ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲ್ಯಾಂಟೇಷನ್‌ ಉದ್ದಿಮೆಗೆ ಬೇಕು ಕಾಯಕಲ್ಪ

Last Updated 26 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಾಫಿ, ಚಹ, ರಬ್ಬರ್‌ ಒಳಗೊಂಡಿರುವ ಪ್ಲಾಂಟೇಷನ್‌ ಉದ್ದಿಮೆಯು, ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ (ಕಾಫಿ), ತಮಿಳುನಾಡು (ಚಹ) ಮತ್ತು ಕೇರಳದ (ರಬ್ಬರ್‌, ಕಾಫಿ ಹಾಗೂ ಮಸಾಲೆ ಬೆಳೆ) ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ.

12.5 ಲಕ್ಷದಷ್ಟು ಬೆಳೆಗಾರರು ಮತ್ತು ಅಷ್ಟೇ ಸಂಖ್ಯೆಯ ಕಾರ್ಮಿಕರು ಇದೇ ಉದ್ದಿಮೆಯನ್ನು ಶಾಶ್ವತವಾಗಿ ನೆಚ್ಚಿಕೊಂಡಿದ್ದಾರೆ. ಈ ಬೆಳೆಗಳ ಬೆಲೆಯು ಜಾಗತಿಕ ಬೆಲೆ ಏರಿಳಿತವನ್ನು ಹೆಚ್ಚಾಗಿ ಅವಲಂಬಿಸಿದೆ.

‘ಪ್ಲ್ಯಾಂಟೇಷನ್‌ ಉದ್ದಿಮೆಯು ನೋಟು ರದ್ದತಿಯ ‍ಪ್ರತಿಕೂಲತೆ, ಜಿಎಸ್‌ಜಿ ಬಿಲ್ಲಿಂಗ್‌ನಲ್ಲಿ ಸ್ಪಷ್ಟತೆ ಇಲ್ಲದಿರುವ, ಕೃಷಿ ವಲಯದಲ್ಲಿನ ಹಿಂಜರಿಕೆ, ಬೆಲೆಗಳ ಎರ್ರಾಬಿರ್ರಿ ಏರಿಳಿತ ಮತ್ತು ಕಚ್ಚಾ ಸರಕಿನ ವೆಚ್ಚ ಹೆಚ್ಚಳದ ಸವಾಲುಗಳನ್ನು ಪ್ರಮುಖವಾಗಿ ಎದುರಿಸುತ್ತಿದೆ’ ಎಂದು ದಕ್ಷಿಣ ಭಾರತ ಪ್ಲ್ಯಾಂಟರ್ಸ್‌ ಸಂಘದ (ಉಪಾಸಿ) ನಿರ್ಗಮಿತ ಅಧ್ಯಕ್ಷ ದೊಡ್ಡಮನೆ ವಿನೋದ ಶಿವಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಉದ್ದಿಮೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸುಸ್ಥಿರ ಬೆಂಬಲ ಬೇಕಾಗಿದೆ. ಉದ್ದಿಮೆಯ ಬೆಳವಣಿಗೆಗೆ ಪೂರಕವಾದ ಹಲವಾರು ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬೇಕಾಗಿದೆ’ ಎಂಬುದು ಅವರ ಹಕ್ಕೊತ್ತಾಯವಾಗಿದೆ.

ಕುಣ್ಣೂರಿನಲ್ಲಿ ನಡೆದ ‘ಉಪಾಸಿ’ಯ 124ನೆ ವಾರ್ಷಿಕ ಸಭೆಯಲ್ಲಿ ಅವರು ಈ ಸಂಬಂಧ ಕೇಂದ್ರ ಸರ್ಕಾರದ ಮುಂದೆ ಉದ್ದಿಮೆಯ ಹಕ್ಕೊತ್ತಾಯಗಳ ಪಟ್ಟಿ ಮುಂದಿಟ್ಟಿರುವುದನ್ನು ಅವರು ಇಲ್ಲಿ ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

‘ತೋಟದ ಬೆಳೆಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಈ ಉದ್ದಿಮೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿದೆ. ದಕ್ಷಿಣ ಭಾರತದ ಪರಿಸರ ಸಮತೋಲನ ಕಾಪಾಡಿಕೊಂಡು ಬರುವಲ್ಲಿಯೂ ಈ ಉದ್ದಿಮೆ ನೆರವಾಗುತ್ತಿದೆ. ಆರ್ಥಿಕ ಪರಿಸ್ಥಿತಿಯು ತಿಳಿಯಾಗುತ್ತಿದ್ದಂತೆ, ಉದ್ದಿಮೆಯ ಸ್ಥಿರತೆ ಮತ್ತು ಖಚಿತ ಭವಿಷ್ಯದ ಕುರಿತು ನಾವು ಆಶಾವಾದ ತಳೆಯಬೇಕಾಗಿದೆ’ ಎಂದೂ ಅವರು ಹೇಳುತ್ತಾರೆ.

ಆರ್ಥಿಕತೆಗೆ ಕೊಡುಗೆ

‘ದೇಶಿ ಆರ್ಥಿಕತೆಯಲ್ಲಿ ಪ್ಲ್ಯಾಂಟೇಷನ್‌ ವಲಯವು ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಹಿಂದುಳಿದ ಮತ್ತು ದೂರದ  ಗುಡ್ಡಗಾಡು ಪ್ರದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿದೆ. ಬಹುತೇಕ ಕೆಲಸಗಾರರು ಮಹಿಳೆಯರೇ ಆಗಿದ್ದಾರೆ.

(ಚಹಾ ತೋಟ)

‘ಪ್ಲಾಂಟೇಷನ್‌ ಕಾರ್ಮಿಕರ ಕಾಯ್ದೆ ಅನ್ವಯ, ಉದ್ದಿಮೆಯು ಕಾರ್ಮಿಕರು ಮತ್ತು ಅವರ ಕುಟುಂಬಗಳಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಸೌಲಭ್ಯವನ್ನೂ ಒದಗಿಸಲಾಗಿದೆ. ಸರ್ಕಾರವು ಈ ಕಾರ್ಮಿಕರಿಗೆಂದೇ ಪ್ರತ್ಯೇಕ ವೈದ್ಯಕೀಯ ಸೌಲಭ್ಯ ಕಲ್ಪಿಸಿಕೊಡುವ ಅಗತ್ಯ ಇದೆ.

‘ಈಗ ಕೇಂದ್ರ ಸರ್ಕಾರ ‘ವೇತನ ಸಂಹಿತೆ’ ಜಾರಿಗೆ ತರಲು ಮುಂದಾಗಿದ್ದು, ರಾಷ್ಟ್ರೀಯ ಕನಿಷ್ಠ ವೇತನ ನಿಗದಿ ಮಾಡಲಿದೆ. ಈ ನಿರ್ಧಾರ ಜಾರಿಗೆ ತರಲು ಸರ್ಕಾರ ಅವಸರ ತೋರಬಾರದು. ಈ ಉದ್ದಿಮೆಯ ಎಲ್ಲ ಪಾಲುದಾರರ ಅಭಿಪ್ರಾಯ ಪರಿಗಣನೆಗೆ ತೆಗೆದುಕೊಂಡು ನಿರ್ಧಾರಕ್ಕೆ ಬರಬೇಕು. ಅವಸರದಲ್ಲಿ ತಿದ್ದುಪಡಿ ತಂದ ‘ಬೋನಸ್‌ ಪಾವತಿ (ತಿದ್ದುಪಡಿ) ಕಾಯ್ದೆ 2015’ ವಿರುದ್ಧ ವಿವಿಧ ಕೋರ್ಟ್‌ಗಳಲ್ಲಿ ಹಲವಾರು ರಿಟ್‌ ಅರ್ಜಿಗಳು ದಾಖಲಾಗಿವೆ. ಈ ಎಲ್ಲ ರಿಟ್‌ ಅರ್ಜಿಗಳು ಈಗ ಸುಪ್ರೀಂಕೋರ್ಟ್‌ ಮುಂದೆ ಇವೆ. ರಾಷ್ಟ್ರೀಯ ಕನಿಷ್ಠ ವೇತನ ನೀತಿಗೂ ಇದೇ ಗತಿ ಬರಬಾರದು ಎನ್ನುವುದು ‘ಉಪಾಸಿ’ಯ ಕಾಳಜಿಯಾಗಿದೆ’ ಎಂದು ಅವರು ಹೇಳುತ್ತಾರೆ.

‘ಈ ವಲಯವು ಗರಿಷ್ಠ ಪ್ರಮಾಣದಲ್ಲಿ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿದೆ. ಉದ್ದಿಮೆಯು ಬೆಳೆಯಲು ನಿಯಂತ್ರಣ ಮುಕ್ತ ವ್ಯವಸ್ಥೆ ಇರಬೇಕು. ಉದ್ದಿಮೆಯ ಎಲ್ಲ ಪಾಲುದಾರರ ನಿರೀಕ್ಷೆಗಳನ್ನು ನಿಜ ಮಾಡಲು ಸಮರ್ಪಕವಾದ ನಿಯಂತ್ರಣ ಕ್ರಮಗಳು ಹಿತಮಿತ ಪ್ರಮಾಣದಲ್ಲಿ ಇರಬೇಕು’ ಎಂದು ಹೇಳುತ್ತಾರೆ.

‘ಪ್ಲಾಂಟೇಷನ್‌ ವಲಯದಲ್ಲಿ ಸ್ವಯಂಚಾಲಿತ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಡಲಾಗಿದೆ. ಅಡಿಕೆ, ಸಂಬಾರ ಪದಾರ್ಥಗಳಿಗೂ ಈ ನಿಯಮ ಅನ್ವಯಿಸಬೇಕಾಗಿದೆ’ ಎಂದು ಅವರು ಒತ್ತಾಯಿಸಿದ್ದಾರೆ.

ಸಾಲ ಸೌಲಭ್ಯ

‘ಸರ್ಕಾರವು ಕೃಷಿ ವಲಯಕ್ಕೆ ನೀಡುವ ಬಡ್ಡಿ ದರದಲ್ಲಿಯೇ ಪ್ಲಾಂಟೇಷನ್‌ ಉದ್ದಿಮೆಗೂ ಸಾಲ ನೀಡಬೇಕು. ತೆರಿಗೆ ವಿನಾಯ್ತಿ ಸೌಲಭ್ಯವನ್ನೂ ವಿಸ್ತರಿಸಬೇಕು.ಇದರಿಂದ ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ ಅಳವಡಿಕೆ ಸುಲಭವಾಗಲಿದೆ’ ಎಂಬುದು ಅವರ ಅನಿಸಿಕೆಯಾಗಿದೆ.

ಚಹ: ಸತತ ಎರಡು ವರ್ಷಗಳ ಕಾಲ ಕುಸಿತ ಕಂಡಿದ್ದ ದೇಶಿ ಚಹ ಉತ್ಪಾದನೆಯು  ಪ್ರಸಕ್ತ ಸಾಲಿನ ಮೊದಲ 7 ತಿಂಗಳಲ್ಲಿ  ಕೆಲ ಮಟ್ಟಿಗೆ ಪ್ರಗತಿ ಕಂಡಿದೆ. ಜುಲೈ ತಿಂಗಳಾಂತ್ಯಕ್ಕೆ  ದಕ್ಷಿಣ ಭಾರತದ ರಾಜ್ಯಗಳಲ್ಲಿ ಶೇ 12.8ರಷ್ಟು ಏರಿಕೆಯಾಗಿದ್ದು, 13.66 ಕೋಟಿ ಕೆಜಿಗಳಷ್ಟಾಗಿದೆ.

ಕಾಫಿ: 2016–17ರಲ್ಲಿ ಕಾಫಿ ಉತ್ಪಾದನೆಯು 3.20 ಲಕ್ಷ ಟನ್‌ಗಳಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಉತ್ಪಾದನೆ ಕುಸಿದಿದ್ದರೂ, ರಫ್ತು ವಹಿವಾಟು ಸುಧಾರಣೆ ಕಂಡಿದೆ.

(ಕಾಫಿ)

ರಬ್ಬರ್‌: ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣಕ್ಕೆ ರಬ್ಬರ್‌ ಉತ್ಪಾದನೆ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಜುಲೈ ಅಂತ್ಯಕ್ಕೆ 14 ಸಾವಿರ ಟನ್‌ಗಳಷ್ಟು ಹೆಚ್ಚಾಗಿ 2.01 ಲಕ್ಷ ಟನ್‌ಗಳಿಗೆ ತಲುಪಿದೆ.

ಏಲಕ್ಕಿ: ಏಲಕ್ಕಿ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ ಎರಡನೆ ಅತಿದೊಡ್ಡ ದೇಶವಾಗಿದೆ. 2016–17ರಲ್ಲಿ ಉತ್ಪಾದನೆಯು 23,890 ಟನ್‌ಗಳಿಂದ 19,625 ಟನ್‌ಗಳಿಗೆ ಇಳಿದಿದೆ.

ಸಂಶೋಧನೆಯ ಮಹತ್ವ

ಪ್ಲ್ಯಾಂಟೇಷನ್‌ ಉದ್ದಿಮೆಯು ಸದ್ಯಕ್ಕೆ ಡೋಲಾಯಮಾನ ಪರಿಸ್ಥಿತಿ ಎದುರಿಸುತ್ತಿದೆ. ಒಂದೆಡೆ ಅನೇಕ ಕಾರಣಗಳಿಗೆ ದೊಡ್ಡ ಪ್ರಮಾಣದಲ್ಲಿ ಯಾಂತ್ರೀಕರಣ ಅಳವಡಿಕೆ ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ  ಬೆಳೆ ಉತ್ಪಾದನೆ ಹೆಚ್ಚಿಸುವ ಅಗತ್ಯ ಉದ್ಭವಿಸಿದೆ.

ಚಹ, ಕಾಫಿ, ರಬ್ಬರ್‌, ಮೆಣಸು ಮತ್ತು ಏಲಕ್ಕಿಗಳ ಫಸಲಿನ ಪ್ರಮಾಣವು ದಿನೇ ದಿನೇ ಕಡಿಮೆಯಾಗುತ್ತಿರುವುದಕ್ಕೆ ‘ಉಪಾಸಿ’ ಆತಂಕ ವ್ಯಕ್ತಪಡಿಸಿದೆ.

ಪ್ಲ್ಯಾಂಟೇಷನ್‌ ಬೆಳೆಗಳ ಪೈಕಿ ಉದ್ದಿಮೆಯು ಚಹದ ಸಂಶೋಧನೆ ಮಾತ್ರ ಕೈಗೊಂಡಿದೆ. ರಬ್ಬರ್‌, ಕಾಫಿ ಮತ್ತು ಮಸಾಲೆ ಪದಾರ್ಥಗಳಿಗೆ ಸಂಬಂಧಿಸಿದಂತೆ  ಕೇಂದ್ರ ಸರ್ಕಾರದ ನೆರವು ಪಡೆದಿರುವ ವಿವಿಧ ಮಂಡಳಿಗಳು ಸಂಶೋಧನೆ ಕೈಗೊಂಡಿವೆ.

ಚಹ ಸಂಶೋಧನೆಗೆ ನೀಡಲಾಗುತ್ತಿದ್ದ ಹಣಕಾಸಿನ ನೆರವು ಶೇ  80ರಿಂದ ಶೇ 49ಕ್ಕೆ ಕುಸಿದಿದೆ. ಇದು ಸಂಶೋಧನಾ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕಳವಳ ವ್ಯಕ್ತಪಡಿಸಿರುವ ‘ಉಪಾಸಿ’, ಚಹ ಸಂಶೋಧನೆಗೆ ನೆರವಿನ ಪ್ರಮಾಣ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟಿದೆ.

ಇತರ ದೇಶಗಳಿಗಿಂತ ನಮ್ಮಲ್ಲಿನ ಕಾಫಿ ಸಂಶೋಧನೆ ಕಳಪೆ ಮಟ್ಟದಲ್ಲಿ ಇದೆ. ಚಹ, ರಬ್ಬರ್‌ ಮತ್ತು ಮಸಾಲೆ ಪದಾರ್ಥಗಳ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹೋಲಿಸಿದರೂ ಕಾಫಿಗೆ ಸಂಬಂಧಿಸಿದಂತೆ ಗಮನಾರ್ಹ ಬೆಳವಣಿಗೆ ಕಂಡು ಬರುತ್ತಿಲ್ಲ ಎಂಬುದು ‘ಉಪಾಸಿ’ಯ ಕಳವಳವಾಗಿದೆ.

ಉತ್ಪಾದನೆ ಮತ್ತು ಕೃಷಿ ಆರ್ಥಿಕತೆಯ ಇತರ ಚಟುವಟಿಕೆಗಳ ದೃಷ್ಟಿಯಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ತುರ್ತು ಅಗತ್ಯ ಇದೆ. ಈ ವಿಷಯದಲ್ಲಿ ಸಂಶೋಧನೆಯು ಮಹತ್ವದ ಪಾತ್ರ ನಿರ್ವಹಿಸುತ್ತದೆ.

ಜಾಗತಿಕ ಬೇಡಿಕೆ ಮತ್ತು ಪೂರೈಕೆ ಅಸಮಾನತೆಯ ಕಾರಣಕ್ಕೆ ರಬ್ಬರ್‌ಗೆ ಕಡಿಮೆ ಬೆಲೆ ಸಿಗುತ್ತಿದೆ. ಈ ಕಾರಣಕ್ಕೆ ಉತ್ಪಾದನೆಗೆ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉತ್ಪಾದನೆ ಹೆಚ್ಚಿಸಲು ಅಗತ್ಯ ಪ್ರಮಾಣದಲ್ಲಿ ಹಣಕಾಸಿನ ಬೆಂಬಲವೂ ಸಿಗಬೇಕಾಗಿದೆ ಎನ್ನುವುದು ‘ಉಪಾಸಿ’ಯ ಧೋರಣೆಯಾಗಿದೆ.

ದಕ್ಷಿಣ ಭಾರತ ಪ್ಲ್ಯಾಂಟರ್ಸ್‌ ಸಂಘವು (UPASI- ಉಪಾಸಿ) ಅಸ್ತಿತ್ವಕ್ಕೆ ಬಂದು 124 ವರ್ಷಗಳು (1893) ಪೂರ್ಣಗೊಂಡಿದ್ದು, 125ನೇ ವರ್ಷದ ಸಂಭ್ರಮಾಚರಣೆ ನಿಟ್ಟಿನಲ್ಲಿ ಸಾಗಿದೆ.

(ದೊಡ್ಡಮನೆ ವಿನೋದ ಶಿವಪ್ಪ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT