ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಮತ್ತು ಅನುವಾದ

Last Updated 27 ಸೆಪ್ಟೆಂಬರ್ 2017, 20:18 IST
ಅಕ್ಷರ ಗಾತ್ರ

ಈಚಿನ ದಿನಗಳಲ್ಲಿ ಒಂದು ಹೊಸ ಪದ್ಧತಿ ರೂಪುಗೊಳ್ಳುತ್ತಿದೆ. ಎಲ್ಲ ಪಠ್ಯಗಳನ್ನೂ ಇಂಗ್ಲಿಷ್‌ನಲ್ಲಿ ತಯಾರಿಸಿ ಯಾರಿಗಾದರೂ ಕನ್ನಡಕ್ಕೆ ಅನುವಾದಿಸಲು ಹೇಳುವುದು. ಆ ನಂತರ ಅದು ಹೇಗೇ ಇರಲಿ- ಮುದ್ರಿಸಿಬಿಡುವುದು. ರಸ್ತೆ ಬದಿಯ ಪೋಸ್ಟರ್ ಇರಬಹುದು; ಅಥವಾ ಅತಿ ಮುಖ್ಯವಾದ ವಿಶೇಷ ಸೂಚನೆ ಇರಬಹುದು.

‘ನಮ್ಮ ಮೆಟ್ರೊ’ದ ಫಲಕ ನೋಡಿದಾಗ, ಘೋಷಣೆಗಳನ್ನು ಕೇಳಿದಾಗ ಇದು ಸ್ಪಷ್ಟವಾಗುತ್ತದೆ. ‘ಈಗ ರೈಲು . . . ನಿಲ್ದಾಣ ಗೆ ಬರಲಿದೆ’. ಇಲ್ಲಿ ‘ಕ್ಕೆ’ ಬದಲು ‘ಗೆ’ ಏಕೆ ಆಯಿತು ಎಂದು ಹುಡುಕಲು ಹೊರಟರೆ ಮೇಲೆ ಹೇಳಿದ ಮಾತು ಅರ್ಥ ಪಡೆದುಕೊಳ್ಳುತ್ತದೆ. ಜೊತೆಗೆ ನಿಲ್ದಾಣ ಎಂಬ ಪದ ‘ಗೆ’ ಎಂಬ ಪ್ರತ್ಯಯಕ್ಕೆ ಬೆಸೆದುಕೊಳ್ಳದೆ, ಅಪದ್ಧವಾಗಿ ಏಕೆ ಕೇಳುತ್ತದೆ ಎಂಬುದೂ ತಿಳಿಯುತ್ತದೆ.

ಈ ಘೋಷಣೆ ಮೊದಲು ಇಂಗ್ಲಿಷ್‌ನಲ್ಲಿ ತಯಾರಾಯಿತು. ಅಲ್ಲಿ ನಿಲ್ದಾಣದ ಹೆಸರು ಕೊನೆಯಲ್ಲಿ ಬರುವುದರಿಂದ ಆಡಿಯೊ ಎಡಿಟ್ ಮಾಡುವ ಕೆಲಸ ಹಗುರವಾಯಿತು. ಅದನ್ನು ಪದಶಃ ಅನುವಾದಿಸಿರುವುದರ ಪರಿಣಾಮವನ್ನು ನಾವು ಗಮನಿಸಬೇಕು. ಇದರ ಬದಲು ಕನ್ನಡದಲ್ಲಿಯೇ ಮೊದಲು ಬರೆದಿದ್ದರೆ ‘ಈಗ ರೈಲು ತಲುಪಲಿರುವ ನಿಲ್ದಾಣ...’ ಎಂದಾಗುತ್ತಿತ್ತು. ಕೇಳಲು ಹಿತವಾಗಿರುತ್ತಿತ್ತು. ಆದರೆ...?

ಲಾಲ್‌ಬಾಗ್‌ನಲ್ಲಿ ಕಾಣುವ ಮೇನ್‌ ಗೇಟ್, ಎಂಟಿಆರ್ ಗೇಟ್ ಇತ್ಯಾದಿಗಳಿಗೆ ಏನಾದರೂ ಸಮಜಾಯಿಷಿ ಕೊಡಬಹುದು. ಆದರೆ ಹೊಸ ಪದವೊಂದನ್ನು ಬರೆದಾಗ ಅದು ಬಳಕೆಯಲ್ಲಿದೆಯೇ, ಫಲಕ ತಲುಪಿಸಬೇಕಾದ ಸಂದೇಶವನ್ನು ಮುಟ್ಟಿಸುತ್ತಿದೆಯೇ ಎಂದು ಆಲೋಚಿಸಬೇಕಾಗುತ್ತದೆ. ಅಲ್ಲೊಂದು ಫಲಕವಿದೆ ‘ಟೋಪಿಯರಿ ಗಾರ್ಡನ್’ ಅಂತ. ಇದೇನು ಎಂದು ತಿಳಿಯಲು ಗೂಗಲ್ ಮೊರೆಹೋಗಬೇಕು. ‘ಗೊಂಬೆ ತೋಟ’ ಎಂಬ ಹೊಸ ಪದವನ್ನು ಸೃಷ್ಟಿಸುವ ಅವಕಾಶವನ್ನು ಇದು ತಪ್ಪಿಸಿಬಿಟ್ಟಿತು. ಇದು ಮುಂದೆ ಹಲವಾರು ನಾಲಿಗೆಗಳನ್ನು ದಾಟಿ ಬರುವಾಗ ‘ಟೋಪಿ ಗಾರ್ಡನ್’ ಆಗಿಬಿಡಬಹುದು.

ಇದೀಗ ಸಿ.ಸಿ. ಟಿ.ವಿ. ಕ್ಯಾಮೆರಾ ಎಲ್ಲೆಲ್ಲೂ ಕಂಡು ಬರುತ್ತಿದೆ. ಅದರ ಬಗ್ಗೆ ಎಚ್ಚರಿಕೆಯ ಫಲಕಗಳು ಸಾಕಷ್ಟು ಶಿಸ್ತನ್ನೂ ಕಲಿಸುತ್ತವೆ. ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಪದಗಳ ಮೊರೆ ಹೋಗಿದ್ದಾರೆ. ‘ನೀವು ಕ್ಯಾಮೆರಾ ನಿಗಾವಣೆಯಲ್ಲಿದೀರಿ’; ‘ಇಲ್ಲಿ ಸಿ.ಸಿ. ಟಿ.ವಿ. ನಿಗಾವಣೆ ಇದೆ’ ಇತ್ಯಾದಿ ಫಲಕಗಳನ್ನು ಕಾಣುತ್ತೇವೆ. ತಾರಾಲಯದಲ್ಲಿ ಈ ಫಲಕಗಳನ್ನು ಕನ್ನಡದಲ್ಲಿ ಬರೆಸುವಾಗ ಬಹಳ ಕಷ್ಟಪಡಬೇಕಾಯಿತು. ಕೊನೆಗೆ ಸಿ.ಸಿ. ಟಿ.ವಿ. ಎಂಬ ಪದವನ್ನೇ ಬಳಸಬೇಕೆಂದು ನಿರ್ಧರಿಸಿದ್ದೆವು. ಅದಾದ ಮೇಲೆ ಒಮ್ಮೆ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋದಾಗ ಸರಿಯಾದ ಪದ ಕಣ್ಣಿಗೆ ಬಿದ್ದಿತು ‘ಕಣ್ಗಾವಲು!’ ‘ಇಲ್ಲಿ ಕಣ್ಗಾವಲಿದೆ’ ಎಂದರೆ ಸಾಕಲ್ಲವೇ?

ಅನುವಾದದ ಇನ್ನೊಂದು ಬಗೆಯ ಹಾವಳಿ ಪಠ್ಯಪುಸ್ತಕಗಳಲ್ಲಿ ಕಂಡುಬರುತ್ತದೆ. ಆಮ್ಲಜನಕ, ಇಂಗಾಲ, ಜಲಜನಕಗಳು ಈಗ ಮಾಯವಾಗಿ ಇಂಗ್ಲಿಷ್ ಪದಗಳಿಗೆ ಆಸನ ಬಿಟ್ಟುಕೊಟ್ಟಿವೆ. ಇದರ ವಿವರಣೆ ಇಲ್ಲಿ ಚರ್ಚಿಸಬೇಕಿಲ್ಲ. ಕೈಲಾಸಂ ಅವರ ಜೋಕು ಮುಂದಿನ ಪೀಳಿಗೆಗೆ ಅರ್ಥವಾಗುವುದಿಲ್ಲವಲ್ಲ ಎಂಬುದೇ ನನ್ನ ದುಃಖ. ಬಂಡ್ವಾಳ್ವಿಲ್ಲದ್ಬಡಾಯಿಯಲ್ಲಿ ಮಗ ಕಪ್ಪಗಿದ್ದಾನೆ ಎಂದು ಲಾಯ್ರಿ ತಂದೆ ಹಂಗಿಸುವುದು ಹೀಗೆ– ‘ನಾನು, ಜನಕನೇನು, ಆಮ್ಲಜನಕ; ನೀನೋ (ತಾಯಿ) ಬಂಗಾರ; ಈ ಇಂಗಾಲ (ಮಗ) ಎಲ್ಲಿಂದ ಬಂತು?’ ಎನ್ನುತ್ತಾನೆ.

ಬೇರೆ ವಿಭಾಗಗಳಲ್ಲಿ ಇಂಗ್ಲಿಷ್ ಪದಗಳನ್ನು ತಂದಿರುವುದು ಸ್ವಲ್ಪ ಗೋಜಲಾಗಿದೆ. ಎಲಿಪ್ಸ್ ಎಂಬ ಪದಕ್ಕೆ ಹಳೆಯ ಅಂದರೆ ಈಗಾಗಲೇ ಚಾಲ್ತಿಯಲ್ಲಿರುವ ದೀರ್ಘ ವೃತ್ತ; ಆಯವೃತ್ತ ಎಂಬ ಶಬ್ದಗಳಿವೆ. ಇದನ್ನು ಎಲಿಪ್ಸೀಯ ಎಂದು ಅನುವಾದಿಸಲಾಗಿದೆ. ಇಂಗ್ಲಿಷ್‌ನಲ್ಲಿರುವ ಎಲಿಪ್ಸ್ ಎಂಬ ನಾಮಪದ ಮತ್ತು ಎಲಿಪ್ಟಿಕಲ್ ಎಂಬ ಗುಣವಾಚಕ ಎರಡಕ್ಕೂ ಇದೊಂದೇ ಪದವನ್ನು ಬಳಸಲಾಗುತ್ತಿದೆ. ಹಳೆಯ ಹೆಸರುಗಳಿರುವಾಗ ಈ ಬದಲಾವಣೆ ಅವಶ್ಯವಾಗಿತ್ತೇ?

ಗ್ರಹಗಳ ಹೆಸರುಗಳನ್ನು ಅನುವಾದಿಸಿರುವುದರಲ್ಲಿ ಇನ್ನೊಂದು ವೈಪರೀತ್ಯವನ್ನು ಕಾಣುತ್ತೇವೆ. ಗುರು, ಶನಿ ಇವು ತೀರಾ ಪರಿಚಿತವಾಗಿರುವುದರಿಂದ ಆ ಹೆಸರುಗಳು ಹಾಗೆಯೇ ಉಳಿದುಕೊಳ್ಳುವುದರಲ್ಲಿ ಸಂಶಯವಿಲ್ಲ. ಆದರೆ ಹೊಸ ಸೇರ್ಪಡೆಗಳಾದ ಯುರೇನಸ್ ಮತ್ತು ನೆಪ್ಚ್ಯೂನ್ ಇವುಗಳ ಹೆಸರು ಅಂಕಿತನಾಮಗಳು; ಆದ್ದರಿಂದ ನಮ್ಮ ಪಠ್ಯಗಳಲ್ಲಿ ಹಾಗೆಯೇ ಇವೆ. ಆದರೆ ಕೇಂದ್ರೀಯ ಪಠ್ಯಗಳಲ್ಲಿ ವರುಣ, ವಾಯು ಹೀಗೆ ಅನುವಾದಗೊಂಡಿವೆ. ಕೆಲವು ವರ್ಷಗಳ ಹಿಂದೆ ಪ್ಲೂಟೋದ ಕಕ್ಷೆಯ ಸಮೀಪ ಪತ್ತೆಯಾದ ಒಂದು ಕ್ಷುದ್ರಗ್ರಹಕ್ಕೆ ವರುಣ ಎಂದು ಅಂತರರಾಷ್ಟ್ರೀಯ ಒಕ್ಕೂಟ ಹೆಸರಿಸಿತು. ಈಗ ಪಠ್ಯಪುಸ್ತಕದ ವರುಣನನ್ನೇನು ಮಾಡುವುದು? ಇದನ್ನು ಓದುವ ವಿದ್ಯಾರ್ಥಿಗಳ ಪಾಡೇನು?

ಕೆಲವೊಮ್ಮೆ ಇಂಗ್ಲಿಷ್‌ನಲ್ಲಿಯೂ ಚಾಲ್ತಿಯಲ್ಲಿರುವ ಪದಗಳು ವಿಜ್ಞಾನದ ಸಂದರ್ಭದಲ್ಲಿ ವಿಶೇಷ ಅರ್ಥ ಪಡೆದುಕೊಳ್ಳುತ್ತವೆ. ಭಾಷಾಶಾಸ್ತ್ರದ ಅನ್ವಯ ನೆಬ್ಯುಲಸ್ ಎಂಬ ಪದದ ಮೂಲ ಯಾವುದೇ ವಿಚಾರದಲ್ಲಿ ಸ್ಪಷ್ಟತೆ ಇಲ್ಲದಿರುವುದು ಎಂದಾಗುತ್ತದೆ. ನಕ್ಷತ್ರದ ಹಾಗೆ ಚುಕ್ಕೆಯಂತೆ ಕಾಣದೆ ಹತ್ತಿಯ ಪದರದ ಹಾಗೆ ಕಾಣುವ ಆಕಾಶ ಕಾಯಗಳಿಗೆ ಈ ಪದವನ್ನು ಅನ್ವಯಿಸಿ ಎರಡು ಶತಮಾನಗಳೇ ಕಳೆದಿವೆ. ಅದನ್ನು ನೀಹಾರಿಕಾ ಎಂದು ಅನುವಾದಿಸಿ ನೂರು ವರ್ಷಗಳೇ ಆಗಿರಬಹುದು. ಆದರೆ ಈಗ ಈ ಪದಕ್ಕೆ ಒಂದು ವಿಶಿಷ್ಟ ಅರ್ಥವಿದೆ. ಇವು ನಮ್ಮ ಆಕಾಶಗಂಗೆಗೇ ಸೇರಿದ ಮೋಡಗಳಂತಹ ರಚನೆಗಳು. ಬಹಳ ದೂರದಲ್ಲಿ ಅಂದರೆ ಆಕಾಶಗಂಗೆಯ ವ್ಯಾಪ್ತಿಯನ್ನು ದಾಟಿರುವ ಕಾಯಗಳು ಆಕಾಶಗಂಗೆಯಷ್ಟು ಅಥವಾ ಇನ್ನೂ ದೊಡ್ಡವು ಎಂಬುದು ತಿಳಿದಮೇಲೆ ಆ ನೆಬ್ಯುಲಾಗಳಿಗೆ ಗೆಲಾಕ್ಸಿ ಎಂಬ ಪದ ಸೃಷ್ಟಿಯಾಯಿತು. ಆದರೆ ಈಗಲೂ ಕನ್ನಡದಲ್ಲಿ ಗೆಲಾಕ್ಸಿ ಮತ್ತು ನೆಬ್ಯುಲಾಗಳೆರಡಕ್ಕೂ ನೀಹಾರಿಕಾ ಎಂಬ ಪದವನ್ನೇ ಬಳಸುತ್ತಿರುವುದು ಸಮಸ್ಯೆಯೇ ಆಗಿದೆ. ಹೀಗೆ ಹಲವಾರು ಸಮಸ್ಯೆಗಳನ್ನು

ತಂದಿಡುವ ಅನುವಾದ ಎಂಬ ತಲೆನೋವು ಗೂಗಲ್ ಟ್ರಾನ್ಸ್ಲೇಟ್ ಎಂಬ ಅದ್ಭುತ ಮಾಯಾದಂಡದಿಂದ ಸುಲಭವಾಗಿ ನಿವಾರಣೆಯಾಗಿಬಿಟ್ಟಿದೆ. ರೀಚ್ ಫಾರ್ ದಿ ಟಾಪ್- ಅಂದರೆ ಎತ್ತರಕ್ಕಾಗಿ ಎಟುಕಿರಿ ಎಂಬುದೇ ಇಲ್ಲಿಯ ಸಂದೇಶ. ಕನ್ನಡ ಬರದೇ ಇದ್ದವರೂ ಅನುವಾದಿಸಿಬಿಡಬಹುದು ಎಂಬ ಧೋರಣೆಯನ್ನು ಯುವಪೀಳಿಗೆಗೆ ಕಲಿಸುತ್ತಿದೆ. ಕನ್ನಡ ಅಕ್ಷರಗಳೂ ಬರಬೇಕೆಂದಿಲ್ಲ. ಅನುವಾದಕರಿಗೆ ಕೆಲವೊಂದು ವಾಕ್ಯಗಳನ್ನು ಇ–ಮೇಲ್‌ ಮಾಡುವ ತಾಪತ್ರಯವೂ ಇಲ್ಲ.

ಮೂಲವಾಗಿ ಕನ್ನಡದಲ್ಲಿಯೇ ಚಿಂತಿಸಿ ಪಠ್ಯವನ್ನು ಬರೆಯಬೇಕಾದದ್ದು ಅನಿವಾರ್ಯ ಎಂಬ ಸಲಹೆಗೆ ಬೆಲೆ ಇಲ್ಲ. ಬರೆಯಬಲ್ಲವರಿಗೆ ಕೊರತೆ ಇದೆ ಎಂಬುದು ನಿಜವಲ್ಲ. ಅವರಿಗೆ ಮನ್ನಣೆ ಮೊದಲೇ ಇಲ್ಲ. ಗೂಗಲ್‌ನಲ್ಲಿ ಅನುವಾದ ಮಾಡಿ ‘ಚಲೇಗಾ’ ಅನ್ನುವವರು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಅದು ವರದ ಬದಲು ಶಾಪವೇ ಆಗುತ್ತದೆ. ಸೌರ ಕಲೆಗಳು ಸೂರ್ಯನ ತೇಪೆಗಳಾಗಿ ಬಿಡುತ್ತವೆ. ‘ಪ್ರೆಸ್’ ಎಂಬ ಪದ ಪತ್ರಕರ್ತ ಸಮುದಾಯವನ್ನು ಸೂಚಿಸುವ ಬದಲು ‘ಒತ್ತು’ ಎಂದಾಗಿ ನಗೆಪಾಟಲಾಗುವ ಸಂದರ್ಭಗಳನ್ನು ಪ್ರತಿದಿನವೂ ಎದುರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT