ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಟೋನ್ಮೆಂಟ್‌ ನಿಲ್ದಾಣ ಸ್ಥಳಾಂತರ: ಸಂಸದ ವಿರೋಧ

ರೈಲು ನಿಲ್ದಾಣ ಪಕ್ಕದಲ್ಲೇ ಮೆಟ್ರೊ ನಿಲ್ದಾಣಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಡೇರಿ ವೃತ್ತ– ನಾಗವಾರ ಸುರಂಗ ಮಾರ್ಗದಲ್ಲಿ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಬಳಿ ಮೆಟ್ರೊ ನಿಲ್ದಾಣ ನಿರ್ಮಿಸುವ ಬದಲು ಬಂಬೂ ಬಜಾರ್ ಮೈದಾನದ ಬಳಿ ನಿರ್ಮಿಸುವ ನಿರ್ಧಾರಕ್ಕೆ ಸಂಸದ ಪಿ.ಸಿ.ಮೋಹನ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್‍) ನಿಗದಿಪಡಿಸಿದ್ದಂತೆ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ ಮುಖ್ಯದ್ವಾರದ ಬಳಿಯ ವಾಹನ ನಿಲುಗಡೆ ಪ್ರದೇಶದ ಕೆಳಗೆ ಮೆಟ್ರೊ ನಿಲ್ದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

‘ಯಾವುದೇ ತಾಂತ್ರಿಕ ಮೌಲ್ಯಮಾಪನವಿಲ್ಲದೆಯೇ ಯೋಜನೆಯ ವಿನ್ಯಾಸವನ್ನು ನಿಗಮವು ಬದಲಿಸುತ್ತಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಸ್ಥಳ ಬದಲಾವಣೆಯನ್ನು ಸಮರ್ಥಿಸಿಕೊಳ್ಳಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ನೀಡಿದ್ದ ವಿವರಣೆಗಳನ್ನು ಅವರು ಪ್ರಶ್ನೆ ಮಾಡಿದ್ದಾರೆ.

‘ಯೋಜನೆಯ ಮೂಲ ವಿನ್ಯಾಸವು ಅನೇಕ ತಿರುವುಗಳನ್ನು ಹೊಂದಿದೆ. ಆದ್ದರಿಂದ ಮೆಟ್ರೊ ರೈಲಿನ ವೇಗವು ಪ್ರತಿ ಗಂಟೆಗೆ 30 ಕಿ.ಮೀಗಿಂತಲೂ ಕಡಿಮೆಯಾಗುತ್ತದೆ ಎಂದು ನಿಗಮ ಹೇಳಿದೆ. ಇಲ್ಲಿ ಎರಡು ಮೆಟ್ರೊ ನಿಲ್ದಾಣಗಳ ನಡುವಿನ ಅಂತರ ಸರಾಸರಿ 1 ಕಿ.ಮೀ. ಇದೆ. ಆದ್ದರಿಂದ, ರೈಲಿನ ವೇಗದ ಪ್ರಶ್ನೆ ಉದ್ಭವಿಸದು. ಎರಡು ನಿಲ್ದಾಣಗಳ ನಡುವಿನ ಅಂತರ 3ರಿಂದ 4 ಕಿ.ಮೀ.ಗಳಷ್ಟಿದ್ದರೆ ಮಾತ್ರ ರೈಲು ಗಂಟೆಗೆ 100 ಕಿ.ಮೀ. ವೇಗದಲ್ಲಿ  ಚಲಿಸಬೇಕಾಗುತ್ತದೆ’ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.

‘ಕಂಟೋನ್ಮೆಂಟ್‌ ನಿಲ್ದಾಣದ ರೈಲ್ವೆ ಹಳಿಯಿಂದ 30 ಮೀಟರ್ ಆಳದಲ್ಲಿ ಸುರಂಗ ಮಾರ್ಗ ನಿರ್ಮಿಸಬೇಕಾಗುತ್ತದೆ ಎಂದು ತಪ್ಪು ಮಾಹಿತಿ ನೀಡುವ ಮೂಲಕ ನಿಗಮ ದಿಕ್ಕು ತಪ್ಪಿಸುತ್ತಿದೆ. ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳ ಕೆಳಭಾಗದಲ್ಲಿ ಕೇವಲ 8 ಮೀಟರ್‍ ಆಳದಲ್ಲಿ ಮೆಟ್ರೊ ಸುರಂಗ ಮಾರ್ಗ ಹಾದುಹೋಗಿದೆ’ ಎಂದು ಅವರು ಗಮನ ಸೆಳೆದಿದ್ದಾರೆ.

‘ಹೊಸ ವಿನ್ಯಾಸದಿಂದ ಪ್ರಯಾಣದ ಸಮಯ ಕಡಿತವಾಗಲಿದೆ. ನಿರ್ಮಾಣ ಅವಧಿ ಹಾಗೂ ₹ 1,000  ಕೋಟಿ ಉಳಿತಾವಾಗಲಿದೆ ಎಂದು ನಿಗಮ ಹೇಳಿದೆ. ಕೇಂದ್ರ ಸರ್ಕಾರವು 2ನೇ ಹಂತದ ಯೋಜನೆಗೆ ಅನುಮತಿ ನೀಡಿದ್ದು 2014ರ ಫೆಬ್ರುವರಿಯಲ್ಲಿ. ಮೂರು ವರ್ಷಗಳ ನಂತರ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಈಗ ವಿನ್ಯಾಸ ಬದಲಿಸುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಹೊಸ ವಿನ್ಯಾಸ ಹೆಚ್ಚು ಸುರಕ್ಷಿತ. ಸುರಂಗ ಕೊರೆಯುವ ಯಂತ್ರದಲ್ಲಿ (ಟಿಬಿಎಂ) ದೋಷ ಕಾಣಿಸಿಕೊಂಡರೆ ಸುರಂಗ ನಿರ್ಮಾಣ ಕಾರ್ಯವನ್ನು ಸುಗಮಗೊಳಿಸಲು ಕಟ್ಟಡಗಳ ತೆರವುಗೊಳಿಸಬೇಕಾಗುತ್ತದೆ ಎಂದು ನಿಗಮ ಹೇಳುತ್ತಿದೆ. ದೆಹಲಿಯಲ್ಲಿ ಜನ ದಟ್ಟಣೆ ಪ್ರದೇಶದ ಕೆಳಗೆ ಯಾವುದೇ ಸಮಸ್ಯೆ ಇಲ್ಲದೆಯೇ ಸುರಂಗ ನಿರ್ಮಿಸಲಾಗಿದೆ’ ಎಂದು ಅವರು ಗಮನ ಸೆಳೆದಿದ್ದಾರೆ.

‘ಸುರಂಗದಲ್ಲಿ ಮೆಟ್ರೊ ರೈಲು ಸಂಚರಿಸುವಾಗ ತುರ್ತು ಸನ್ನಿವೇಶ ಎದುರಾದರೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರುವ ಬಗ್ಗೆ ಪರಿಗಣಿಸಬೇಕಾಗುತ್ತದೆ ಎಂದು ನಿಗಮ ಹೇಳಿದೆ. ನವದೆಹಲಿಯ ರಾಜೀವ್ ಚೌಕದಿಂದ 40 ಮೀಟರ್ ಆಳದಲ್ಲಿ ಮತ್ತೊಂದು ದೆಹಲಿ ಏರ್‌ಪೋರ್ಟ್‌ ಎಕ್ಸ್‌ಪ್ರೆಸ್ ರೈಲು ಸುರಂಗ ಮಾರ್ಗ ಇದೆ.  ಈ ಮಾರ್ಗದಲ್ಲಿ ಎರಡು ನಿಲ್ದಾಣಗಳ ನಡುವೆ 3 ಕಿ.ಮೀ. ಅಂತರವಿದೆ. ಆದರೆ, ಇದಕ್ಕೆ ಅನುಗುಣವಾಗಿ ತಾಂತ್ರಿಕ ಹಾಗೂ ಸುರಕ್ಷತಾ ವಿಧಾನ ರೂಪಿಸಲಾಗಿದೆ. 40ರಿಂದ 50 ಮೀಟರ್ ಆಳದಲ್ಲಿ ಸುರಂಗ ಕೊರೆಯಲು ಇಂದಿನ ತಾಂತ್ರಿಕತೆ ಸಮರ್ಥವಾಗಿದೆ. ಜಗತ್ತಿನ ಅನೇಕ ಸುರಂಗ ಮಾರ್ಗಗಳನ್ನು 40 ಮೀಟರ್ ಆಳದಲ್ಲೇ ನಿರ್ಮಿಸಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

***

ಈಗಲೂ ಕಾಲ ಮಿಂಚಿಲ್ಲ. ಈ ಮೂಲಸೌಕರ್ಯ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವಂತಿರಬೇಕು. ನೂತನ ವಿನ್ಯಾಸಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ. ಹಾಗಾಗಿ ರೈಲ್ವೆ ಇಲಾಖೆ, ಬಿಎಂಆರ್‍ಸಿಎಲ್, ನಗರಾಭಿವೃದ್ಧಿ ಇಲಾಖೆ ಹಾಗೂ ತಜ್ಞರು ದೆಹಲಿಯಲ್ಲಿ ಸೇರಿ ಗೊಂದಲ ಬಗೆಹರಿಸಬೇಕು
ಪಿ.ಸಿ.ಮೋಹನ್‌, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT