ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ ಭಯೋತ್ಪಾದಕ: ಪಾಕ್‌

ಪಾಕ್ ವಿದೇಶಾಂಗ ಸಚಿವ ಖ್ವಾಜಾ ಅಸೀಫ್‌ ಹೇಳಿಕೆ
Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: 'ಭಾರತದ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕ ಹಾಗೂ ಅಲ್ಲಿನ ಆಡಳಿತವನ್ನು ಭಯೋತ್ಪಾದಕರ ಪಕ್ಷ ನಡೆಸುತ್ತಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಅಸೀಫ್‌ ಹೇಳಿದ್ದಾರೆ.

ಪಾಕಿಸ್ತಾನ ಭಯೋತ್ಪಾದಕರನ್ನು ರಫ್ತು ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ನೀಡಿದ್ದ ಹೇಳಿಕೆಗೆ ಅಸೀಫ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಜಿಯೊ ಟಿವಿ’ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಸೀಫ್‌, ‘ಸದ್ಯ ಭಾರತಕ್ಕೆ ಭಯೋತ್ಪಾದಕ ಪ್ರಧಾನಿಯಾಗಿದ್ದಾರೆ. ಅವರ ಕೈಗಳಲ್ಲಿ ಗುಜರಾತ್‌ನ ಮುಸ್ಲಿಮರ ರಕ್ತದ ಕಲೆಗಳಿವೆ. ಭಯೋತ್ಪಾದಕರ ಪಕ್ಷವು ಅಲ್ಲಿ ಆಡಳಿತ ನಡೆಸುತ್ತಿದೆ. ಆರ್‌ಎಸ್‌ಎಸ್‌ ಈ ಪಕ್ಷವನ್ನು ನಿಯಂತ್ರಿಸುತ್ತಿದೆ. ಬಿಜೆಪಿಯು ಆರ್‌ಎಸ್‌ಎಸ್‌ನ ಘಟಕವಾಗಿದೆ’ ಎಂದು ತಿಳಿಸಿದ್ದಾರೆ.

‘ಭಯೋತ್ಪಾದಕರನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ರಾಷ್ಟ್ರವು ಎಂಥದ್ದು? ಭಾರತದ ಪ್ರಧಾನಿ ಬಳಸುವ ಭಾಷೆಯನ್ನು ನೋಡಿ.  ಇವರ ಆಡಳಿತದಲ್ಲಿ ಗೋರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಹತ್ಯೆ ನಡೆಸಲಾಗುತ್ತಿದೆ. ದಸರಾ ಸಂದರ್ಭದಲ್ಲಿ ರೋಹಿಂಗ್ಯಾ ಮುಸ್ಲಿಮರ ಪ್ರತಿಕೃತಿಗಳನ್ನು ದಹನ ಮಾಡಲಾಯಿತು. ರೋಹಿಂಗ್ಯಾ ಮುಸ್ಲಿಮರು ಭಯೋತ್ಪಾದಕರು ಎಂದು ಅವರು ಕರೆದರು. ಆದರೆ, ಭಾರತ ಎಲ್ಲರನ್ನೂ ಭಯೋತ್ಪಾದಕರೆಂದು ಕರೆಯುತ್ತಿದೆ. ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮರ ಮೇಲೆ ಅತ್ಯಾಚಾರ ಮತ್ತು ಕೊಲೆಗಳು ನಡೆದಿದ್ದವು. ಅಮೆರಿಕ ಮೋದಿ ಮೇಲೆ ನಿಷೇಧ ಹೇರಿತ್ತು’ ಎಂದು ಟೀಕಿಸಿದರು.

ಮೂರ್ಖತನದ ಹೇಳಿಕೆ: ಬಿಜೆಪಿ ಕಟು ಟೀಕೆ

‘ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಅಸೀಫ್‌ ಹೇಳಿಕೆಗಳು ಮೂರ್ಖತನದ್ದು ಮತ್ತು ಬೇಜವಾಬ್ದಾರಿಯಿಂದ ಕೂಡಿವೆ’ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌. ನರಸಿಂಹರಾವ್‌ ಕಟುವಾಗಿ ಟೀಕಿಸಿದ್ದಾರೆ.

‘ಅಧಿಕಾರವೇ ಹೊಂದಿರದ ಸರ್ಕಾರದಲ್ಲಿ ಅಸೀಫ್‌ ಮಹತ್ವ ಇಲ್ಲದ ಸಣ್ಣ ವ್ಯಕ್ತಿ. ಭಯೋತ್ಪಾದಕ ಸಂಘಟನೆಗಳ ತಾಳಕ್ಕೆ ತಕ್ಕಂತೆ ಕುಣಿಯುವ ಸರ್ಕಾರದಲ್ಲಿ ಅವರು ಸಚಿವರಾಗಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

‘ಹತಾಶೆಯಿಂದ ಖ್ವಾಜಾ ಅಸೀಫ್‌ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ಭಯೋತ್ಪಾದನೆಯ ಮುಖವಾಡವನ್ನು ಜಗತ್ತಿಗೆ ಬಯಲು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಯಶಸ್ಸನ್ನು ತಾಳಲಾರದೆ ಈ ರೀತಿಯ ಹೇಳಿಕೆಗಳನ್ನು ನೀಡಲು ಆರಂಭಿಸಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT