ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿರಂಗಿ ಸ್ಫೋಟದಕ್ಕೆ ದೋಷಪೂರಿತ ಮದ್ದುಗುಂಡು ಕಾರಣ

Last Updated 24 ಸೆಪ್ಟೆಂಬರ್ 2017, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜಸ್ಥಾನದ ಪೋಖ್ರಾನ್‌ನಲ್ಲಿ ತಾಲೀಮು ನಡೆಸುತ್ತಿದ್ದ ಸಂದರ್ಭದಲ್ಲಿ ಅತ್ಯಂತ ಹಗುರ (ಯುಎಲ್‌ಎಚ್‌) ‘ಹೌವಿಟ್ಜರ್‌ ಎಂ–777’ ಫಿರಂಗಿ ಸ್ಫೋಟಗೊಳ್ಳಲು ದೋಷಪೂರಿತ ಮದ್ದುಗುಂಡು (ಸ್ಫೋಟಕ ಸಾಮಗ್ರಿ) ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಭಾರತೀಯ ಸೇನೆ ಇತ್ತೀಚೆಗಷ್ಟೇ ಈ ಫಿರಂಗಿಯನ್ನು ಅಮೆರಿಕದಿಂದ ಖರೀದಿಸಿತ್ತು. ಸೆಪ್ಟೆಂಬರ್‌ 2ರಂದು ಮದ್ದುಗುಂಡನ್ನು ಸ್ಫೋಟಿಸುವ ಸಂದರ್ಭ
ದಲ್ಲಿ ಫಿರಂಗಿಯ ನಳಿಕೆ (ಬ್ಯಾರೆಲ್‌) ಸ್ಫೋಟಗೊಂಡಿತ್ತು.

‘ಶಸ್ತ್ರಾಸ್ತ್ರ ತಯಾರಿಕಾ ಮಂಡಳಿ (ಒಎಫ್‌ಬಿ) ಈ ಮದ್ದುಗುಂಡನ್ನು ಪೂರೈಸಿತ್ತು. ಈ ಪ್ರಕರಣದ ಬಗ್ಗೆ ಇನ್ನಷ್ಟು ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಮೂಲಗಳು ಹೇಳಿವೆ.

ಪ್ರಾಥಮಿಕ ತನಿಖೆಯ ವಿವರಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಒಎಫ್‌ಬಿ ವಕ್ತಾರ ಉದ್ದೀಪನ್‌ ಮುಖರ್ಜಿ, ‘ಫಿರಂಗಿಯ ಕೊಳವೆಯ ಒಳಗಡೆ ಮದ್ದುಗುಂಡುಗಳು ಅತ್ಯಂತ ವೇಗವಾಗಿ ಚಲಿಸುವುದರಿಂದ ಫಿರಂಗಿಯಲ್ಲಿ ಆಂತರಿಕವಾಗಿ ನಡೆಯುವ ಅತ್ಯಂತ ಸಂಕೀರ್ಣ ಚಟುವಟಿಕೆಗಳಿಂದಾಗಿ ಇಂತಹ ವೈಫಲ್ಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದ್ದಾರೆ.

ಇಂತಹ ವೈಫಲ್ಯಗಳಿಗೆ ಹಲವು ಕಾರಣಗಳು ಇರಬಹುದು. ಮದ್ದುಗುಂಡಿನ ಗುಣಮಟ್ಟ ಮಾತ್ರ ಏಕೈಕ ಕಾರಣವಾಗಿರದು ಎಂದು ಅವರು ಹೇಳಿದ್ದಾರೆ.

ತನಿಖೆಯಿಂದ ತಿಳಿದು ಬಂದಿರುವ ವಿಷಯಗಳ ಕುರಿತು ನೇರವಾಗಿ ಪ್ರತಿಕ್ರಿಯಿಸದ ಅವರು, ಎಂ–777 ಫಿರಂಗಿಯಲ್ಲಿ ಬಳಸಿದ್ದ ಮದ್ದುಗುಂಡನ್ನು ಎಲ್ಲ ರೀತಿಯ ಗುಣಮಟ್ಟ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು ಎಂದು ಹೇಳಿದ್ದಾರೆ.

ಅತ್ಯಾಧುನಿಕ ಮತ್ತು ಅತ್ಯಂತ ಹಗುರವಾದ ಎರಡು ಎಂ–777 ಫಿರಂಗಿಗಳನ್ನು ಮೇ ತಿಂಗಳಲ್ಲಿ ಅಮೆರಿಕದಿಂದ ತರಲಾಗಿತ್ತು. ತಲಾ ₹35 ಕೋಟಿ ಬೆಲೆ ಬಾಳುವ ಈ ಫಿರಂಗಿಗಳನ್ನು ಬೊಫೋರ್ಸ್‌ ಹಗರಣ ನಡೆದು ಮೂರು ದಶಕಗಳ ನಂತರ ಖರೀದಿಸಲಾಗಿತ್ತು. ಈಗ ಈ ಎರಡರ ಪೈಕಿ ಒಂದರಲ್ಲಿ ಅವಘಡ ಸಂಭವಿಸಿದೆ.

ಸ್ಫೋಟದಿಂದಾಗಿ ಫಿರಂಗಿಯ ನಳಿಕೆಗೆ ಹಾನಿಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT