ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರತಕ್ಕೊಂದು ಭರವಸೆ ಬೆಳೆ ಅಚಾಚಾ

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೇಲ್ನೋಟಕ್ಕೆ ಹಣ್ಣಡಿಕೆಯಂತೇ ಕಾಣುವ ವಿದೇಶೀ ಹಣ್ಣು ಅಚಾಚಾ. ಇದನ್ನು ಸಾಗಿಸುವುದು ಅಡಿಕೆ ಹೆಕ್ಕಿ ಒಯ್ಯುವಂಥದ್ದೇ ಬುಟ್ಟಿಗಳಲ್ಲಿ. ತಾಜಾ ಆಗಿ ತಿನ್ನಬಹುದು. ಸಿಪ್ಪೆಯಿಂದ ಹಸಿವೆ ಕುಗ್ಗಿಸುವ, ದಾಹಶಮನಿ ಶರಬತ್ ತಯಾರಿಸಬಹುದು. ತಿರುಳನ್ನು ಫ್ರೂಟ್‌ ಸಲಾಡ್, ಸಾಸ್, ಜೆಲ್ಲಿ ಮಾರ್ಮಲೇಡ್ ಮತ್ತು ಕಾಕ್‌ಟೇಲ್‌ಗಳ ತಯಾರಿಗೆ ಬಳಸಬಹುದು.

ಈ ಬಹೂಪಯೋಗಿ ಹಣ್ಣಿಗೆ ಅತಿ ಹೆಚ್ಚು ತಾಳಿಕೆ ಗುಣ ಇದೆ. ಆದರೆ ಮಾಗಿದ ನಂತರವೇ ಕೊಯ್ಯಬೇಕು. ತಿರುಳಿನಲ್ಲಿ ಧಾರಾಳ ಆ್ಯಂಟಿಯಾಕ್ಸಿಡೆಂಟುಗಳು, ಅದರಲ್ಲೂ ‘ಸಿ’ ವಿಟಮಿನ್, ಫೋಲೇಟ್, ರೈಬೋಫ್ಲೇವಿನ್ ಮತ್ತು ಪೊಟ್ಯಾಷಿಯಂ ಪ್ರಮಾಣ ಹೇರಳವಾಗಿವೆ.

ಉಷ್ಣ ಪ್ರದೇಶದ ಈ ಹಣ್ಣು ಮುರುಗಲಿನ ಸೋದರಸಂಬಂಧಿ. ಮೂಲ ಹೆಸರು ಅಚಾಚಾಯ್ರು; ಹುಟ್ಟುದೇಶ ಬೊಲಿವಿಯಾ. ಶಾಸ್ತ್ರೀಯ ಹೆಸರು ಗಾರ್ಸೀನಿಯಾ ಹ್ಯುಮಿಲಿಸ್. ಕೆಲವರು ‘ಬೊಲಿವಿಯನ್ ಮ್ಯಾಂಗೊಸ್ಟೀನ್’ ಎಂದೂ ಕರೆಯುತ್ತಾರೆ. ಬೊಲಿವಿಯಾದ ಅಚಾಚಾಯ್ರುವನ್ನೀಗ ಆಸ್ಟ್ರೇಲಿಯಾ ಜನಪ್ರಿಯವಾಗಿಸುತ್ತಿದೆ. ಉಚ್ಚರಿಸಲು ಕಷ್ಟವಾಗುವ ಅಚಾಚಾಯ್ರು ಹೆಸರನ್ನು ಅಚಾಚಾ ಎಂದು ಟ್ರಿಮ್ ಮಾಡಿದ್ದು ಆಸ್ಟ್ರೇಲಿಯನ್ನರ ಮಾರ್ಕೆಟಿಂಗ್ ಕೌಶಲ!

ಭಾರತದಲ್ಲಿ ಬೆಳೆಸಬಹುದಾದ, ಒಳ್ಳೆ ಭವಿಷ್ಯ ಇರುವ ಹಣ್ಣಿದು. ಮುರುಗಲು ಬೆಳೆಯುವ ಪ್ರದೇಶಗಳಲ್ಲಿ, ವಿಶೇಷವಾಗಿ ದೇಶದ ಈಶಾನ್ಯ ಭಾಗಗಳಲ್ಲಿ ಯಶಸ್ವಿಯಾಗಿ ಬೆಳೆದು ಫಲ ಪಡೆಯಬಹುದು.

ಜಗತ್ತಿನ ಅತಿ ದೊಡ್ಡ ಅಚಾಚಾ ಪ್ಲಾಂಟೇಶನ್ ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ನಲ್ಲಿದೆ. ಬ್ರೂಸ್ ಹಿಲ್ ಮತ್ತು ಮೇರಿ ಹಿಲ್ ದಂಪತಿ ಅಚಾಚಾ ಹೆಸರಿನ ಈ ಕಂಪೆನಿಯ ಒಡೆಯರು. ಈ ಹಣ್ಣು 35 ರಿಂದ 90 ಗ್ರಾಂ ತೂಗುತ್ತವೆ. ಆದರೆ ಸರಾಸರಿ ತೂಕ 45 - 50 ಗ್ರಾಂ.

ಮನೆ ಬಾಗಿಲಿಗೇ ಹಣ್ಣು: ಹತ್ತರಿಂದ ಇಪ್ಪತ್ತೈದು ಡಿಗ್ರಿ ಸೆಂಟಿಗ್ರೇಡ್ ನಡುವೆ ಮುಚ್ಚಿದ ಪಾತ್ರೆಯಲ್ಲಿಟ್ಟರೆ ಇದು ಹಲವು ವಾರಗಳವರೆಗೆ ಉಳಿಯುತ್ತದೆ ಎನ್ನುತ್ತದೆ ಕಂಪೆನಿ. ಈ ಹಣ್ಣುಗಳನ್ನು ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಆನ್‌ಲೈನ್ ಮಾರಾಟದ ಮೂಲಕ ಗ್ರಾಹಕರ ಮನೆಗೇ ತಲುಪಿಸುತ್ತಿದೆ. ಇದಕ್ಕಾಗಿಯೇ ಒಂದು ಮತ್ತು ಐದು ಕಿಲೋಗಳ ಆಕರ್ಷಕ ಪ್ಯಾಕೆಟ್ ಮತ್ತು ಚೀಲಗಳನ್ನು ಸಿದ್ಧಗೊಳಿಸಿದೆ.

ಸಂಸ್ಥೆಯ ಜಾಲತಾಣ www.achacha.com.au ಭೇಟಿಕೊಟ್ಟು ನೋಡಿ. ಈ ಹಣ್ಣನ್ನು ಒಡೆದು ತಿನ್ನುವ ರೀತಿಯನ್ನು, ಹಣ್ಣಿನ ಗುಣವಿಶೇಷಗಳನ್ನು ಕಂಪೆನಿ ಹೇಗೆ ಮನಮುಟ್ಟುವಂತೆ ಪರಿಚಯಿಸಿದೆ ಗಮನಿಸಿ. ಜಾಲತಾಣದಲ್ಲಿ ಇವರ ಮುನ್ನೂರು ಎಕರೆ ಪ್ಲಾಂಟೇಶನ್ನಿನ ಹೆಲಿಕಾಪ್ಟರ್ ಚಿತ್ರೀಕರಣದ ವಿಡಿಯೊ ಇದೆ. ಹಣ್ಣನ್ನು ಒಡೆಯುವುದು ಹೇಗೆ, ಯುರೋಪಿಗೆ ರಫ್ತು, ಫ್ರೂಟ್‌ ಲೋಜಿಸ್ಟಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದದ್ದು - ಹೀಗೆ ಆರೇಳು ವಿಡಿಯೊಗಳಿವೆ.

ಮ್ಯಾಂಗೊಸ್ಟೀನ್ ಹಣ್ಣಿನದೇ ಕುಟುಂಬಕ್ಕೆ ಸೇರಿದ್ದರೂ, ಅಚಾಚಾದ ಸಿಪ್ಪೆ ಮ್ಯಾಂಗೊಸ್ಟೀನಿನದಕ್ಕಿಂತ ತೆಳ್ಳಗೆ. ‘ಮ್ಯಾಂಗೊಸ್ಟೀನಿಗೆ ಹೋಲಿಸಿದರೆ ಒಂದು ಕಿಲೋ ಅಚಾಚಾ ಹಣ್ಣಿನಲ್ಲಿ ಶೇ 25ಕ್ಕಿಂತ ಹೆಚ್ಚು ಖಾದ್ಯ ತಿರುಳು ಸಿಗುತ್ತದೆ’ ಎನ್ನುತ್ತದೆ ಕಂಪೆನಿ. ಮ್ಯಾಂಗೊಸ್ಟೀನ್ ತಿರುಳು ಸಿಹಿ ರುಚಿ ಮಾತ್ರ ಹೊಂದಿದೆ. ‘ಅಚಾಚಾದಲ್ಲಿ ಹುಳಿ ಮತ್ತು ಸಿಹಿಗಳ ಅದ್ಭುತ ಸಮತೋಲ ಇದೆ’ ಎನ್ನುವುದು ಇವರ ವಾದ.

ಮೂರು ದಶಕದ ಕನಸು: ಅಚಾಚಾ ಕಂಪೆನಿ ಇಂದು 120 ಎಕರೆಯಲ್ಲಿ ಈ ಹಣ್ಣನ್ನು ಬೆಳೆಯುತ್ತಿದೆ. ಫಲ ಕೊಡುವ ಸುಮಾರು 16,000 ಮರಗಳಿವೆ. ಬ್ರೂಸ್ ಹಿಲ್ ಮುಂದುವರಿಸುತ್ತಾರೆ, ‘ಕಂಪೆನಿ ಈ ಹಣ್ಣನ್ನು ಕಷ್ಟಪಟ್ಟು ಜನಪ್ರಿಯಗೊಳಿಸಿದೆ. ಇವರ ಹಣ್ಣಿಗೆ ವಿದೇಶಗಳಲ್ಲೂ ನಮಗೆ ಯಶಸ್ಸು ಸಿಕ್ಕಿದೆ’. ಮಾರ್ಕೆಟಿಂಗ್‌ನಲ್ಲಿ ಇವರು ಒತ್ತು ಕೊಟ್ಟ ಒಂದು ಅಂಶ-ಸಿಪ್ಪೆ ಎಸೆಯಬೇಡಿ, ಅದರ ಶರಬತ್ತು ಮಾಡಿ ಎನ್ನುವುದು. ಒಂದು ಕಿಲೋ ಸಿಪ್ಪೆಯಿಂದ ನಾಲ್ಕು ಕಿಲೋ ಶರಬತ್ತು ತಯಾರಿಸಬಹುದು. ಬೊಲಿವಿಯಾದಲ್ಲಿ ಹಸಿವು ದೂರ ಮಾಡಲು ಈ ಶರಬತ್ತನ್ನು ವ್ಯಾಪಕವಾಗಿ ಬಳಸುತ್ತಾರೆ.

ಅಚಾಚಾಯ್ರು ಉತ್ಸವ
ಬೊಲಿವಿಯಾದ ಪೊರೊಂಗೊ ಪಟ್ಟಣದಲ್ಲಿ ಹತ್ತು ವರ್ಷಗಳಿಂದ ‘ಅಚಾಚಾಯ್ರು ಉತ್ಸವ ನಡೆಯುತ್ತಿದೆ. ಈ ದ್ವಿದಿನದ ಉತ್ಸವ ನಡೆಯುವುದು ಕೊಯ್ಲಿನ ಏರುಋತು ಜನವರಿಯಲ್ಲಿ. ಈ ಹಣ್ಣನ್ನು ಜನಪ್ರಿಯಗೊಳಿಸುವುದು, ಅದರ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ - ಹೀಗೆ ಅಚಾಚಾಯ್ರು ಉತ್ಸವದ ಹಿಂದೆ ಮೂರು ಉದ್ದೇಶಗಳಿವೆ.

ಉತ್ಸವದಲ್ಲಿ ಕೃಷಿಕರು ಮತ್ತು ಬಳಕೆದಾರರ ನಡುವೆ ಹಣ್ಣಿನ ನೇರ ಮಾರಾಟ ನಡೆಯುತ್ತದೆ. ಉತ್ಸವಕ್ಕೆ ಐದರಿಂದ ಆರು ಸಾವಿರ ಜನ ಜಮಾಯಿಸುತ್ತಾರೆ.
ಪೊರೊಂಗೊ, ಬೊಲಿವಿಯಾ ದೇಶದ ರಾಜಧಾನಿ. ಸಾಂತಾಕ್ರೂಝಿನಿಂದ 18 ಕಿಲೋಮೀಟರ್ ದೂರ. ಇದು ‘ಅಚಾಚಾ ರಾಜಧಾನಿ’.

ಕೇಸರಿ ಬಣ್ಣ, ತತ್ತಿ ಆಕಾರದ, ಬಿಳಿಬಣ್ಣದ ಖಾದ್ಯ ತಿರುಳಿರುವ ಈ ಹಣ್ಣು ನವೆಂಬರ್‌ನಿಂದ ಫೆಬ್ರುವರಿವರೆಗೆ ಇಲ್ಲಿನ ಮಾರುಕಟ್ಟೆಯ ರಾಣಿ! ನೂರಕ್ಕೂ ಹೆಚ್ಚು ರೈತರು ಅಚಾಚಾಯ್ರು ಉತ್ಸವಕ್ಕೆ ತಂತಮ್ಮ ಹಣ್ಣು ತರುತ್ತಾರೆ. ಪ್ರತಿ ಉತ್ಸವದಲ್ಲೂ ಎಂಬತ್ತು ಸಾವಿರದಿಂದ ಒಂದು ಲಕ್ಷ ಹಣ್ಣು ಮಾರಾಟವಾಗುತ್ತದೆ. ನೂರು ಹಣ್ಣುಗಳಿಗೆ ಇಂತಿಷ್ಟು ಅಂತ ಬೆಲೆ.

ಗುಣಮಟ್ಟ, ಗಾತ್ರ ಹೊಂದಿ ನೂರು ಅಚಾಚಾಯ್ರು ಹಣ್ಣುಗಳಿಗೆ 10ರಿಂದ 25 ಬೊಲಿವಿಯಾನೊ ಬೆಲೆಯಿದೆ. ಒಂದು ಬೊಲಿವಿಯಾನೊ ಅಂದರೆ ಹೆಚ್ಚುಕಮ್ಮಿ 9 ರೂಪಾಯಿ. ಒಂದು ಅಚಾಚಾಯ್ರು ಹಣ್ಣಿಗೆ ಒಂದರಿಂದ ಎರಡೂವರೆ ರೂಪಾಯಿ ಎನ್ನಬಹುದು.

ಪೂರ್ವ ಬೊಲಿವಿಯಾದ ಕಾಡುಗಳಲ್ಲಿ ಈ ಹಣ್ಣು ನೈಸರ್ಗಿಕವಾಗಿ ಬೆಳೆಯುತ್ತದೆ. ಇದರ ಕೃಷಿ ಆರಂಭವಾಗಿ ಕೆಲವೇ ದಶಕಗಳಾಗಿವೆಯಷ್ಟೇ. ಇಪ್ಪತ್ತು ವರ್ಷದ ಮರ ಹತ್ತು ಸಾವಿರ ಹಣ್ಣುಗಳವರೆಗೂ ಹಣ್ಣು ಕೊಡುವುದಿದೆ. ನೆಟ್ಟು ಬೆಳೆ ಕೊಡಲು ಅಂದಾಜು ಎಂಟ್ಹತ್ತು ವರ್ಷ ಬೇಕು. ಬೊಲಿವಿಯಾದಲ್ಲಿ ಐನೂರಕ್ಕಿಂತಲೂ ಹೆಚ್ಚು ಅಚಾಚಾಯ್ರು ಕೃಷಿಕರಿದ್ದಾರೆ. 800 - 900 ಹೆಕ್ಟರ್‌ನಲ್ಲಿ ಈ ಹಣ್ಣನ್ನು ಬೆಳೆಸುತ್ತಿದ್ದಾರೆ.

ಅಚಾಚಾಯ್ರು ರಾಜ: ಪೊರೊಂಗೊವಿನ ಕೃಷಿಕ ಫ್ಲೊರೆಂಟಿನೋ ಫೋರೆಸ್ ಝಂಬ್ರಾನಾರಿಗೀಗ 68 ವರ್ಷ ವಯಸ್ಸು. ಇವರ ಹತ್ತು ಹೆಕ್ಟರ್‌ನಲ್ಲಿ ಎರಡು ಸಾವಿರ ಅಚಾಚಾಯ್ರು ಮರಗಳಿವೆ. ಇವರನ್ನು ‘ಅಚಾಚಾಯ್ರು ರಾಜ’ ಎಂದೇ ಕರೆಯುತ್ತಾರೆ. ಅಚಾಚಾಯ್ರು ಕೃಷಿಯಲ್ಲಿ ಇವರದು ಮೂರು ದಶಕದ ಅನುಭವ. ಉತ್ಸವಕ್ಕೆ ಗರಿಷ್ಠ ಪ್ರಮಾಣದ ಹಣ್ಣು - ಏನಿಲ್ಲವೆಂದರೂ 30,000 ತರುತ್ತಾರೆ.

ಉತ್ಸವದಲ್ಲಿ ಅಚಾಚಾಯ್ರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳೂ ಮಾರಾಟಕ್ಕಿರುತ್ತವೆ. ಅಚಾಚಾಯ್ರು ಯೋಗರ್ಟ್, ಅಚಾಚಾಯ್ರು ಲಿಕ್ಕೆರ್, ಅಚಾಚಾಯ್ರು ಪಿಕೋಲ್ (ಐಸ್ ಕ್ಯಾಂಡಿಯಂತಹ ಉತ್ಪನ್ನ), ಅಚಾಚಾಯ್ರು ಐಸ್‌ ಕ್ರೀಂ, ಸೋಡಾ, ಚಿಕನ್ ಅಚಾಚಾಯ್ರು ಮತ್ತಿತರ ಹಲವು ಸಿಹಿತಿಂಡಿಗಳು ಇವುಗಳಲ್ಲಿ ಕೆಲವು.

ಕಾಡುಬೆಳೆಯಾಗಿದ್ದ ಈ ಹಣ್ಣನ್ನು ಇಲ್ಲಿನವರು ಕೃಷಿ ಮಾಡತೊಡಗಿ ಅರ್ಧ ಶತಮಾನವೂ ಆಗಿರಲಾರದು. ಇಷ್ಟರಲ್ಲೇ ಬೊಲಿವಿಯಾದಲ್ಲಿ ಅಚಾಚಾಯ್ರು ಜ್ಯೂಸ್, ಪ್ರಿಸರ್ವ್, ಐಸ್‌ಕ್ರೀಂ, ಇತರ ಉತ್ಪನ್ನಗಳು ವಾಣಿಜ್ಯ ಮಟ್ಟದಲ್ಲಿ ಜನಪ್ರಿಯವಾಗಿವೆ. ಹಣ್ಣು ನೆರೆಯ ಬ್ರೆಜಿಲ್ಲಿಗೆ ರಫ್ತಾಗುತ್ತಿದೆ. ದೂರದೇಶಗಳಿಗೆ ರಫ್ತು ಪ್ರಯತ್ನಗಳು ಆರಂಭವಾಗಿವೆ. ಒಂದು ಮೂಲದ ಪ್ರಕಾರ 2010ರಲ್ಲಿ ಇಲ್ಲಿ 55 ದಶಲಕ್ಷ ಹಣ್ಣು ಉತ್ಪಾದನೆ ಆಗಿತ್ತು. ಇದರಿಂದ ಬಂದ ಆದಾಯ 4,50,000 ಅಮೆರಿಕನ್ ಡಾಲರ್. ನಮ್ಮ ದೇಶದ ‘ಹಣ್ಣಿನ ಹುಚ್ಚರ’ ಹಿತ್ತಿಲಿಗೆ ಅಚಾಚಾ ಬಂದು ಸೇರಿದೆ. ದಶಕದೊಳಗೆ ರುಚಿ ನೋಡಲೂ ಸಿಗಬಹುದು!

ಮೂಲೆಯಲ್ಲುಳಿದ ಮುರುಗಲು: ‘ಅಚಾಚಾ’ ಕಂಪೆನಿಯ ಚಟುವಟಿಕೆ ಗಮನಿಸಿದಾಗ ನಮ್ಮ ಪಶ್ಚಿಮ ಘಟ್ಟಗಳ ಮುರುಗಲು (ಪುನರ್ಪುಳಿ) ನೆನಪಾಗುತ್ತದೆ. ಹಲವಾರು ಔಷಧ ಗುಣ ಹೊಂದಿರುವ, ಒಳ್ಳೆ ಶರಬತ್ತು ಮಾಡಬಹುದಾದ ಹಣ್ಣು ಪುನರ್ಪುಳಿ. ಇದು ಈಗಲೂ ಹುಟ್ಟೂರು ಬಿಟ್ಟು ಬೇರೆಡೆ ಬಹುತೇಕ ಅಪರಿಚಿತ.

ಪುನರ್ಪುಳಿಯಲ್ಲಿರುವ ಹೈಡ್ರೋಕ್ಸಿ ಸಿಟ್ರಿಕ್ ಆಮ್ಲಕ್ಕೆ ಬೊಜ್ಜು ವಿರೋಧಿ ಮತ್ತು ಕೊಲೆಸ್ಟ್ರಾಲ್ ತುಂಬದಂತೆ ನೋಡಿಕೊಳ್ಳುವ ಗುಣವಿದೆ. ಅದು ಹಸಿವನ್ನು ಹದ್ದುಬಸ್ತಿನಲ್ಲಿಡುತ್ತದೆ. ಬೀಜದ ಬೆಣ್ಣೆ, ಕಾಲೊಡಕಿಗೆ, ಸುಟ್ಟ ಗಾಯಕ್ಕೆ, ಚರ್ಮ ರಕ್ಷಣೆಗೆ ಒಳ್ಳೆ ಮದ್ದು. ಮಾವಿನಹಣ್ಣಿನ ಜ್ಯೂಸ್ ಬಿಟ್ಟರೆ ನಂತರ ಅತಿ ಹೆಚ್ಚು ಗ್ರಾಹಕ ಸ್ವೀಕೃತಿ ಪಡೆಯುವ ಶರಬತ್ತು ಇದರದು.

ಮಹಾರಾಷ್ಟ್ರದ ಕೊಂಕಣ ಭಾಗದ ಸಿಂಧುದುರ್ಗ, ರತ್ನಗಿರಿ ಜಿಲ್ಲೆಗಳಲ್ಲಿ ಕೋಕಮ್ (ಪುನರ್ಪುಳಿ) ನೈಸರ್ಗಿಕವಾಗಿ ಬೆಳೆಯುತ್ತದೆ. ಬೆಳೆದ ಹಣ್ಣುಗಳಲ್ಲಿ ಕೇವಲ ಮೂವತ್ತು ಶೇಕಡವನ್ನಷ್ಟೇ ನಮಗೆ ಸದ್ಬಳಕೆ ಮಾಡಲು ಆಗುತ್ತಿದೆ! ಉಳಿದದ್ದು ಮಣ್ಣಾಗಿ ಹೋಗುತ್ತಿದೆ. ಇದಕ್ಕೆ ಕಾರಣ ಕೊಯ್ಲಿನ ಸಮಯವನ್ನು ಮಳೆಗಾಲ ಆವರಿಸುವುದು, ಕೂಲಿಯಾಳು ಸಮಸ್ಯೆ ಇತ್ಯಾದಿ.

ಅಚಾಚಾ ಸಂಸ್ಥೆ ಅನುಸರಿಸಿದ ಅದೇ ಸಾರ್ವಜನಿಕ ಸಂಪರ್ಕ, ಸಂವಹನಾ ಜಾಣ್ಮೆ, ಕಾರ್ಯಕ್ರಮಗಳು ಇತ್ಯಾದಿಗಳನ್ನು ನಾವೂ ಮಾಡಿದ್ದರೆ ಕೋಕಮ್ ಎಂಬ ನಮ್ಮ ಅದ್ಭುತ ಹಣ್ಣನ್ನು ದೇಶದಾದ್ಯಂತ ಮನೆಮಾತಾಗಿಸಬಹುದಿತ್ತು! ಬೆಳೆದವರ ಬಾಳೂ ಬೆಳಗಬಹುದಿತ್ತು, ಅಲ್ಲವೆ?

ಶ್ರೀ ಪಡ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT