ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾತ್ರಿಗೆ ನರಹಳ್ಳಿ ಪ್ರಶಸ್ತಿ ಪ್ರದಾನ

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ, ದಲಿತರಿಗೆ ಸಾಕಷ್ಟು ಅನ್ಯಾಯವಾಗಿದೆ. ಈ ಬಗ್ಗೆ ನಮ್ಮೆಲ್ಲರೊಳಗೆ ಅಪರಾಧಿ ಭಾವನೆ ಸದಾ ಇರುತ್ತದೆ’ ಎಂದು ಹಿರಿಯ ವಿಮರ್ಶಕ ಸಿ.ಎನ್‌.ರಾಮಚಂದ್ರನ್‌ ಅಭಿಪ್ರಾಯಪಟ್ಟರು.

ಕನ್ನಡ ಜನಶಕ್ತಿ ಕೇಂದ್ರ ಮತ್ತು ನರಹಳ್ಳಿ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಎಂ.ಆರ್‌.ದತ್ತಾತ್ರಿ ಅವರಿಗೆ ‘ನರಹಳ್ಳಿ ಪ್ರಶಸ್ತಿ’ ನೀಡಿ ಅವರು ಮಾತನಾಡಿದರು.

‘ಸಾವಿರಾರು ವರ್ಷಗಳ ಹಿಂದೆ ಸಮುದಾಯವೊಂದರಿಂದ ಆಗಿರುವ ಅನ್ಯಾಯವನ್ನು ನೆನಪಿನಲ್ಲಿಟ್ಟುಕೊಂಡು, ಈಗ ನ್ಯಾಯ ಕೇಳುವುದು ಸರಿಯಲ್ಲ. ಗತಕಾಲದ ನೆನಪು ಇರುವುದು ಸರಿ. ಆದರೆ, ಅವುಗಳೊಂದಿಗೆ ಬದುಕುವುದು ಸಲ್ಲ. ವರ್ತಮಾನದಲ್ಲಿ ಸಾಮರಸ್ಯದಿಂದ ಬದುಕಲು ಬಿಡದ ನೆನಪುಗಳು ನಮಗೆ ಬೇಡ’ ಎಂದು ಹೇಳಿದರು.

ಕಥೆಗಾರ ವಸುಧೇಂದ್ರ, ‘ಲೇಖಕನಿಗೆ ಹೊಸತನ್ನು ಕಾಣುವ ಕುತೂಹಲ ಮತ್ತು ಅನ್ವೇಷಣಾ ಸ್ವಭಾವ ಇದ್ದರೆ, ಆ ಕೃತಿಯಲ್ಲಿ ಹೊಸತನ ಇರುತ್ತದೆ. ಗದ್ಯವನ್ನು ಪದ್ಯರೂಪದಲ್ಲಿ ಬರೆಯುವ ವಿಶಿಷ್ಟ ಲೇಖಕ ದತ್ತಾತ್ರಿ. ಅವರು ಸಾಹಿತ್ಯದೊಂದಿಗೆ ರಾಜಕೀಯ, ವಿಜ್ಞಾನ, ಗಣಿತ, ಪರಿಸರ ಎಲ್ಲವನ್ನೂ ಓದಿದ್ದಾರೆ. ಅದೆಲ್ಲವೂ ಅವರ ಸಾಹಿತ್ಯದಲ್ಲಿ ಕಾಣುತ್ತದೆ. ಕಾದಂಬರಿಯಿರಲಿ, ಕಥೆಯಿರಲಿ ವಿದ್ವತ್ತೇ ಮುಖ್ಯ. ಅದಿಲ್ಲದಿದ್ದರೆ ಬರಹ ಶುಷ್ಕವಾಗುತ್ತದೆ. ಅಂತಹ ವಿದ್ವತ್ ಅವರ ಬರಹದಲ್ಲಿದೆ’ ಎಂದು ಅಭಿನಂದಿಸಿದರು.

ಎಂ.ಆರ್‌. ದತ್ತಾತ್ರಿ, ‘ನಾನಿರುವ ಐಟಿ ಕ್ಷೇತ್ರದಲ್ಲಿ ಕಡಿಮೆ ಬರೆದಷ್ಟು ಒಳ್ಳೆಯದು. ಅಲ್ಲಿ ಭಾಷೆ, ವ್ಯಾಕರಣದ ಅಗತ್ಯವಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ನನ್ನ ಸಾಧನೆ ಬಹಳ ಕಡಿಮೆ. ಆದರೆ, ಹಿರಿಯ ಸಾಹಿತಿಗಳ ಪ್ರೋತ್ಸಾಹ ದೊರೆತಿರುವುದು ಅದೃಷ್ಟ. ಅವರು ನನ್ನ ಬರಹವನ್ನು ತಿದ್ದಿ, ಉತ್ತಮ ಬರಹ ಹೊರಹೊಮ್ಮಲು ಕಾರಣರಾಗಿದ್ದಾರೆ’ ಎಂದರು.

ಈ ಪ್ರಶಸ್ತಿಯು ₹10 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT