ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೀಚಿಕೆಯಾದ ಮಹಿಳಾ ಅಭಿವೃದ್ಧಿ

Last Updated 28 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಂತಹ ಹೆಣ್ಣುಮಕ್ಕಳನ್ನು ಸಶಕ್ತರನ್ನಾಗಿಸುವುದಕ್ಕಾಗಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅನೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ. ನಿಗಮದ ಉದ್ಯೋಗಿನಿ, ಚೇತನಾ, ಸಮೃದ್ಧಿ, ಧನಶ್ರಿ, ಕಿರುಸಾಲ ಮುಂತಾದ ಯೋಜನೆಗಳು ಕೆಲವರಾದರೂ ಅಸಹಾಯಕ ಮಹಿಳೆಯರಿಗೆ ವರದಾನವಾಗಿವೆ. ವರ್ಷದಿಂದ ವರ್ಷಕ್ಕೆ ಈ ಯೋಜನೆಗಳ ಫಲಾನುಭವಿಗಳ ಸಂಖ್ಯೆಯನ್ನೂ ಯೋಜನೆಯ ನಿಗದಿತ ಮೊತ್ತವನ್ನೂ ಹೆಚ್ಚಿಸಿ ಹೆಣ್ಣುಮಕ್ಕಳ ಸ್ವಾವಲಂಬನೆಗೆ ಪ್ರಾಮಾಣಿಕವಾಗಿ ಬೆಂಬಲ ನೀಡಬೇಕಿರುವುದು ಸಂವೇದನಾಶೀಲ ಸರ್ಕಾರದ ಜವಾಬ್ದಾರಿ.

ಆದರೆ ಆಗುತ್ತಿರುವುದೇನು? ಈ ಆರ್ಥಿಕ ವರ್ಷದಲ್ಲಿ ಎಲ್ಲಾ ಯೋಜನೆಗಳ ಫಲಾನುಭವಿಗಳ ಸಂಖ್ಯೆಯನ್ನು (ಭೌತಿಕ ಗುರಿ) ಕಡಿತಗೊಳಿಸಿರುವುದು ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕೆ ದೊಡ್ಡ ಹೊಡೆತವಾಗಿದೆ. ಈ ಬಾರಿಯ ಆಯವ್ಯಯದಲ್ಲಿ ನಿಗಮಕ್ಕೆ ಹೆಚ್ಚಿನ ಮೊತ್ತವೂ ಹಂಚಿಕೆಯಾಗಿಲ್ಲ. ಆದರೆ, ಲಭ್ಯ ಹಣದಲ್ಲಿಯೇ ಎಲ್ಲಾ ಜಿಲ್ಲೆಗಳಲ್ಲೂ ಸವಿರುಚಿ ಕ್ಯಾಂಟೀನ್ ತೆರೆಯಬೇಕಾಗಿದೆ. ಹೆಸರಿಗೆ ಹೊಸ ಹೊಸ ಯೋಜನೆಗಳು. ಆದರೆ ಫಲಾನುಭವಿಗಳ ಸಂಖ್ಯೆ ಬೆರಳೆಣಿಕೆಯಷ್ಟು. ಇದರಿಂದ ಸಾಮುದಾಯಿಕ ಮಹಿಳಾ ಅಭಿವೃದ್ಧಿ ಹೇಗೆ ಸಾಧ್ಯ?

ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಮಹಿಳೆ ಯರಿಗೆ ಸ್ವ ಉದ್ಯೋಗಕ್ಕಾಗಿ ತರಬೇತಿ ಮತ್ತು ಧನಸಹಾಯ ನೀಡುವ ನಿಗಮದ ಯಶಸ್ವಿ ಯೋಜನೆಯಾದ ‘ಉದ್ಯೋಗಿನಿ’ ಅಡಿಯಲ್ಲಿ ಕಳೆದ ವರ್ಷ 13,824 ಫಲಾನುಭವಿಗಳನ್ನು ನಿಗದಿಗೊಳಿಸಲಾಗಿತ್ತು. ಆದರೆ ಈ ವರ್ಷ ಈ ಸಂಖ್ಯೆಯನ್ನು 4,734ಕ್ಕೆ ಇಳಿಸಲಾಗಿದೆ! ಹಾಗೆಯೇ ಸ್ತ್ರೀಶಕ್ತಿ ಗುಂಪಿನ ಸದಸ್ಯರು ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಅರ್ಹ ನೋಂದಾಯಿತ ಸ್ತ್ರೀಶಕ್ತಿ ಗುಂಪಿಗೆ ₹ 2 ಲಕ್ಷ ಬಡ್ಡಿರಹಿತ ಸಾಲವನ್ನು ಕಿರು ಸಾಲ ಯೋಜನೆಯಡಿ ನೀಡಲಾಗುತ್ತಿತ್ತು. ಕಳೆದ ವರ್ಷ ಅದರ ಗುರಿ 500 ಇದ್ದದ್ದು ಈ ಬಾರಿ ಅದನ್ನು 400ಕ್ಕೆ ಇಳಿಸಲಾಗಿದೆ!

ನಮ್ಮ ನಗರ ಹಾಗೂ ಹಳ್ಳಿಗಳ ಸಾವಿರಾರು ಮಹಿಳೆಯರು ಬೀದಿ ಬದಿ ಸಣ್ಣ ವ್ಯಾಪಾರದಲ್ಲಿ ತೊಡಗಿದ್ದಾರೆ. ಇವರು ಬಂಡವಾಳದ ಅಗತ್ಯಕ್ಕಾಗಿ ಲೇವಾದೇವಿದಾರರಲ್ಲಿ ಹೆಚ್ಚಿನ ಬಡ್ಡಿಗೆ ಸಾಲ ಪಡೆಯವುದನ್ನು ತಪ್ಪಿಸಲು ಬಡತನ ರೇಖೆಗಿಂತ ಕೆಳಗಿರುವ 10,000 ಮಹಿಳಾ ಬೀದಿ ಬದಿ ವ್ಯಾಪಾರಿಗಳಿಗೆ ₹10,000 ಪ್ರೋತ್ಸಾಹಧನ ನೀಡುವ ‘ಸಮೃದ್ಧಿ ಯೋಜನೆ’ಯನ್ನು ಕಳೆದ ವರ್ಷ ಜಾರಿಗೊಳಿಸಲಾಗಿತ್ತು. ಈ ವರ್ಷ ಇದರ ಫಲಾನುಭವಿಗಳ ಸಂಖ್ಯೆಯನ್ನೂ 8,416ಕ್ಕೆ ಇಳಿಸಿರುವುದು ವಿಪರ್ಯಾಸ.

ರಾಜ್ಯದಲ್ಲಿ 2.50 ಲಕ್ಷದಷ್ಟಿರುವ ಎಚ್‌ಐವಿ ಸೋಂಕಿತ ಸಂತ್ರಸ್ತೆಯರನ್ನು ಆರ್ಥಿಕ ಸಶಕ್ತೀಕರಣದ ಮೂಲಕ ಮುಖ್ಯವಾಹಿನಿಗೆ ತರಲು ‘ಧನಶ್ರೀ’ ಯೋಜನೆ ರೂಪಿಸಲಾಗಿದೆ. ಕಳೆದ ವರ್ಷ 991 ಫಲಾನುಭವಿಗಳನ್ನು ಈ ಯೋಜನೆ ತಲುಪಿತ್ತು. ಆದರೆ ಅದನ್ನು ಈ ಬಾರಿ 792ಕ್ಕೆ ಇಳಿಸಲಾಗಿದೆ! ಲಿಂಗತ್ವ ಅಲ್ಪಸಂಖ್ಯಾತರ ಸಮಸ್ಯೆಯಂತೂ ಇನ್ನೂ ತೀವ್ರವಾಗಿದ್ದು, ಅವರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಲು ₹ 20,000 ಪ್ರೋತ್ಸಾಹಧನ ನೀಡುವ ವಿಶೇಷ ಯೋಜನೆಯಿದೆ. ಕಳೆದ ವರ್ಷ 975 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಅದನ್ನು ಈ ವರ್ಷ 650 ಫಲಾನುಭವಿಗಳಿಗೆ ಇಳಿಸಲಾಗಿದೆ!

ಇದಕ್ಕಿಂತ ಮುಖ್ಯವಾಗಿರುವುದೆಂದರೆ, ಬಡತನ, ನಿರುದ್ಯೋಗ, ಬಾಲ್ಯವಿವಾಹ, ವಂಚನೆ, ಅತ್ಯಾಚಾರ, ಸಾಗಣೆ ಮುಂತಾದ ವಿಷಮ ಕಾರಣಗಳಿಂದಾಗಿ ವೇಶ್ಯಾವಾಟಿಕೆಯ ಜಾಲಕ್ಕೆ ಬಿದ್ದ ಬಡ ಹೆಣ್ಣುಮಕ್ಕಳ ಪುನರ್ವಸತಿಗಾಗಿ ‘ಚೇತನಾ’ ಎಂಬ ಯೋಜನೆಯನ್ನು 2015ರಲ್ಲಿ ನಿಗಮದಿಂದ ರೂಪಿಸಲಾಗಿದ್ದು, ಕಳೆದ ವರ್ಷ 975 ಮಹಿಳೆಯರ ಪುನರ್ವಸತಿಯ ಗುರಿಯನ್ನು ಹಾಕಿಕೊಂಡಿದ್ದ ನಿಗಮ ಈ ಬಾರಿ ಅದನ್ನು ಕೇವಲ 325ಕ್ಕೆ ಇಳಿಸಿದೆ. ಇದಕ್ಕೆ ನಿಗಮ ನೀಡುವ ಸಮಜಾಯಿಷಿ ಇದು: ‘ಪ್ರೋತ್ಸಾಹಧನ ಹಿಂದೆ ₹ 20,000 ಇತ್ತು. ಈ ವರ್ಷ ಅದನ್ನು ₹25,000ಕ್ಕೆ ಏರಿಸಲಾಗಿದೆ. ಜೊತೆಗೆ ಹೆಚ್ಚುವರಿಯಾಗಿ ₹25,000 ಸಾಲ ನೀಡಲಾಗುತ್ತದೆ’.

ಆದರೆ ವೇಶ್ಯಾವಾಟಿಕೆ ಸುಳಿಯಲ್ಲಿ ಸಿಲುಕಿರುವ ಮಹಿಳೆಯರ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ ಎಂದು ಆರೋಗ್ಯ ಇಲಾಖೆಯಡಿ ದಾಖಲಾದ ಅಂಕಿಅಂಶಗಳು ಹೇಳುತ್ತವೆ. ಈ ಪಟ್ಟಿಯಲ್ಲಿ ದಾಖಲಾಗದವರು ಮೂರು– ನಾಲ್ಕು ಪಟ್ಟು ಅಧಿಕವೆಂಬ ಅಂದಾಜಿದೆ. ‘ಜೀವನ ನಿರ್ವಹಣೆಗೆ ಅನ್ಯ ಸಮರ್ಪಕ ಆರ್ಥಿಕ ಉತ್ಪಾದನಾ ಮಾರ್ಗಗಳು ದೊರಕಿದರೆ ಖಂಡಿತಾ ದಂಧೆಯಿಂದ ಹೊರಬಂದು ನೆಮ್ಮದಿಯ ಬದುಕು ನಡೆಸುತ್ತೇವೆ, ಈ ದಂಧೆ ನಮ್ಮ ಆಯ್ಕೆಯಲ್ಲ, ಅನಿವಾರ್ಯ’ ಎಂದು ಲೈಂಗಿಕ ದಮನಿತರಲ್ಲಿ ಶೇ 72.1ರಷ್ಟು ಮಹಿಳೆಯರು ಸ್ಪಷ್ಟಪಡಿಸಿರುವುದನ್ನು ಲೈಂಗಿಕ ವೃತ್ತಿನಿರತರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿರುವ ಜಯಮಾಲಾ ಅಧ್ಯಕ್ಷತೆಯ ಸಮಿತಿಯ ವರದಿ ಹೇಳಿದೆ. ಇದನ್ನು ಆಧರಿಸಿ ಲೈಂಗಿಕ ದಮನಿತರ ಸಶಕ್ತೀಕರಣ ಹಾಗೂ ಪುನರ್ವಸತಿಯನ್ನೇ ಪ್ರಮುಖ ಆದ್ಯತೆಯಾಗಿ ಪರಿಗಣಿಸಿ, ತಕ್ಷಣವೇ ಕೈಗೊಳ್ಳಬೇಕಾದ ಕ್ರಮದ ಕುರಿತು ಶಿಫಾರಸುಗಳನ್ನು ಈ ವರದಿಯಲ್ಲಿ ನೀಡಲಾಗಿದೆ. ಅದರಂತೆ ಪ್ರತಿವರ್ಷ ‘ಚೇತನಾ’ ಯೋಜನೆಯ ಮೂಲಕ 10,000 ಮಂದಿಯ ಪುನರ್ವಸತಿ ಮತ್ತು ಪ್ರೋತ್ಸಾಹಧನವನ್ನು ₹ 1 ಲಕ್ಷಕ್ಕೆ ಏರಿಸುವುದು ಪ್ರಮುಖ ಅಂಶವಾಗಿದೆ. ಹಾಗೆಯೇ ರಾಜ್ಯದಲ್ಲಿ ಎಚ್.ಐ.ವಿ. ಸೋಂಕಿತ ಲೈಂಗಿಕ ದಮನಿತರ ಸಂಖ್ಯೆ ಅಂದಾಜು 8 ಸಾವಿರದಷ್ಟಿದ್ದು ಅವರ ಪುನರ್ವಸತಿಗೆ ವಿಶೇಷ ಆದ್ಯತೆಯನ್ನು ನೀಡಲೂ ಈ ಸಮಿತಿ ಶಿಫಾರಸು ಮಾಡಿದೆ. ಆದರೆ ಪ್ರತಿ ವರ್ಷ 325 ಜನರಿಗೆ ಮಾತ್ರ ಪುನರ್ವಸತಿ ಕಲ್ಪಿಸುತ್ತಿದ್ದರೆ ಸರ್ಕಾರದ ಯೋಜನೆಗಳು ಉಳಿದವರನ್ನು ತಲುಪುವುದು ಹೇಗೆ?

ಲೈಂಗಿಕ ವೃತ್ತಿನಿರತರ ಸ್ಥಿತಿಗತಿಗಳ ಅಧ್ಯಯನ ಸಮಿತಿಯ ಪ್ರಮುಖ ಶಿಫಾರಸುಗಳನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಅಳವಡಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಆಯವ್ಯಯ ಮಂಡನೆ ಸಂದರ್ಭದಲ್ಲಿ ಘೋಷಿಸಿದ್ದರು. ಅದು ಆಯವ್ಯಯ ಪತ್ರದಲ್ಲಿ ಲಿಖಿತ ರೂಪದಲ್ಲಿ ದಾಖಲೂ ಆಗಿದೆ. ಆದರೆ ಈಗ ಇದು ಬರೀ ಬಾಯಿ ಮಾತಿನ ಹೇಳಿಕೆಯಾಗಿಬಿಟ್ಟಿದೆ. ಹಾಗಿದ್ದರೆ ಈ ವರದಿಯ ಗತಿಯೂ ಸರ್ಕಾರ ಅಧ್ಯಯನ ಮಾಡಿಸಿದ ಇತರ ವರದಿಗಳಂತೆ ದೂಳು ಹಿಡಿದು ಕೂತೀತೆ ಎಂಬ ಆತಂಕ ಕಾಡುತ್ತಿದೆ.

ರಾಜ್ಯದಲ್ಲಿರುವ ಲೈಂಗಿಕ ದಮನಿತರು ತಮ್ಮ ಬದುಕು ಹಸನಾದೀತೆಂಬ ಕನಸಿನಿಂದ, ಸರ್ಕಾರಕ್ಕೆ ಸಲ್ಲಿಸಿದ ವರದಿಗಾಗಿ ತಮ್ಮ ಅತ್ಯಂತ ಖಾಸಗಿ ವಿಷಯವನ್ನೂ ಬಹಿರಂಗಪಡಿಸಿ ಸಮಗ್ರ ಅಧ್ಯಯನಕ್ಕಾಗಿ ಎಲ್ಲ ರೀತಿಯ ಸಹಕಾರವನ್ನೂ ನೀಡಿದ್ದರು. ‘ಇಷ್ಟೆಲ್ಲಾ ಅಧ್ಯಯನ ಮಾಡಿ ವರದಿಯೊಪ್ಪಿಸಿದ ನಂತರ ಫಲಾನು
ಭವಿಗಳ ಸಂಖ್ಯೆ ಕಡಿಮೆ ಮಾಡಿದ್ದಾರಲ್ಲಾ, ನಮಗೆ ಸರ್ಕಾರ ಹೊಸದಾಗಿ ಪುನರ್ವಸತಿಗಾಗಿ ಏನು ಮಾಡಿಕೊಟ್ಟಿದೆ?’ ಎಂದು ಸಮಿತಿಯನ್ನು, ಸರ್ಕಾರವನ್ನು ಈ ದಮನಿತರು ಶಪಿಸುತ್ತಿದ್ದಾರೆ. ಅವರಿಗೆ ಹೇಗೆ ಉತ್ತರಿಸುವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT