ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 7–10–1967

50 ವರ್ಷಗಳ ಹಿಂದೆ
Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೃಷ್ಣಾ – ಗೋದಾವರಿ ಜಲವಿವಾದ ಪಂಚಾಯ್ತಿಗೆ ಒಪ್ಪಿಸಲು ಮೈಸೂರು, ಮಹಾರಾಷ್ಟ್ರ ಸಲಹೆ

(ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಅ. 6– ಕೃಷ್ಣಾ ಮತ್ತು ಗೋದಾವರಿ ನದಿಗಳ ನೀರಿನ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಯನ್ನು ಪಂಚಾಯ್ತಿಗೆ ಒಪ್ಪಿಸಬೇಕೆಂದು ಮೈಸೂರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಇಂದು ಸಲಹೆ ಮಾಡಿದರು.

ಅಂತರರಾಜ್ಯ ನದಿ ವಿವಾದಗಳ ಕಾನೂನಿನ ಪ್ರಕಾರ ಈ ರೀತಿ ಪಂಚಾಯ್ತಿಗೆ ಒಪ್ಪಿಸಲು ಅವಕಾಶವಿದೆ.

ಆಂಧ್ರ, ಮೈಸೂರು ಮತ್ತು ಮಹಾರಾಷ್ಟ್ರಗಳು ಈ ವಿವಾದವನ್ನು ಕುರಿತು ಇಂದು ಎರಡನೇ ಬಾರಿ ನಡೆಸಿದ ಮಾತುಕತೆಗಳಲ್ಲಿ ತೀರಾ ಅಲ್ಪಪ್ರಗತಿಯನ್ನು ಮಾತ್ರ ಸಾಧಿಸಲಾಯಿತು.

**

ಡಾ. ಲೋಹಿಯ ದೇಹಸ್ಥಿತಿಯಲ್ಲಿ ಸುಧಾರಣೆ

ನವದೆಹಲಿ, ಅ. 6– ಸೋಷಲಿಸ್ಟ್ ನಾಯಕ ಡಾ. ರಾಮ ಮನೋಹರ ಲೋಹಿಯ ಅವರ ದೇಹಸ್ಥಿತಿ ಉತ್ತಮವಾಗುತ್ತಿದೆಯೆಂದೂ ಆದರೆ ಅವರು ಇನ್ನೂ ಅಪಾಯದಿಂದ ಪಾರಾಗಿಲ್ಲವೆಂದೂ ಇಂದು ರಾತ್ರಿ ಹತ್ತು ಗಂಟೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.

ನಿನ್ನೆ ರಾತ್ರಿಯಿಂದ ಅವರ ದೇಹಸ್ಥಿತಿ ಉತ್ತಮವಾಗಿದೆಯೆಂದೂ ಅವರು ಹೇಳಿದ್ದಾರೆ.

ನಿನ್ನೆ ರಾತ್ರಿ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಈಗ ಅವರ ದೇಹದ ಉಷ್ಣಾಂಶ ಮಾಮೂಲಿಗೆ ಬಂದಿದೆ.

ನಿನ್ನೆ ಲಂಡನ್ನಿನಿಂದ ಇಲ್ಲಿಗೆ ವಿಮಾನದಲ್ಲಿ ಬಂದ ಅಂಪಿಸಿಲಿನ್ ಇಂಜಕ್ಷನ್‌ಗಳನ್ನು ಇಂದು ಅವರಿಗೆ ಕೊಡಲಾಯಿತು.

**

ಇರಿತದಿಂದ ಪುಣೆ ಹೆರಾಲ್ಡ್ ವ್ಯವಸ್ಥಾಪಕ–ಸಂಪಾದಕರ ಸಾವು

ಮುಂಬೈ, ಅ. 6– ಪುಣೆಯ ಇಂಗ್ಲೀಷ್ ದಿನ ಪತ್ರಿಕೆ ‘ಪುಣೆ ಹೆರಾಲ್ಡ್’ನ ವ್ಯವಸ್ಥಾಪಕ ಸಂಪಾದಕರಾದ ಶ್ರೀ ನೀಲಕಂಠ ಜಾದವ್ ಎಂಬುವವರನ್ನು ಅಪರಿಚಿತ ವ್ಯಕ್ತಿಯೊಬ್ಬ ಇರಿದು ಸಾಯಿಸಿದನೆಂದು ಇಲ್ಲಿಗೆ ವರದಿಬಂದಿದೆ.

ಪುಣೆಯ ಲುಲಾನಗರ ಪ್ರದೇಶದಲ್ಲಿ ಈ ಘಟನೆ ನಡೆಯಿತೆಂದೂ ವರದಿ ತಿಳಿಸಿದೆ.

**

ಚೀನಾ ಜೊತೆ ಘರ್ಷಣೆ ಭಾರತದ ದಿಟ್ಟ ಹೋರಾಟದ ಬಗ್ಗೆ ವಿದೇಶಗಳ ಮೆಚ್ಚಿಗೆ

ನವದೆಹಲಿ, ಅ. 6– ನಾಥುಲಾ ಪ್ರದೇಶದಲ್ಲಿ ಚೀನಾ ನಡೆಸಿದ ದಾಳಿಯನ್ನು ಭಾರತ ದಿಟ್ಟತನದಿಂದ ಸರಿಯಾದ ರೀತಿ ಎದುರಿಸಿತೆನ್ನುವುದೇ ವಿದೇಶಗಳಲ್ಲಿನ ಭಾವನೆಯಾಗಿದೆಯೆಂದು ಉಪ ಪ್ರಧಾನಮಂತ್ರಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ತಿಳಿಸಿದರು.

ಭಾರತ – ಚೀನಾ ಘರ್ಷಣೆಗಳ ಬಗ್ಗೆ ವಿದೇಶಗಳ ಪ್ರತಿಕ್ರಿಯೆ ಏನೆಂದು ವರದಿಗಾರರು ಪ್ರಶ್ನಿಸಿದಾಗ ಅವರು ಈ ರೀತಿ ತಿಳಿಸಿದರು.

ತಾವು ಭೇಟಿ ಕೊಟ್ಟ ದೇಶಗಳಲ್ಲೆಲ್ಲಾ ಭಾರತ – ಚೀನಾ ಘರ್ಷಣೆ ಬಗ್ಗೆ ವಿಚಾರಿಸಿದುದಾಗಿ ಅವರು ನುಡಿದರು.

**

ಕರ್ನಾಟಕ ವಾರ್ಸಿಟಿ ಹಂಗಾಮಿ ಉಪ ಕುಲಪತಿ ನೇಮಕಕ್ಕೆ ಅವಕಾಶ ಕಲ್ಪಿಸಿ ತುರ್ತು ಆಜ್ಞೆ

ಬೆಂಗಳೂರು, ಅ. 6– ಪಂಜಾಬಿನ ರಾಜ್ಯಪಾಲರಾಗಿ ನೇಮಕಗೊಂಡಿರುವ ಡಾ. ಡಿ.ಸಿ ಪಾವಟೆ ಅವರು ತೆರವು ಮಾಡಿರುವ ಸ್ಥಾನದಲ್ಲಿ ಅಕ್ಟೋಬರ್ 15 ರಿಂದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಹಂಗಾಮಿ ಉಪ ಕುಲಪತಿಯೋರ್ವರು ಕಾರ್ಯನಿರ್ವಹಿಸಲಿರುವರು.

ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುವವರೆಗೆ ಹಂಗಾಮಿ ಉಪ ಕುಲಪತಿಗಳು ಅಧಿಕಾರದಲ್ಲಿ ಇರುವರು.  ಮುಂದಿನ ಆರುವಾರಗಳೊಳಗೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT