ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡವನ್ನು ಮತ್ತೆ ಕಟ್ಟಬಹುದು, ಅರಣ್ಯವನ್ನಲ್ಲ

Last Updated 23 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕೇಂದ್ರ ಪರಿಸರ ಸಚಿವಾಲಯವು ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯನ್ನು ಏಕಾಏಕಿ 10 ಕಿ.ಮೀ.ನಿಂದ 100 ಮೀಟರ್‌ಗೆ ಇಳಿಸಿದೆ. ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್‌ ಕೆಂಡಾಮಂಡಲವಾಗಿದೆ. ಪರಿಸರ ವ್ಯವಸ್ಥೆ ಮೇಲೆ ಕೊಡಲಿಯೇಟು ಬೀಳಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಭವಿಷ್ಯದಲ್ಲಿ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ‘ವೈಲ್ಡ್‌ ಲೈಫ್‌ ಫಸ್ಟ್‌’ನ ವ್ಯವಸ್ಥಾಪಕ ಟ್ರಸ್ಟಿಯೂ ಆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಪ್ರವೀಣ್‌ ಭಾರ್ಗವ್‌ ಇಲ್ಲಿ ಮಾತನಾಡಿದ್ದಾರೆ.

* ಪರಿಸರ ಸೂಕ್ಷ್ಮ ಪ್ರದೇಶ ವಿವಾದ ಆರಂಭವಾಗಿದ್ದು ಹೇಗೆ?

ಇತ್ತೀಚಿನ ದಶಕಗಳಲ್ಲಿ ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ಧಾಮಗಳ ಸುತ್ತಮುತ್ತ ಮಾನವ ಚಟುವಟಿಕೆಗಳು ಜಾಸ್ತಿಯಾದವು. ಅವುಗಳ ಸುತ್ತಲಿನ ಪ್ರದೇಶ ರಕ್ಷಾ ಕವಚ (ಶಾಕ್‌ ಅಬ್ಸಾರ್ಬರ್) ಇದ್ದಂತೆ. ಜನರ ಕೃಷಿ ಚಟುವಟಿಕೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಇವುಗಳನ್ನು ಸಂರಕ್ಷಿಸಬೇಕು ಎಂದು ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಮಂಡಳಿ 2002ರಲ್ಲಿ ಯೋಜಿಸಿತು. ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ರಾಷ್ಟ್ರೀಯ ವನ್ಯಜೀವಿ ನೀತಿಯ ಪ್ರಸ್ತಾವ ಸಲ್ಲಿಸಲಾಯಿತು. ಮತ್ತೇನೂ ಆಗಲಿಲ್ಲ.

ಗೋವಾದಲ್ಲಿ ಗಣಿಗಾರಿಕೆಯಿಂದ ತುಂಬಾ ತೊಂದರೆ ಆಗುತ್ತಿದೆ. ಆದರೂ, ನೀತಿ ಇದ್ದರೂ ಅಲ್ಲಿಯ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ನಿರ್ದೇಶನ ನೀಡಬೇಕು ಎಂದು ಕೋರಿ ‘ಗೋವಾ ಫೌಂಡೇಷನ್‌’ ಸ್ವಯಂಸೇವಾ ಸಂಘಟನೆ 2004ರಲ್ಲಿ ಸುಪ್ರೀಂ ಕೋರ್ಟ್‌ ಮೊರೆ ಹೋಯಿತು. ಈ ನೀತಿಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ 2006ರ ಡಿಸೆಂಬರ್‌ 4ರಂದು ಆದೇಶ ಹೊರಡಿಸಿತು. ಕೋರ್ಟ್ ಆದೇಶವನ್ನು ಸರ್ಕಾರಗಳು ಪಾಲಿಸಲಿಲ್ಲ.

ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಧಾಮಗಳ ಸುತ್ತ ಪರಿಸರ ಸೂಕ್ಷ್ಮ ಪ್ರದೇಶ ರಚನೆಯಾಗಬೇಕು ಎಂದು ಕೇಂದ್ರ ಪರಿಸರ ಸಚಿವಾಲಯ ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್‌ 3ರ ಪ್ರಕಾರ 2011ರ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಿತು. ‘ಇದಕ್ಕಾಗಿ ಖಾಸಗಿ ಜಾಗವನ್ನು ವಶಪಡಿಸಿಕೊಳ್ಳುವಂತಿಲ್ಲ. ಈ ಪ್ರದೇಶವನ್ನು 10 ಕಿ.ಮೀ. ವರೆಗೆ ಮಾಡಬೇಕು. ವನ್ಯಜೀವಿ ಕಾರಿಡಾರ್‌ ಇರುವಲ್ಲಿ 25 ಕಿ.ಮೀ. ವರೆಗೂ ವಿಸ್ತರಿಸಬಹುದು’ ಎಂದು ತಿಳಿಸಿತು. ರಾಷ್ಟ್ರೀಯ ಉದ್ಯಾನದ ಸ್ವರೂಪಕ್ಕೆ ತಕ್ಕಂತೆ ಇದನ್ನು ನಿಗದಿ ಮಾಡಬೇಕು ಎಂದು ಸೂಚಿಸಿತು. ಉದಾಹರಣೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸ್ಥಿತಿಗಿಂತ ಅಣಶಿ– ದಾಂಡೇಲಿ ರಾಷ್ಟ್ರೀಯ ಉದ್ಯಾನದ ಸ್ಥಿತಿ ಭಿನ್ನ. ಅದಕ್ಕೆ ತಕ್ಕಂತೆ ವಲಯ ಘೋಷಣೆ ಮಾಡಬೇಕು ಎಂಬುದು ಇಲಾಖೆಯ ಆಶಯವಾಗಿತ್ತು.

* ಗೊಂದಲ ಸೃಷ್ಟಿಯಾಗಿದ್ದು ಎಲ್ಲಿ?

ಈ ಪ್ರಕ್ರಿಯೆ ಶುರುವಾದಾಗ ಸಾಕಷ್ಟು ಅಪಪ್ರಚಾರಗಳು ನಡೆದವು. ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಇದ್ದವು. ಕೆಲವು ಕಡೆಗಳಲ್ಲಿ ಸ್ಥಳೀಯ ರಾಜಕಾರಣಿಗಳು ಕೈಜೋಡಿಸಿದರು. ‘ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಾದರೆ, ನಿಮ್ಮ ಜಾಗ ಹೋಗುತ್ತದೆ. ನೀವು ಬೀದಿಗೆ ಬೀಳುತ್ತೀರಿ’ ಎಂಬ ಸುಳ್ಳು ಮಾಹಿತಿಯನ್ನು ವ್ಯವಸ್ಥಿತವಾಗಿ ಹರಡಿದರು. ಇದರ ಫಲವಾಗಿ ಹೆಚ್ಚಿನ ಕಡೆಗಳಲ್ಲಿ ಪ್ರತಿಭಟನೆಗಳು, ಧರಣಿಗಳು ನಡೆದವು. ಅಡಚಣೆಯ ನಡುವೆಯೇ, ರಾಜ್ಯ ಸರ್ಕಾರಗಳು ಅನೇಕ ಕಡೆಗಳಲ್ಲಿ ಕರಡು ಅಧಿಸೂಚನೆಗಳನ್ನು ಹೊರಡಿಸಿದವು. ಜನರ ವಿರೋಧದ ನೆಪ ಒಡ್ಡಿ ಕೆಲವು ಕಡೆ ಘೋಷಣೆಯ ಪ್ರಸ್ತಾವವನ್ನೇ ಸಲ್ಲಿಸಲಿಲ್ಲ. ಕರಡು ಅಧಿಸೂಚನೆ ನಂತರ ರಾಜ್ಯ ಸರ್ಕಾರಗಳು ಅಂತಿಮ ಅಧಿಸೂಚನೆ ಹೊರಡಿಸಬೇಕಿತ್ತು. ಅಂತಿಮ ಅಧಿಸೂಚನೆಯಲ್ಲಿ ಈ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಿದರು. ರಾಜ್ಯ ಸರ್ಕಾರಗಳು ಪ್ರಸ್ತಾವ ಕಳುಹಿಸಿ ಸುಮ್ಮನೆ ಕುಳಿತವು. ‘ಎಲ್ಲೆಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಎಲ್ಲೆಲ್ಲಿ ಬಾಕಿ ಇದೆ. ಈ ಎಲ್ಲ ಪ್ರಸ್ತಾವ ಬರುವ ತನಕ ಅರಣ್ಯದ ಸುತ್ತಲಿನ 10 ಕಿ.ಮೀ.ಅನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಪರಿಗಣಿಸುತ್ತೇವೆ’ ಎಂದು ಕೇಂದ್ರ ಪರಿಸರ ಸಚಿವಾಲಯ 2012ರಲ್ಲಿ ಕಟುವಾಗಿ ಹೇಳಿತು. ಅದಾದ ನಂತರ ರಾಜ್ಯ ಸರ್ಕಾರಗಳು ಪ್ರಸ್ತಾವ ಸಲ್ಲಿಸಿದವು.

ಈ ನಡುವೆ, ಮತ್ತೊಂದು ಬೆಳವಣಿಗೆ ನಡೆಯಿತು. ‘10 ಕಿ. ಮೀ. ವ್ಯಾಪ್ತಿಯೊಳಗಿನ ಅಭಿವೃದ್ಧಿ ಯೋಜನೆಗಳ ಪ್ರಸ್ತಾವವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ಪರಿಶೀಲಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತು. ಇದರಿಂದಾಗಿ ರಾಜ್ಯ ಸರ್ಕಾರಗಳು ಅಡಕತ್ತರಿಯಲ್ಲಿ ಸಿಲುಕಿದವು.

ಪರಿಸರ ಸೂಕ್ಷ್ಮ ಪ್ರದೇಶಗಳ ನಿಗದಿಯಲ್ಲೂ ರಾಜ್ಯ ಸರ್ಕಾರಗಳು ಆಟ ಆಡಿದವು. ಉದಾಹರಣೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ್ನೇ ತೆಗೆದುಕೊಳ್ಳೋಣ. ಇಲ್ಲಿ ಕೆಲವು ಕಡೆಗಳಲ್ಲಿ 10 ಕಿ.ಮೀ. ನಿಗದಿ ಮಾಡಲಾಯಿತು. ಕಲ್ಲಿನ ಕ್ವಾರಿಗಳಿದ್ದ ಅರಣ್ಯದ ಪಕ್ಕದ ಜಾಗಗಳಲ್ಲಿ 100 ಮೀಟರ್‌ಗಷ್ಟೇ ಮಿತಿಗೊಳಿಸಲಾಯಿತು. ಇದಕ್ಕೆ ರಾಜಕೀಯ ಒತ್ತಡವೂ ಕಾರಣ. ಇದು ಸರಿಯಾದ ಪ್ರಕ್ರಿಯೆ ಅಲ್ಲ. ಅರಣ್ಯದ ಸುತ್ತಮುತ್ತ ಕಲ್ಲು ಕ್ವಾರಿ, ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳುವುದೇ ಪರಿಸರ ಸೂಕ್ಷ್ಮ ಪ್ರದೇಶದ ಘೋಷಣೆಯ ಉದ್ದೇಶ. ವಿಪರ್ಯಾಸ ಎಂದರೆ ಇಲ್ಲಿ ಇವುಗಳನ್ನು ಬಚಾವ್‌ ಮಾಡಲು ಈ ಅಧಿಸೂಚನೆಯನ್ನೇ ಬಳಸಿದರು. ಕಾಳಿ ಅಭಯಾರಣ್ಯದಲ್ಲೂ ಇದೇ ರೀತಿ ಆಗಿದೆ. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕರಡುವಿನಲ್ಲಿ ಇದ್ದುದನ್ನು ಅಂತಿಮ ಅಧಿಸೂಚನೆಯಲ್ಲಿ ಕೈಬಿಡಲಾಯಿತು. ಒಂದೆರಡು ಕಡೆಗಳಲ್ಲಿ ಅಂತಿಮ ಅಧಿಸೂಚನೆಯಲ್ಲಿ ವ್ಯಾಪ್ತಿಯನ್ನು ಹಿಗ್ಗಿಸಿದ ಉದಾಹರಣೆಗಳು ಇವೆ. ಇದಕ್ಕೆ ಕೊಡಗಿನ ಪುಷ್ಪಗಿರಿ ವನ್ಯಜೀವಿ ಧಾಮ ಅತ್ಯುತ್ತಮ ಉದಾಹರಣೆ. ಕರಡು ಅಧಿಸೂಚನೆಯಲ್ಲಿ ಇದು 100 ಮೀಟ್‌ಗಳಷ್ಟೇ ಇತ್ತು. ರಾಜಕೀಯ ಒತ್ತಡದ ನಡುವೆಯೂ ಅದು ಬಳಿಕ 1 ಕಿ.ಮೀ.ಗೆ ಏರಿತು.

* ಈ ಪ್ರದೇಶಗಳಲ್ಲಿ ಯಾವೆಲ್ಲ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತದೆ?

ಅರಣ್ಯದ ಸುತ್ತ ಕೃಷಿ ಭೂಮಿ, ಗ್ರಾಮ ಅರಣ್ಯ, ಮೀಸಲು ಅರಣ್ಯಗಳು ಇರುತ್ತವೆ. ಕೆಲವೆಡೆ ಗೋಮಾಳಗಳು, ಸರ್ಕಾರಿ ಭೂಮಿಗಳಿವೆ. ಅನೇಕ ಕಡೆಗಳಲ್ಲಿ ಕಲ್ಲು ಕ್ವಾರಿಗಳು ಹಾಗೂ ರೆಸಾರ್ಟ್‌ಗಳು ತಲೆ ಎತ್ತಿವೆ. ಅರಣ್ಯದ ಸುತ್ತಲಿನ ಚಟುವಟಿಕೆಗಳ ವಿಷಯದಲ್ಲೂ ‘ನಿಷೇಧಿತ’, ‘ನಿಯಂತ್ರಿತ’ ಹಾಗೂ ‘ಅನುಮತಿ’ ಎಂಬ ಮೂರು ವಿಭಾಗಗಳನ್ನು (ಕ್ರಮವಾಗಿ ಕೆಂಪು, ಕಿತ್ತಳೆ, ಹಸಿರು) ಎಂದು ವಿಂಗಡಿಸಲಾಗಿದೆ. ಇವುಗಳನ್ನು ಪರಿಶೀಲಿಸಿ ವಿಂಗಡಿಸುವ ಹೊಣೆಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಲಾಯಿತು. ರೈತರ ಚಟುವಟಿಕೆಗಳು ಹಸಿರಿನಲ್ಲಿ ಹಾಗೂ ಉಷ್ಣ ವಿದ್ಯುತ್‌ ಸ್ಥಾವರ, ಗಣಿಗಾರಿಕೆಯಂತಹ ಚಟುವಟಿಕೆಗಳು ಕೆಂಪು ಪಟ್ಟಿಯಲ್ಲಿ ಇರಬೇಕು ಎಂಬುದು ಸಾಮಾನ್ಯ ಮಾರ್ಗಸೂಚಿ. ಆದರೆ, ಇವುಗಳ ನಿಗದಿಯಲ್ಲೂ ಇನ್ನೊಂದು ಸುತ್ತಿನ ರಾಜಕೀಯ ಹಸ್ತಕ್ಷೇಪ ನಡೆಯಿತು. ಪರಿಣಾಮವಾಗಿ ಕೆಂಪು ವಲಯಕ್ಕೆ ಸೇರಿದವು ಹಸಿರು ವಲಯಕ್ಕೆ ಜಾರಿದವು.

ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ ಹುಲಿ ಅಭಯಾರಣ್ಯದ ಮೀಸಲು ಪ್ರದೇಶ, ಕಸ್ತೂರಿ ರಂಗನ್‌ ವರದಿ ವಿಷಯಗಳು ಮುನ್ನೆಲೆಗೆ ಬಂದವು. ಇವೆಲ್ಲ ಸೇರಿ ಜನರಿಗೆ ಗೊಂದಲ ಉಂಟಾಯಿತು. ಕೊಡಗು ಜಿಲ್ಲೆಯಲ್ಲಿ ವಿಶ್ವ ಜೈವಿಕ ಉದ್ಯಾನ ಘೋಷಣೆಯ ಹುಯಿಲು ಎದ್ದಿತು. ನಮ್ಮಂತಹ ಸ್ವಯಂಸೇವಾ ಸಂಸ್ಥೆಗಳು ಜನರಿಗೆ ಮಾರ್ಗದರ್ಶನ ನೀಡಿದವು. ಆದರೆ, ಸರ್ಕಾರ ಮೌನ ತಾಳಿತು. ನಾವು ಹೇಳುವುದಕ್ಕೂ ಅಧಿಕಾರಿಗಳು ಮಾಹಿತಿ ನೀಡುವುದಕ್ಕೂ ವ್ಯತ್ಯಾಸ ಇದೆ. ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಥವಾ ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆಗಳನ್ನು ನಡೆಸಿ ಜನರಿಗೆ ಮಾಹಿತಿ ನೀಡಬೇಕಿತ್ತು.  ಅವರು ಸುಮ್ಮನಿದ್ದ ಕಾರಣ ಎಲ್ಲೆಡೆ ಅಪಪ್ರಚಾರವಾಯಿತು. ಜನರು ಭಯಭೀತರಾದರು. ಇದರಿಂದ ಪರಿಸರ ಸೂಕ್ಷ್ಮ ಪ್ರದೇಶದ ಚಟುವಟಿಕೆಗೆ ಅಡಚಣೆ ಎದುರಾಯಿತು. 2002ರಿಂದ ಇಲ್ಲಿವರೆಗೆ ಕಷ್ಟದ ಪ್ರಯಾಣ ನಡೆಸಿ ಇವತ್ತು ಇಲ್ಲಿಗೆ ಬಂದು ನಿಂತಿದೆ. ಸುಪ್ರೀಂ ಕೋರ್ಟ್‌ನ ಚಾಟಿಯಿಂದಾಗಿ ಪ್ರಶ್ನೆ ಮತ್ತೆ ಮೂಲಕ್ಕೆ ಹೋಗಿದೆ.

* ವಿಂಗಡಿಸುವ ಹೊಣೆಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಿದ್ದು ಸರಿಯೇ?

ಪರಿಸರ ಸೂಕ್ಷ್ಮ ಪ್ರದೇಶದ ಅನುಷ್ಠಾನದ ಅಧಿಕಾರ ಯಾರ ಬಳಿ ಇರಬೇಕು ಎಂಬುದು ಮಹತ್ವದ ಪ್ರಶ್ನೆ. ಇದನ್ನು ಪರಿಸರ ಕಾಯ್ದೆಯಲ್ಲಿ ಘೋಷಣೆ ಮಾಡಿರುವ ಕಾರಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಹೊಣೆ ವಹಿಸಲಾಗಿದೆ. ಆದರೆ, ಅರಣ್ಯದ ಮಾಹಿತಿ ಇರುವುದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ. ಈಗ ಸ್ಥಳೀಯ ಸಮಿತಿಗಳು ಮೇಲ್ವಿಚಾರಣೆ ನೋಡಿಕೊಳ್ಳುತ್ತಿವೆ. ಇದರಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದಾರೆ. ಈ ಸಮಿತಿ ತಿಂಗಳಿಗೊಮ್ಮೆ ಸಭೆ ಸೇರುತ್ತದೆ. ಈ ಸಮಿತಿ ಹಾಗೆಯೇ ಇರಲಿ. ದಿನನಿತ್ಯದ ಚಟುವಟಿಕೆಯ ಮೇಲ್ವಿಚಾರಣೆಯ ಹೊಣೆಯನ್ನು ರಾಷ್ಟ್ರೀಯ ಉದ್ಯಾನದ ನಿರ್ದೇಶಕರಿಗೆ ವಹಿಸಬೇಕು. ಈ ಬಗ್ಗೆ ಅಧಿಸೂಚನೆ ಹೊರಡಿಸಬೇಕು.

* ಬೃಹತ್‌ ಯೋಜನೆಗಳ ಸಲುವಾಗಿ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿ ಕಡಿಮೆ ಮಾಡಲಾಗಿದೆ ಎಂಬ ಆರೋಪ ಇದೆಯಲ್ಲ?

ಈ ಆರೋಪದಲ್ಲಿ ಹುರುಳಿದೆ. ಜೊಯಿಡಾ ತಾಲ್ಲೂಕನ್ನು ಕಾಳಿ ಹುಲಿ ಸಂರಕ್ಷಿತ ಅರಣ್ಯದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸಲಾಗಿತ್ತು. ಅಂತಿಮ ಅಧಿಸೂಚನೆಯಲ್ಲಿ ಈ ತಾಲ್ಲೂಕನ್ನು ಕೈಬಿಡಲಾಯಿತು. ಒಂದೂವರೆ ವರ್ಷಗಳಲ್ಲಿ ಅಲ್ಲಿನ ಪರಿಸರ ಒಂಚೂರೂ ಬದಲಾಗಿರಲಿಲ್ಲ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಳ್ಳಲಾಯಿತು. ಈ ಪ್ರದೇಶದಲ್ಲಿ ಬೃಹತ್‌ ಯೋಜನೆಗಳ ಅನುಷ್ಠಾನಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಅರಣ್ಯಗಳ ಸುತ್ತಮುತ್ತ ರೆಸಾರ್ಟ್‌ ಆರಂಭಿಸಲು ಒಪ್ಪಿಗೆ ನೀಡಲಾಗುತ್ತಿದೆ.

ನಮ್ಮಲ್ಲಿ ವ್ಯಾಪಕ ಪ್ರಮಾಣದಲ್ಲಿ ಅರಣ್ಯ ಛಿದ್ರೀಕರಣ ನಡೆದಿದೆ. ದೇಶದ ಆರ್ಥಿಕ ಅಭಿವೃದ್ಧಿಯಾಗಬೇಕು ಹಾಗೂ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದು ನಿಜ. ಅರಣ್ಯಗಳನ್ನು ಉಳಿಸಿಕೊಂಡು ಈ ಎಲ್ಲ ಕೆಲಸ ಆಗಬೇಕು. ಇದಕ್ಕೆ ಯಾರ ಅಡ್ಡಿಯೂ ಇಲ್ಲ. ಪರಿಸರವಾದಿಗಳು ಎಲ್ಲದ್ದಕ್ಕೂ ಹಸಿರು ಬಾವುಟ ಹಾರಿಸುತ್ತಾರೆ ಎಂಬ ಆರೋಪ ಇದೆ. ಆದರೆ, ನಾವು ಅಭಿವೃದ್ಧಿಗೆ ಅಡ್ಡಿ ಮಾಡುತ್ತಿಲ್ಲ. ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಉಳಿಸಲು ಹೋರಾಟ ಮಾಡುತ್ತಿದ್ದೇವೆ. ಇದು ಅನಿವಾರ್ಯವೂ ಹೌದು.

* ಅರಣ್ಯ ಛಿದ್ರೀಕರಣದಿಂದ ಎದುರಾಗಿರುವ ಸಮಸ್ಯೆಗಳೇನು?

ಯಥೇಚ್ಛ ಅರಣ್ಯ ಇದ್ದಲ್ಲಿ ಛಿದ್ರೀಕರಣವಾದರೆ ದುರಸ್ತಿ ಮಾಡಬಹುದು. ಕಾಡು ಇದ್ದರೆ ವನ್ಯಜೀವಿಗಳು ಸುಗಮ ಸಂಚಾರ ಮಾಡಬಹುದು. ಮನುಷ್ಯ– ಪ್ರಾಣಿ ಸಂಘರ್ಷ ಕಡಿಮೆ ಆಗುತ್ತದೆ. ಕೃಷಿಕರು ತಮ್ಮ ಪಾಡಿಗೆ ಕೃಷಿ ಚಟುವಟಿಕೆ ಮಾಡಬಹುದು. ಬಹುತೇಕ ಕಡೆಗಳಲ್ಲಿ ಅರಣ್ಯ ಒತ್ತುವರಿಯಾಗಿದೆ. ಅರಣ್ಯ ಹಕ್ಕು ಕಾಯ್ದೆಯಿಂದಲೂ ಸಮಸ್ಯೆಯಾಗಿದೆ. ಕಾಡು ಇರುವ ಸರ್ಕಾರಿ ಭೂಮಿಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ವಿವೇಚನೆ ಇಲ್ಲದೆ ಅಭಿವೃದ್ಧಿ ಚಟುವಟಿಕೆಗಳಿಗೆ ಹಸ್ತಾಂತರ ಮಾಡುತ್ತಿದ್ದಾರೆ. ಅರಣ್ಯಗಳ ವೈಜ್ಞಾನಿಕ ನಿರ್ವಹಣೆ ಮಾಡದ ಕಾರಣ ಈ ದುಸ್ಥಿತಿಗೆ ತಲುಪಿದ್ದೇವೆ.

ದೇಶದಲ್ಲಿ ಶೇ 33ರಷ್ಟು ಕಾಡು ಇರಬೇಕಿತ್ತು. ಈಗ ಶೇ 19ರಷ್ಟು ಉಳಿದಿದೆ. ಅದರಲ್ಲಿ ಉತ್ತಮ ಅರಣ್ಯ ಇರುವುದು ಶೇ 10ರಷ್ಟು ಮಾತ್ರ. ಶೇ 4ರಲ್ಲಿ ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಧಾಮಗಳು ಇವೆ. ಇವುಗಳನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಅಭಿವೃದ್ಧಿಯ ನೆಪ ಒಡ್ಡಿ ಶೇ 4ರಷ್ಟು ಕಾಡನ್ನು ನಾಶ ಮಾಡಬೇಡಿ ಎಂಬುದೇ ನಮ್ಮ ಕಳಕಳಿ.

ಪಶ್ಚಿಮ ಘಟ್ಟದೊಳಗೆ ರಾಷ್ಟ್ರೀಯ ಹೆದ್ದಾರಿ, ವಿದ್ಯುತ್‌ ಮಾರ್ಗ ಅಣೆಕಟ್ಟೆ ಹಾಗೂ ಜಲವಿದ್ಯುತ್‌ ಸ್ಥಾವರಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದು ಸರಿಯಲ್ಲ.

* ಅಭಿವೃದ್ಧಿಗಾಗಿ ಅರಣ್ಯ ನಾಶ ತಡೆಯಲು ದಾರಿಗಳಿಲ್ಲವೇ?

ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿನ ಸಾಕಷ್ಟು ಕಾಡನ್ನು ಕಳೆದುಕೊಂಡಿದ್ದೇವೆ. ಉದಾಹರಣೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಪಶ್ಚಿಮ ಘಟ್ಟದ ನಾಲ್ಕೈದು ಕಿ.ಮೀ. ಅರಣ್ಯ ಭೂಮಿ ಬೇಕಾಯಿತು ಎಂದಿಟ್ಟುಕೊಳ್ಳಿ. ಅಲ್ಲಿ ಅರಣ್ಯ ಉಳಿಸಲು ಬೈಪಾಸ್‌ ರಸ್ತೆ ನಿರ್ಮಿಸಬೇಕು. ಬೆಂಗಳೂರಿನಲ್ಲಿ ಮನೆಗಳನ್ನು ಉಳಿಸಲು ಸಾವಿರಾರು ಕೋಟಿ ಖರ್ಚು ಮಾಡಿ ವರ್ತುಲ ರಸ್ತೆ ನಿರ್ಮಿಸುತ್ತಿದ್ದೇವೆ. ಈ ಕಟ್ಟಡಗಳಿಗಿಂತ ಅರಣ್ಯ ಮುಖ್ಯ. ಕಟ್ಟಡವನ್ನು ಮತ್ತೆ ಕಟ್ಟಬಹುದು, ಅರಣ್ಯವನ್ನಲ್ಲ.

ನಮ್ಮಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳು ಲಭ್ಯ ಇವೆ. ಅವುಗಳನ್ನು ಬಳಸಿ ಅರಣ್ಯ ಛಿದ್ರೀಕರಣ ತಡೆಯಬೇಕು. ಪರಿಸರ ಸೂಕ್ಷ್ಮ ಪ್ರದೇಶಗಳನ್ನು ರಕ್ಷಿಸಿದರೆ ವನ್ಯಜೀವಿಗಳು ಮನುಷ್ಯರ ಸುದ್ದಿಗೆ ಬರುವುದಿಲ್ಲ. ಅವುಗಳ ಕಾರಿಡಾರ್‌ನಲ್ಲಿ ಅಣೆಕಟ್ಟೆಗಳನ್ನು ನಿರ್ಮಿಸಿದರೆ ನಮ್ಮ ಮನೆಗೇ ನುಗ್ಗುತ್ತವೆ. ಬಂಡೀ‍ಪುರ– ನಾಗರಹೊಳೆ ಹುಲಿ ರಕ್ಷಿತಾರಣ್ಯದ ನಡುವಿನ ಕಾರಿಡಾರ್ ಅನ್ನು ಛಿದ್ರಗೊಳಿಸಿ ಕಬಿನಿ ಜಲಾಶಯ ನಿರ್ಮಿಸಲಾಯಿತು. ಇದೊಂದು ಮಹಾ ದುರಂತ. ಮತ್ತೆ ಏನೇನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ⇒

–ಚಿತ್ರ: ಆನಂದ ಬಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT