ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟಲಗಡುಬಿಗೆ ಹಂಬಲಿಸಿದೆ ನಾಲಿಗೆ...

Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

–ಸುಧಾ ಹೆಗಡೆ

‘ಆಯೀ, ನಂಗೆ ಸಿಹಿದು ಬೇಡ, ಖಾರದ್ದು ಹಾಕು’ ಎಂದು ಒಂದು ದನಿ ಹಠ ಮಾಡುವಂತೆ ಹೇಳಿದರೆ, ಮತ್ತೊಂದು ಚಿಲಿಪಿಲಿಯ ಉಲಿತ– ‘ನಾನು ಆಗ್ಲಿಂದ ಕಾಯ್ತಿದ್ದೇನೆ. ನಂಗೆ ಮೊದಲು ಸಿಹಿದು ಮಾಡು. ಮೇಲೆ ಗಟ್ಟಿ ತುಪ್ಪವೇ ಬೇಕು’. ಹಿಂದೆಯೇ ‘ಸ್ವಲ್ಪ ತಡೀರಿ, ಒಂದು ಖಾರದ್ದು ಆದ ಮೇಲೆ ಒಂದು ಸಿಹಿದು ಮಾಡುವುದು. ಒಂದೊಂದಾಗಿ ಆಗ್ಬೇಕು ತಾನೆ’ ಎಂಬ ಅಮ್ಮನ ಸಮಾಧಾನ.

ಈ ಸಿಹಿ – ಖಾರಗಳ ಹದವಾದ ಮಾತುಗಳು ಕಿವಿಗೆ ಬೀಳುತ್ತವೆಂದರೆ ಅದು ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಅಥವಾ ಯಲ್ಲಾಪುರದ ಹಳ್ಳಿಗಳ ಮನೆಯಲ್ಲಿ ಅಂತಲೇ ಲೆಕ್ಕ. ಸಿಹಿ, ಖಾರ ಒಟ್ಟೊಟ್ಟಿಗೆ ಮಾಡುವ, ಅದೂ ಬಿಸಿ ಬಿಸಿಯಾಗಿ ಒಬ್ಬೊಬ್ಬರ ಎಲೆಗೆ ಬೀಳುವ ಖಾದ್ಯವೆಂದರೆ ಅದು ‘ಬಟ್ಟಲಗಡುಬು’ ಎಂಬುದು ಖಾತ್ರಿ.

ಬೇಕಾಗುವ ಸಾಮಗ್ರಿಗಳ ಪಟ್ಟಿ ಅತ್ಯಂತ ಚಿಕ್ಕದಾಗಿರುವ, ತಿನ್ನಲು ಬಲು ರುಚಿಯಾದ, ಜೊತೆಗೆ ಆರೋಗ್ಯಕರವೂ ಆದ ಈ ತಿಂಡಿಯ ತಯಾರಿ, ಮಾಡಲು ತಗಲುವ ಸಮಯವೂ ಅಲ್ಪವೇ. ಆದರೆ ತಿಂದ ಕಡುಬುಗಳ ಲೆಕ್ಕ ಮಾತ್ರ ಒಂದು, ಎರಡು, ಮೂರು.. ಎಂದು ಸುಲಭಕ್ಕೆ ದಕ್ಕುವುದಿಲ್ಲ, ಬಿಡಿ. ಎಲೆಗೆ ಬಡಿಸಿದ ತಕ್ಷಣ ಖಾರದ್ದಕ್ಕೆ ತೆಂಗಿನ ಕಾಯಿ ಚಟ್ನಿ, ಸಿಹಿಯದ್ದಕ್ಕೆ ಗಟ್ಟಿ ಹರಳಿನ ತುಪ್ಪ ಹಚ್ಚಿಕೊಂಡು ನಾಲಿಗೆ, ಹಲ್ಲುಗಳಿಗೆ ಕೆಲಸ ಕೊಡುತ್ತ ಹೊಟ್ಟೆಗೆ ಇಳಿಸುವುದೊಂದೇ ಗೊತ್ತು.

ಉತ್ತರ ಕನ್ನಡದ ಬಹತೇಕ ಕೃಷಿ ಪ್ರದೇಶಗಳಲ್ಲಿ ಅಡಿಕೆಯಂತಹ ವಾಣಿಜ್ಯ ಬೆಳೆ ಹೊರತುಪಡಿಸಿದರೆ, ಭತ್ತ ಪ್ರಮುಖ ಬೆಳೆ. ಹೆಚ್ಚಿನ ಕಡುಬು – ಕಜ್ಜಾಯಗಳಿಗೆಲ್ಲ ಅಕ್ಕಿಯೇ ಮೂಲ. ಈ ಬಟ್ಟಲಗಡುಬು ಕೂಡಾ ಹಾಗೆಯೇ. 3–4 ಗಂಟೆ ಕಾಲ ನೆನೆದ ಅಕ್ಕಿಗೆ ಸಿಹಿಯದ್ದಾದರೆ ಬೆಲ್ಲ, ಸ್ವಲ್ಪ ತೆಂಗಿನ ತುರಿ (ತೆಂಗಿನಕಾಯಿ ಎಲ್ಲದಕ್ಕೂ ಇರಲೇಬೇಕು), ಏಲಕ್ಕಿ ಪುಡಿ ಸೇರಿಸಿ ನುಣ್ಣಗೆ ರುಬ್ಬಬೇಕು.

ಖಾರದ ಕಡುಬಿಗೆ ಅಕ್ಕಿಗೆ ಕೆಂಪು ಮೆಣಸಿನಕಾಯಿ, ಇಂಗು, ಉಪ್ಪು, ತೆಂಗಿನ ತುರಿ, ಸ್ವಲ್ಪ ಕೊತ್ತಂಬರಿ ಬೀಜ ಸೇರಿಸಿ ಇದೇ ರೀತಿ ನುಣ್ಣಗೆ ರುಬ್ಬಿದರೆ ಸಾಕು. ಹಿಟ್ಟಿನ ಹದ ದೋಸೆ ಹಿಟ್ಟಿಗಿಂತ ಕೊಂಚ ತೆಳ್ಳಗೆ. ಸಿದ್ಧವಾದ ಹಿಟ್ಟಿಗೂ ಸ್ವಲ್ಪ ತೆಂಗಿನ ತುರಿ ಸೇರಿಸಬಹುದು. ಈ ಹಿಂದೆ ಒರಳು ಕಲ್ಲು, ರುಬ್ಬು ಗುಂಡಿಗೆ ಇದನ್ನು ಅರೆಯುವ ಕೆಲಸವಿತ್ತು.

ಅವಿಭಕ್ತ ಕುಟುಂಬದಲ್ಲಿ ಮನೆಯ ಹಿರಿಯ ಮಹಿಳೆ ಅರೆಯುವ ಕೆಲಸಕ್ಕೆ ಕೂತರೆ ಅಲ್ಲಿಂದ ಏಳುವುದು ಗಂಟೆಯ ಮೇಲಾಗುತ್ತಿತ್ತು. 5–6 ಸಿದ್ದೆ ಅಕ್ಕಿ ಅರೆಯುವುದು, ಅದೂ ನುಣ್ಣಗೆ ಅರೆಯುವುದೆಂದರೆ ಸುಲಭದ ಕೆಲಸವೇನಲ್ಲ. ಆದರೆ ಈಗ ಅರೆ ಕ್ಷಣದಲ್ಲಿ ಮಿಕ್ಸರ್‌, ಗ್ರೈಂಡರ್‌ ಗುಂಡಿ ಒತ್ತಿದರಾಯ್ತು, ಹಿಟ್ಟು ಸಿದ್ಧವಾಗಿಬಿಡುತ್ತದೆ.

ಹಿಟ್ಟನ್ನು ಪಕ್ಕಕ್ಕಿಡಿ. ಚರಿಗೆ ಅಥವಾ ಕುಕ್ಕರ್‌ನ ಕಂಟೇನರ್‌ನಲ್ಲಿ ನೀರು ಕುದಿಯುತ್ತ ಹಬೆ ಉಗುಳಲು ಶುರುವಾಯಿತೇ ಎನ್ನುವುದರ ಕಡೆ ಗಮನ ಕೊಡಿ. ಈ ಹಬೆಯುಗುಳುವ ಪಾತ್ರೆಗೆ ಸರಿಯಾಗಿ ಕೂರುವ ಪ್ಲೇಟಿಗೆ ಚೂರು ಎಣ್ಣೆ ಅಥವಾ ತುಪ್ಪ ಸವರಿ ಸೌಟಿನಲ್ಲಿ ಹಿಟ್ಟನ್ನು ತೆಳ್ಳಗೆ ಹರಡಿ ಅದರ ಮೇಲಿಟ್ಟು ಮುಚ್ಚಿದರೆ ಒಂದೇ ನಿಮಿಷ, ಹಬೆಯಲ್ಲಿ ಬೆಂದ ತೆಳ್ಳನೆಯ ಬಿಸಿ ಕಡುಬನ್ನು ದೋಸೆ ಮಗುಚುವ ಸೌಟಿನಿಂದ ಆರಾಮವಾಗಿ ಎಬ್ಬಿಸಬಹುದು. ಎರಡು ಪ್ಲೇಟುಗಳನ್ನು ಇಟ್ಟುಕೊಂಡು ಒಂದನ್ನು ಹಿಟ್ಟು ಹಾಕಿ ಸಿದ್ಧಪಡಿಸಿ ಪಾತ್ರೆಯ ಮೇಲಿಟ್ಟರೆ, ಇನ್ನೊಂದು ಪ್ಲೇಟಿನಿಂದ ಬೆಂದ ಕಡುಬನ್ನು ತೆಗೆದು ಕಾಯುತ್ತಿರುವ ಎಲೆಗೆ ಬಡಿಸಬಹುದು.

ಈ ಸಾಂಪ್ರದಾಯಕ ಕಡುಬಿಗೆ ಅದೆಷ್ಟು ವರ್ಷಗಳ ಇತಿಹಾಸವೋ. ಸೆಂಚುರಿ ದಾಟಿದ್ದ ಅಜ್ಜ ತಮ್ಮ ಬಾಲ್ಯದಲ್ಲೂ ಮುಖ್ಯ ಹಬ್ಬದ ಸಂದರ್ಭದಲ್ಲಿ, ನೆಂಟರು ಬಂದಾಗ ಇದನ್ನು ಚಪ್ಪರಿಸಿ ತಿಂದಿದ್ದನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಮಾಡಿಸಿಕೊಂಡು ತಿಂದಿದ್ದಿದೆ. ಸ್ವಂತ ಭತ್ತದ ಗದ್ದೆಯಲ್ಲಿ ಬೆಳೆದ ಅಕ್ಕಿ, ಬೆಳೆದ ಕಬ್ಬಿನಲ್ಲಿ ತಯಾರಿಸಿದ ಜೋನಿ ಬೆಲ್ಲ, ಮನೆಯ ಹಿಂದಿನ ಹಿತ್ತಿಲಿನಲ್ಲಿ ಮುಗಿಲೆತ್ತರಕ್ಕೆ ಚಾಚಿದ ತೆಂಗಿನ ಮರದ ಕಾಯಿ, ಅಡಿಕೆ ತೋಟದ ಮಧ್ಯೆ ಬೆಳೆದ ಏಲಕ್ಕಿ.. ಯಾವುದನ್ನೂ ಖರೀದಿಸಿ ತರುವ ಪ್ರಶ್ನೆಯೇ ಇಲ್ಲ.

ವಿಶೇಷ ಸಂದರ್ಭದಲ್ಲಿ ಅಡುಗೆಗೆಂದು ಮೀಸಲಿಟ್ಟ ಹಾಲ್‌ನ ಮೂಲೆಯಲ್ಲಿ ಹುಗಿದಿಟ್ಟ ಒಳಕಲ್ಲಿನಲ್ಲಿ ಅರೆದರಾಯಿತು; ಅಲ್ಲಿಯೇ ಮಣ್ಣಿನಿಂದ ಮಾಡಿದ ಸೌದೆಯ ಒಲೆಯ ಮೇಲೆ ನೀರಿನ ಚರಿಗೆಯಿಟ್ಟು ಉಗಿ ಎಬ್ಬಿಸಿದರಾಯ್ತೆಂದು ಹಬ್ಬ–ಹರಿದಿನಗಳಲ್ಲಿ, ನೆಂಟರು ಬಂದಾಗ ಮೊದಲು ತಲೆಗೆ ಹೊಳೆಯುತ್ತಿದ್ದುದೇ ಈ ಬಟ್ಟಲಗಡುಬು. ಈಗಲೂ ಈ ವಿಷಯದಲ್ಲಿ ಹೆಚ್ಚಿನ ಚೌಕಾಶಿಗೆ ಎಡೆಯಿಲ್ಲ; ಮಾಡಲು ಬಳಸುವ ಪರಿಕರಗಳು ಬದಲಾಗಿರಬಹುದು.

ಅಂದ ಹಾಗೆ ಉತ್ತರ ಕನ್ನಡದವರ ಬಹುತೇಕ ಜನರ ಬಾಯಲ್ಲಿ ಪ್ಲೇಟ್‌ ಅಥವಾ ಊಟದ ತಟ್ಟೆ ‘ಬಟ್ಟಲು’ ಎಂಬ ರೂಪ ಪಡೆದಿದೆ. ಹೀಗಾಗೇ ಇದು ಬಟ್ಟಲಗಡುಬು ಎಂದೇ ಜನಪ್ರಿಯ. ಕೊಬ್ಬು, ಕೊಲೆಸ್ಟ್ರಾಲ್‌ ಎನ್ನುವವರು ತುಪ್ಪದ ಬದಲು ಚಟ್ನಿ ಹಚ್ಚಿಕೊಂಡು ಮೆಲ್ಲಬಹುದು; ಮಧುಮೇಹ ಸಮಸ್ಯೆ ಎಂದು ಒದ್ದಾಡುವವರು ಖಾರದ ಕಡುಬು ತಿಂದು ತೃಪ್ತಿಗೊಳ್ಳಬಹುದು. ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಟ್ಟುಕೊಂಡ ಮಧುಮೇಹಿಗಳು ಬೆಲ್ಲದಿಂದ ತೊಂದರೆಯಿಲ್ಲ ಎಂದು ಲೆಕ್ಕ ಮಾಡಿ ಒಂದೆರಡು ಸಿಹಿ ಕಡುಬು ಹೊಟ್ಟೆಗಿಳಿಸಬಹುದು.

ಈಗಲೂ ವಿಜಯ ದಶಮಿ, ದೀಪಾವಳಿಗಿಂತ ಮೊದಲು ಬರುವ ಭೂಮಿ ಹುಣ್ಣಿಮೆ ಹಬ್ಬದಲ್ಲಿ ಬಹುತೇಕ ಮನೆಗಳಲ್ಲಿ ಬಟ್ಟಲಗಡುಬು, ಗಟ್ಟಿ ತುಪ್ಪದ ಸುವಾಸನೆ ಅಡರುತ್ತದೆ. ಬೆಂಗಳೂರಲ್ಲಿ ಚಾಕರಿ ಮಾಡುವ ಮಂದಿ ಊರಿಗೆ ಬಂದಾಗ ಮಾಡಿಸಿಕೊಂಡು ಮೆಲ್ಲುವುದು ಮಾಮೂಲು. ಕೆಲವು ಸಾಂಪ್ರದಾಯಿಕ ತಿಂಡಿ ಒದಗಿಸುವ ಹೊಟೇಲ್‌ಗಳಲ್ಲಿ ಅಪರೂಪಕ್ಕೆ ಲಭ್ಯ. ಆದರೆ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ನಡೆಯುವ ಮೇಳಗಳಲ್ಲಿ ಕೂಡ ಇದನ್ನು ಸವಿಯಲಡ್ಡಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT