಕೇಳಬೇಕಾಗಿದೆ. ದೆಹಲಿಯೂ ಸೇರಿದಂತೆ, ನಮ್ಮ ದೇಶದ ಕೆಲವು ನಗರಗಳು 2020ರ ವೇಳೆಗೆ ವಾಸಕ್ಕೆ ಯೋಗ್ಯವಾಗಿರುವವೇ ಎಂಬ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸುತ್ತಿದ್ದಾರೆ. ನಾವು ಎಂತಹ ನಗರಗಳನ್ನು ನಿರ್ಮಿಸುತ್ತಿದ್ದೇವೆ ಎಂಬ ಪ್ರಶ್ನೆ ಅದರಲ್ಲಿ ಅಡಗಿದೆ.

ಸಿಂಗಪುರ ಕುರಿತು ಬಿಬಿಸಿ ವಾಹಿನಿಯವರು ತಯಾರಿಸಿರುವ ಸಾಕ್ಷ್ಯಚಿತ್ರದಲ್ಲಿ ಅದರ ನಿರ್ದೇಶಕ ಡೇವಿಡ್ ಅಟೆನ್ ಬರೋ ಅವರು ‘ಇವೆಲ್ಲದರೊಂದಿಗೆ, ಅದ್ವಿತೀಯ ಸಾಧನೆ ಎಂದರೆ, ಸಿಂಗಪುರವನ್ನು ಮುಂದಿನ ಪೀಳಿಗೆಗೂ ವಾಸಕ್ಕೆ ಯೋಗ್ಯವನ್ನಾಗಿ ಮಾಡಿರುವುದು’ ಎಂಬ ಹೇಳಿಕೆ ಸಿಂಗಪುರದ ಬಗ್ಗೆ ಎಲ್ಲವನ್ನೂ ವಿಶದಪಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT