ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾಗೆ ‘ವಿರಾಟ್‌’ ಶಕ್ತಿ ಸವಾಲು

ಮಳೆಯ ಆತಂಕದ ನಡುವೆ ಬೆಂಗಳೂರಿನಲ್ಲಿ ನಾಲ್ಕನೇ ಏಕದಿನ ಪಂದ್ಯ: ಉಭಯ ತಂಡಗಳಿಗೆ ಜಯದ ಕಾತರ; ರಾಹುಲ್‌ಗೆ ಅವಕಾಶದ ನಿರೀಕ್ಷೆ
Last Updated 27 ಸೆಪ್ಟೆಂಬರ್ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ಸರಣಿ ಗೆದ್ದಾಯಿತು. ಆದರೂ ಜಯದ ದಾಹ ತೀರಲಿಲ್ಲ. ಕ್ರಿಕೆಟ್ ಲೋಕದ ಬಲಿಷ್ಠ ಶಕ್ತಿಗಳಲ್ಲಿ ಒಂದಾದ ಆಸ್ಟ್ರೇಲಿಯಾ ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧನೆ ಮಾಡುವ ಹಬ್ಬಯಕೆ ಭಾರತ ತಂಡದ್ದು.

ಇನ್ನೊಂದು ಕಡೆ ಕಳೆದ 13 ಪಂದ್ಯಗಳಲ್ಲಿ ಜಯದ ಸಿಹಿ ಸವಿಯಲು ಸಾಧ್ಯವಾಗದ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಸರಪಳಿಯನ್ನು ಛಿದ್ರಗೊಳಿಸಿ ನಗೆಸೂಸುವ ಬಯಕೆ. 0–3ರಿಂದ ಸರಣಿ ಸೋತರೂ ಉಳಿದ ಪಂದ್ಯಗಳಲ್ಲಿ ಗೌರವ ಉಳಿಸಿಕೊಳ್ಳುವ ಇರಾದೆ.

ಹೀಗಾಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ. ಈ ರೋಮಾಂಚನಕ್ಕೆ ಸಾಕ್ಷಿಯಾಗಲು ಕ್ರಿಕೆಟ್ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.

ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ 26 ರನ್‌ಗಳ ಜಯ ಗಳಿಸಿದ ಭಾರತ ತಂಡ ನಂತರ ಕೋಲ್ಕತ್ತದಲ್ಲಿ  50 ರನ್‌ಗಳಿಂದ ಮತ್ತು ಇಂದೋರ್‌ನಲ್ಲಿ ಐದು ವಿಕೆಟ್‌ಗಳಿಂದ ಗೆಲುವು ದಾಖಲಿಸಿತ್ತು. ಶ್ರೀಲಂಕಾ ವಿರುದ್ಧದ ಎಲ್ಲ ಪಂದ್ಯಗಳನ್ನು ಗೆದ್ದು ಬಂದ ತಂಡ ಸತತ ಎರಡನೇ ಬಾರಿ ಕ್ಲೀನ್ ಸ್ವೀಪ್ ಸಾಧನೆ ಮಾಡಲು ಇನ್ನು ಎರಡು ಹೆಜ್ಜೆಗಳು ಮಾತ್ರ ಉಳಿದಿವೆ.

ನಾಲ್ಕನೇ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ವರ್ಷಗಳ ನಂತರ ಏಕದಿನ ಪಂದ್ಯ ನಡೆಯುತ್ತಿದೆ. ಇಲ್ಲಿ ಕೊನೆಯದಾಗಿ ನಡೆದದ್ದು ಕೂಡ ಭಾರತ –ಆಸ್ಟ್ರೇಲಿಯಾ ಪಂದ್ಯ. 2013ರ ನವೆಂಬರ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ 57  ರನ್‌ಗಳ ಜಯ ಸಾಧಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ 209 ರನ್‌ ಗಳಿಸಿದ್ದರು. ಆ ಪಂದ್ಯದಲ್ಲಿ ಎರಡೂ ತಂಡಗಳು 300ಕ್ಕೂ ಅಧಿಕ ರನ್‌ ಗಳಿಸಿದ್ದವು. ಹೀಗಾಗಿ ಈ ಬಾರಿಯೂ ರನ್ ಹೊಳೆ ಹರಿಯುವ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು.

ಹ್ಯಾಟ್ರಿಕ್ ಸಾಧಕ ಕುಲದೀಪ್ ಯಾದವ್ ಮತ್ತು ಬೌಲಿಂಗ್ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರಂಥ ಆಟಗಾರರ ಪ್ರತಿಭೆ ಒರೆಗೆ ಹಚ್ಚಿದ ಸರಣಿಯ ಮೂಲಕ ಕೊಹ್ಲಿ ಬಳಗ ’ವಿರಾಟ್‌’ ಶಕ್ತಿಯಾಗಿ ಬೆಳೆಯುತ್ತಿದೆ. ತಂಡ ನಿರಂತರ ಒಂಬತ್ತು ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದು ಆಸ್ಟ್ರೇಲಿಯಾ ವಿರುದ್ಧ ಪೂರ್ಣ ಪಾರಮ್ಯ ಸಾಧಿಸಿದೆ. ಈ ಮೂಲಕ ಮುಂದಿನ ವಿಶ್ವಕಪ್‌ ಟೂರ್ನಿಯತ್ತ ಭರವಸೆಯ ಹೆಜ್ಜೆ ಇರಿಸಿದೆ. ಆರಂಭಿಕ ಜೋಡಿ ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಮನೀಷ್ ಪಾಂಡೆ ಕೂಡ ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ್ದಾರೆ.

ಸರಣಿ ಗೆದ್ದರೂ ಮುಂದಿನ ಪಂದ್ಯಗಳನ್ನು ಲಘು ವಾಗಿ ಕಾಣಲು ತಂಡ ಸಿದ್ಧವಿಲ್ಲ. ಆದ್ದರಿಂದ ವಿರಾಟ್ ಕೊಹ್ಲಿ ಪ್ರಯೋಗಗಳಿಗೆ ಮೊರೆ ಹೋಗಲಾರರು. ಆದರೆ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಲು ಕೇದಾರ್ ಜಾಧವ್‌ ವಿಫಲರಾಗಿರುವ ಕಾರಣ ಬೆಂಗಳೂರಿನಲ್ಲಿ ಅವರ ಬದಲಿಗೆ ಕೆ.ಎಲ್.ರಾಹುಲ್‌ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಸರಣಿಯಲ್ಲಿ ಈ ವರೆಗೆ ರಾಹುಲ್‌ಗೆ ಅವಕಾಶ ಸಿಕ್ಕಿಲ್ಲ.

ಬೌಲಿಂಗ್‌ನಲ್ಲಿ ಕೊಹ್ಲಿ ಬಳಗಕ್ಕೆ ಸದ್ಯ ಚಿಂತೆ ಇಲ್ಲ. ವೇಗದ ಜೋಡಿ ಭುವನೇಶ್ವರ್ ಕುಮಾರ್ ಮತ್ತು ಜಸ್‌ಪ್ರೀತ್ ಬೂಮ್ರಾ ಎದುರಾಳಿ ತಂಡದ ಅಗ್ರ ಕ್ರಮಾಂಕಕ್ಕೆ ಲಗಾಮು ಹಾಕುತ್ತಿದ್ದಾರೆ. ಕೆಳ ಕ್ರಮಾಂಕವನ್ನೂ ನಿಯಂತ್ರಿಸುತ್ತಿದ್ದಾರೆ. ಅಂತಿಮ ಓವರ್‌ಗಳಲ್ಲಿ ಸಮರ್ಥ ಬೌಲಿಂಗ್ ಮಾಡಬಲ್ಲ ವರಲ್ಲಿ ಬೂಮ್ರಾ ಒಬ್ಬರು ಎಂದು ಹಿರಿಯ ಆಟಗಾರರೇ ಹೊಗಳಿದ್ದಾರೆ. ಸ್ಪಿನ್ ವಿಭಾಗದಲ್ಲಿ ಮಿಂಚುತ್ತಿರುವ ಕುಲದೀಪ್ ಯಾದವ್ ಮತ್ತು ಯಜು
ವೇಂದ್ರ ಚಾಹಲ್‌ ಜೋಡಿ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರ ಅನುಪಸ್ಥಿತಿಯನ್ನು ಮರೆಸಿದ್ದಾರೆ.

ಸೋಲಿನ ಖೆಡ್ಡಾದಲ್ಲಿ ಸಿಲುಕಿ ಭಾರತ ಪ್ರವಾಸಕ್ಕೆ ಬಂದಿರುವ ಆಸ್ಟ್ರೇಲಿಯಾ ತಂಡ ಈ ಸರಣಿಯಲ್ಲಿ ಇನ್ನಷ್ಟು ಪ್ರಪಾತಕ್ಕೆ ಬಿದ್ದಿದೆ. ದಶಕದ ಹಿಂದೆ ನಿರಂತರ 21 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿದ್ದ ತಂಡ ಈಗ ನಿರಂತರ 11 ಪಂದ್ಯಗಳನ್ನು ಸೋತು ಮುಖಭಂಗಕ್ಕೆ ಒಳಗಾಗಿದೆ.

ವಾರ್ನರ್‌ಗೆ ನೂರನೇ ಪಂದ್ಯ: ನಿರಾಸೆಯ ನಡುವೆ ಬೆಂಗಳೂರಿನಲ್ಲಿ ಸ್ಮಿತ್ ಬಳಗ ಪುಟಿದೇಳುವ ಭರವಸೆಯಲ್ಲಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ಗೆ ಇದು 100ನೇ ಪಂದ್ಯವಾಗಿದ್ದು ಅವರಿಗೆ ಜಯದ ಉಡುಗೊರೆ ನೀಡಲು ತಂಡ ಸಜ್ಜಾಗಿದೆ. 99 ಪಂದ್ಯ ಆಡಿರುವ ವಾರ್ನರ್‌ 4093 ರನ್ ಗಳಿಸಿದ್ದಾರೆ. 179 ಅವರ ಗರಿಷ್ಠ ರನ್‌. 13 ಶತಕ ಮತ್ತು 16 ಅರ್ಧಶತಕ ಗಳಿಸಿದ್ದಾರೆ.

ಮಳೆ ಸಾಧ್ಯತೆ:  ಬೆಂಗಳೂರಿನಲ್ಲಿ ಗುರುವಾರವೂ ಮಳೆಯಾಗಬಹುದು ಎಂಬುದು ಹವಾಮಾನ ಇಲಾಖೆಯ ವರದಿ. ಮಳೆ  ಸುರಿದರೆ ನೀರು ಹೊರಗೆ ಹಾಕಿ ಕೆಲವೇ ನಿಮಿಷಗಳಲ್ಲಿ ಪಂದ್ಯ ಪುನರಾರಂಭಗೊಳಿಸಲು ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನವಿದೆಯಾದರೂ ನಿರಂತರ ಮಳೆ ಬಿದ್ದರೆ ಪಂದ್ಯಕ್ಕೆ ಅಡ್ಡಿಯಾಗಲಿದೆ. ಬುಧವಾರ ಎರಡೂ ತಂಡಗಳ ಅಭ್ಯಾಸಕ್ಕೆ ಮಳೆ ಅಡ್ಡಿಯಾಯಿತು. ಬೆಳಿಗ್ಗೆ ಕ್ರೀಡಾಂಗಣಕ್ಕೆ ಬಂದ ಆಸ್ಟ್ರೇಲಿಯಾ ಅಭ್ಯಾಸ ಮಾಡದೇ ವಾಪಸಾಯಿತು. ಭಾರತ ತಂಡ ಕೇವಲ ಎರಡು ತಾಸು ಮಾತ್ರ ಅಭ್ಯಾಸ ಮಾಡಿತು.

ಪಿಚ್‌ ಬಗ್ಗೆ: ಚಿನ್ನಸ್ವಾಮಿ ಅಂಗಳ ಬ್ಯಾಟ್ಸ್‌ಮನ್‌
ಗಳಿಗೆ ನಿರಾಸೆ ತಂದಿರುವುದು ಕಡಿಮೆ. ಆದರೆ ಇಲ್ಲಿ ಬೌಲರ್‌ಗಳೂ ಮಿಂಚಿದ್ದಾರೆ. ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗೆ ಪೂರಕವಾದ ಪಿಚ್ ಸಿದ್ಧಗೊಂಡಿದೆ ಎಂದು ಸಹಾಯಕ ಕ್ಯೂರೇಟರ್‌ ಪ್ರಶಾಂತ್ ರಾವ್‌ ಹೇಳಿದ್ದಾರೆ.

ಒಟ್ಟು 13 ಬಾರಿ ಈ ಕ್ರೀಡಾಂಗಣದಲ್ಲಿ ಸ್ಕೋರ್ 300ರ ಗಡಿ ದಾಟಿದೆ. ನಾಲ್ಕು ಬಾರಿ ಭಾರತವೇ ಈ ಸಾಧನೆ ಮಾಡಿದೆ. ಎರಡು ಬಾರಿ ಈ ಸಾಧನೆ ಮಾಡಿರುವುದು ಆಸ್ಟ್ರೇಲಿಯಾ ವಿರುದ್ಧ. ಆದರೆ ಆಸ್ಟ್ರೇಲಿಯಾವೂ ಇಲ್ಲಿ ನಾಲ್ಕು ಬಾರಿ 300 ರನ್‌ಗಳಿಗೂ ಹೆಚ್ಚು ಮೊತ್ತ ಗಳಿಸಿದ್ದು ಮೂರು ಬಾರಿ ಎದುರಾಳಿಯಾಗಿದ್ದದ್ದು ಭಾರತ ತಂಡ.

ಇಲ್ಲಿ ದಾಖಲಾದ ಗರಿಷ್ಠ ಮೊತ್ತ 383 (6 ವಿಕೆಟ್‌ಗಳಿಗೆ) ರನ್‌. 50 ಓವರ್‌ಗಳ ಪಂದ್ಯದಲ್ಲಿ ದಾಖಲಾದ ಕನಿಷ್ಠ ಮೊತ್ತ 168 ರನ್‌. ಈ ಎರಡೂ ‘ದಾಖಲೆ’ ಭಾರತದ ಹೆಸರಿನಲ್ಲಿದೆ! ಐದು ಬಾರಿ ಐದು ವಿಕೆಟ್ ಸಾಧನೆಯೂ ಇಲ್ಲಿ ಆಗಿದ್ದು ಇದರಲ್ಲಿ ಎರಡು ಭಾರತದ ಹೆಸರಿನಲ್ಲಿದೆ.

ನಿರಂತರ ಹತ್ತರ ಸಾಧನೆ ಹತ್ತಿರ

ಗುರುವಾರದ ಪಂದ್ಯದಲ್ಲಿ ಭಾರತ ಜಯ ಗಳಿಸಿದರೆ ಅದು ಅಪೂರ್ವ ದಾಖಲೆಯಾಗಲಿದೆ. ನಿರಂತರ 10 ಪಂದ್ಯಗಳನ್ನು ಗೆದ್ದ ಸಾಧನೆಯ ಗರಿಮೆ ವಿರಾಟ್‌ ಕೊಹ್ಲಿ ಬಳಗದ್ದಾಗಲಿದೆ. ಕ್ರಿಕೆಟ್ ಆಡುವ ಪ್ರಮುಖ ರಾಷ್ಟ್ರಗಳ ಪೈಕಿ ಇಂಗ್ಲೆಂಡ್‌, ಪಾಕಿಸ್ತಾನ, ವೆಸ್ಟ್ ಇಂಡೀಸ್, ಶ್ರೀಲಂಕಾ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈ ಸಾಧನೆ ಮಾಡಿವೆ. ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳು ಎರಡು ಬಾರಿ ಹತ್ತರ ಸಾಧನೆ ಮಾಡಿವೆ. ಕೊನೆಯದಾಗಿ ಈ ಸಾಧನೆ ಮಾಡಿದ ತಂಡ ನ್ಯೂಜಿಲೆಂಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT