ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಾರಸ್‌ ವಿ.ವಿಯಲ್ಲಿ ಹಿಂಸಾಚಾರ

ವಿದ್ಯಾರ್ಥಿನಿಗೆ ಚುಡಾಯಿಸಿದ ಪ್ರಕರಣ, ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಲಾಠಿಪ್ರಹಾರ
Last Updated 24 ಸೆಪ್ಟೆಂಬರ್ 2017, 19:54 IST
ಅಕ್ಷರ ಗಾತ್ರ

ವಾರಾಣಸಿ: ವಿದ್ಯಾರ್ಥಿನಿಯನ್ನು ಚುಡಾಯಿಸಿದ ಕಾರಣಕ್ಕೆ ನಡೆಸಿದ ಪ್ರತಿಭಟನೆ ವಿಕೋ‍ಪಕ್ಕೆ ತಿರುಗಿ ಪೊಲೀಸರು ಲಾಠಿಪ್ರಹಾರ ಮಾಡಿದ ಘಟನೆ ಬನಾಸರ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಶನಿವಾರ ರಾತ್ರಿ ನಡೆದಿದೆ. ಹಲವು ವಿದ್ಯಾರ್ಥಿಗಳು, ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗಲಭೆಯ ಕಾರಣದಿಂದಾಗಿ ಈ 25ರಿಂದ ಅಕ್ಟೋಬರ್‌ 2ವರೆಗೆ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ.

ಕಲಾ ವಿಭಾಗದ ವಿದ್ಯಾರ್ಥಿನಿಯೊಬ್ಬರು ತರಗತಿ ಮುಗಿಸಿಕೊಂಡು ಹಾಸ್ಟೆಲ್‌ಗೆ ಮರಳುತ್ತಿದ್ದ ವೇಳೆ ಮೋಟಾರ್‌ ಸೈಕಲ್‌ನಲ್ಲಿ ಬಂದ ಮೂವರು ಪುರುಷರು ಆಕೆಯನ್ನು ಚುಡಾಯಿಸಿದ್ದರು. ಆಕೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆ ಅಲ್ಲಿಂದ ಪಲಾಯನ ಮಾಡಿದ್ದರು. ಈ ಘಟನೆಯ ಸಂಬಂಧ ಕುಲಪತಿಗಳ ಭೇಟಿಗೆಂದು ತೆರಳಿದ ಪ್ರತಿಭಟನಾಕಾರರನ್ನು ಭದ್ರತಾಸಿಬ್ಬಂದಿ ತಡೆದು, ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ವಿವಿಯ ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳ ಜೊತೆ ಪ್ರತಿಭಟನೆಯಲ್ಲಿ ಸೇರಿಕೊಂಡ ಹೊರಗಿನ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಲಾಠಿ ಪ್ರಹಾರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಯುವಕರು ಚುಡಾಯಿಸಿರುವ ಬಗ್ಗೆ ಗುರುವಾರ ರಾತ್ರಿ ವಿದ್ಯಾರ್ಥಿನಿ ಹಾಸ್ಟೆಲ್‌ ವಾರ್ಡನ್‌ ಗಮನಕ್ಕೆ ತಂದಿದ್ದಾಳೆ. ಆದರೆ, ಈ ವಿಚಾರವನ್ನು ಆಡಳಿತ ಮಂಡಳಿಯ ಗಮನಕ್ಕೆ ತರುವ ಬದಲು, ‘ತಡವಾಗಿ ಯಾಕೆ ಬಂದೆ’ ಎಂದು ವಿದ್ಯಾರ್ಥಿನಿಯನ್ನು ವಾರ್ಡನ್‌ ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹಾಸ್ಟೆಲ್‌ ವಿದ್ಯಾರ್ಥಿನಿಯರು ಗುರುವಾರ ರಾತ್ರಿಯೇ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಪತ್ರಕರ್ತರ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸಿರುವುದನ್ನು ಖಂಡಿಸಿ ಪತ್ರಕರ್ತರು ಪ್ರತಿಭಟನೆ ನಡೆಸಿದರು. ಕೆಲವರು ಲಖನೌದಲ್ಲಿರುವ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸಿದರು. ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕಚೇರಿಗೆ ತೆರಳಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿಪತ್ರ ಸಲ್ಲಿಸಿದರು.

ವರದಿ ಕೇಳಿದ ಮುಖ್ಯಮಂತ್ರಿ
ಸಮಾಜವಾದಿ ಪಕ್ಷ ಸೇರಿದಂತೆ ವಿವಿಧ ಪಕ್ಷಗಳು ಪೊಲೀಸರ ದೌರ್ಜನ್ಯವನ್ನು ಖಂಡಿಸಿದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ವಿಭಾಗೀಯ ಆಯುಕ್ತರಿಂದ ಘಟನೆಯ ಕುರಿತು ವರದಿ ಕೇಳಿದ್ದಾರೆ.

ಹಿರಿಯ ಅಧಿಕಾರಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್‌ ಯೋಗೇಶ್ವರ್‌ ರಾಮ್‌ ಮಿಶ್ರಾ, ನಗರ ಎಸ್‌ಪಿ ದಿನೇಶ್‌ ಸಿಂಗ್‌ ಮತ್ತು ಸುಮಾರು 1,500 ಪೊಲೀಸ್‌ ಸಿಬ್ಬಂದಿ  ಕ್ಯಾಂಪಸ್‌ಗೆ ಧಾವಿಸಿದ್ದಾರೆ.

ಶರದ್‌ ಯಾದವ್‌ ಖಂಡನೆ
ನವದೆಹಲಿ: ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ಹೆಣ್ಣುಮಕ್ಕಳನ್ನು ಚುಡಾಯಿಸುವ ಪ್ರಕರಣಗಳು ಹೆಚ್ಚುತ್ತಿರುವುದರ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯವನ್ನು  ಜನತಾದಳ(ಸಂಯುಕ್ತ)ದ ಹಿರಿಯ ಮುಖಂಡ ಶರದ್‌ ಯಾದವ್‌ ಖಂಡಿಸಿದ್ದಾರೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.

ಬನಾರಸ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಚುಡಾಯಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಿದೆ. ಆದರೆ, ಇದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ‘ಈ ಪ್ರತಿಭಟನೆ ರಾಜಕೀಯ ಪ್ರೇರಿತ. ವಿಶ್ವವಿದ್ಯಾಲಯದ ಹೆಸರು ಕೆಡಿಸುವ ಪ್ರಯತ್ನವಿದು’ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ಅಖಿಲೇಶ್‌ ಖಂಡನೆ: ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ ನಡೆಸಿರುವುದನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಖಂಡಿಸಿದ್ದಾರೆ. ‘ಸರ್ಕಾರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಬೇಕೇ ಹೊರತು, ಲಾಠಿಪ್ರಹಾರದಿಂದ ಅಲ್ಲ. ಇದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.
*
‘ ಬೇಟಿ ಬಚಾವೊ, ಬೇಟಿ ಪಢಾವೊ’ ಎಂದರೆ ಹೆಣ್ಣುಮಕ್ಕಳ ಮೇಲೆ ಲಾಟಿ ಪ್ರಹಾರ ಮಾಡುವುದೇ ?
–ರಾಹುಲ್‌ ಗಾಂಧಿ,
ಕಾಂಗ್ರೆಸ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT