ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳ ತುಂಬ ಗುಂಡಿಗಳು ಆಡಳಿತಯಂತ್ರದ ನಿರ್ಲಕ್ಷ್ಯ ಅಕ್ಷಮ್ಯ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದೇ ರಸ್ತೆಗೆ ಹೋದರೂ ಕಣ್ಣಿಗೆ ರಾಚುವಂತೆ ಗುಂಡಿಗಳ ದರ್ಶನವಾಗುತ್ತದೆ. ಕೆಲವು ಕಡೆಗಳಲ್ಲಂತೂ ವಾಹನ ಓಡಿಸುವುದಕ್ಕೇ ಭಯವಾಗುತ್ತದೆ. ಈ ಗುಂಡಿಗಳಿಂದಾಗಿ ಬೆನ್ನುಮೂಳೆಗೆ ಹಾನಿ ಸೇರಿದಂತೆ ಹಲವು ಬಗೆಯ ಮೂಳೆ ಮುರಿತ, ನೋವುಗಳನ್ನು ಅನುಭವಿಸುತ್ತಿರುವಂತಹ ಸರಾಸರಿ 25 ಪ್ರಕರಣಗಳು ಬೆಂಗಳೂರಿನ ಆಸ್ಪತ್ರೆಗಳಲ್ಲಿ ತಿಂಗಳಿಗೆ ವರದಿಯಾಗುತ್ತಿವೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಈ ಮಹಾನಗರದಲ್ಲಿ ವಾಹನಗಳನ್ನು ಬಳಸುವ ಬಹಳಷ್ಟು ಜನರ ಬೆನ್ನು, ಮೂಳೆ ನೋವಿಗೆ ಮುಖ್ಯ ಕಾರಣವೇ ಗುಂಡಿಗಳಿಂದ ತುಂಬಿದ ರಸ್ತೆಗಳು. ಹೀಗೆಂದು ಪಾಲಿಕೆಯೇನೂ ಸುಮ್ಮನಿಲ್ಲ. ಗುಂಡಿ ಮುಚ್ಚುವುದಕ್ಕಾಗಿಯೇ ಪ್ರತಿ ವರ್ಷ ಕೋಟಿಗಟ್ಟಲೆ ಹಣ ಖರ್ಚಾಗಿದೆ. 2017–18ನೇ ಸಾಲಿನಲ್ಲಿ ಹೀಗೆ ಮೀಸಲಿಟ್ಟ ಹಣ ₹ 48 ಕೋಟಿ. ಹೋದ ಸಾಲಿನ ಬಜೆಟ್‌ನಲ್ಲಿ ಗುಂಡಿ ಮುಚ್ಚಲು ₹ 14.85 ಕೋಟಿ, ಪ್ರಮುಖ ರಸ್ತೆಗಳ ದುರಸ್ತೆಗೆ ₹ 31 ಕೋಟಿ, ಯಂತ್ರಗಳ ಸಹಾಯದಿಂದ ಗುಂಡಿ ಮುಚ್ಚಲು ₹ 6.31 ಕೋಟಿ ತೆಗೆದಿಡಲಾಗಿತ್ತು. ಅಚ್ಚರಿಯ ಸಂಗತಿ ಎಂದರೆ, ಇಷ್ಟೆಲ್ಲ ಹಣ ಸುರಿದ ನಂತರವೂ ಬೆಂಗಳೂರಿನ ರಸ್ತೆಗಳು ಗುಂಡಿ ಮುಕ್ತವಾಗೇನೂ ಇಲ್ಲ. ಹಾಗಿದ್ದರೆ ಈ ಹಣ ಏನಾಯಿತು? ಕಾಮಗಾರಿಗೆ ಎಲ್ಲೋ ಅಲ್ಪಸ್ವಲ್ಪ ಖರ್ಚಾಗಿರಬಹುದು. ಆದರೆ ಬಹುಪಾಲು ಹಣ ದುರುಪಯೋಗವಾಗಿದೆ. ಇದೊಂದು ರೀತಿಯಲ್ಲಿ ಸುಲಭವಾಗಿ ಹಣ ಮಾಡುವ ವಾರ್ಷಿಕ ದಂಧೆಯಾಗಿದೆ. ಅಧಿಕಾರಿಗಳು– ಜನಪ್ರತಿನಿಧಿಗಳ ಮಧ್ಯೆ ಅಪವಿತ್ರ ಮೈತ್ರಿಯನ್ನು ಇಲ್ಲಿ ಕಾಣಬಹುದು. ಈ ಹಣ ಸರಿಯಾದ ರೀತಿಯಲ್ಲಿ ಗುಂಡಿ ಮುಚ್ಚುವುದಕ್ಕೇ ವಿನಿಯೋಗ ಆಗಿದ್ದರೆ ಬೆಂಗಳೂರಿನ ರಸ್ತೆಗಳು ಈಗಿನಂತೆ ಕೆಟ್ಟ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ವಸ್ತುಸ್ಥಿತಿ ಹೀಗಿದ್ದರೂ, ಅಧಿಕಾರಿಗಳು ಕೊಡುವ ಲೆಕ್ಕಾಚಾರ ಮಾತ್ರ ತೀರಾ ಹಾಸ್ಯಾಸ್ಪದ. ಹೋದ ವರ್ಷ 4 ಸಾವಿರ ಗುಂಡಿಗಳಿದ್ದವು; ಈ ಸಲ ದುಪ್ಪಟ್ಟು ಆಗಿದೆಯಂತೆ. ಮುಖ್ಯ ಮತ್ತು ಉಪ ರಸ್ತೆಗಳಲ್ಲಿ 9400 ಗುಂಡಿಗಳು ಲೆಕ್ಕಕ್ಕೆ ಸಿಕ್ಕಿವೆಯಂತೆ. ಇದನ್ನು ಯಾರು ಲೆಕ್ಕ ಮಾಡಿದರೋ, ಹೇಗೆ ಮಾಡಿದರೋ! ಏನು ಮಾನದಂಡ? ವಾಸ್ತವಾಂಶ ಏನೆಂದರೆ, ತೀರ ಇತ್ತೀಚೆಗೆ ದುರಸ್ತಿ ಮಾಡಿದ, ನಿರ್ಮಿಸಿದ ರಸ್ತೆಗಳೂ ಗುಂಡಿಮಯವಾಗಿವೆ. ಉಳ್ಳಾಲದ 3 ಕಿ.ಮೀ. ರಸ್ತೆಗೆ 6 ತಿಂಗಳ ಹಿಂದೆ ಡಾಂಬರ್‌ ಹಾಕಲಾಗಿತ್ತು. ಅಲ್ಲೀಗ 150–200 ಗುಂಡಿಗಳು ಬಿದ್ದಿವೆ. ಹೀಗಿರುವಾಗ ಗುಂಡಿಗಳ ಬಗ್ಗೆ ಪಾಲಿಕೆ ಕೊಡುತ್ತಿರುವ ಅಂಕಿಅಂಶಗಳನ್ನು ಸಾರ್ವಜನಿಕರು ಹೇಗೆ ನಂಬಬೇಕು? ಬೆಂಗಳೂರು ಮಹಾ ನಗರದಲ್ಲಿನ ದೊಡ್ಡ, ಮಧ್ಯಮ ಮತ್ತು ಸಣ್ಣ ರಸ್ತೆಗಳ ಒಟ್ಟು ಉದ್ದವೇ 14,118 ಕಿ.ಮೀ.ಗಳಷ್ಟಿದೆ. ಈ ಸಲ ರಸ್ತೆ ನಿರ್ಮಾಣ– ನಿರ್ವಹಣೆಗೆ ₹ 4 ಸಾವಿರ ಕೋಟಿ ಇಡಲಾಗಿದೆ. ಇದು ಬಜೆಟ್‌ನ ಶೇ 45ರಷ್ಟು. ಆದರೂ ಗುಂಡಿಗಳಿಗೇನೂ ಕೊರತೆ ಇಲ್ಲ.

ಕಳಪೆ ಕಾಮಗಾರಿ, ಭ್ರಷ್ಟಾಚಾರಗಳಷ್ಟೇ ಅಲ್ಲ, ಮಳೆ ಮತ್ತು ಚರಂಡಿಯ ನೀರು ಹರಿದು ಹೋಗದೆ ರಸ್ತೆ ಮೇಲೆ ನಿಲ್ಲುವುದು ಕೂಡ ಗುಂಡಿ ಬೀಳಲು ಪ್ರಮುಖ ಕಾರಣ. ಅಂದರೆ ನಮ್ಮ ರಸ್ತೆಗಳ ವಿನ್ಯಾಸ ಸರಿ ಇಲ್ಲ. ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲ. ಟಾರ್‌ ಮೇಲೆ ನೀರು ನಿಂತರೆ ರಸ್ತೆ ಕಿತ್ತುಕೊಂಡು ಬರುತ್ತದೆ. ರಸ್ತೆ ಕಾಮಗಾರಿಯಲ್ಲಿ ತೊಡಗಿಕೊಂಡ ಸಾಮಾನ್ಯ ಕಾರ್ಮಿಕನಿಗೂ ಈ ವಿಷಯ ಗೊತ್ತು. ಆದರೆ ಎಂಜಿನಿಯರ್‌ಗಳಿಗೆ, ಗುತ್ತಿಗೆದಾರರಿಗೆ ಮತ್ತು ಅವರ ಮೇಲೆ ನಿಗಾ ಇಡಬೇಕಾದ ಜನಪ್ರತಿನಿಧಿಗಳಿಗೆ ಮಾತ್ರ ಹೀಗೆ ನೀರು ಹರಿದು ಹೋಗುವುದು ಬೇಕಿಲ್ಲ. ಗುಂಡಿ ಬಿದ್ದಷ್ಟು, ಪದೇ ಪದೇ ದುರಸ್ತಿ ಆದಷ್ಟೂ ಅವರ ಜೇಬು ತುಂಬುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ರಸ್ತೆಗಳಿಗೆ ಟಾರ್‌ ಬದಲು ಕಾಂಕ್ರೀಟ್‌ ಹಾಕಲಾಗುತ್ತಿದೆ. ಆದರೆ ಆ ರಸ್ತೆಗಳೂ ಪೂರ್ಣವಾಗಿ ಗುಂಡಿಗಳ ಹಾವಳಿಯಿಂದ ಮುಕ್ತವಾಗಿಲ್ಲ. ಅಂದರೆ, ನಮ್ಮ ಕೆಲಸದ ಗುಣಮಟ್ಟ ಹೀಗಿದೆ. ಗುಂಡಿ ಮುಚ್ಚಲು ಪಾಲಿಕೆ ಈಗ ಮೈಕ್ರೊ ಮಿಲ್ಲಿಂಗ್‌ ಮೆಷಿನ್‌ ತರಿಸಿದೆ. ಈ ಯಂತ್ರವು ರಸ್ತೆಯ ಇಕ್ಕೆಲಗಳನ್ನು ಕತ್ತರಿಸಿ ಸ್ವಲ್ಪ ಇಳಿಜಾರು ಮಾಡಿ ನೀರು ಹರಿದು ಹೋಗುವಂತೆ ಮಾಡುತ್ತದೆ. ಗುಂಡಿ ಬೀಳಲು ಏನು ಕಾರಣ ಎಂಬ ಬಗ್ಗೆ ಪಾಲಿಕೆಗೆ ಕೊನೆಗೂ ಜ್ಞಾನೋದಯವಾಯ್ತಲ್ಲ. ಅದಕ್ಕಾಗಿ ಖುಷಿಪಡಬೇಕು. ಇನ್ನಾದರೂ ಮೂಲದಲ್ಲಿಯೇ ಗುಣಮಟ್ಟದ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಆಗಮಾತ್ರ ಸಣ್ಣ ಮಳೆಗೂ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗುವುದನ್ನು ತಪ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT