ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರನೇ ಪಂದ್ಯದಲ್ಲಿ ವಾರ್ನರ್ ಶತಕ: ಆಸ್ಟ್ರೇಲಿಯಾ ತಂಡದ ಜಯಭೇರಿ

Last Updated 28 ಸೆಪ್ಟೆಂಬರ್ 2017, 18:40 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಯ ಆತಂಕ ಕಾಡಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ರನ್ ಮಳೆ ಹುರಿಸಿದರು. ಭಾರತ ತಂಡದ ಎದುರಿನ ಪಂದ್ಯದಲ್ಲಿ 21 ರನ್‌ಗಳಿಂದ ಜಯ ದಾಖಲಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಡೇವಿಡ್ ವಾರ್ನರ್ ಅವರ ಶತಕದ ಬಲದಿಂದ (124ರನ್) 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಂದ 335 ರನ್‌ ಪೇರಿಸಿತು. ನಂತರ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್ ಮತ್ತು ಮನೀಷ್ ಪಾಂಡೆ ಮಿಂಚಿದರು. ಆದರೆ ಭಾರತ ತಂಡಕ್ಕೆ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 313 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. ಡೇವಿಡ್ ವಾರ್ನರ್ ತಮ್ಮ ನೂರನೇ ಪಂದ್ಯದಲ್ಲಿ ಶತಕ ಮತ್ತು ಜಯದೊಂದಿಗೆ ಸಂಭ್ರಮಿಸಿದರು. ಆದರೆ ಐದು ಪಂದ್ಯಗಳ ಸರಣಿಯಲ್ಲಿ ಭಾರತವು 3–1ರ ಮುನ್ನಡೆಯಲ್ಲಿದೆ.

ಮೂರು ವರ್ಷಗಳ ಹಿಂದೆ ಇಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ದ್ವಿಶತಕ ಸಿಡಿಸಿದ್ದ ರೋಹಿತ್ ಶರ್ಮಾ ಮೊದಲ ಮೂರು ಓವರ್‌ಗಳಲ್ಲಿ ತಾಳ್ಮೆಯಿಂದ ಆಡಿದರು. ರಹಾನೆ ಆರಂಭದ ಮೂರು ಓವರ್‌ಗಳಲ್ಲಿ ತಲಾ ಒಂದೊಂದು ಬೌಂಡರಿ ಗಳಿಸಿದರು. ನಾಲ್ಕನೇ ಓವರ್‌ನಲ್ಲಿ ಕೌಲ್ಟರ್‌ನೈಲ್ ಅವರನ್ನು ಬೌಂಡರಿಗೆ ಅಟ್ಟಿದ ರೋಹಿತ್ ಮುಂದಿನ ಓವರ್‌ನಲ್ಲಿ ಪ್ಯಾಟ್‌ ಕಮಿನ್ಸ್ ಅವರನ್ನು ಸಿಕ್ಸರ್‌ಗೆ ಎತ್ತಿದರು. ಆರನೇ ಓವರ್‌ನಲ್ಲಿ ರಹಾನೆ ಕೂಡ ಸಿಕ್ಸರ್‌ ಸಿಡಿಸಿದರು. ಭಾರತದ ಇನಿಂಗ್ಸ್‌ ಕಣ್ತುಂಬಿಕೊಳ್ಳಲು ಸೇರಿದ್ದ 25 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಇವರಿಬ್ಬರ ಬ್ಯಾಟಿಂಗ್ ವೈಭವಕ್ಕೆ ಮುದಗೊಂಡು ಕುಣಿದು ಕುಪ್ಪಳಿಸಿದರು. 17ನೇ ಓವರ್‌ನಲ್ಲಿ ಆ್ಯಡಮ್ ಜಂಪಾ ಎಸೆತದಲ್ಲಿ ಎರಡು ಮೋಹಕ ಸಿಕ್ಸರ್ ಸಿಡಿಸಿದ ರೋಹಿತ್‌ ತಂಡದ ಮೊತ್ತವನ್ನು ಮೂರಂಕಿಯ ಗಡಿ ದಾಟಿಸಿದರು.

ಆದರೆ ಸ್ವಲ್ಪ ಹೊತ್ತಿನಲ್ಲೇ ರಹಾನೆ ಔಟ್ ಆದರು. ರಿಚರ್ಡ್ಸನ್ ಎಸೆತವನ್ನು ಮಿಡ್‌ ಆನ್ ಮೇಲಿಂದ ಸಿಕ್ಸರ್‌ಗೆ ಅಟ್ಟಲು ಪ್ರಯತ್ನಿಸಿದ ರಹಾನೆ ಎಡವಿದರು. ಬೌಂಡರಿ ಗೆರೆ ಬಳಿ ಇದ್ದ ಫಿಂಚ್‌ ಸುಲಭ ಕ್ಯಾಚ್ ಪಡೆದರು. ಕೊಹ್ಲಿ ಪಿಚ್‌ ಬಳಿ ಬರುತ್ತಿದ್ದಂತೆ ಪ್ರೇಕ್ಷಕರ ಉತ್ಸಾಹ ಇಮ್ಮಡಿಗೊಂಡಿತು. ರೋಹಿತ್ ಜೊತೆ ಕೊಹ್ಲಿ ಗೆಲುವಿನ ಸೌಧ ಕಟ್ಟುವರು ಎಂಬ ಭರವಸೆಯಲ್ಲಿದ್ದ ಪ್ರೇಕ್ಷಕರಿಗೆ ನಿರಾಸೆಯಾಯಿತು. ಸಿಕ್ಸರ್‌ಗಳ ಮಳೆ ಸುರಿಸುತ್ತಿದ್ದ ರೋಹಿತ್ ರನ್‌ ಔಟ್ ಆದರು. ಇದರ ಬೆನ್ನಲ್ಲೇ ಕೊಹ್ಲಿ ಕೂಡ ಔಟಾದರು.

ಪಾಂಡ್ಯ–ಜಾಧವ್–ಪಾಂಡೆ ಜಾದೂ

ಇನಿಂಗ್ಸ್ ಅರ್ಧ ಹಾದಿ ತಲುಪಿದ್ದಾಗ 147 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ಮತ್ತು ಕೇದಾರ್‌ ಜಾಧವ್‌ ಆಸರೆಯಾದರು. ಭರ್ಜರಿ ಬ್ಯಾಟಿಂಗ್ ಮಾಡಿದ ಇವರು 78 ರನ್ ಸೇರಿಸಿದರು. ಜಂಪಾ ಹಾಕಿದ ಓವರ್‌ನಲ್ಲಿ ನಿರಂತರ ಎರಡು ಸಿಕ್ಸರ್ ಸೇರಿದಂತೆ ಒಟ್ಟು ಮೂರು ಸಿಕ್ಸರ್ ಸಿಡಿಸಿದ ಪಾಂಡ್ಯ 40 ಎಸೆತಗಳಲ್ಲಿ 41  ರನ್‌ ಸೇರಿಸಿದರು. ಕೊನೆಗೆ ಜಂಪಾ ಅವರಿಗೇ ವಿಕೆಟ್ ಒಪ್ಪಿಸಿದರು.

ಜಾಧವ್‌ ಜೊತೆಗೂಡಿದ ಮನೀಷ್‌ ಪಾಂಡೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಸಂದರ್ಭದಲ್ಲಿ ಮಳೆ ಸುರಿದ ಕಾರಣ 11 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡಿತು. ಈ ಸಂದರ್ಭದಲ್ಲಿ ಡಕ್ವರ್ಥ್ ಲೂಯಿಸ್ ನಿಯಮ ಅನ್ವವಾಗಿದ್ದರೆ ಭಾರತ ಎರಡು ರನ್‌ಗಳಿಂದ ಹಿಂದೆ ಉಳಿದಿತ್ತು. ಪಂದ್ಯ ಮತ್ತೆ ಆರಂಭಗೊಂಡ ನಂತರ ರನ್‌ ಗಳಿಕೆಗೆ ವೇಗ ತುಂಬಲು ಇವರಿಬ್ಬರು ಗಮನ ನೀಡಿದರು. ಆದರೆ 61 ರನ್‌ಗಳ ಜೊತೆಯಾಟದ ನಂತರ ಜಾಧವ್‌ (67; 69 ಎ, 1ಸಿ, 7ಬೌಂ) ಔಟಾದರು. ಇವರ ಬೆನ್ನಲ್ಲೇ ಮನೀಷ್ ಪಾಂಡೆ (33; 25 ಎ, 1ಸಿ, 3 ಬೌಂ) ಕೂಡ ಪೆವಿಲಿಯನ್‌ ಸೇರಿದರು.

ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಆತಿಥೇಯರು ಇಲ್ಲಿ ಲಯ ಕಂಡುಕೊಂಡರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ ಆ್ಯರನ್ ಫಿಂಚ್ (94; 96ಎ, 3 ಸಿ, 10 ಬೌಂ) ಮತ್ತು 100ನೇ ಪಂದ್ಯ ಆಡಿದ ಡೇವಿಡ್‌ ವಾರ್ನರ್‌ (124; 119 ಎ, 4 ಸಿ, 12 ಬೌಂ) ಅವರ ದಾಖಲೆಯ ಜೊತೆಯಾಟದ ಬಲದಿಂದ ತಂಡ 300ರ ಗಡಿ ದಾಟಿತು.

ಮೊದಲ ವಿಕೆಟ್‌ಗೆ ಫಿಂಚ್ ಮತ್ತು ವಾರ್ನರ್‌ 231 ರನ್‌ ಸೇರಿಸಿದರು. ಇದು ಭಾರತದ ವಿರುದ್ಧ ಮೊದಲ ವಿಕೆಟ್‌ಗೆ ಆಸ್ಟ್ರೇಲಿಯಾದ ದಾಖಲೆಯ ಜೊತೆಯಾಟ. ಜೈಪುರದಲ್ಲಿ 1986ರಲ್ಲಿ ಜೆಫ್‌ ಮಾರ್ಷ್‌ ಮತ್ತು ಡೇವಿಡ್‌ ಬೂನ್ ಗಳಿಸಿದ 212 ರನ್‌ ಈ ವರೆಗಿನ ಗರಿಷ್ಠ ಮೊತ್ತವಾಗಿತ್ತು. ಭಾರತದ ವಿರುದ್ಧ ಯಾವುದೇ ವಿಕೆಟ್‌ಗೆ ಆಸ್ಟ್ರೇಲಿಯಾದ ಮೂರನೇ ಅತಿದೊಡ್ಡ ಮೊತ್ತ ಇದು. ಜಾರ್ಜ್ ಬೇಯ್ಲಿ ಮತ್ತು ಸ್ಟೀವ್ ಸ್ಮಿತ್ 2016ರಲ್ಲಿ ಪರ್ಥ್‌ನಲ್ಲಿ ಮೂರನೇ ವಿಕೆಟ್‌ಗೆ 242 ರನ್‌ ಸೇರಿಸಿದ್ದರು. ಡೇಮಿಯನ್‌ ಮಾರ್ಟಿನ್ ಮತ್ತು ರಿಕಿ ಪಾಂಟಿಂಗ್‌ 2003ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ಮೂರನೇ ವಿಕೆಟ್‌ಗೆ 234 ರನ್‌ ಸೇರಿಸಿದ್ದರು.

ಗರಿಷ್ಠ ಸ್ಕೋರ್

334 ರನ್‌ ಗಳಿಸಿದ ಸ್ಮಿತ್ ಬಳಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಲ್ಕನೇ ಗರಿಷ್ಠ ಮೊತ್ತ ದಾಖಲಿಸಿದ ಸಾಧನೆ ಮಾಡಿತು. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ 383 ರನ್‌ ಇಲ್ಲಿ ದಾಖಲಾದ ಅತ್ಯಧಿಕ ಮೊತ್ತ. 2003ರಲ್ಲಿ ಆಸ್ಟ್ರೇಲಿಯಾ ಈ ಅಂಗಣದಲ್ಲಿದಲ್ಲಿ ಭಾರತದ ವಿರುದ್ಧ 347 ರನ್‌ ಗಳಿಸಿತ್ತು. 2011ರಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 338 ರನ್‌ ಗಳಿಸಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್‌ ಕೂಡ 338 ರನ್‌ ಗಳಿಸಿ ಟೈ ಮಾಡಿಕೊಂಡಿತ್ತು.

ಸರಣಿಯಲ್ಲಿ ಮೊದಲ ಬಾರಿ ಅವಕಾಶ ಪಡೆದುಕೊಂಡ ಮಹಮ್ಮದ್ ಶಮಿ ಅವರ ಸ್ವಿಂಗ್ ಮತ್ತು ಉಮೇಶ್ ಯಾದವ್ ಅವರ ಪೇಸ್‌ಗೆ ದಿಟ್ಟ ಉತ್ತರ ನೀಡಿದ ಆರಂಭಿಕ ಜೋಡಿ ಸುಲಭವಾಗಿ ರನ್ ಗಳಿಸಿತು. ಮೊದಲ ಓವರ್ ಹಾಕಿದ ಶಮಿ ಅವರ ಎರಡನೇ ಎಸೆತವನ್ನು ಸ್ಕ್ವೇರ್‌ ಡ್ರೈವ್‌ ಮೂಲಕ ಪಾಯಿಂಟ್‌ ಕಡೆಯಿಂದ ಬೌಂಡರಿಗೆ ಅಟ್ಟಿದ ಫಿಂಚ್‌ ಪ್ರವಾಸಿ ತಂಡದ ರನ್‌ ಗಳಿಕೆಗೆ ನಾಂದಿ ಹಾಡಿದರು.

ಶಮಿ ಅವರ ಮುಂದಿನ ಓವರ್‌ನಲ್ಲಿ ವಾರ್ನರ್ ಕೂಡ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಇಳಿದರು. ಈ ಓವರ್‌ನಲ್ಲಿ ಎರಡು ಬೌಂಡರಿಗಳು ಹರಿದು ಬಂದವು. ಮೂರನೇ ಓವರ್‌ನಲ್ಲೂ ಶಮಿ ಎರಡು ಬೌಂಡರಿ ಬಿಟ್ಟುಕೊಟ್ಟರು. ಇನ್ನೊಂದು ತುದಿಯಲ್ಲಿ ಉಮೇಶ್‌ ಯಾದವ್‌ ಅವರ ಬೌಲಿಂಗ್‌ನಲ್ಲಿ ಹೆಚ್ಚು ಬೌಂಡರಿಗಳು ಗಳಿಸಲು ಸಾಧ್ಯವಾಗದಿದ್ದರೂ ಒಂಟಿ ಮತ್ತು ಎರಡು ರನ್‌ಗಳನ್ನು ಹೆಕ್ಕುವಲ್ಲಿ ಬ್ಯಾಟ್ಸ್‌ಮನ್‌ಗಳು ಯಶಸ್ವಿಯಾದರು; 10 ಓವರ್‌ಗಳಲ್ಲಿ 63 ರನ್‌ ಸೇರಿಸಿದರು.

ಅಷ್ಟರಲ್ಲಿ ಎರಡೂ ತುದಿಯಿಂದ ಬೌಲಿಂಗ್ ಬದಲಿಸಿದ ಕೊಹ್ಲಿ ಎಡಗೈ ಸ್ಪಿನ್ನರ್‌ ಅಕ್ಷರ್ ಪಟೇಲ್ ಮತ್ತು ಮಧ್ಯಮ ವೇಗಿ ಹಾರ್ದಿಕ್ ಪಾಂಡ್ಯ ಅವರನ್ನು ದಾಳಿಗೆ ಇಳಿಸಿದರು. 16 ಓವರ್‌ಗಳು ಪೂರ್ತಿಗೊಂಡಾಗ ಚೆಂಡಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಕೂಡ ದಾಳಿಗೆ ಬಂದರು. ಆದರೆ ಬೌಂಡರಿ–ಸಿಕ್ಸರ್‌ಗಳನ್ನು ತಡೆಯಲು ಆಗಲಿಲ್ಲ.

20 ಓವರ್‌ಗಳಲ್ಲಿ ತಂಡದ ಮೊತ್ತ 124 ರನ್ ಆಯಿತು. ಫಿಂಚ್‌ ತಾಳ್ಮೆಯಿಂದ ರನ್‌ ಗಳಿಸಿದರೆ ವಾರ್ನರ್ ಸ್ಫೋಟಿಸುತ್ತ ಸಾಗಿದರು. 31ನೇ ಓವರ್‌ನಲ್ಲಿ ಕೇದಾರ್ ಜಾಧವ್ ಎಸೆತವನ್ನು ಬ್ಯಾಕ್‌ವರ್ಡ್‌ ಪಾಯಿಂಟ್ ಮೂಲಕ ಬೌಂಡರಿ ಗೆರೆ ದಾಟಿಸಿದ ವಾರ್ನರ್‌ ಏಕದಿನ ಕ್ರಿಕೆಟ್‌ನಲ್ಲಿ 14ನೇ ಶತಕದ ಸಂಭ್ರಮ ಅನುಭವಿಸಿದರು.

100ರಲ್ಲಿ 100ರ ಅಪರೂಪದ ಸಾಧನೆಯೂ ಅವರದಾಯಿತು.35ನೇ ಓವರ್‌ನಲ್ಲಿ ಈ ಜೋಡಿಯ ಜೊತೆಯಾಟ ಮುರಿದ ಕೇದಾರ್ ಜಾಧವ್ ಕೊಹ್ಲಿ ಪಾಳಯದಲ್ಲಿ ಸಂತಸ ಉಕ್ಕಿಸಿದರು. ಮುಂದಿನ ಓವರ್‌ನಲ್ಲಿ ಫಿಂಚ್‌ ಕೂಡ ಔಟಾದರು. ಶತಕದತ್ತ ಹೆಜ್ಜೆ ಇರಿಸಿದ್ದ ಅವರು ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಆಫ್‌ಸ್ಟಂಪ್‌ನಿಂದ ಆಚೆ ಸಾಗಿದ್ದ ಚೆಂಡನ್ನು ಬೌಂಡರಿಗೆ ಅಟ್ಟುವ ಭರದಲ್ಲಿ ಅವರು ಎಡವಿದರು. ನಂತರ ಬೌಲರ್‌ಗಳು ಮೇಲುಗೈ ಸಾಧಿಸಿದರು; ತಂಡ ದಿಢೀರ್ ಕುಸಿತ ಕಂಡಿತು. ಪೀಟರ್‌ ಹ್ಯಾಂಡ್ಸ್‌ಕಂಬ್ 30 ಎಸೆತಗಳಲ್ಲಿ 43 ರನ್‌ ಗಳಿಸಿದರೂ ಉಳಿದವರಿಗೆ ಹೆಚ್ಚು ಮಿಂಚಲು ಸಾಧ್ಯವಾಗಲಿಲ್ಲ.

ನೂರನೇ ಪಂದ್ಯದಲ್ಲಿ ಶತಕ ಸಿಡಿಸಿದವರು

ಬ್ಯಾಟ್ಸ್‌ಮನ್‌,                ರನ್‌,               ತಂಡ,               ಎದುರಾಳಿ ತಂಡ,                 ವರ್ಷ

ಗೋರ್ಡನ್‌ ಗ್ರೀನಿಜ್‌,          102*,     ವೆಸ್ಟ್‌ ಇಂಡೀಸ್‌,          ಪಾಕಿಸ್ತಾನ,                      1998

ಕ್ರಿಸ್‌ ಕೇನ್ಸ್‌,                   115,       ನ್ಯೂಜಿಲೆಂಡ್‌,              ಭಾರತ,                           1999

ಯೂಸುಫ್‌ ಯೊಹಾನ,        129,         ಪಾಕಿಸ್ತಾನ,              ಶ್ರೀಲಂಕಾ,                       2002

ಕುಮಾರ ಸಂಗಕ್ಕಾರ,         101,         ಶ್ರೀಲಂಕಾ,            ಆಸ್ಟ್ರೇಲಿಯಾ,                      2004‌,

ಕ್ರಿಸ್‌ ಗೇಲ್,                   132*,        ವೆಸ್ಟ್‌ ಇಂಡೀಸ್‌,       ಇಂಗ್ಲೆಂಡ್‌,                         2004

ಮಾರ್ಕಸ್ ಥ್ರೆಸ್ಕೊಥಿಕ್‌,      100*            ಇಂಗ್ಲೆಂಡ್‌,          ಬಾಂಗ್ಲಾದೇಶ,                       2005

ರಾಮ್‌ನರೇಶ್ ಸರವಣ್‌,        115*,         ವೆಸ್ಟ್‌ ಇಂಡೀಸ್‌,   ಭಾರತ,                              2006

ಡೇವಿಡ್ ವಾರ್ನರ್‌,               124,               ಆಸ್ಟ್ರೇಲಿಯಾ,   ಭಾರತ,                              2017‌

ಅಂಗಳದಲ್ಲಿ ಕಾಣಿಸಿಕೊಂಡ ರಾಹುಲ್‌!

ಸರಣಿಯಲ್ಲಿ ಒಂದು ಪಂದ್ಯವನ್ನೂ ಆಡದ ಕೆ.ಎಲ್. ರಾಹುಲ್‌ಗೆ ಬೆಂಗಳೂರಿನಲ್ಲಿ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಿದ್ದ ಪ್ರೇಕ್ಷಕರಿಗೆ ನಿರಾಸೆ ಕಾದಿತ್ತು. ಬೌಲರ್‌ಗಳಾದ ಭುವನೇಶ್ವರ್ ಕುಮಾರ್‌, ಜಸ್‌ಪ್ರೀತ್ ಬೂಮ್ರಾ ಮತ್ತು ಕುಲದೀಪ್ ಯಾದವ್ ಅವರಿಗೆ ವಿಶ್ರಾಂತಿ ನೀಡಿದ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಯಾವುದೇ ಬದಲಾವಣೆ  ಮಾಡಲಿಲ್ಲ.

ಆದರೂ ರಾಹುಲ್‌ 10ನೇ ಓವರ್‌ನಲ್ಲಿ ಅಂಗಳದಲ್ಲಿ ಕಾಣಿಸಿಕೊಂಡರು. ಮಹಮ್ಮದ್ ಶಮಿ ಬದಲಿಗೆ ಬಂದ ಅವರು ಮಿಡ್‌ ಆನ್‌ನಲ್ಲಿ ಫೀಲ್ಡಿಂಗ್ ಮಾಡಿದರು. ಒಂದು ಓವರ್‌ ನಂತರ ವಾಪಸಾದರು. 27ನೇ ಓವರ್‌ನಲ್ಲೂ ಫೀಲ್ಡಿಂಗ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT