ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇತಮಂಗಲ ಜಲಾಶಯ ಭರ್ತಿಗೆ ಕ್ಷಣಗಣನೆ

Last Updated 7 ಅಕ್ಟೋಬರ್ 2017, 9:12 IST
ಅಕ್ಷರ ಗಾತ್ರ

ಕೆಜಿಎಫ್‌: ಬೇತಮಂಗಲ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಜಲಾಶಯ ಬಹುತೇಕ ತುಂಬಿದ್ದು, ಶುಕ್ರವಾರ ಸಂಜೆ ವೇಳೆಗೆ ಕೇವಲ ಒಂದು ಅಡಿ ಮಾತ್ರ ಬಾಕಿ ಇತ್ತು. ಹನ್ನೆರಡು ವರ್ಷಗಳ ನಂತರ ಇಷ್ಟು ಪ್ರಮಾಣ ನೀರು ಜಲಾಶಯದಲ್ಲಿ ಶೇಖರಣೆಯಾಗುತ್ತಿರುವುದನ್ನು ಕಾಣಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಬೆಳಗ್ಗಿಯಿಂದಲೇ ಜಲಾಶಯದ ಗೇಟ್‌, ನಲ್ಲೂರಿನ ಬಳಿಯ ಚಿಕ್ಕ ಏಟಿ ಮತ್ತು ದೊಡ್ಡ ಏಟಿ ಬಳಿ ಸಾವಿರಾರು ಜನ ಭೇಟಿ ನೀಡಿದರು. ತಮ್ಮ ಕುಟುಂಬದವರೊಡನೆ ವಿಡಿಯೊ ಮತ್ತು ಚಿತ್ರ ತೆಗೆಸಿಕೊಂಡರು. ಕೆಲವರು ಜಲಾಶಯಕ್ಕೆ ಹೋಗುತ್ತಿದ್ದ ಕೋಡಿ ನೀರಿಗೆ ಬಾಗಿನ ಸಲ್ಲಿಸಿ ಕೃತಾರ್ಥರಾದರು.

ಬೇತಮಂಗಲ ಜಲಾಶಯಕ್ಕೆ ಕಳ್ಳಿಕುಪ್ಪ ಕೆರೆಯಿಂದ ಭಾರಿ ಪ್ರಮಾಣದಿಂದ ನೀರು ಹರಿದುಬರುತ್ತಿದೆ. ಕಳ್ಳಿಕುಪ್ಪ ರಸ್ತೆಯಲ್ಲಿ ಸುಮಾರು ಒಂದೂವರೆ ಅಡಿಯಷ್ಟು ನೀರು ಹರಿಯುತ್ತಿದೆ. ಹೊಳಲಿ ಕೆರೆಯಿಂದ ಹಾಗೂ ಮುಳಬಾಗಲು ಆವಣಿ ಕಡೆಯಿಂದ ಕೂಡ ನೀರು ಅಧಿಕವಾಗಿ ಹರಿದು ಬರುತ್ತಿದೆ.

ಜಲಮಂಡಳಿ ಸಿಬ್ಬಂದಿ ಕೆರೆಯ ಗೇಟ್‌ ಬಳಿ ಶಿಥಿಲವಾಗಿರುವ ಜಾಗವನ್ನು ಸಿಮೆಂಟ್‌ನಿಂದ ತುಂಬಿ ಗೋಡೆಯನ್ನು ಭದ್ರ ಪಡಿಸಿದರು. ಜನರ ಸಂಚಾರವನ್ನು ನಿಯಂತ್ರಿಸಲು ಗೇಟ್‌ನಿಂದ ಬಹುದೂರದಲ್ಲಿಯೇ ವಾಹನ ಸಂಚಾರಕ್ಕೆ ನಿಯಂತ್ರಣ ಮಾಡಿದರು.

ಬೇತಮಂಗಲ ಜಲಾಶಯಕ್ಕೆ ನೀರು ಹರಿದುಬರುವ ಪ್ರದೇಶದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿದೆ. ನಲ್ಲೂರು ಬಳಿ ರಸ್ತೆಯಲ್ಲಿ ಹಾದುಹೋಗುತ್ತಿರುವ ನೀರಿನಲ್ಲಿ ಆಟವಾಡುವ ಯುವಕರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡುತ್ತಿದ್ದರು.

ಬಹುತೇಕ ಯುವಕರು ತಮ್ಮ ಬಾಲ್ಯದಲ್ಲಿ ನೋಡಿದ್ದ ಇಷ್ಟು ಪ್ರಮಾಣದ ನೀರನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದು, ಅವರಲ್ಲಿ ರೋಮಾಂಚನ ಉಂಟು ಮಾಡಿತ್ತು.
ಬೇತಮಂಗಲ ಜಲಾಶಯ ನವೀಕರಣಗೊಂಡು ಸುಮಾರು 112 ವರ್ಷಗಳು ನಡೆದಿದ್ದು, ಅಲ್ಲಿಂದ ಇಲ್ಲಿಯವರೆವಿಗೂ ಮಂಗಳವಾರ ಇಲ್ಲವೇ ಶುಕ್ರವಾರದಂದು ಮಾತ್ರ ಕೆರೆ ಕೋಡಿಹೋಗುತ್ತಿತ್ತು ಎಂದು ಗ್ರಾಮದ ಹಿರಿಯ ಹೇಳುತ್ತಾರೆ. ಆದ್ದರಿಂದ ಯಾವುದೇ ಕ್ಷಣದಲ್ಲಾದರೂ ಕೋಡಿ ಹೋಗಬಹುದು ಎಂದು ಗ್ರಾಮಸ್ಥರು ಕೆರೆಗೆ ಬಾಗಿನ ಸಲ್ಲಿಸಲು ಸಿದ್ಧತೆ ನಡೆಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT