ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಡ- ಬಲಗಳೆರಡನ್ನೂ ಸಮಪ್ರಮಾಣದಲ್ಲಿ ಬಳಸಿ...’

Last Updated 23 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ದತ್ತ ಮತ್ತು ನಾನು ಒಂದೇ ವರ್ಷ ಹುಟ್ಟಿದವರು ಮಾತ್ರವಲ್ಲ, ಒಂದೇ ಬಗೆಯ ಹಿನ್ನೆಲೆಯುಳ್ಳವರು. ಪುಟ್ಟ ಊರಿನ ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದು, ಅನಂತರ ಇಂಜಿನಿಯರಿಂಗ್‌ ಮಾಡಿ, ಸಾಫ್ಟ್‌ವೇರ್‌ ಜಗತ್ತಿನಲ್ಲಿ ಕತ್ತೆ ದುಡಿತಗೈದು, ಹಲವು ದೇಶಗಳನ್ನು ಸುತ್ತಾಡಿ, ಕನ್ನಡ ಸಾಹಿತ್ಯದ ಪ್ರೀತಿಯನ್ನು ಇಟ್ಟುಕೊಂಡು, ಸದ್ಯಕ್ಕೆ ಬೆಂಗಳೂರಿನಲ್ಲಿ ಬಾಳುತ್ತಿರುವವರು. ನಾನು ಬಳ್ಳಾರಿ ಜಿಲ್ಲೆಯವನಾದರೆ, ಅವನು ಚಿಕ್ಕಮಗಳೂರಿನವನು.

ನಮ್ಮ ಬಾಲ್ಯಗಳು ಹೇಗೆ ಒಂದೇ ಬಗೆಯ ರಾಗಾಲಾಪನೆಯಿಂದ ಕೂಡಿದ್ದವು ಎನ್ನುವುದಕ್ಕೆ ಒಂದು ಉದಾಹರಣೆಯನ್ನು ಕೊಡಬಲ್ಲೆ. ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ನನ್ನನ್ನು ಪ್ರತಿವರ್ಷವೂ ಶಾಲಾಪ್ರವಾಸಕ್ಕೆಂದು ಹತ್ತಿರದ ಹಂಪಿಗೆ ಕರೆದುಕೊಂಡು ಹೋಗುತ್ತಿದ್ದರು.ಅದಕ್ಕೆಂದೇ ಹತ್ತು ರೂಪಾಯಿ ಕೈಯೆತ್ತಿ ಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದರು. ಅದಕ್ಕೆ ಕಾರಣವಾದ ಬಡತನದ ಬಿಸಿ ಪುಟ್ಟ ಬಾಲಕನಾದ ನನಗೆ ಅರ್ಥವಾಗುವುದಾದರೂ ಹೇಗೆ? ‘ಕೈ ಕಾಲು ಮುರುಕೊಂಡಿರೋ ಈ ಹಾಳು ಹಂಪಿಯ ಶಿಲ್ಪಗಳನ್ನು ಎಷ್ಟು ಸಲ ಅಂತ ನೋಡೋದು? ಒಮ್ಮೆಯಾದರೂ ದೂರದ ಬೇಲೂರು-ಹಳೇಬೀಡಿಗೆ ಕರೆದುಕೊಂಡು ಹೋಗಬಾರದಾ?’ ಎಂದು ಆಡಿಕೊಳ್ಳುತ್ತಿದ್ದ ಸಂಗತಿಯನ್ನೊಮ್ಮೆ ಅವನೊಡನೆ ಹಂಚಿಕೊಂಡಿದ್ದೆ. ತಕ್ಷಣ ಅವನು ‘ಅಯ್ಯೋ ಮಾರಾಯ, ನಾವೂ ಹಂಗೇ ಗೊತ್ತಾ! ಪ್ರತಿ ವರ್ಷ ಅದೇ ಬೇಲೂರು- ಹಳೇಬೀಡಿಗೆ ಕರಕೊಂಡು ಹೋಗುತ್ತಿದ್ದರು. ‘ಆ ದಪ್ಪ-ದಪ್ಪ ಅವಯವದ ಶಿಲಾಬಾಲಿಕೆಯರನ್ನ ಎಷ್ಟು ಸಲ ಅಂತ ನೋಡೋದು, ದೂರದ ಹಂಪಿಗೆ ಒಮ್ಮೆಯಾದರೂ ಕರೆದುಕೊಂಡು ಹೋಗಬಾರದಾ’ ಅಂತ ಸಿಟ್ಟು ಮಾಡಿಕೊಳ್ಳುತ್ತಿದ್ವಿ’ ಎಂದು ಹೇಳಿದ್ದ. ಸ್ನೇಹ ಬೆಸೆಯಲು ಇಂತಹ ಒಂದೆರಡು ಸಮಾನ ಮನೋಭಾವದ ಮಾತುಗಳು ಸಾಕಲ್ಲವೆ?

ನಾನು ಸುಮಾರು ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ವಾಸ ಮಾಡಿ, ಅನಂತರ 2003ರ ಹೊತ್ತಿಗೆ ಸ್ವಯಂ ನಿರ್ಧಾರದಿಂದ ಬೆಂಗಳೂರಿಗೆ ವಾಪಸಾಗಿದ್ದೆ. ಅಲ್ಲಿದ್ದರೆ ಕನ್ನಡದಲ್ಲಿ ಬರೆಯಲು ಅನುಕೂಲವಾಗುವ ವಾತಾವರಣ ಇರುವುದಿಲ್ಲ ಎಂಬುದು ನನ್ನ ದಿಟ್ಟ ನಿಲುವಾಗಿತ್ತು. ಸುಮಾರು ಆರು ವರ್ಷಗಳ ನಂತರ ದತ್ತ ಕೂಡಾ ಅದೇ ಮನೋಭಾವದಿಂದ ಅಮೆರಿಕವನ್ನು ತೊರೆದು ಬೆಂಗಳೂರಿಗೆ ವಾಪಸಾಗಲು ಸಿದ್ಧವಾಗಿದ್ದ. ಆದರೆ ಆ ಹೊತ್ತಿಗೆ ನನ್ನ ಮನಸ್ಸು ಬೇರೆ ರೀತಿಯಲ್ಲಿ ಆಲೋಚಿಸಲು ಶುರು ಮಾಡಿತ್ತು. ‘ಮುಂಬಯಿಯಲ್ಲಿದ್ದುಕೊಂಡು ಚಿತ್ತಾಲರು ಸಾಹಿತ್ಯ ರಚಿಸಲಿಲ್ಲವೆ? ಅದಕ್ಕೂ ಹೆಚ್ಚಿನ ಸಾಧನೆ ಏನು ಮಾಡಬಹುದು? ಬಹುಶಃ ನಾನು ದುಡುಕಿಬಿಟ್ಟೆನೇನೋ...’ ಎಂದು ಹಲಬುತ್ತಿದ್ದೆ. ಅದೇ ವಿಷಯವನ್ನು ನಾನು ದತ್ತನಿಗೆ ಹೇಳಿ, ಅವನ ‘ಮರಳಿಗೂಡಿಗೆ’ ಉತ್ಸಾಹವನ್ನು ಕುಗ್ಗಿಸಲು ನೋಡಿದೆ. ಮುಂಬಯಿ ಬೇರೆ, ಅಮೆರಿಕ ಬೇರೆ. ಮುಂಬಯಿಯ ಗಣೇಶ ಕನ್ನಡದ ಬದಲು ಮರಾಠಿಯಲ್ಲಿ ಚಂದ್ರನಿಗೆ ಶಾಪ ಕೊಡ್ತಾನೆ ಅಷ್ಟೇ! ಅಂತಹ ವ್ಯತ್ಯಾಸವೇನೂ ಆಗಲ್ಲ. ಆದರೆ ಅಮೆರಿಕದಲ್ಲಿ ಯಾರಿಗೂ ಗಣೇಶ ಅಂದ್ರೂನೂ ಗೊತ್ತಿಲ್ಲ, ಶಾಪ ಅಂದ್ರೂನೂ ಗೊತ್ತಿಲ್ಲ’ ಎಂದು ತನ್ನನ್ನು ಖಚಿತವಾಗಿ ಸಮರ್ಥಿಸಿಕೊಂಡಿದ್ದ. ಮತ್ತೆಂದೂ ನಾನು ನಮ್ಮ ನಿರ್ಧಾರದ ಬಗ್ಗೆ ಸಂಶಯ ಪಡಲು ಹೋಗಲಿಲ್ಲ.

ಮೊದಲ ಬಾರಿ ಧಾರವಾಡ ಸಾಹಿತ್ಯ ಸಂಭ್ರಮ ನಡೆದಾಗ ಕನ್ನಡ ಸಾಹಿತ್ಯಲೋಕದಲ್ಲಿ ಸಂದಿಗ್ಧ ಪರಿಸ್ಥಿತಿ ಏರ್ಪಟ್ಟಿತ್ತು. ಹಲವು ಕನ್ನಡದ ಮನಸುಗಳು ಆ ಸಮಾರಂಭದ ವಿರುದ್ಧವಾಗಿ ಚಳವಳಿ ನಡೆಸಿದ್ದವು. ಬಹುತೇಕ ಸಾಹಿತಿಗಳಿಗೆ ಪ್ರತ್ಯೇಕವಾಗಿ ಕರೆ ಮಾಡಿಯೂ ಮತ್ತು ಹಲವಾರು ಪ್ರಚೋದನಕಾರಿ ಲೇಖನಗಳನ್ನು ಪ್ರಕಟಿಸುವುದರ ಮೂಲಕವೂ ಕಾರ್ಯಕ್ರಮವನ್ನು ಬಹಿಷ್ಕರಿಸಿ ಸಮಾರಂಭ ನಡೆಯದಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಡ ಹೇರುತ್ತಿದ್ದರು. ಹಿರಿಯರಾದ ಗಿರಡ್ಡಿ ಗೋವಿಂದರಾಜ ಮತ್ತು ಕಲಬುರ್ಗಿಯವರು ಆ ಕಾರ್ಯಕ್ರಮದ ನೇತೃತ್ವ ವಹಿಸಿರುವುದರಿಂದ ನನಗೆ ಅದರಲ್ಲಿ ಭಾಗವಹಿಸುವುದಕ್ಕೆ ಯಾವುದೇ ಬಗೆಯ ಅನುಮಾನಗಳು ಇರಲಿಲ್ಲ. ಆದರೆ ದತ್ತ ಮಾತ್ರ ಅದನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡು ಧಾರವಾಡಕ್ಕೆ ಬರಲಿಲ್ಲ.

ಆದರೆ ಸಮಾರಂಭ ಬಹು ಯಶಸ್ವಿಯಾಗಿ ನಡೆಯಿತು. ಕನ್ನಡದ ನೂರಾರು ಸಾಹಿತಿಗಳು ಒಂದೆಡೆ ಸೇರಿ, ಸಾವಿರಾರು ಓದುಗರ ಜೊತೆಗೆ ಸಾಹಿತ್ಯದ ಚರ್ಚೆಯನ್ನು ಮಾಡಿದ ಗೋಷ್ಠಿಗಳು ಅವಿಸ್ಮರಣೀಯವೆನ್ನುವಂತಿದ್ದವು. ಅವೆಲ್ಲವೂ ಪತ್ರಿಕೆಯಲ್ಲಿ ವಿಶೇಷ ಪ್ರಶಂಸೆಯೊಡನೆ ಪ್ರಕಟವಾದವು. ಕೊನೆಯ ಒಂದು ಗೋಷ್ಠಿಯಲ್ಲಿ ಹಿರಿಯ ವಿಮರ್ಶಕರಾದ ಜಿ.ಎಸ್‌. ಆಮೂರ ಅವರು ಬಹು ಖಾರವಾದ ಅಭಿಪ್ರಾಯವೊಂದನ್ನು ಹೇಳಿದರು. ‘ಕಾರ್ಪೊರೇಟ್‌ ಹಿನ್ನೆಲೆಯಿಂದ ಬಂದಿರುವ ಸಾಹಿತಿಗಳೆಲ್ಲರೂ ತಾವು ಗಳಿಸಿದ ಹಣದ ಮೂಲಕ ಸುಲಭದ ಖ್ಯಾತಿಯನ್ನು ಗಳಿಸಲು ಸಾಹಿತ್ಯ ಲೋಕಕ್ಕೆ ಬಂದಿದ್ದಾರೆ’ ಎನ್ನುವ ಅರ್ಥದ ಮಾತುಗಳನ್ನು ಹೇಳಿ, ಸಾಹಿತ್ಯ ಲೋಕದಲ್ಲಿ ಯಾವ ಪಂಗಡದವರು ಬರೆಯಬೇಕು ಮತ್ತು ಯಾವ ಪಂಗಡದವರು ಬರೆಯಕೂಡದು ಎಂಬ ಹೊಸ ನಿಯಮಾವಳಿಯನ್ನು ಘೋಷಿಸಿಬಿಟ್ಟರು. ಆ ಮಾತುಗಳಿಂದ ನನಗೆ ಸಹಜವಾಗಿಯೇ ಕೋಪ ಬಂದಿತ್ತು. ಅಲ್ಲಿದ್ದ ಸ್ನೇಹಿತರೊಡನೆ ಊಟದ ಸಮಯದಲ್ಲಿ ಅಥವಾ ಕಾಫಿಯ ಸಮಯದಲ್ಲಿ ನನ್ನ ಅಸಮಾಧಾನವನ್ನು ತೋಡಿಕೊಂಡಿದ್ದೆ. ಯಾರಿಗೂ ಹಿರಿಯರನ್ನು ಸಂಪೂರ್ಣವಾಗಿ ವಿರೋಧಿಸುವ ಧೈರ್ಯವಿಲ್ಲದ ಕಾರಣ, ತಿಪ್ಪೆ ಸಾರಿಸುವ ಮಾತುಗಳನ್ನಾಡಿ ನನಗೆ ಸಮಾಧಾನ ಮಾಡಿದ್ದರು. ಆದರೆ ನಿಜಕ್ಕೂ ನನಗೆ ಪೂರ್ಣ ಸಮಾಧಾನವಾಗುವಂತಹ ಲೇಖನ ಒಂದೆರಡು ದಿನಗಳಲ್ಲಿ ‘ಪ್ರಜಾವಾಣಿ’ಯಲ್ಲಿ ಬಂತು. ಬೆಂಗಳೂರಲ್ಲಿ ಕುಳಿತು ದತ್ತ ಬರೆದಿದ್ದ.

ಈ ಸಂಕುಚಿತ ಮನೋಭಾವದ ನಿರ್ಣಯವನ್ನು ನಖಶಿಖಾಂತ ವಿರೋಧಿಸಿ ಬರೆದ ದತ್ತನ ಲೇಖನ ಮತ್ತೊಂದು ಆರೋಗ್ಯಕರ ಚರ್ಚೆಯನ್ನು ಹುಟ್ಟುಹಾಕಿತ್ತು. ತೀಕ್ಷ್ಣ ಭಾಷೆಯಲ್ಲಿ ಬರೆದ ಆ ಲೇಖನ ಅದೆಷ್ಟು ಶಕ್ತಿಯುತವಾಗಿತ್ತೆಂದರೆ, ಅದಕ್ಕೆ ವಿರೋಧವನ್ನು ವ್ಯಕ್ತಪಡಿಸುವ ಸಾಹಸಕ್ಕೆ ಯಾರೂ ಹೋಗಲಿಲ್ಲ. ಸಾಹಿತ್ಯ ಸಮಾರಂಭದ ಅಧ್ಯಕ್ಷರಾದ ಗಿರಡ್ಡಿಯವರೇ ಆಮೂರರ ನಿಲುವನ್ನು ಖಂಡಿಸಿ, ದತ್ತನ ಲೇಖನವನ್ನು ಮೆಚ್ಚಿ ಪತ್ರ ಬರೆದಿದ್ದರು. ವಿಶೇಷವೆಂದರೆ ಅನಂತರದ ದಿನಗಳಲ್ಲಿ ನಮ್ಮನ್ನು ಭೇಟಿಯಾದ ಆಮೂರ ಅವರೇ ‘ನನ್ನ ಮಾತನ್ನು ನೀವು ತಪ್ಪಾಗಿ ಗ್ರಹಿಸಿದಿರಿ’ ಎಂದು ಯಾವತ್ತಿನ ಪ್ರೀತಿ- ವಿಶ್ವಾಸದಲ್ಲಿ ಹೇಳಿದ್ದರು.

ಮುಂದಿನ ವರ್ಷದ ಸಾಹಿತ್ಯ ಸಮಾರಂಭಕ್ಕೆ ದತ್ತ ನನ್ನೊಡನೆ ಧಾರವಾಡಕ್ಕೆ ಬಂದ. ಗೆಳೆಯನ ಕಾಲೆಳೆಯುವ ಹುಮ್ಮಸ್ಸಿನಲ್ಲಿ ‘ಈ ಸಲ ಬಹಿಷ್ಕಾರ ಇಲ್ವೇನೋ?’ ಎಂದು ಕೇಳಿದ್ದೆ. ‘ಪರಿಸರದ ಒತ್ತಡಕ್ಕೆ ಮಣಿದು ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಮನುಷ್ಯನ ಸಹಜ ಗುಣ. ಆದರೆ ಅಲ್ಲಿ ನಡೆದ ಸಂಗತಿಗಳ ವಿವರವನ್ನೆಲ್ಲಾ ಪತ್ರಿಕೆಯಲ್ಲಿ ಓದಿದ್ದೇನೆ. ಅವು ಅಪ್ಪಟ ಸಾಹಿತ್ಯ ಪ್ರೀತಿಯ ಚರ್ಚೆಗಳು. ಹಾಗಿದ್ದ ಮೇಲೂ ನನ್ನ ಹಳೆಯ ನಿಲುವನ್ನೇ ಗಟ್ಟಿ ಹಿಡಿದು ಹಟ ಮಾಡಲು ಕೂತರೆ ಇಷ್ಟೆಲ್ಲಾ ಸಾಹಿತ್ಯವನ್ನು ಓದಿಕೊಂಡು ಏನುಪಯೋಗ?’ ಎಂದು ಸ್ಪಷ್ಟವಾಗಿ ಹೇಳಿದ್ದ. ಈ ಹಿಂದೆ ಸಮಾರಂಭವನ್ನು ವಿರೋಧಿಸಿದ ಹಲವಾರು ಸಾಹಿತಿಗಳು ಎರಡನೆಯ ಬಾರಿಯೂ ಮಗುಮ್ಮಾಗಿ ಮನೆಯಲ್ಲಿ ಕುಳಿತಿದ್ದು ಗಮನಿಸಿದಾಗ, ಅವಶ್ಯಕತೆ ಇದ್ದರೆ ಬದಲಾಗುವ ದತ್ತನ ಆರೋಗ್ಯಕರ ಮನಸ್ಸಿನ ಮಹತ್ವ ನನಗೆ ಅರ್ಥವಾಗಿತ್ತು.

ದತ್ತನದು ಯಾವತ್ತೂ ವಸ್ತುನಿಷ್ಠ ನಿಲುವು. ಒಮ್ಮೆ ನನ್ನ ಎಡ ದವಡೆಗಳು ವಿಪರೀತ ನೋವನ್ನು ಕೊಡುತ್ತಿದ್ದವು. ಆ ನೋವಿನಲ್ಲಿಯೇ ಯಾವುದೋ ಕಾರಣಕ್ಕೆ ಅವನನ್ನು ಭೇಟಿಯಾಗಲು ಹೋಗಿದ್ದೆ. ಆಗ ನನ್ನ ಕಷ್ಟವನ್ನು ಹೇಳಿಕೊಂಡಿದ್ದೆ. ‘ಯಾವತ್ತೂ ಒಂದೇ ದವಡೆಯಲ್ಲಿ ಆಹಾರವನ್ನು ಅಗಿಬೇಡ. ಎಡ- ಬಲ ದವಡೆಗಳೆರಡನ್ನೂ ಸಮಪ್ರಮಾಣದಲ್ಲಿ ಬಳಸಿ ಆಹಾರವನ್ನು ಅಗಿದರೆ ನಿನ್ನ ಆರೋಗ್ಯವೂ ಚೆನ್ನಾಗಿರುತ್ತೆ, ಹಲ್ಲಿನ ಆರೋಗ್ಯವೂ ಚೆನ್ನಾಗಿರುತ್ತೆ’ ಎಂದು ಹೇಳಿದ್ದ. ಕನ್ನಡ ಸಾಹಿತ್ಯಲೋಕದ ವರ್ತಮಾನ ಪರಿಸ್ಥಿತಿಗಳನ್ನು ಚೆನ್ನಾಗಿ ಬಲ್ಲ ನನಗೆ ಅವನ ಮಾತುಗಳ ಒಳಾರ್ಥ ತಿಳಿಯುವುದು ಕಷ್ಟವೇನೂ ಆಗಿರಲಿಲ್ಲ. ಆ ನೋವಿನಲ್ಲಿಯೂ ನಕ್ಕಿದ್ದೆ.

ಕಾವ್ಯದಿಂದ ಬರವಣಿಗೆಯನ್ನು ಆರಂಭಿಸಿ, ಸಂಪೂರ್ಣವಾಗಿ ಕಾದಂಬರಿ ಕ್ಷೇತ್ರಕ್ಕೆ ಹೊರಳಿಕೊಂಡವರು ಬಹಳ ಅಪರೂಪ. ದತ್ತ ಮೊದಲು ಬರವಣಿಗೆಗೆ ಆಯ್ದುಕೊಂಡಿದ್ದು ಕವಿತೆಯನ್ನು. ಅನಂತರ ಪೂರ್ಣವಾಗಿ ಗದ್ಯಕ್ಕೆ ಹೊರಳಿಕೊಂಡ. ಆ ಕಾರಣಕ್ಕಾಗಿಯೇ ಅವನ ಗದ್ಯಕ್ಕೆ ಪದ್ಯದ ಲಯವಿದೆ. ‘ದ್ವೀಪವ ಬಯಸಿ’ ಕಾದಂಬರಿಯು ಅಪ್ಪಟ ಅಮೆರಿಕ ಜಗತ್ತಿನ ಕಥನವಾದರೂ, ಅಲ್ಲಿ ಬಳಸಿದ ಕನ್ನಡದ ಭಾಷೆಯು ಎಲ್ಲಿಯೂ ಪರಕೀಯತೆ ಓದುಗನಿಗೆ ತಾಕದಷ್ಟು ಸುಕೋಮಲವಾಗಿದೆ. ಅವನ ಮೊದಲ ಎರಡು ಗದ್ಯ ಬರವಣಿಗೆಯನ್ನು ಛಂದ ಪುಸ್ತಕದ ಮೂಲಕ ಪ್ರಕಟಿಸಿದ ಹೆಮ್ಮೆ ನನ್ನದು. ಅಂಕಣ ಸಂಕಲನಕ್ಕೆ ‘ಹಾ. ಮಾ. ನಾಯಕ’ ಪ್ರಶಸ್ತಿಯೂ, ಕಾದಂಬರಿಗೆ ‘ಸೂರ್ಯನಾರಾಯಣ ಚಡಗ ಪ್ರಶಸ್ತಿ’ಯೂ ಬಂದಿವೆ. ಈಗ ‘ನರಹಳ್ಳಿ’ ಪ್ರಶಸ್ತಿಯು ಗೆಳೆಯನಿಗೆ ಸಿಗುತ್ತಿರುವುದು ಸಹಜವಾಗಿಯೇ ನನಗೆ ಸಂತೋಷವನ್ನು ತಂದಿದೆ.

‘ಮಸುಕು ಬೆಟ್ಟದ ದಾರಿ’ ಎನ್ನುವ ಕಾದಂಬರಿ ದತ್ತನ ಮಹತ್ವಾಕಾಂಕ್ಷೆಯ ರಚನೆ. ‘ಮನೋಹರ ಗ್ರಂಥ ಮಾಲಾ’ದಿಂದ ಪ್ರಕಟವಾಗಿದೆ. ಅದನ್ನು ಬರೆದು ಮುಗಿಸಿದ ನಂತರ ನನಗೆ, ಗುರುಪ್ರಸಾದ ಕಾಗಿನೆಲೆ ಮತ್ತು ವಿವೇಕ ಶಾನಭಾಗರಿಗೆ ಮೊದಲ ಓದಿಗಾಗಿ ಹಸ್ತಪ್ರತಿ ಕಳುಹಿಸಿಕೊಟ್ಟಿದ್ದ. ನಮಗೆಲ್ಲಾ ಆ ಕೃತಿ ಹಲವು ಕಾರಣಕ್ಕೆ ಇಷ್ಟವಾಗಿತ್ತು. ವಿವೇಕ ಶಾನಭಾಗರಿಗೆ ಕಾದಂಬರಿಯ ಸಂರಚನೆ ಮತ್ತು ಲಯತಪ್ಪದ ನಿರೂಪಣಾ ಶೈಲಿ ಬಹಳ ಮೆಚ್ಚುಗೆಯಾಗಿ, ಒಳ್ಳೆಯ ಪತ್ರವನ್ನು ಅವನಿಗೆ ಬರೆದಿದ್ದರು. ಗೆಳೆಯರ ಪ್ರೀತಿಯ ನುಡಿಗಳಿಂದ ದತ್ತನಿಗೆ ಸಹಜವಾಗಿಯೇ ಖುಷಿಯಾಗಿತ್ತು. ಅದಕ್ಕಾಗಿ ಒಂದು ಪಾರ್ಟಿ ಕೊಟ್ಟಿದ್ದ. ಸಂತೋಷದ ಲಹರಿಯಲ್ಲಿ ತೇಲುತ್ತಿದ್ದ ದತ್ತ ಆವತ್ತು ಕಾಲಮೇಲೆ ಕಾಲು ಹಾಕಿಕೊಂಡು ಕುಳಿತು, ಒಂದಿಷ್ಟು ಬಿಯರ್ ಕುಡಿದು, ಕಣ್ಣಲ್ಲಿ ಹೆಮ್ಮೆಯ ಮಿಂಚನ್ನು ಸೂಸುತ್ತಾ ಕುಳಿತಚಿತ್ರ ಕಣ್ಣ ಮುಂದಿದೆ. ಅಂತಹ ಖುಷಿಯ ಗಳಿಗೆಗಳು ಅವನ ಬದುಕಿನಲ್ಲಿ ಮತ್ತೆ ಮತ್ತೆ ಬರುತ್ತಿರಲಿ. ಕನ್ನಡಿಗರಿಗೆ ಒಳ್ಳೆಯ ಕಾದಂಬರಿಗಳು ಅವನಿಂದ ಸಿಗುತ್ತಿರಲಿ. 

***

ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹೆಸರಿನ ಪ್ರತಿಷ್ಠಾನವು ಕಳೆದ ಮೂರು ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದವರನ್ನು ಗುರ್ತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. ಈ ಪ್ರಶಸ್ತಿಯು ₹10 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಈ ಸಾಲಿನ ಪ್ರಶಸ್ತಿಯನ್ನು ಪಡೆದಿರುವ ಎಂ.ಆರ್‌. ದತ್ತಾತ್ರಿ ಚಿಕ್ಕಮಗಳೂರು ಜಿಲ್ಲೆಯವರು. ಓದಿದ್ದು ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರ್‌. ಕೆಜಿಎಫ್‌, ಪುಣೆ, ಸ್ಯಾನ್‌ ಪ್ರಾನ್ಸಿಸ್ಕೋ, ಲಾಸ್‌ ಎಂಜಲೀಸ್‌ಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಅವರಿಗಿದೆ. ಅಲೆಮಾರಿ ಕನಸುಗಳು (ಕವನ ಸಂಕಲನ), ಪೂರ್ವ ಪಶ್ಚಿಮ (ಅಂಕಣ ಬರಹ), ದ್ವೀಪವ ಬಯಸಿ, ಮಸುಕು ಬೆಟ್ಟದ ದಾರಿ (ಕಾದಂಬರಿಗಳು) ಇವರ ಪ್ರಕಟಿತ ಕೃತಿಗಳು.

ಇಂದು (ಸೆ.24) ಬೆಂಗಳೂರಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬೆಳಿಗ್ಗೆ 10ಗಂಟೆಗೆ ಅವರಿಗೆ ನರಹಳ್ಳಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಿರಿಯ ವಿಮರ್ಶಕ ಡಾ. ಸಿ.ಎನ್‌. ರಾಮಚಂದ್ರನ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ಎಚ್‌.ಎಸ್‌. ವೆಂಕಟೇಶಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT